Advertisement

Kundapur: ಆಟದ ಬಯಲೇ ಇಲ್ಲದ ಕುಳ್ಳುಂಜೆ ಶಾಲೆ

03:19 PM Dec 30, 2023 | Team Udayavani |

ಕುಂದಾಪುರ: ಆಟದ ಮೈದಾನವೇ ಇಲ್ಲದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಂಬ ಎಂಬ ಕುಖ್ಯಾತಿಗೆ ಪಾತ್ರವಾದ ಕುಳ್ಳುಂಜೆ ಸ. ಹಿ. ಪ್ರಾ ಶಾಲೆಗೆ ಸ್ಥಳೀಯ ಶಂಕರನಾರಾಯಣ ಗ್ರಾಮ ಪಂಚಾಯತ್‌ ಮೈದಾನವೊಂದರ ಏರ್ಪಾಟು ಮಾಡಲುದ್ದೇಶಿಸಿದೆ. ಆದರೆ ಇನ್ನೂ ಪೂರ್ಣಪ್ರಮಾಣದ ಮೈದಾನ ರಚನೆಯಾಗಿಲ್ಲ. ಆರಂಭ 1951ರಲ್ಲಿ ಕುಳ್ಳುಂಜೆ ಗ್ರಾಮದ ಪಟೇಲ್‌ ದಿ| ಶೇಷಗಿರಿ ರಾವ್‌ ಅವರ ಮನೆ ಜಗುಲಿಯಲ್ಲಿ ಪ್ರಾರಂಭವಾದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಂದೆ ಹಿರಿಯ ಪ್ರಾಥಮಿಕ ಶಾಲೆಯಾಗಿ
ಭಡ್ತಿ ಪಡೆಯಿತು. ಜಿಲ್ಲೆಯಲ್ಲಿಯೇ ಅತ್ಯುತ್ತಮ ಶಾಲೆ ಎಂಬ ಹೆಗ್ಗಳಿಕೆ ಹೊಂದಿ ತನ್ನ 72 ವರ್ಷಗಳ ಅವಿರತ ಸೇವೆಯಲ್ಲಿ ಸಾವಿರಾರು ವಿದ್ಯಾರ್ಥಿಗಳನ್ನು ಈ ನಾಡಿಗೆ ಅರ್ಪಿಸಿದೆ.

Advertisement

ದೂರದ ಮಕ್ಕಳು
7ನೇ ತರಗತಿಯವರೆಗೆ ವಿದ್ಯಾರ್ಥಿಗಳನ್ನು ಹೊಂದಿರುವ ಈ ಸರಕಾರಿ ಶಾಲೆಯು ಈಗ 90 ವಿದ್ಯಾರ್ಥಿಗಳನ್ನು ಹೊಂದಿದೆ. ಅದರಲ್ಲಿ ಪ್ರತೀ ವರ್ಷವೂ ಉತ್ತರ ಕರ್ನಾಟಕ ಭಾಗದ ವಿಜಯಪುರ ಮತ್ತಿತರ ಜಿಲ್ಲೆಗಳ ವಿದ್ಯಾರ್ಥಿಗಳು ಸರಕಾರಿ ಹಾಸ್ಟೆಲ್‌ಗ‌ಳಲ್ಲಿ ಉಳಿದು ಗಣನೀಯ ಪ್ರಮಾಣದಲ್ಲಿ ಈ ಶಾಲೆಗೆ ಸೇರ್ಪಡೆಗೊಳ್ಳುತ್ತಿರುವುದು ವಿಶೇಷ. ಗುಣಮಟ್ಟದಲ್ಲಿ ಯಾವುದೇ ಖಾಸಗಿ ಶಾಲೆಗೂ ಕಡಿಮೆ ಇಲ್ಲದ ಸೌಲಭ್ಯ ಈ ಸರಕಾರಿ ಶಾಲೆಯಲ್ಲಿ ಇದೆ.

