Advertisement

ಹೆಮ್ಮಾಡಿ –ನೆಂಪು ರಸ್ತೆಗೆ ದ್ವಿಪಥ ಭಾಗ್ಯ

12:30 AM Feb 22, 2019 | |

ಕುಂದಾಪುರ: ಇತಿಹಾಸ ಪ್ರಸಿದ್ಧ ಪುಣ್ಯ ಕ್ಷೇತ್ರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾದ ಹೆಮ್ಮಾಡಿ – ನೆಂಪುವರೆಗಿನ 10 ಕಿ.ಮೀ. ದೂರದ ರಸ್ತೆ ಇನ್ನು ದ್ವಿಪಥವಾಗಲಿದೆ. 

Advertisement

ಕುಂದಾಪುರದಿಂದ ಕೊಲ್ಲೂರಿಗೆ ತೆರಳುವ ಮಾರ್ಗ ಮಧ್ಯದ ಹೆಮ್ಮಾಡಿಯಿಂದ ನೆಂಪುವರೆಗಿನ ಸುಮಾರು 10 ಕಿ.ಮೀ. ಉದ್ದದ ರಸ್ತೆ ದ್ವಿಪಥವಾಗಬೇಕು ಎನ್ನುವ ಬಹುಕಾಲದ ಬೇಡಿಕೆಗೆ ಸ್ಪಂದಿಸಿರುವ ಇಲ್ಲಿನ ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟರು, ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದು, ಅದಕ್ಕೀಗ ಸ್ಪಂದನೆ ಸಿಕ್ಕಿದೆ.
 
10 ಕೋ.ರೂ. ಮಂಜೂರು
10 ಕಿ.ಮೀ. ದೂರದ ರಸ್ತೆಯ ದ್ವಿಪಥ ಹಾಗೂ ಡಿವೈಡರ್‌ ಕಾಮಗಾರಿಗೆ ಒಟ್ಟು ಶಾಸಕರ ಅನುದಾದನದಿಂದ 10 ಕೋ.ರೂ. ಮಂಜೂರಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಕೂಡ ಬರುವುದರಿಂದ ಚುನಾವಣೆ ಮುಗಿದ ಬಳಿಕ ಟೆಂಡರ್‌ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆಯಿದೆ ಎಂದು ಲೋಕೋಪಯೋಗಿ ಇಲಾಖೆಯ ಮೂಲಗಳು ತಿಳಿಸಿವೆ. 

ಸಂಚಾರ ದಟ್ಟಣೆಯ ಮಾರ್ಗ
ಕೊಲ್ಲೂರಿಗೆ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಕಿರಿದಾದ ರಸ್ತೆಯಾಗಿರುವುದರಿಂದ ಸಂಚಾರ ದಟ್ಟಣೆಯಿಂದ, ರಾತ್ರಿ ವೇಳೆ ಸಂsಚಾರಕ್ಕೆ ತೊಂದರೆಯಾಗುತ್ತಿತ್ತು. ಈಗ ದ್ವಿಪಥವಾಗುತ್ತಿ ರುವುದರಿಂದ ಸಂಚಾರ ಸುಗಮವಾಗಲಿದೆ. 

ರಸ್ತೆ ಅಗಲೀಕರಣ
ಹೆಮ್ಮಾಡಿಯಿಂದ ನೆಂಪುವಿನವರೆಗೆ ರಸ್ತೆ ದ್ವಿಪಥವಾದರೆ, ಅಲ್ಲಿಂದ ಮುಂದಕ್ಕೆ ಅಂದರೆ ಬೈಂದೂರು – ವಿರಾಜಪೇಟೆ ರಾಜ್ಯ ಹೆದ್ದಾರಿ 27ರಲ್ಲಿ ವಂಡ್ಸೆಯಿಂದ ಇಡೂರು – ಕುಂಜ್ಞಾಡಿಯವರೆಗಿನ 8 ಕಿ.ಮೀ. ರಸ್ತೆಯು 10 ಕೋ.ರೂ. ವೆಚ್ಚದಲ್ಲಿ ಅಗಲೀಕರಣವಾಗಲಿದೆ. ಇದಲ್ಲದೆ ಸುಳೆ ಸಹಿತ 3 ಕಡೆಗಳ ತಿರುವು ತೆಗೆದು, ಸುಲಭ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ. ಕೊಲ್ಲೂರು, ಕುಂದಾಪುರ, ಬೈಂದೂರು ಕಡೆಗೆ ಸಂಚರಿಸುವ ಪ್ರಮುಖ ಜಂಕ್ಷನ್‌ ಆಗಿರುವ ಹಾಲ್ಕಲ್‌ನಲ್ಲೊಂದು ಸರ್ಕಲ್‌ ಆಗಲಿದೆ ಎನ್ನುವ ಮಾಹಿತಿ ಇದೆ.

ಶೀಘ್ರ ಕಾಮಗಾರಿ
ಬಜೆಟ್‌ಗೂ ಮೊದಲು ಲೋಕೋಪಯೋಗಿ ಇಲಾಖೆ ಸಚಿವ ರೇವಣ್ಣ ಅವರನ್ನು ಭೇಟಿ ಮಾಡಿ ಅನುದಾನಕ್ಕೆ ಬೇಡಿಕೆ ಸಲ್ಲಿಸಿದ್ದೆ. ಅದೀಗ ಮಂಜೂರಾಗಿದ್ದು, ಶೀಘ್ರ ಟೆಂಡರ್‌ ಪ್ರಕ್ರಿಯೆ ಆರಂಭಿಸಿ, ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಕೊಲ್ಲೂರಿಗೆ ಬರುವ ಸಾವಿರಾರು ಭಕ್ತಾದಿಗಳಿಗೂ ಪ್ರಯೋಜನವಾಗುವ ನಿಟ್ಟಿನಲ್ಲಿ ಈ ಮಹತ್ವಾಂಕ್ಷೆಯ ಕಾಮಗಾರಿ ಕೈಗೊಳ್ಳಲಾಗುತ್ತಿದೆ. 
– ಬಿ.ಎಂ. ಸುಕುಮಾರ್‌ ಶೆಟ್ಟಿ,, ಬೈಂದೂರು ಶಾಸಕರು.

Advertisement

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next