Advertisement

ವಿಸ್ತರಣೆಗೊಳ್ಳಲಿದೆ ಕುಂದೇಶ್ವರ ರಸ್ತೆ, ನೂತನ ದ್ವಾರ

01:32 AM Feb 17, 2022 | Team Udayavani |

ಕುಂದಾಪುರ: ಸುಂದರ ಕುಂದಾಪುರ ಕನಸಿಗೆ ಮತ್ತೊಂದು ಗರಿ ಮೂಡಲಿದೆ. ಇದಕ್ಕಾಗಿ ಸಿದ್ಧತೆ ನಡೆದಿದೆ. ಶಾಸ್ತ್ರೀ ಸರ್ಕಲ್‌ನಿಂದ ತುಸು ಅಂತರದಲ್ಲಿ ಇರುವ ಕುಂದೇಶ್ವರ ದೇವಸ್ಥಾನಕ್ಕೆ ಮುಖ್ಯರಸ್ತೆಯಿಂದ ಹೋಗುವ ರಸ್ತೆ ವಿಸ್ತರಣೆಗೊಳ್ಳಲಿದ್ದು ಈಗ ಇರುವ ಕುಂದೇಶ್ವರ ದ್ವಾರದ ಬದಲು ವಿಶಾಲವಾದ ನೂತನ ದ್ವಾರ ನಿರ್ಮಾಣವಾಗಲಿದೆ.

Advertisement

ದೇವಾಲಯ
“ಕುಂದಾಪುರ’ ಎಂದೊಡನೆ ನೆನಪಿಗೆ ಬರುವುದು ಊರಿನ ಅಧಿದೇವತೆ ಶ್ರೀ ಕುಂದೇಶ್ವರ.ಶತ-ಶತಮಾನಗಳ ಇತಿಹಾಸವುಳ್ಳ ಶ್ರೀ ಕುಂದೇಶ್ವರ ಸಹಸ್ರ-ಸಹಸ್ರ ಭಕ್ತರ ಹೃದಯದಲ್ಲಿ ನೆಲೆ ನಿಂತಿದ್ದಾನೆ. ಪಂಚಗಂಗಾವಳಿ ನದಿ ಸಮೀಪ ಕುಂದವರ್ಮಅರಸ ಪಂಚ ಗಂಗಾವಳಿಯ ಹತ್ತಿರ ಕಟ್ಟಿಸಿದ ಕುಂದೇಶ್ವರ ದೇವಾಲಯದಲ್ಲಿ ಆಳುಪರ ಕಾಲದ ಶಿಲಾಶಾಸನಗಳಿವೆ.

ಹೆಸರಿನ ಮೂಲ
ಕುಂದಗನ್ನಡದ ನಾಡು ಕುಂದಾಪುರ ತನ್ನ ಭಾಷೆಯ ನೆಲೆಯಿಂದಲೇ ಪ್ರಸಿದ್ಧಿ ಪಡೆದಿದೆ. ರಾಜ ಕುಂದವರ್ಮ ಆಡಳಿತ ನಡೆಸಿದ ಕಾಲದಲ್ಲಿ ನಿರ್ಮಿತಗೊಂಡ ಪ್ರಸಿದ್ಧ ದೇವಾಲಯ ಕುಂದೇಶ್ವರದ ಮೂಲವಾಗಿ ಈ ಊರಿನ ಹೆಸರು ಕುಂದಾಪುರ ಎಂದಾಗಿದೆ. ಕುಂದ ಎಂದರೆ ಮಲ್ಲಿಗೆ. ಹೀಗೆ ಮಲ್ಲಿಗೆಗೆ ಪ್ರಸಿದ್ಧವಾದ ನಗರವೂ ಇದು ಹೌದೆನ್ನುತ್ತಾರೆ. ಕುಂದಾಪುರ ಎಂದರೆ ಕನ್ನಡದಲ್ಲಿ ಕುಂದ ಎಂದರೆ ಸ್ತಂಭ ಎಂದು ಅರ್ಥೈಸುವ ವರ್ಗವೂ ಇದೆ. ಹೀಗೆ ಬೇರೆ ಬೇರೆ ಅರ್ಥಗಳನ್ನು ಕುಂದಾಪುರದ ಹೆಸರಿಗೆ ತಕ್ಕಂತೆ ಹೊಸೆಯಲಾಗುತ್ತದೆ.

