Advertisement

ಕುಂದಾಪುರ ಆರಕ್ಷಕರಿಗೆ ಆರೋಗ್ಯ ಭಾಗ್ಯವಿಲ್ಲ

10:44 PM Jan 05, 2020 | mahesh |

ಕುಂದಾಪುರ: ಪೊಲೀಸ್‌ ಸಿಬಂದಿಗೆ ಜಿಲ್ಲಾ ಕೇಂದ್ರಗಳಲ್ಲಿ “ಆರೋಗ್ಯ ಭಾಗ್ಯ’ ಯೋಜನೆ ಜಾರಿಯಲ್ಲಿದೆ. ಈ ಯೋಜನೆ ಪ್ರಕಾರ ಉಡುಪಿ ಜಿಲ್ಲೆಯ ಪೊಲೀಸರು ನಗದು ರಹಿತ ವೈದ್ಯಕೀಯ ಚಿಕಿತ್ಸೆಗೆ ಜಿಲ್ಲಾ ಕೇಂದ್ರಕ್ಕೆ ತೆರಳಿ ಅಲ್ಲಿ ಆಯ್ದ ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸೆ ಪಡೆದುಕೊಳ್ಳಬೇಕು. ಈ ಆರೋಗ್ಯ ಭಾಗ್ಯ ಯೋಜನೆಯನ್ನು ಕುಂದಾಪುರ ವ್ಯಾಪಿಗೂ ವಿಸ್ತರಿಸಬೇಕೆನ್ನುವ ಆಗ್ರಹವಿದೆ.

Advertisement

ಎಲ್ಲ ಪೊಲೀಸರು ಆರೋಗ್ಯ ಇಲಾಖೆ ಆಯ್ಕೆ ಮಾಡಿಕೊಟ್ಟ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು. ಆದರೆ ಇದು ಹೆಚ್ಚಿನ ಜಿಲ್ಲೆಗಳಲ್ಲಿ ಜಿಲ್ಲಾ ಕೇಂದ್ರಗಳಿಗೆ ಮಾತ್ರ ಸೀಮಿತವಾಗಿದೆ. ಇದನ್ನು ತಾಲೂಕು ವ್ಯಾಪ್ತಿಗೂ ವಿಸ್ತರಿಸಿದರೆ ಪೊಲೀಸರಿಗೆ ಅನುಕೂಲವಾಗಲಿದೆ ಎನ್ನುವ ಅಭಿಪ್ರಾಯವಿದೆ.

ಏನು ಸಮಸ್ಯೆ?
ಪೊಲೀಸರಿಗೆ ನೀಡಲಾದ ನಗದು ರಹಿತ ಚಿಕಿತ್ಸೆ ಜಿಲ್ಲಾ ಕೇಂದ್ರಕ್ಕೆ ಮಾತ್ರ ಸೀಮಿತ ವಾಗಿರುವುದರಿಂದ ಬೈಂದೂರು, ಕೊಲ್ಲೂರು, ಅಮಾಸೆಬೈಲುವಿನಂತಹ ಗ್ರಾಮೀಣ ಭಾಗದಲ್ಲಿರುವ ಠಾಣೆಗಳಲ್ಲಿ ಕೆಲಸ ಮಾಡುವ ಪೊಲೀಸರು ತುರ್ತು ಅನಾರೋಗ್ಯ ಉಂಟಾದ ಸಂದರ್ಭದಲ್ಲಿ 80-70 ಕಿ.ಮೀ. ದೂರದ ಉಡುಪಿ, ಮಣಿಪಾಲಕ್ಕೆ ತೆರಳಬೇಕು. ಆದರೆ ಕುಂದಾಪುರ ಭಾಗದಲ್ಲಿ ಇದಕ್ಕೆ ವ್ಯವಸ್ಥೆ ಮಾಡಿದರೆ ಹತ್ತಿರವಾಗಲಿದೆ.

ಏನಿದು ಆರೋಗ್ಯ ಭಾಗ್ಯ?
ರಾಜ್ಯ ಸರಕಾರ ಸುಮಾರು 5 ವರ್ಷಗಳ ಹಿಂದೆಯೇ ರಾಜ್ಯಾದ್ಯಂತ ಪೊಲೀಸರಿಗೆ “ಆರೋಗ್ಯ ಭಾಗ್ಯ’ ಯೋಜನೆಯನ್ನು ಜಾರಿಗೊಳಿಸಿದೆ. ಇದರನ್ವಯ ಪೊಲೀಸರು ಹಾಗೂ ಅವರ ಸಂಬಂಧಿಕರು ತುರ್ತು ಚಿಕಿತ್ಸೆ ಅಥವಾ ಅನಾರೋಗ್ಯ, ಶಸ್ತ್ರ ಚಿಕಿತ್ಸೆ ಹಾಗೂ ಇನ್ನಿತರ ವೈದ್ಯಕೀಯ ಚಿಕಿತ್ಸೆಗೆ ರಾಜ್ಯ ಸರಕಾರ ನಿಗದಿಪಡಿಸಿದ ಖಾಸಗಿ ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸೆ ಪಡೆದುಕೊಳ್ಳುವುದೇ “ಆರೋಗ್ಯ ಭಾಗ್ಯ’ ಯೋಜನೆ.

ಅಂಕಿ – ಅಂಶ
ಕುಂದಾಪುರ ಉಪ ವಿಭಾಗ ವ್ಯಾಪ್ತಿಯಲ್ಲಿ ಉಪ ಅಧೀಕ್ಷಕರ ಕಚೇರಿ ಹೊರತುಪಡಿಸಿ, ಕುಂದಾಪುರ ನಗರ, ಗ್ರಾಮಾಂತರ, ಸಂಚಾರಿ ಠಾಣೆಗಳು, ಗಂಗೊಳ್ಳಿ, ಬೈಂದೂರು, ಕೊಲ್ಲೂರು, ಅಮಾಸೆಬೈಲು ಹಾಗೂ ಶಂಕರನಾರಾಯಣ ಸೇರಿ ಒಟ್ಟು 8 ಠಾಣೆಗಳಿವೆ. ಒಬ್ಬರು ಉಪ ಅಧೀಕ್ಷಕರು, ಇಬ್ಬರು ವೃತ್ತ ನಿರೀಕ್ಷಕರು, 8 ಉಪ ನಿರೀಕ್ಷಕರು, ಎಎಸ್‌ಐ, ಹೆಡ್‌ಕಾನ್‌ಸ್ಟೆಬಲ್‌, ಕಾನ್‌ಸ್ಟೆಬಲ್‌ ಹಾಗೂ ಪೊಲೀಸ್‌ ಸಿಬಂದಿ ಸೇರಿ ಒಟ್ಟು 333 ಹುದ್ದೆಗಳಿವೆ. ಈ ಪೈಕಿ ಬೈಂದೂರು ಎಸ್‌ಐ ಹುದ್ದೆ ಸೇರಿ 50 ಹುದ್ದೆ ಖಾಲಿಯಿದ್ದು, ಎಎಸ್‌ಪಿ ಸೇರಿ 283 ಪೊಲೀಸ್‌ ಸಿಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Advertisement