ಮೈದಾನವಿಲ್ಲ
49,679 ಸರಕಾರಿ ಶಾಲೆಗಳನ್ನು ಹೊಂದಿರುವ ರಾಜ್ಯದಲ್ಲಿ ಆಟದ ಮೈದಾನವೇ ಇಲ್ಲದ ಶಾಲೆ ಎಂಬ ಕುಖ್ಯಾತಿಗೆ ಈ ಶಾಲೆ ಪಾತ್ರವಾಗಿದೆ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಳ್ಳುಂಜೆ. ಶಾಲೆಯ ಸುತ್ತಲೂ ಖಾಸಗಿ ಜಾಗ ಹಾಗೂ ಎದುರುಗಡೆ ರಾಜ ರಸ್ತೆ ಬಂದಿರುವುದರಿಂದ ಆಟದ ಮೈದಾನವನ್ನು ಹೊಂದದೆ. ಈ ಶಾಲೆಯ ವಿದ್ಯಾರ್ಥಿಗಳ ಕ್ರೀಡಾ ಪ್ರಗತಿ ವಿಕಸನಕ್ಕೆ ಬಾರಿ ಅಡ್ಡಿಯಾಗಿದೆ. ಈ ಸರಕಾರಿ ಶಾಲೆಯು ಕೇವಲ 4 ಸೆಂಟ್ಸ್‌ ಮಾತ್ರ ಜಾಗ ಹೊಂದಿದ್ದು, ನಾಲ್ಕು ಸೆಂಟ್ಸ್‌ನಲ್ಲಿ ಶಾಲಾ ಕಟ್ಟಡ ಆವರಿಸಿದೆ. ಶಾಲೆಯ ಎದುರುಗಡೆಯೇ ಶಂಕರನಾರಾಯಣ – ಸಿದ್ದಾಪುರ ರಾಜ್ಯ ಹೆದ್ದಾರಿ ಹಾದು ಹೋಗಿದ್ದು ರಸ್ತೆಯ ಸ್ವಲ್ಪ ಮುಂದಕ್ಕೆ ವಾರಾಹಿ ಕಾಲುವೆ ಹಾದು ಹೋಗಿದೆ. ಹಾಗಾಗಿ ಶಾಲಾ ಮಕ್ಕಳು ಆಟೋಟಕ್ಕೆ ಶಾಲಾ ಜಗುಲಿಯನ್ನೇ ಆಟದ ಮೈದಾನ ಮಾಡಿಕೊಳ್ಳಬೇಕಾಗಿದೆ.

ಪ್ರಯತ್ನ
ಶಂಕರನಾರಾಯಣ ಗ್ರಾಮ ಪಂಚಾಯತ್‌ ಅಧ್ಯಕ್ಷ ಕಲ್ಗದ್ದೆ ಉಮೇಶ್‌ ಶೆಟ್ಟಿ ಅವರು ಪಂಚಾಯತ್‌ ಹಾಗೂ ದಾನಿಗಳ ನೆರವಿನಿಂದ ಮೈದಾನ ಮಾಡಲು ತಯಾರು ಮಾಡಿದ್ದಾರೆ. ಶಾಲೆಯ ಎದುರು ಹಾಗೂ ಎಡಬದಿ ರಾಜ್ಯ ರಸ್ತೆ, ಹಿಂದೆ ಹಾಗೂ ಬಲ ಬದಿ ತೋಡು ಖಾಸಗಿ ಜಮೀನು ಇರುವುದರಿಂದ ಶಾಲೆಗೆ ಆಟದ ಮೈದಾನ ಇಲ್ಲದಂತೆ ಆಗಿದೆ. ಪ್ರಸ್ತುತ ಇರುವ ಜಾಗ ಕೂಡ ವಾರಾಹಿ ಯೋಜನೆಗೆ ಬಿಟ್ಟುಕೊಟ್ಟ ಜಾಗವಾಗಿದ್ದು ಅವರನ್ನು ಸಂಪರ್ಕಿಸಿ ಅನುಮತಿ ಪಡೆಯಲಾಗಿದೆ.