ದ್ವಾರ
ಮುಖ್ಯರಸ್ತೆಯಿಂದ ಕುಂದೇಶ್ವರ ದೇವಾಲಯಕ್ಕೆ ತೆರಳಲು ಪ್ರಸ್ತುತ ದ್ವಾರವೊಂದು ಇದ್ದು ಡಾಮರು ಹಾಕಿದ ರಸ್ತೆಯೂ ಇದೆ. ಇದೇ ಕುಂದೇಶ್ವರನ ರಥಬೀದಿಯೂ ಹೌದು. ದೇವಸ್ಥಾನಕ್ಕೆ ಬರುವ ಸ್ವಾಮೀಜಿಗಳು ಹಾಗೂ
ಗಣ್ಯರನ್ನು ಈ ದ್ವಾರದಿಂದ ಪೂರ್ಣಕುಂಭ, ಮೆರವಣಿಗೆ, ಮಂಗಳವಾದ್ಯಗಳೊಂದಿಗೆ ಸ್ವಾಗತಿಸಲಾಗುತ್ತದೆ.

ನೂತನ ದ್ವಾರ
ದ್ವಾರ ಕಿರಿದಾಗಿದ್ದು ನೂತನವಾಗಿ ದೊಡ್ಡ ದ್ವಾರ ರಚನೆಗೆ ಯೋಚಿಸಲಾಗಿದೆ. ಈಗ 17 ಅಡಿ ಅಗಲದ ದ್ವಾರ ಇದ್ದು 25 ಅಡಿ ಅಗಲದ ದ್ವಾರ ರಚನೆಯಾಗಲಿದೆ. ಇಲ್ಲಿ 70 ಅಡಿ ಸ್ಥಳ ಲಭ್ಯವಿದೆ. ದ್ವಾರದಿಂದ ದೇವಾಲಯವರೆಗೆ ಅಗಲವಾದ ರಸ್ತೆ ನಿರ್ಮಾಣವಾಗಲಿದೆ. ಎರಡೂ ಬದಿ ಪಾದಚಾರಿಗಳಿಗೆ ಪ್ರತ್ಯೇಕ ಪಥ ರಚನೆಯಾಗಲಿದೆ. ಅರೆ ಕಡಿದ ಮರಗಳನ್ನು ಸುಸಜ್ಜಿತಗೊಳಿಸಿ ಎರಡೂ ಬದಿ ಹೂಗಿಡಗಳನ್ನು ನೆಟ್ಟು, ಭಕ್ತರಿಗೆ ಕಾಲು ತೊಳೆಯಲು, ಕುಡಿಯಲು ನೀರಿನ ವ್ಯವಸ್ಥೆ ಆಗಲಿದೆ. ಲಭ್ಯ ಇರುವ ರಸ್ತೆಯ ಜಾಗವನ್ನು ಸದ್ಬಳಕೆ ಮಾಡದೇ ಇದ್ದರೆ ಅತಿಕ್ರಮಣವಾಗುವ ಸಾಧ್ಯತೆಯಿದೆ. ಅಷ್ಟಲ್ಲದೇ ಸರಕಾರಿ ಅಧೀನದಲ್ಲಿರುವ ನಗರದ ಪ್ರಮುಖ ದೇವಾಲಯವಾದ ಕಾರಣ ಇನ್ನಷ್ಟು ಸೌಕರ್ಯ ನೀಡುವ ಅನಿವಾರ್ಯವೂ ಇದೆ. ಶಿವನ ಬೃಹತ್‌ ವಿಗ್ರಹ, ಕಾರಂಜಿ ಇರುವ ದೇಗುಲ ಸಮೀಪದ ಪುಷ್ಕರಿಣಿಯೂ ಇನ್ನಷ್ಟು ಸೊಗಸಾಗಲಿದೆ.

Advertisement

ಗೊಂದಲ
ರಸ್ತೆ ಅಗಲಗೊಳ್ಳುವಾಗ ಆಚೀಚೆ ಇರುವ ಅಂಗಡಿ, ಮುಂಗಟ್ಟಿನವರಿಗೆ ಯಾವ ರೀತಿಯ ತೊಂದರೆಯೂ ಆಗುವುದಿಲ್ಲ ಎಂದು ಭರವಸೆ ನೀಡಲಾಗಿದೆ. ಹಾಗಿದ್ದರೂ ಸಣ್ಣಪ್ರಮಾಣದಲ್ಲಿ ಇಲ್ಲಿರುವ ಮನೆಗಳು ಹಾಗೂ ಅಂಗಡಿಯವರಿಗೆ ಇದೆ. ಇವರೆಲ್ಲರಿಗೆ ವಿಷಯ ಮನದಟ್ಟು ಮಾಡಿ ಅಭಿವೃದ್ಧಿಗೆ ತೊಡಗಬೇಕಿದೆ. ಅಭಿವೃದ್ಧಿಯಲ್ಲಿ ಇವರ ಸಹಕಾರವೂ ಅಗತ್ಯ.

