Advertisement

ಕುಂದಾಪುರ ಪುರಸಭೆ : ತೆರಿಗೆ ವಸೂಲಾತಿಯಲ್ಲಿ  ಮುಂದೆ

07:00 AM Apr 07, 2018 | |

ಕುಂದಾಪುರ: ತೆರಿಗೆ ಸಂಗ್ರಹದಲ್ಲಿ ಕಳೆದ ಆರ್ಥಿಕ ವರ್ಷದಲ್ಲಿ ಕುಂದಾಪುರ ಪುರಸಭೆಯು ಉತ್ತಮ ಸಾಧನೆಗೈದಿದ್ದು, ಒಟ್ಟು  ವಾರ್ಷಿಕ 1.79 ಕೋ. ರೂ. ಗುರಿ ನಿಗದಿಯಾಗಿದ್ದು, ಅದರಲ್ಲಿ  1.70 ಕೋ. ರೂ.  ಸಂಗ್ರಹ ಮಾಡುವ ಮೂಲಕ ಒಟ್ಟು ಶೇ. 94ರಷ್ಟು ಸಾಧನೆ ಮಾಡಿದೆ.  

Advertisement

2017-18ನೇ ಸಾಲಿನ ಆರ್ಥಿಕ ವರ್ಷದಲ್ಲಿ  ನೀರು, ವ್ಯಾಪಾರ, ಕಟ್ಟಡ, ಘನತ್ಯಾಜ್ಯ ಎಲ್ಲ ವಿಭಾಗದಲ್ಲೂ  ಶೇ. 90 ಕ್ಕಿಂತಲೂ ಅಧಿಕ ತೆರಿಗೆ ಸಂಗ್ರಹವಾಗಿದೆ. 23 ವಾರ್ಡ್‌ಗಳಿರುವ ಕುಂದಾಪುರ ಪುರಸಭೆಯ ವಾರ್ಷಿಕ ಬಜೆಟ್‌ ಕಳೆದ ಬಾರಿ 5 ಕೋ.ರೂ. ಇದ್ದರೆ, ಈ ಬಾರಿ 5.50 ಕೋ.ರೂ.ಗೆ ಏರಿಸಲಾಗಿದೆ. 2016ರಲ್ಲಿ ವಾರ್ಷಿಕ ಬಜೆಟ್‌ 4.75 ಕೋ.ರೂ. ಇತ್ತು. ಎಲ್ಲ  ರೀತಿಯ ತೆರಿಗೆ  ಸೇರಿ ಒಟ್ಟು 179.28 ಕೋ. ರೂ. ಗುರಿ ನಿಗದಿಪಡಿಸಿದ್ದು, ಅದರಲ್ಲಿ 169.15 ಕೋ.ರೂ. ಸಂಗ್ರಹವಾಗಿದೆ. 10 ಲ.ರೂ. ತೆರಿಗೆ ಸಂಗ್ರಹ ಬಾಕಿಯಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಸಂಗ್ರಹ ಪ್ರಮಾಣದಲ್ಲಿ ಶೇ. 5ರಷ್ಟು ಕಡಿಮೆಯಿದೆ. ಕಳೆದ ಆರ್ಥಿಕ ವರ್ಷದಲ್ಲಿ ಶೇ. 99ರಷ್ಟು ಸಾಧನೆ ಮಾಡಿತ್ತು. 

ನೀರು ಶುಲ್ಕ: ಶೇ. 92 ರಷ್ಟು ಸಂಗ್ರಹ
ಪುರಸಭೆ ವ್ಯಾಪ್ತಿಯ ಒಟ್ಟು  2,950 ನೀರಿನ ಸಂಪರ್ಕಗಳಿದ್ದು 1.25 ಕೋ.ರೂ. ಶುಲ್ಕ ಸಂಗ್ರಹ ಗುರಿಯಿದ್ದು, ಅದ ರಲ್ಲಿ ಈ ಬಾರಿ 1.15 ಕೋ. ರೂ. ವಸೂಲಾತಿಯಾಗಿದ್ದು, ಶೇ. 92ರಷ್ಟು ಸಾಧನೆ  ಮಾಡಿದಂತಾಗಿದೆ. ಇದರಲ್ಲಿ  2,754 ಗೃಹಬಳಕೆ, 155 ವಾಣಿಜ್ಯ, 33 ವಾಣಿಜ್ಯವಲ್ಲದ ಸಂಪರ್ಕಗಳು  ಹಾಗೂ 6 ಪ್ರತ್ಯೇಕ ಗ್ರಾ.ಪಂ. ಗಳ ಸಂಪರ್ಕಗಳು ಸೇರಿವೆ. ಪುರಸಭೆ ವ್ಯಾಪ್ತಿಯಲ್ಲಿ  12,500 ಕಟ್ಟಡಗಳ‌ಲ್ಲಿ 8,500 ಮನೆಗಳು ಸೇರಿವೆ. ಕಟ್ಟಡ ಬಾಡಿಗೆ, ವಾಣಿಜ್ಯ ಸಂಕೀರ್ಣ ಇತರ ಎಲ್ಲ ಸೇರಿ ಒಟ್ಟು  22 ಲಕ್ಷ ರೂ. ಗುರಿಯಿದ್ದು, ಅದರಲ್ಲಿ 21.06 ಲ.ರೂ. ಸಂಗ್ರಹವಾಗುವ ಮೂಲಕ ಶೇ. 96ರಷ್ಟು ಸಾಧನೆ ಮಾಡಿದಂತಾಗಿದೆ. 