ಶಾಶ್ವತ ಕಾಮಗಾರಿಗಳನ್ನು ನಡೆಸದೇ, ಕಲ್ಲು ಬಂಡೆ ಒಡೆಯದೇ, ತಡೆಬೇಲಿ ರಚಿಸಿ ಮೈದಾನ ರಚಿಸಲು ವಾರಾಹಿ ನೀರಾವರಿ ನಿಗಮದ ಅಧಿಕಾರಿಗಳು ಮೌಖಿಕ ಅನುಮತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಡಿ.30ರಂದು ಈ ಶಾಲೆಯ ವಿದ್ಯಾರ್ಥಿಗಳು ಹಾಗೂ ಪ್ರಾಕ್ತನ ವಿದ್ಯಾರ್ಥಿಗಳ ಸಮ್ಮಿಲನದ ಸಡಗರ ಚಿತ್ತಾರ ಕಾರ್ಯಕ್ರಮ ನಡೆಯಲಿದೆ. ಸಾಂಸ್ಕೃತಿಕ ವೈವಿಧ್ಯ ನಡೆಯಲಿದೆ.

Advertisement

ಜಾಗದ ಅಲಭ್ಯತೆ
ರಸ್ತೆ ಹಾಗೂ ಕಾಲುವೆ ಮಧ್ಯಭಾಗದಲ್ಲಿ ಸುಮಾರು ಒಂದು ಎಕರೆಗೂ ಮಿಕ್ಕಿ ಸರಕಾರಿ ಜಾಗವಿದ್ದು ಸರಕಾರ, ಸಂಘ – ಸಂಸ್ಥೆಗಳು ಮನಸ್ಸು ಮಾಡಿದರೆ ಪೊದೆಗಳಿಂದ ತುಂಬಿರುವ ಆ ಸ್ಥಳವನ್ನು ಸಮತಟ್ಟು ಮಾಡಿದರೆ 72 ವರ್ಷಗಳಿಂದ ಆಟದ ಮೈದಾನವೇ ಇಲ್ಲದ ಈ ಸರಕಾರಿ ಶಾಲೆಗೆ ಒಂದು ಆಟದ ಮೈದಾನದ ಕೊಡುಗೆ ನೀಡಿದಂತೆ ಆಗುತ್ತದೆ ಎಂದು ಎಸ್‌. ಡಿ. ಎಂ .ಸಿ.
ಅಧ್ಯಕ್ಷ ಗಜೇಂದ್ರ ಮಿತ್ಯಂತ, ಮುಖ್ಯ ಶಿಕ್ಷಕಿ ವನಜಾ ಎಸ್‌. ಹಾಗೂ ಹಳೆ ವಿದ್ಯಾರ್ಥಿ ಚಿಟ್ಟೆ ರಾಜಗೋಪಾಲ ಹೆಗ್ಡೆ ಮತ್ತು ಊರವರು ಸ್ಥಳೀಯ ಆಡಳಿತವನ್ನು ವಿನಂತಿಸಿದ್ದಾರೆ.

ಮೈದಾನದ ಕೊರತೆನೀಗಿಸುವ ಯತ್ನ
ಪಂಚಾಯತ್‌ ವತಿಯಿಂದ ಮೈದಾನ ರಚನೆಯಾಗಲಿದ್ದು ದಾನಿಗಳ ನೆರವಿನಿಂದ ವಾರಾಹಿ ಕಾಲುವೆಗೆ ತೊಂದರೆಯಾಗದಂತೆ
ಮೈದಾನದ ಸುತ್ತಲೂ ಬೇಲಿ ಹಾಕಲಾಗುವುದು. ಈ ಮೂಲಕ ಶಾಲೆಯ ಆಟದ ಮೈದಾನದ ಕೊರತೆ ನೀಗಿಸುವ ಯತ್ನ ನಡೆಸಲಾಗುವುದು.
ಉಮೇಶ್‌ ಶೆಟ್ಟಿ ಕಲ್ಗದ್ದೆ
ಅಧ್ಯಕ್ಷ, ಶಂಕರನಾರಾಯಣ ಗ್ರಾ.ಪಂ.

*ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next