Advertisement
ಶಾಲಾ ಕಾಲೇಜುಗಳಿಲ್ಲದ ಹಿನ್ನೆಲೆಯಲ್ಲಿ ಬಸ್ಸುಗಳಲ್ಲಿ, ಬೆಳಗ್ಗೆ ಹಾಗೂ ಸಂಜೆಯ ವೇಳೆಗೆ ಬಸ್ ನಿಲ್ದಾಣಗಳಲ್ಲಿ ಕೂಡಾ ಜನರ ಸಂಖ್ಯೆ ಕಡಿಮೆಯಾಗಿತ್ತು. ತುರ್ತು ಕಾರ್ಯಗಳಿಗಾಗಿ ನಗರಕ್ಕೆ ಆಗಮಿಸಿದವರೂ ತಮ್ಮ ಕೆಲಸಗಳನ್ನು ಮುಗಿಸಿಕೊಂಡು ಬೇಗನೇ ನಗರ ಬಿಟ್ಟಿದ್ದಾರೆ. ನಗರದಲ್ಲಿ ಜನಸಂಚಾರ ವಿರಳವಾಗಿತ್ತು. ಅಂಗಡಿಗಳಲ್ಲಿ, ಸರಕಾರಿ ಕಚೇರಿಗಳಲ್ಲಿ, ಬ್ಯಾಂಕ್‌ಗಳಲ್ಲಿ ಜನರಿದ್ದರೂ ಸಂಖ್ಯೆಯ ದೃಷ್ಟಿಯಿಂದ ಕಡಿಮೆ ಇತ್ತು. ಸರಕಾರಿ ಬಸ್ ನಿಲ್ದಾಣದಲ್ಲಿ ಬಸ್‌ಗಳಿದ್ದರೂ ಪ್ರಯಾಣಿಕರ ಸಂಖ್ಯೆ ಇತರ ದಿನಗಳಿಗೆ ಹೋಲಿಸಿದರೆ ಕಡಿಮೆಯಾಗಿತ್ತು. ನ್ಯಾಯಾಲಯಗಳಲ್ಲಿ ಕೂಡಾ ಕಕ್ಷಿದಾರರ ಸಂಖ್ಯೆ ದೊಡ್ಡದಿಲ್ಲದೇ ಪ್ರಕ್ರಿಯೆ ನಡೆಯುತ್ತಿತ್ತು.
ಶನಿವಾರ ಇಲ್ಲಿನ ಎಪಿಎಂಸಿ ಪ್ರಾಂಗಣದಲ್ಲಿ ನಡೆಯುವ ವಾರದ ಸಂತೆಯನ್ನು ರದ್ದುಗೊಳಿಸ ಲಾಗಿದೆ. ಜಿಲ್ಲೆಯಲ್ಲಿ ಸೆಕ್ಷನ್ ವಿಧಿಸಿರುವ ಹಿನ್ನೆಲೆಯಲ್ಲಿ, ರಾಜ್ಯ ಸರಕಾರ ಕೊರೊನಾ ಹಿನ್ನೆಲೆಯಲ್ಲಿ ಕೈಗೊಂಡ ಮುಂಜಾಗ್ರತೆ ಕ್ರಮದ ಅಂಗವಾಗಿ ಸಂತೆಯನ್ನು ರದ್ದುಗೊಳಿಸಲಾಗಿದೆ. ಕಳೆದ ವಾರ ಸಂತೆ ನಡೆದಿತ್ತು. ಆದರೆ ಗ್ರಾಹಕರ ಸಂಖ್ಯೆಯಲ್ಲಿ ಇಳಿಮುಖವಾಗಿತ್ತು. ಈ ಬಾರಿ ಸಂತೆಯನ್ನೇ ನಿಷೇಧ ಮಾಡಲಾಗಿದೆ. ಗೊಂದಲವಾಗಬಾರದು ಎಂದು ಜನರಿಗೆ, ವ್ಯಾಪಾರಿಗಳಿಗೆ ಸೂಚನೆ ನೀಡಲಾಗಿದೆ. ವಾರದ ಸಂತೆ ರದ್ದಾದುದನ್ನು ಎಪಿಎಂಸಿ ಕಾರ್ಯದರ್ಶಿ ದೀಪ್ತಿ, ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ ದೇವಲ್ಕುಂದ ಅವರು ಸ್ಪಷ್ಟಪಡಿಸಿದ್ದಾರೆ. ವದಂತಿಗಳ ಹಾವಳಿ
ಇಲ್ಲಿನ ಕೆಲವು ಖಾಸಗಿ ಆಸ್ಪತ್ರೆಗಳ ಹೆಸರು ದಾಖಲಿಸಿ ಕೋವಿಡ್ 19 ರೋಗಿ ದಾಖಲಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವ ವಿಕೃತ ಪ್ರಯತ್ನ ಕೂಡಾ ನಡೆಯುತ್ತಿದೆ. ಕುಮಟಾದಲ್ಲಿ ನಡೆದ ಪ್ರಕರಣದ ಚಿತ್ರಗಳನ್ನು ಜತೆಗಿರಿಸಿ, ಇನ್ನೆಲ್ಲೋ ನಡೆದ ಘಟನೆಯನ್ನು ಸಮೀಕರಿಸಿ ಕುಂದಾಪುರದಲ್ಲಿ ನಡೆದ ಘಟನೆ ಎಂಬಂತೆ ಬಿತ್ತರಿಸಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿದರೆ ಅದರ ವಿರುದ್ಧ ಕಠಿನ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.
