Advertisement

ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣ ಸಮೀಪ ಬೃಹತ್‌ ಹೊಂಡ

06:35 AM Jun 04, 2018 | |

ಕುಂದಾಪುರ: ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಸಮೀಪ ರಾಷೀóಯ ಹೆದ್ದಾರಿ ಕಾಮಗಾರಿಗಾಗಿ ದೊಡ್ಡ ಗುಂಡಿ ಮಾಡಲಾಗಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

Advertisement

ಮುಖ್ಯ ರಸ್ತೆಯಿಂದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ತಿರುಗುವ ರಸ್ತೆ ಬದಿಯಲ್ಲಿ ಇಂತಹ ಗುಂಡಿ ತೋಡಲಾಗಿದೆ. ಇದರಿಂದ ಅಚಾನಕ್ಕಾಗಿ ಬಸ್‌ ಚಾಲಕರಿಗೂ ಗೊಂದಲ ಉಂಟಾಗುವ ಸಂಭವವಿದೆ. ಮುಖ್ಯ ರಸ್ತೆಯ ಸಮೀಪವೇ ಈ ಗುಂಡಿ ಇರುವ ಕಾರಣ ದ್ವಿಚಕ್ರ ವಾಹನ ಅಥವಾ ಯಾವುದೇ ವಾಹನ ಚಾಲಕರಿಗೆ ಈ ಗುಂಡಿ ಅರಿವಿಲ್ಲದೇ ಅಪಾಯ ತಂದೊಡ್ಡುವ ಸಾಧ್ಯತೆಯಿದೆ. ಪಕ್ಕದಲ್ಲೇ ಸರ್ವಿಸ್‌ ರಸ್ತೆ ಕಾಮಗಾರಿ ನಡೆದಿದ್ದು ಅಲ್ಲಿ  ವಾಹನಗಳ ಓಡಾಟ ಇದೆ. ಆದ್ದರಿಂದ ಸರ್ವಿಸ್‌ ರಸ್ತೆಗೂ ಅಪಾಯ ಕಟ್ಟಿಟ್ಟ ಬುತ್ತಿ. ನಿಂತ ನೀರಿನಲ್ಲಿ  ಸೊಳ್ಳೆಗಳು ಉತ್ಪತ್ತಿಯಾಗಿ ಅದು ಇನ್ನೊಂದು ಉಪಟಳಕಾರಿ ರೋಗ ಹರಡಲು ಕಾರಣವಾದೀತೇ ಎಂಬ ಭಯವೂ ಇದೆ.

ಎಲ್ಲೆಡೆ ಪ್ರಶಂಸೆ
ಗುಂಡಿ ತೋಡಿಟ್ಟು ವಾರ ಕಳೆದರೂ ಒಂದಿಂಚೂ  ಹೆಚ್ಚು ಕಾಮಗಾರಿ ನಡೆಸದಿರುವುದು ಯಾಕೆ ಎನ್ನುವುದು ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ. ಜತೆಗೆ ಇಷ್ಟು ನಿಧಾನಗತಿಯ ಕಾಮಗಾರಿ ಮಾಡಿದರೆ ಒಟ್ಟು ಕಾಮಗಾರಿ ಮುಗಿಯುವುದು ಯಾವಾಗ, ಜನತೆಗೆ ಉಪಯೋಗಕ್ಕೆ ದೊರೆಯುವುದು ಯಾವಾಗ ಎಂದು ಜನ ಕೇಳುತ್ತಿದ್ದಾರೆ. ಈ ಮಧ್ಯೆ ನವಯುಗ ಕಂಪನಿ ನಿಧಾನಗತಿಯಲ್ಲಿ ಫ್ಲೈ ಓವರ್‌ ನಡೆಸುತ್ತಿರುವ ಕಾರಣ ನಿರಂತರ ಅಪಘಾತಗಳು, ಅನಾಹುತಗಳು, ನೀರು ನಿಲ್ಲುವಂತಹ ಅವ್ಯವಸ್ಥೆ, ರಸ್ತೆ ದುರವಸ್ಥೆ ಕುರಿತು ಸಹಾಯಕ ಕಮಿಷನರ್‌ ಅವರು ಜೂ. 6ರಂದು ವಿಚಾರಣೆ ನಡೆಸಲು ನೋಟಿಸ್‌ ನೀಡಿರುವುದು ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದೆ. ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಮೌನ ವಹಿಸಿದ್ದರೂ ಅಥವಾ ಅವರು ವಹಿಸಿದ ಕ್ರಮ ಸಾರ್ವಜನಿಕರಿಗೆ ಗೊತ್ತಾಗದ ಕಾರಣ ಅಧಿಕಾರಿ ಸ್ವಯಂ ಪ್ರೇರಿತರಾಗಿ ಕೈಗೊಂಡ ನಿರ್ಧಾರ ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಮೆಚ್ಚುಗೆ ಪಡೆದಿದೆ.

