Advertisement

ಕುಂದಾಪುರ:ಕೊರಗರ ಮನೆಗಳಲ್ಲಿ ಕೊರಗು

10:04 AM Sep 18, 2019 | Sriram |

ಕುಂದಾಪುರ: ಹರಕಲು ಜೋಪಡಿ, ಮುರಿದ ಶೆಡ್‌ಗಳು, ಭದ್ರ ಬಾಗಿಲುಗಳಿಲ್ಲದ, ತಲೆಯ ಮೇಲಿನ ಸೂರು ಗಟ್ಟಿಯಿಲ್ಲದ ಮನೆಗಳಲ್ಲಿ ವಾಸಿಸುತ್ತಿರುವ ಕೊರಗರ ಕೊರಗು ಇನ್ನೂ ಕುಂದಿಲ್ಲ. ಮನೆ ಬುಡದಲ್ಲಿ ತಂದಿಟ್ಟ ಇಟ್ಟಿಗೆ, ಒಂದಷ್ಟು ಕಾಮಗಾರಿಯ ವಸ್ತುಗಳು ಹಾಗೆಯೇ ಇವೆ. ಅರ್ಧ ತಲೆಯೆತ್ತಿದ ಗೋಡೆ ಎಂದಿಗಾವುದೋ ಸೂರಿನ ಮಾಡು ಎಂದು ಅವುಗಳ ಪಾಡನ್ನು ಸಾರುತ್ತಿವೆ. ಮನೆ ಮಂಜೂರು ಮಾಡಿದ ಸರಕಾರ ಒಂದೆಡೆಯಿಂದ ಅನುದಾನವನ್ನೂ ಪೂರ್ಣ ನೀಡಿಲ್ಲ, ಇನ್ನೊಂದೆಡೆ ಮರಳಿಗೂ ಕಡಿವಾಣ ಹಾಕಿದೆ. ಪರಿಣಾಮ ಇಲ್ಲಿನ ಅಂಬೇಡ್ಕರ್‌ ಕಾಲನಿಯ ಕುಟುಂಬಗಳಿಗೆ ಜೋಪಡಿ ವಾಸ ತಪ್ಪಿಲ್ಲ.

Advertisement

ಅಂಬೇಡ್ಕರ್‌ ನಗರ
ಕುಂದಾಪುರ ಪುರಸಭೆ ವ್ಯಾಪ್ತಿಯ ಚರ್ಚ್‌ ರೋಡ್‌ ವಾರ್ಡ್‌ನ ಅಂಬೇಡ್ಕರ್‌ ನಗರದಲ್ಲಿ 30ರಷ್ಟು ಕೊರಗ ಕುಟುಂಬಗಳಿವೆ. ಬಹುತೇಕ ಮಂದಿ ಪುರಸಭೆಯ ಸ್ವತ್ಛತಾ ಕಾರ್ಯದಲ್ಲಿ ನಿರತರು. ಬೆಳಗಾದರೆ ನಗರದ ಬೀದಿಗಳನ್ನು ಗುಡಿಸಿ ಒಪ್ಪ ಓರಣ ಮಾಡಿ ಮನೆ ಮನೆಯ ಕಸ ಸಂಗ್ರಹಿಸಿ ಸ್ವತ್ಛಗೊಳಿಸುವ ಇವರ ಮನೆ ಬೆಳಗುವ ದಿನಗಳು ಬರಲೇ ಇಲ್ಲ.

