Advertisement

ಕುಂದಾಪುರ: ಜಾಲಾಡಿ- ಹೊಸ್ಕಳಿ- ಗದ್ದೆಗಳಿಗೆ ನುಗ್ಗಿದ ಉಪ್ಪು ನೀರು

05:34 PM Feb 20, 2024 | Team Udayavani |

ಕುಂದಾಪುರ: ಕಟ್‌ಬೆಲ್ತೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಜಾಲಾಡಿ -ಹೊಸ್ಕಳಿಯ ಎಕರೆಗಟ್ಟಲೆ ಕೃಷಿಭೂಮಿಗೆ ಉಪ್ಪು
ನೀರು ದಾಂಗುಡಿಯಿಟ್ಟಿದೆ. ಇಲ್ಲಿನ ಉಪ್ಪು ನೀರಿನ ಸಮಸ್ಯೆಗೆ ಇನ್ನೂ ಶಾಶ್ವತ ಪರಿಹಾರ ಮಾತ್ರ ಸಿಕಿಲ್ಲ. ಹೊಸ ವೆಂಟೆಡ್‌ ಡ್ಯಾಂ ಬೇಕು ಎಂದು ಇಲ್ಲಿನ ರೈತರು ಹಲವಾರು ವರ್ಷಗಳಿಂದ ಬೇಡಿಕೆ ಇಡುತ್ತಿದ್ದರೂ, ಯಾರೂ ಇದನ್ನು ಗಂಭೀರವಾಗಿ ಪರಿಗಣಿಸಿಯೇ ಇಲ್ಲ. ಜಾಲಾಡಿ- ಹೊಸ್ಕಳಿ ಪರಿಸರದಲ್ಲಿರುವ ಹಳೆ ವೆಂಟೆಡ್‌ ಡ್ಯಾಂನಲ್ಲಿ ಹಿಂದೆ ಅಳವಡಿಸಿದ ಹಲಗೆಗಳು ಒಡೆದು ಹೋಗಿದ್ದು, ಇದರಿಂದ ಉಪ್ಪು ನೀರು ಪೂರ್ತಿ ಗದ್ದೆಗಳಿಗೆ ನುಗ್ಗಿದೆ. ಇಡೀ ಗದ್ದೆಗಳಲ್ಲಿ ಉಪ್ಪು ನೀರೇ ತುಂಬಿಕೊಂಡಿದೆ.

Advertisement

50 ಎಕರೆಗೂ ಮಿಕ್ಕಿ ಗದ್ದೆ
ಈ ಪರಿಸರದಲ್ಲಿ ಅಂದಾಜು 50 ಎಕರೆಗೂ ಮಿಕ್ಕಿ ಗದ್ದೆಗಳಿದ್ದು, ಸುಮಾರು 25ಕ್ಕೂ ಮಿಕ್ಕಿ ರೈತರು ಮುಂಗಾರಿನಲ್ಲಿ ಭತ್ತದ ಬೆಳೆಯನ್ನು ಮಾಡುತ್ತಿದ್ದಾರೆ. ಈಗ ಗದ್ದೆಗಳಿಗೆ ಉಪ್ಪು ನೀರು ದಾಂಗುಡಿಯಿಟ್ಟಿರುವುದರಿಂದ ಮುಂಬರುವ ಮುಂಗಾರು ಹಂಗಾಮಿನಲ್ಲಿ ಭತ್ತದ ಬೇಸಾಯ ಮಾಡಲು ಸಮಸ್ಯೆಯಾಗಲಿದೆ. ನಾಟಿ ಅಥವಾ ಬಿತ್ತನೆ ಮಾಡಿದರೂ, ಬೆಳೆ ಕರಟಿ ಹೋಗುವ ಸಾಧ್ಯತೆ ಇರುತ್ತದೆ ಎನ್ನುವ ಆತಂಕ ರೈತರದಾಗಿದೆ.

ವೆಂಟೆಡ್‌ ಡ್ಯಾಂ ಬೇಡಿಕೆ
ಜಾಲಾಡಿ- ಹೊಸ್ಕಳಿ ಭಾಗದ ಉಪ್ಪು ನೀರಿನ ಸಮಸ್ಯೆಯಿಂದ ಊರವರ ಬೇಡಿಕೆ ಹಿನ್ನೆಲೆಯಲ್ಲಿ ಹಿಂದೆ ಶಾಸಕರಾಗಿದ್ದ ಬಿ.ಎಂ. ಸುಕುಮಾರ್‌ ಶೆಟ್ಟರ ಅವಧಿಯಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ನದಿ ದಂಡೆಯಾಗಿದೆ. ಆದರೆ ಇದರಿಂದ ಉಪ್ಪು ನೀರಿನ ಸಮಸ್ಯೆಯೇನು ಪರಿಹಾರ ಆಗಿಲ್ಲ. ಈಗಿರುವ ಹಳೆ ವೆಂಟೆಡ್‌ ಡ್ಯಾಂ ನಿಷ್ಪ್ರಯೋಜಕವಾಗಿದೆ. ಇದರ ನಿರ್ವಹಣೆ ಮಾಡದೆಯೇ ಎಷ್ಟೋ ವರ್ಷಗಳೇ ಕಳೆದಿವೆ. ಇಲ್ಲಿ ಹೊಸ ವೆಂಟೆಡ್‌ ಡ್ಯಾಂ ಬೇಕು ಎನ್ನುವುದು ಇಲ್ಲಿನ ರೈತರ ಹಲವಾರು ವರ್ಷಗಳ
ಬೇಡಿಕೆಯಾಗಿದೆ.