ಅಪಾಯ ಭೀತಿ
ಕೆಲ ದಿನಗಳ ಹಿಂದೆ ಸುಮಾರು 10 ಅಡಿಗಿಂತಲೂ ಆಳದ ನೂರಾರು ಅಡಿ ಉದ್ದದ 20 ಅಡಿಯಷ್ಟು ಅಗಲದ ಗುಂಡಿ ಮಾಡಲಾಗಿದೆ. ಫ್ಲೈ ಓವರ್‌ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿದ್ದು ಈ ಹಿನ್ನೆಲೆಯಲ್ಲಿ ಈ ಗುಂಡಿ ಕೂಡಾ ಮಾಡಲಾಗಿದೆ. ಇದು ಕೂಡಾ ಕಾಮಗಾರಿಯಂತೆಯೇ ನಿಧಾನಗತಿಯಲ್ಲಿ ಸಾಗಿದೆ. ಏಕೆಂದರೆ ಗುಂಡಿ ಮಾಡಿಟ್ಟ ಯಂತ್ರ ಅದರ ಬದಿಯೇ ಯಥಾಸ್ಥಿತಿಯಲ್ಲಿ ಕಳೆದ ಕೆಲವು ದಿನಗಳಿಂದ ನಿಂತಿದೆ. ಆದರೆ ಕಾಮಗಾರಿಯಲ್ಲಿ ಪ್ರಗತಿ ಇಲ್ಲ. ಕೆಲ ದಿನಗಳ ಹಿಂದೆ ಭಾರೀ ಮಳೆ ಸುರಿದಿದೆ. ಆ ನೀರೆಲ್ಲ ಈ ಗುಂಡಿಯಲ್ಲಿ ತುಂಬಿಕೊಂಡಿದೆ. ಅದನ್ನೂ ತೆರವು ಮಾಡಿಲ್ಲ. ಇದರಿಂದ ಇನ್ನಷ್ಟು ಅಪಾಯ ಭೀತಿ ಎದುರಾಗಿದೆ.

ಕಂಪೆನಿಯವರೇ ಹೊಣೆ
ಈಗಾಗಲೇ ಕಂಪನಿಯವರಿಗೆ ಸೂಚನೆ ನೀಡಲಾಗಿದೆ. ಆದರೆ ಫ್ಲೈ ಓವರ್‌ ಕೆಲಸ ತುಂಬ ಮಂದಗತಿಯಲ್ಲಿ ಕೆಲಸ ಸಾಗುತ್ತಿದೆ. ಮಳೆಗಾಲದ ಆತಂಕವೂ ಕಾಡುತ್ತಿದೆ. ದುರಂತಗಳಿಗೆ ಕಂಪೆನಿಯವರೇ ನೇರ ಹೊಣೆಯಾಗುತ್ತಾರೆ. ಇನ್ನೊಮ್ಮೆ ಸೂಚನೆ ಕೊಡಲಾಗುವುದು.
– ರಾಜೇಶ್‌ ಕಾವೇರಿ,
ಕುಂದಾಪುರ ಪುರಸಭೆ ಉಪಾಧ್ಯಕ್ಷರು

Advertisement
Advertisement

Udayavani is now on Telegram. Click here to join our channel and stay updated with the latest news.

Next