40 ಲಕ್ಷ ರೂ. ಸಂಗ್ರಹ
ಪುರಸಭೆ ವ್ಯಾಪ್ತಿಯಲ್ಲಿ  ಘನತ್ಯಾಜ್ಯ ನಿರ್ವಹಣೆಗೆ ಎಲ್ಲ ಮನೆಗಳಿಂದ ಸಂಗ್ರಹಿಸುವ ಶುಲ್ಕದಲ್ಲಿ ಒಟ್ಟು ಈ ಬಾರಿ ವಾರ್ಷಿಕ 40 ಲ.ರೂ. ಸಂಗ್ರಹವಾಗಿದೆ. ಇದು ಜಿಲ್ಲೆಯಲ್ಲಿಯೇ ಉತ್ತಮ ಸಾಧನೆ. ಕುಂದಾಪುರ ಪುರಸಭೆ ಘನತ್ಯಾಜ್ಯ ನಿರ್ವಹಣೆಯಲ್ಲಿಯೂ ಉಡುಪಿ ಜಿಲ್ಲೆಗೆ ಮಾದರಿಯಾಗಿದ್ದು, ಇಲ್ಲಿ ಉತ್ಪತ್ತಿಯಾಗುತ್ತಿರುವ ತ್ಯಾಜ್ಯಗಳನ್ನು  ಜೈವಿಕ ಗೊಬ್ಬರವಾಗಿ ಪರಿವರ್ತಿಸಿ ಮಾರಾಟ ಮಾಡುವ ಮೂಲಕ ಆದಾಯವನ್ನು ತರುತ್ತಿದೆ. 

ಇನ್ನು ಇ- ಪಾವತಿ ಮಾಡಿ
ಎ. 1ರಿಂದ ಪುರಸಭೆಗೆ ಯಾವುದೇ ಪಾವತಿಯನ್ನು (ತೆರಿಗೆ ಹಾಗೂ ಇನ್ನಿತರ) ನೇರವಾಗಿ ಸಂಬಂಧಪಟ್ಟ ಬ್ಯಾಂಕ್‌ನ ಮೂಲಕವೇ ಪಾವತಿಸಬೇಕು ಎಂದು ಈಗಾಗಲೇ ಪೌರಾಡಳಿತ ನಿರ್ದೇಶನಾಲಯ ಆದೇಶ ಹೊರಡಿಸಿದೆ. ಇನ್ನು ಮುಂದೆ ಮನೆ ತೆರಿಗೆ, ನೀರಿನ ಶುಲ್ಕ, ನೀರು ಸರಬರಾಜು ಶುಲ್ಕ, ವ್ಯಾಪಾರ ಪರವಾನಿಗೆ, ಕಟ್ಟಡ ಬಾಡಿಗೆ, ಜಾಹೀರಾತು ತೆರಿಗೆ, ಕಟ್ಟಡ ಪರವಾನಿಗೆ ಶುಲ್ಕ ಘನತ್ಯಾಜ್ಯ ನಿರ್ವಹಣ ಶುಲ್ಕ ಹೀಗೆ ಎಲ್ಲವನ್ನು ಆನ್‌ಲೈನ್‌ ಮೂಲಕವೇ ಪಾವತಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಮೊದಲೆರಡು ದಿನ ಈ-ಪಾವತಿಯಲ್ಲಿ ಸ್ವಲ್ಪ ಮಟ್ಟಿಗಿನ ಗೊಂದಲಗಳಾಗಿದ್ದು, ಈಗ ಆ ತಾಂತ್ರಿಕ ತೊಂದರೆ ನಿವಾರಣೆಯಾಗಿದೆ. ಎಲ್ಲರೂ ಇ-ಪಾವತಿಯನ್ನು ಉಪಯೋಗಿಸಿ.   
ಕೆ. ಗೋಪಾಲಕೃಷ್ಣ ಶೆಟ್ಟಿ, ಪುರಸಭೆ ಮುಖ್ಯಾಧಿಕಾರಿ

Advertisement

ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next