ಬಾವಿ ನೀರೂ ಉಪ್ಪಾಗುವ ಭೀತಿ
ಗದ್ದೆಗಳಿಗೆ ಉಪ್ಪು ನೀರು ನುಗ್ಗಿರುವುದರಿಂದ ಇನ್ನು ಇಲ್ಲಿ ಆಸುಪಾಸಿನಲ್ಲಿರುವ 50ಕ್ಕೂ ಅಧಿಕ ಮನೆಗಳ ಬಾವಿಗಳ ನೀರು ಸಹ
ಉಪ್ಪಾಗುವ ಆತಂಕ ಜನರದ್ದಾಗಿದೆ. ಈಗಾಗಲೇ ಬಾವಿಗಳ ನೀರು ತಳಮಟ್ಟಕ್ಕೆ ತಲುಪಿದೆ. ಹೀಗೆ ಆದರೆ ನೀರಿನ ಸಮಸ್ಯೆಯೂ ಬೇಗನೇ ಕಾಡುವ ಭೀತಿಯೂ ಇದೆ.

ಕೃಷಿಗೆ ಭಾರೀ ತೊಂದರೆ
ಇಲ್ಲೆಲ್ಲ ಫಲವತ್ತಾದ ಕೃಷಿಭೂಮಿಯೇ ಇರುವುದು. ಊರವರೆಲ್ಲ ಪ್ರತೀ ವರ್ಷ ಈ ಹಳೆ ಡ್ಯಾಂನಲ್ಲಿ ಶ್ರಮದಾನದ ಮೂಲಕ ಕಟ್ಟ
ಹಾಕುತ್ತಿದ್ದೆವು. ಅದು ಉಪ್ಪು ನೀರಿಗೆ ಒಡೆದು ಹೋಗುವುದು ಖಾಯಂ ಆಗಿದೆ. ಈಗಲೂ ಹಾಗೆಯೇ ಆಗಿದೆ. ಅನೇಕ ಮಂದಿ ರೈತರು
ಇದರಿಂದ ಬೇಸಾಯ ಮಾಡುವುದನ್ನೇ ನಿಲ್ಲಿಸಿದ್ದಾರೆ. ಇಲ್ಲಿ ಹೊಸ ವೆಂಟೆಡ್‌ ಡ್ಯಾಂ ಆದರೆ ತುಂಬಾ ಅನುಕೂಲವಾಗಲಿದೆ.
ಹಿಂದಿನ ಶಾಸಕರು ಮಾಡಿಕೊಡುವ ಭರವಸೆ ನೀಡಿದ್ದರು. ಆ ಬಳಿಕ ಸರಕಾರ ಬದಲಾಗಿದ್ದರಿಂದ ಬಾಕಿಯಾಗಿದೆ.
ದಿನಕರ ದೇವಾಡಿಗ ಜಾಲಾಡಿ, ರೈತರು

Advertisement

ಭೇಟಿ ನೀಡಿ ಪರಿಶೀಲನೆ
ಗದ್ದೆಗಳಿಗೆ ಉಪ್ಪು ನೀರು ನುಗ್ಗಿರುವ ಬಗ್ಗೆ ಮಾಹಿತಿ ಬಂದಿದೆ. ಜಾಲಾಡಿ- ಹೊಸ್ಕಳಿ ಭಾಗದಲ್ಲಿ ಹೊಸ ವೆಂಟೆಡ್‌ ಡ್ಯಾಂ ಬೇಡಿಕೆ ಬಗ್ಗೆ ಅಲ್ಲಿಗೆ ಸ್ವತಃ ಭೇಟಿ ನೀಡಿ, ಪರಿಶೀಲನೆ ನಡೆಸಿ, ಆ ಬಳಿಕ ಅಗತ್ಯವಿದ್ದರೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.
ನಾಗಲಿಂಗ, ಸಹಾಯಕ ಎಂಜಿನಿಯರ್‌,
ಸಣ್ಣ ನೀರಾವರಿ ಇಲಾಖೆ

*ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next