ಮಂಜೂರು
ಸುಮಾರು 75 ವರ್ಷಗಳಿಂದ ಇಲ್ಲಿ ನೆಲೆಸಿರುವ ಇವರಿಗೆ 1975-76ನೇ ಸಾಲಿನಲ್ಲಿ ತಲಾ ಎರಡೂವರೆ ಸೆಂಟ್ಸ್‌ನಂತೆ ಜಾಗ ಮಂಜೂರಾಯಿತು. 4 ವರ್ಷಗಳ ಹಿಂದೆ ಇಲ್ಲಿನ 15 ಕುಟುಂಬಗಳಿಗೆ 3.2 ಲಕ್ಷ ರೂ.ಗಳ ಮನೆ ಮಂಜೂರಾಯಿತು. ಹೊಸ ಮನೆ ಇನ್ನೇನು ಸದ್ಯದಲ್ಲಿಯೇ ನಿರ್ಮಾಣ ಮುಗಿಯಲಿದೆ ಎಂದು ಹುಮ್ಮಸ್ಸಿನಿಂದ ಇದ್ದ ಹಳೆ ಜೋಪಡಿಯನ್ನು ಕಿತ್ತರು. ಏಕೆಂದರೆ ಅದೇ ಜಾಗದಲ್ಲಿ ಹೊಸ ಮನೆ ನಿರ್ಮಿಸುವ ಅನಿವಾರ್ಯ ಸ್ಥಿತಿ ಒದಗಿತ್ತು. ಮನೆ ನಿರ್ಮಾಣವೇನೋ ಆರಂಭವಾಗಿತ್ತು. ಹಾಗಂತ ಪೂರ್ಣಗೊಳಿಸಲಾಗಲೇ ಇಲ್ಲ.

ಅನುದಾನ ಬಂದಿಲ್ಲ
ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರದ ಜಂಟಿ ಅನುದಾನದಲ್ಲಿ ಬಂದ ಹಣದಲ್ಲಿ ಮನೆ ಕಟ್ಟಿಕೊಳ್ಳತೊಡಗಿದ ಇವರಿಗೆ ದಿನಗಳೆದಂತೆ ದುರ್ದುಸೆ ಆರಂಭವಾಯಿತು. ಮನೆ ನಿರ್ಮಾಣದ ಎರಡು ಕಂತು ಅನುದಾನ ಬಂತು. ಮನೆ ತಲೆಯೆತ್ತುತ್ತಿದ್ದಂತೆಯೇ ಮತ್ತೆರಡು ಕಂತು ಹಣ ಬರಲೇ ಇಲ್ಲ. ಇವರೆಲ್ಲ ಕಾದದ್ದೇ ಬಂತು. ಇಲ್ಲಿನ ನಿವಾಸಿಗಳಾದ ಸರೋಜಾ, ಶ್ಯಾಮಲಾ, ಚಂದ್ರಕಲಾ, ಭಾಗ್ಯ, ಲಕ್ಷ್ಮೀ, ಆಶಾ, ಸುಶೀಲಾ, ಸುಷ್ಮಾ, ಗೌರಿ, ಬೇಬಿ, ವಸಂತಿ ಅವರ ಕುಟುಂಬಗಳು ಬಾಕಿಯಾದ ಎರಡು ಕಂತು ಅನುದಾನಕ್ಕಾಗಿ ಕಾಯುತ್ತಿದ್ದಾರೆ. ಅದು ದೊರೆತರೆ ಇವರೆಲ್ಲರ ಹೊಸಮನೆ ಕನಸು ನನಸಾಗಲಿದೆ. ಅಲ್ಲಿವರೆಗೆ ಜೋಪಡಿ ವಾಸ ಮುಂದುವರಿಯಲಿದೆ.

ಕೊಳಚೆ
ಊರೆಲ್ಲ ಸ್ವತ್ಛತೆ ಕಾಪಾಡುವ ಇವರ ಮನೆ ವಠಾರದಲ್ಲಿ ಮಳೆ ಬಂದಾಗ ಕೊಚ್ಚೆ ತುಂಬಿರುತ್ತದೆ. ಮಳೆಗಾಲದಲ್ಲಿ ಸೊಳ್ಳೆ ಕಾಟದಿಂದ ಹಾಗೂ ಇಲಿಗಳು ಓಡಾಡುವುದರಿಂದ ತೊಂದರೆ ಯಾಗುತ್ತಿದೆ. ಇಲಿ, ಸೊಳ್ಳೆಕಾಟ, ಗಲೀಜಿನಿಂದಾಗಿ ಡೆಂಗ್ಯೂ, ಚಿಕೂನ್‌ಗುನ್ಯಾ ಕಾಯಿಲೆಗಳು ಬರುವ ಸಾಧ್ಯತೆಯಿದೆ.