ಪೊಲೀಸರಿಗೆ ಇರುವ “ಆರೋಗ್ಯ ಭಾಗ್ಯ’ ಯೋಜನೆಯ ಪ್ರಕಾರ ಪೊಲೀಸರು ಹಾಗೂ ಅವರ ಸಂಬಂಧಿಕರು ತುರ್ತು ಚಿಕಿತ್ಸೆ ಅಥವಾ ಅನಾರೋಗ್ಯ, ಶಸ್ತ್ರ ಚಿಕಿತ್ಸೆ ಹಾಗೂ ಇನ್ನಿತರ ವೈದ್ಯಕೀಯ ಚಿಕಿತ್ಸೆಗೆ ರಾಜ್ಯ ಸರಕಾರ ನಿಗದಿಪಡಿಸಿದ ಖಾಸಗಿ ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸೆ ಪಡೆದುಕೊಳ್ಳಬಹುದು. ಆದರೆ ಇದು ಹೆಚ್ಚಿನ ಜಿಲ್ಲೆಗಳಲ್ಲಿ ಜಿಲ್ಲಾ ಕೇಂದ್ರಗಳಿಗೆ ಮಾತ್ರ ಸೀಮಿತವಾಗಿದೆ. ಈ ಯೋಜನೆಯನ್ನು ಕುಂದಾಪುರ ವ್ಯಾಪ್ತಿಗೂ ವಿಸ್ತರಿಸಬೇಕೆನ್ನುವುದು ಪೊಲೀಸರ ಬೇಡಿಕೆ.

ಪ್ರಸ್ತಾವನೆ ಕಳುಹಿಸಲಾಗಿದೆ
ಕುಂದಾಪುರ ಉಪ ವಿಭಾಗ ವ್ಯಾಪ್ತಿಯ ಪೊಲೀಸರಿಗೆ ಅನುಕೂಲವಾಗುವಂತೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಈಗಾಗಲೇ ಸಂಬಂಧಪಟ್ಟವರಿಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಇಲ್ಲಿನ ಪೊಲೀಸರು ತುರ್ತು ಸಂದರ್ಭ ಉಡುಪಿಗೆ ಹೋಗುವುದಕ್ಕಿಂತ ಇಲ್ಲೇ ವ್ಯವಸ್ಥೆ ಮಾಡಿದರೆ ಪ್ರಯೋಜನಕಾರಿ.
-ಹರಿರಾಂ ಶಂಕರ್‌,  ಪೊಲೀಸ್‌ ಉಪ ಅಧೀಕ್ಷಕರು, ಕುಂದಾಪುರ ಉಪ ವಿಭಾಗ

ತುರ್ತು ಅಗತ್ಯವಿದೆ
ಪೊಲೀಸರಿಗೆ ತಾಲೂಕು ವ್ಯಾಪ್ತಿಯಲ್ಲಿಯೇ ನಗದು ರಹಿತ ಚಿಕಿತ್ಸೆಗೆ ವ್ಯವಸ್ಥೆ ಮಾಡುವುದರಿಂದ ಬಹಳಷ್ಟು ಅನುಕೂಲ. ಇದರಿಂದ ಬೈಂದೂರು ಮತ್ತಿತರ ಗ್ರಾಮೀಣ ಭಾಗದಿಂದ ದೂರದ ಉಡುಪಿಗೆ ಹೋಗುವ ಸಮಸ್ಯೆ ತಪ್ಪುತ್ತದೆ. ಪೊಲೀಸರು ಅನಾರೋಗ್ಯಗೊಂಡು ಆಸ್ಪತ್ರೆಯಲ್ಲಿ ದಾಖಲಾದರೆ ಅವರಿಗೆ ಇಷ್ಟು ದೂರದ ಮನೆಯಿಂದ ಆಹಾರವನ್ನೆಲ್ಲ ತೆಗೆದುಕೊಂಡು ಹೋಗುವುದು ಕೂಡ ಕಷ್ಟ. ತಾಲೂಕು ವ್ಯಾಪ್ತಿಯಲ್ಲಿಯೇ ಉಚಿತ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡುವುದು ತುರ್ತು ಅಗತ್ಯವಾಗಿದೆ.
-ಸುರೇಶ್‌ ನಾಯ್ಕ,  ಪೊಲೀಸ್‌ ವೃತ್ತ ನಿರೀಕ್ಷಕರು, ಬೈಂದೂರು

-  ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next