Related Articles
ಆರೋಗ್ಯ ಇಲಾಖೆ ವತಿಯಿಂದ ಇತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕುಂದಾಪುರ ಹಾಗೂ ಬೈಂದೂರು ತಾಲೂಕುಗಳಲ್ಲಿ ಆರೋಗ್ಯ ಜಾಗೃತಿ ರಥ ಸಂಚರಿಸುತ್ತಿದೆ. ಪುರಸಭೆಯ ಕಸ ವಿಲೇವಾರಿ ವಾಹನದಲ್ಲಿ ಧ್ವನಿವರ್ಧಕ ಮೂಲಕ ಕೋವಿಡ್ 19 ಜಾಗೃತಿ ಮಾಡಲಾಗುತ್ತಿದೆ.
Advertisement
ಸಿದ್ದಾಪುರದಲ್ಲೂ ಜನವಿರಳ ಸಿದ್ದಾಪುರ: ಕೋವಿಡ್ 19 ಭೀತಿ ಕಾರಣ ವ್ಯಾಪಾರ ವಹಿವಾಟುಗಳು ನಡೆಯುವ ಸ್ಥಳಗಳಾದ ಸಿದ್ದಾಪುರ, ಬೆಳ್ವೆ, ಗೋಳಿಯಂಗಡಿ, ಹಾಲಾಡಿ, ಶಂಕರನಾರಾಯಣ, ಅಂಪಾರು, ಹೊಸಂಗಡಿ ಪ್ರದೇಶಗಳು ಜನರಿಲ್ಲದೆ ಖಾಲಿ ಖಾಲಿಯಾಗಿವೆ. ಬಸ್ ಸಂಚಾರ ವಿರಳವಾದುದರಿಂದ ಪೇಟೆಗಳು ಬಿಕೋ ಎನ್ನುತ್ತಿವೆ. ಪ್ರಯಾಣಿಕರಿಂದ ತುಂಬಿರುತ್ತಿದ್ದ ಸಿದ್ದಾಪುರ ಬಸ್ ನಿಲ್ದಾಣ ಖಾಲಿಯಾಗಿತ್ತು. ತಪಾಸಣೆಗೆ ನಿರಾಕರಣೆ: ದೂರು
ಕುಂದಾಪುರದ ಉಪವಿಭಾಗೀಯ ಸರಕಾರಿ ಆಸ್ಪತ್ರೆಗೆ ಗುರುವಾರ ವಿದೇಶದಿಂದ ಬಂದ ವ್ಯಕ್ತಿಯೊಬ್ಬರು ವೈದ್ಯಕೀಯ ತಪಾಸಣೆಗೆ ಒಳಪಡಲು ನಿರಾಕರಿಸಿ ತೆರಳಿದ್ದು ಪೊಲೀಸರಿಗೆ ದೂರು ನೀಡಲಾಗಿದೆ. ಬೆಳಗ್ಗೆ 11 ಗಂಟೆಗೆ ಹೊರರೋಗಿ ವಿಭಾಗಕ್ಕೆ ಚಿಕಿತ್ಸೆಗೆ ಬಂದ ವ್ಯಕ್ತಿಗೆ ಐಸೋಲೇಶನ್ ವಾರ್ಡ್‌ಗೆ ತೆರಳಲು ಸಹಾಯವಾಣಿ ಸಿಬಂದಿ ಸೂಚಿಸಿದರು. ಫಿಜಿಶಿಯನ್ ಡಾ| ನಾಗೇಶ್ ಅವರು ಕೂಡಾ ವಾರ್ಡ್‌ಗೆ ತೆರಳಲು ಹೇಳಿದಾಗ ನಿರಾಕರಿಸಿದ ವ್ಯಕ್ತಿ ಮಂಗಳೂರಿಗೆ ಹೋಗುತ್ತೇನೆಂದು ಹೇಳಿ ಆಸ್ಪತ್ರೆಯಿಂದ ತೆರಳಿದ್ದಾರೆ. ಆಸ್ಪತ್ರೆಯವರು ಎಷ್ಟೇ ಹೇಳಿದರೂ ಕೇಳದೆ ವ್ಯಕ್ತಿ ತೆರಳಿದ್ದು ಆ ವ್ಯಕ್ತಿಯನ್ನು ಪರೀಕ್ಷೆಗೆ ಒಳಪಡಿಸಬೇಕಾದ ಕಾರಣ ಅವರನ್ನು ಹುಡುಕಬೇಕಾಗಿ ಸರಕಾರಿ ಆಸ್ಪತ್ರೆ ಆಡಳಿತ ಶಸ್ತ್ರಚಿಕಿತ್ಸಕರು ಪೊಲೀಸರಿಗೆ ದೂರು ನೀಡಿದ್ದಾರೆ. ಆರಂಭವಾಗಿ ಮತ್ತೆ ಬಂದ್ ಆದ ಶಿರೂರು ಸಂತೆ
ಬೈಂದೂರು: ಕೋವಿಡ್ 19 ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಇದ್ದೂ ಶಿರೂರು ಮಾರ್ಕೆಟ್‌ನಲ್ಲಿ ಗುರುವಾರ ಬೆಳಗ್ಗೆ ವಾರದ ಸಂತೆ ನಿರಾತಂಕವಾಗಿ ನಡೆದಿತ್ತು. ಬುಧವಾರ ಪ್ರಕಟನೆ ಹೊರಡಿಸಿದ್ದರೂ ಸಂತೆ ನಡೆಯುತ್ತಿರುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ವ್ಯಾಪಾರಸ್ಥರನ್ನು ತರಾಟೆಗೆ ತೆಗೆದುಕೊಂಡು ಸಂತೆ ವ್ಯಾಪಾರವನ್ನು ನಿಲ್ಲಿಸಿದರು. ಸ್ಥಳಕ್ಕೆ ಶಿರೂರು ಪಿಡಿಒ ಮಂಜುನಾಥ ಶೆಟ್ಟಿ ಹಾಗೂ ಸಿಬಂದಿ ಆಗಮಿಸಿದ್ದರು. ಬಸ್ ನಿಲ್ದಾಣ ಶುಚಿ
ಪುರಸಭೆ ವತಿಯಿಂದ ಬಸ್ ನಿಲ್ದಾಣವನ್ನು ನೀರು ಹಾಕಿ ಸ್ವತ್ಛಗೊಳಿಸಲಾಯಿತು. ನಿತ್ಯವೂ ಸಾವಿರಾರು ಮಂದಿ ಬಂದು ಹೋಗುವ ನಿಲ್ದಾಣ ಸ್ವತ್ಛಗೊಳಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಹಾಗೂ ಸ್ವತಃ ಸಾರ್ವಜನಿಕರು ಸ್ವತ್ಛತೆಯ ಕುರಿತು ಜಾಗೃತಿ ಮೂಡಿಸಿಕೊಂಡು ಇತರೆಡೆ ಅಳವಡಿಸಿಕೊಳ್ಳುತ್ತಾರೆ ಎಂಬ ದೃಷ್ಟಿಯಲ್ಲಿ ಶುಚಿ ಮಾಡಲಾಗುತ್ತಿದೆ ಎಂದು ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಉತ್ತರ ನೀಡಿದರು.