Advertisement

ಮರಳಿಲ್ಲ
ಅನುದಾನದ ಕೊರತೆ ನಡುವೆ ಮರಳು ಲಭ್ಯತೆ ಸಮಸ್ಯೆಯೂ ಇವರನ್ನು ಕಾಡುತ್ತಿದೆ. ಜಿಲ್ಲೆಯಲ್ಲೆಡೆ ಮರಳಿನ ಅಲಭ್ಯತೆಯಿದ್ದು ಇವರು 400 ಚ.ಅಡಿಯ ಮನೆ ನಿರ್ಮಾಣದ ಮರಳಿಗೇ ಲಕ್ಷಾಂತರ ರೂ. ವ್ಯಯಿಸಬೇಕಾದ ಸ್ಥಿತಿ ಇದೆ. ಹಾಗಾಗಿ ಸಾಲ ಸೋಲ ಮಾಡಿ ಮನೆ ಕಟ್ಟುವ ಸ್ಥಿತಿಯಲ್ಲಿಯೂ ಇಲ್ಲ.

ಶಾಸಕರಿಗೆ ಮನವಿ
ಪುರಸಭೆ ಸದಸ್ಯ ವಿ. ಪ್ರಭಾಕರ, ರತ್ನಾಕರ ಚರ್ಚ್‌ರೋಡ್‌, ಉದಯ ಕುಮಾರ್‌ ಹೊನ್ನನಕೇರಿ ಅವರ ತಂಡ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರನ್ನು ಭೇಟಿಯಾಗಿ ರವಿವಾರ ಇಲ್ಲಿನ ಅವ್ಯವಸ್ಥೆ ಸರಿಪಡಿಸುವಂತೆ ಮನವಿ ಮಾಡಿತು. ಇದಕ್ಕೆ ಪೂರಕವಾಗಿ ಸ್ಪಂದಿಸಿದ ಶಾಸಕರು ಶೀಘ್ರದಲ್ಲಿಯೇ ಮನೆ ನಿರ್ಮಾಣದ ಅನುದಾನ ದೊರಕಿಸಿಕೊಡಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ಜತೆಗೆ ಖಾಸಗಿ ನೆಲೆಯಲ್ಲೂ ಮನೆ ನಿರ್ಮಾಣಕ್ಕೆ ಸಹಕರಿಸುವುದಾಗಿ ಹೇಳಿದ್ದಾರೆ.

ಪೂರ್ಣ ಪ್ರಯತ್ನ
ಮಾಡುತ್ತೇವೆ
ಕೊರಗರ ಮನೆ ನಿರ್ಮಾಣಕ್ಕೆ ಅನುದಾನ ಬರದಿರುವ ಕುರಿತು ಪುರಸಭೆ ಅಧಿಕಾರಿಗಳು, ಶಾಸಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ಅನುದಾನ ದೊರಕಿಸಿಕೊಡಲು ಪೂರ್ಣಪ್ರಯತ್ನ ಮಾಡುತ್ತೇವೆ.
– ವಿ. ಪ್ರಭಾಕರ್‌,ಪುರಸಭೆ ಸದಸ್ಯರು

ಅನುದಾನ ಬಂದಿಲ್ಲ
ಕಳೆದ 4 ವರ್ಷಗಳಿಂದ ಅನುದಾನಕ್ಕಾಗಿ ಇಲ್ಲಿನ ಕುಟುಂಬಗಳು ಕಾಯುತ್ತಿವೆ. ಇದಕ್ಕಾಗಿ ಮಾಡಿದ ಮನವಿಗಳೆಲ್ಲ ವ್ಯರ್ಥ ವಾಗಿವೆ. ಈ ರೀತಿಯ ನಿರ್ಲಕ್ಷ್ಯ ಸಲ್ಲದು.
– ನಾಗರಾಜ್‌ ,
ಕೊರಗ ಸಮುದಾಯ ಮುಖಂಡರು

-ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next