ಸಮಾಲೋಚನೆ
ಪುರಸಭೆ ಹಾಗೂ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಜಂಟಿಯಾಗಿ ಈ ಯೋಜನೆ ಹಮ್ಮಿಕೊಳ್ಳಲಿದೆ. ಸುಮಾರು 60 ಲಕ್ಷ ರೂ. ಅಂದಾಜುಪಟ್ಟಿ ಮಾಡಲಾಗಿದ್ದು ಪುರಸಭೆ 30 ಲಕ್ಷ ರೂ.ಗಳನ್ನು, ವ್ಯವಸ್ಥಾಪನ ಸಮಿತಿ 25 ಲಕ್ಷ ರೂ.ಭರಿಸಲಿದೆ. ಉಳಿದಂತೆ ಖರ್ಚುವೆಚ್ಚಗಳು ಹೆಚ್ಚಾಗ ಬಹುದಾಗಿದ್ದು ಅದನ್ನು ದಾನಿಗಳ ಮೂಲಕ ಭರಿಸಿಕೊಳ್ಳುವ ಸಾಧ್ಯತೆಯಿದೆ. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೃಷ್ಣಾನಂದ ಚಾತ್ರ, ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್‌, ಸದಸ್ಯರಾದ ಪ್ರಭಾಕರ್‌ ವಿ., ಗಿರೀಶ್‌ ಜಿ.ಕೆ., ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಮೊದಲಾದವರು ಈ ಕುರಿತು ಸಮಾಲೋಚನೆ ನಡೆಸಿದ್ದಾರೆ. ಸಾರ್ವಜನಿಕರ ಸಭೆ ಕರೆದು ಅಭಿಪ್ರಾಯ ಪಡೆದು, ಗೊಂದಲಗಳಿಲ್ಲದೇ ಮುಂದುವರಿಯಲು ತೀರ್ಮಾನಿಸಲಾಗಿದೆ.

ಗೊಂದಲ ಇಲ್ಲ
ಈಗ ಇರುವ ಅಂಗಡಿ, ಮನೆಯವರ ಆಸ್ತಿಗೆ ಯಾವುದೇ ತೊಂದರೆ ಮಾಡದೇ ಲಭ್ಯ ಇರುವ ಜಾಗದಲ್ಲೇ ಅಭಿವೃದ್ಧಿ ಮಾಡಲಾಗುತ್ತದೆ. ಈ ಕುರಿತು ಯಾವುದೇ ಗೊಂದಲದ ಅಗತ್ಯ ಇಲ್ಲ. ಸಾರ್ವಜನಿಕರಿಗೂ ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡಲಾಗು ವುದು. ಅಗತ್ಯವಿರುವ ಕೆಲಸಗಳಿಗೆ ಪುರಸಭೆ ಅನುದಾನವಲ್ಲದೇ ಪ್ರತ್ಯೇಕ ದಾನಿಗಳ ನೆರವು ಪಡೆಯಲಾಗುವುದು. -ಗೋಪಾಲಕೃಷ್ಣ ಶೆಟ್ಟಿ,ಮುಖ್ಯಾಧಿಕಾರಿ, ಪುರಸಭೆ

ಅಭಿವೃದ್ಧಿ ಸಂಕಲ್ಪ ವಿಶಾಲವಾದ ರಸ್ತೆ, ದೊಡ್ಡದಾದದ್ವಾರ ನಿರ್ಮಾಣದ ಮೂಲಕ ದೇವಳದಪರಿಸರದಲ್ಲಿ ಅಭಿವೃದ್ಧಿಯ ಸಂಕಲ್ಪ ಮಾಡಲಾಗಿದೆ.
-ಕೃಷ್ಣಾನಂದ ಚಾತ್ರ, ಅಧ್ಯಕ್ಷರು,
ವ್ಯವಸ್ಥಾಪನಾ ಸಮಿತಿ

-ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next