Advertisement

ಕುಂದಾಪುರ: ಊಟಕ್ಕಿಲ್ಲದ ಇಂದಿರಾ ಕ್ಯಾಂಟೀನ್‌

06:00 AM Jul 13, 2018 | |

ಕುಂದಾಪುರ: ಹಿಂದಿನ ಸಿದ್ದರಾಮಯ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಇಂದಿರಾ ಕ್ಯಾಂಟೀನ್‌ ಕುಂದಾಪುರಕ್ಕೂ ಬಂದಿದ್ದೇನೋ ಹೌದು. ಆದರೆ ಅದೀಗ ಊಟಕ್ಕಿಲ್ಲದ ಇಂದಿರಾ ಕ್ಯಾಂಟೀನ್‌ ಎಂದಾಗಿದೆ. 

Advertisement

ಇನ್ನೂ ಕ್ಯಾಂಟೀನ್‌ ಕಾಮಗಾರಿ ಪೂರ್ಣವಾಗಿ ಮುಗಿಯದ್ದರಿಂದ ಕ್ಯಾಂಟೀನ್‌ ಶುರುವಾಗಿಲ್ಲ. ಇಲ್ಲಿ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ರಾಜ್ಯಾದ್ಯಂತ ಒಟ್ಟು 247 ಕ್ಯಾಂಟೀನ್‌ಗಳನ್ನು ನಿರ್ಮಿಸಲು ಆದೇಶ ಹೊರಡಿಸಿದ್ದ ಸರ್ಕಾರ, ಯೋಜನೆ ಜಾರಿಗಾಗಿ 211 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿತ್ತು. ಚುನಾವಣೆ ಮುನ್ನ ಬಡವರ ಹಸಿವಿನ ಮೇಲೆ ಇದ್ದ ರಾಜಕಾರಣಿಗಳ ಆಸಕ್ತಿ ಈಗ ಕುಂದಿದೆ ಎಂಬ ಟೀಕೆ ಕೇಳಿ ಬರುತ್ತಿದೆ.  

ಶಾಸ್ತ್ರಿ ಸರ್ಕಲ್‌ ಬಳಿಯ ಪಶು ವೈದ್ಯಕೀಯ ಆಸ್ಪತ್ರೆಯ ಪಕ್ಕದ ಜಾಗದಲ್ಲಿ  ಕ್ಯಾಂಟೀನ್‌ ಮಾಡಲಾಗಿದೆ. ಕಟ್ಟಡ ಸಿದ್ಧವಾಗಿದ್ದರೂ ಇತರ ಕೆಲಸಗಳು ಇನ್ನೂ ನಡೆದಿಲ್ಲ. ಮಾರ್ಚ್‌ ಮೊದಲ ವಾರದಲ್ಲಿ ಕಾಮಗಾರಿ ಆರಂಭಗೊಂಡಿದ್ದು, ಜುಲೈನಲ್ಲೂ ಮುಗಿದಿಲ್ಲ. ಮೆಟಲ್‌ ಫ್ಲೈವುಡ್‌, ಸ್ಲಾéಬ್‌ ಗೋಡೆಗಳನ್ನು ಜೋಡಿಸಿ ಕಟ್ಟಡ ಮಾಡಲಾಗಿದೆ. ಅಡುಗೆ ಕೋಣೆ ಕಾಮಗಾರಿ, ವಿದ್ಯುತ್‌ ವಯರಿಂಗ್‌ ಕೆಲಸಗಳು ಇನ್ನೂ ಬಾಕಿಯಿವೆ.20 ದಿನದೊಳಗೆ ಮುಕ್ತಾಯವಾಗಬೇಕಿದ್ದ ಕಾಮಗಾರಿ ಇನ್ನೂ ಮುಗಿಯದೆ ಜನೋಪಯೋಗಕ್ಕೆ ಸಿಕ್ಕಿಲ್ಲ.

ಜಿಲ್ಲೆಗೆ 4 ಇಂದಿರಾ ಕ್ಯಾಂಟೀನ್‌ ಮಂಜೂರಾಗಿದ್ದು 2 ಮಾತ್ರ ಕಾರ್ಯನಿರ್ವಹಿಸುತ್ತಿದೆ. ಆರಂಭದಲ್ಲಿ ಕುಂದಾಪುರದಲ್ಲಿ ಜಾಗದ ಸಮಸ್ಯೆಯಿಂದ ವಿಳಂಬವಾಗಿತ್ತು. ಪಶು ವೈದ್ಯಕೀಯ ಆಸ್ಪತ್ರೆಯ ಜಾಗಕ್ಕೆ ಹೋಗುವ ದಾರಿ ಸಮಸ್ಯೆ ಇದ್ದು, ಅಲ್ಲಿ ಗೂಡಂಗಡಿ ಇದ್ದುದರಿಂದ ಅದರ ತೆರವು ಕಾರ್ಯ ನಡೆಸಿ ನಂತರ ಕಾಮಗಾರಿ ಮಾಡಲಾಗಿತ್ತು. 

ಪುರಸಭೆಯಿಂದ 13.5 ಲಕ್ಷ ರೂ.
ಜಾಗಕ್ಕೆ ಕಂಪೌಂಡ್‌, ಬೋರ್ಡ್‌ಗಳು, ಟೋಕನ್‌, ಮೆನು ಬೋರ್ಡ್‌, ನೀರಿನ ಸೌಲಭ್ಯ, ರಸ್ತೆ ಸಂಪರ್ಕ, ಎಲ್ಲ ಸೇರಿದಂತೆ ಸುಮಾರು 13.5 ಲಕ್ಷ ರೂ. ಅನ್ನು ಪುರಸಭೆ ಭರಿಸುತ್ತದೆ. ಕೆಇಎಫ್‌ ಇನ್‌ಫ್ರಾಸ್ಟ್ರಕ್ಚರ್‌ ಸಂಸ್ಥೆಗೆ ಕಟ್ಟಡ ನಿರ್ಮಾಣ ಕಾಮಗಾರಿ ವಹಿಸಿಕೊಡಲಾಗಿದೆ.

Advertisement

10 ದಿನದ ಕೆಲಸ ಮಾತ್ರ ಬಾಕಿ
ಇಂದಿರಾ ಕ್ಯಾಂಟೀನ್‌  ಕಾಮಗಾರಿ ಮಳೆಯಿಂದಾಗಿ ವಿಳಂಬವಾಗಿದೆ. ಅಡುಗೆ ಕೋಣೆ ಹಾಗೂ ವಿದ್ಯುತ್‌ ಕೆಲಸ ಮಾತ್ರ ಬಾಕಿ ಇದೆ. ಇನ್ನು 10 ದಿನದ ಕಾಮಗಾರಿ ಮಾತ್ರ ಬಾಕಿ ಇದೆ. ಆಗಸ್ಟ್‌ನಲ್ಲಿ ಜನೋಪಯೋಗಕ್ಕೆ ದೊರೆಯಲಿದೆ. 
– ಗೋಪಾಲಕೃಷ್ಣ ಶೆಟ್ಟಿ, ಮುಖ್ಯಾಧಿಕಾರಿ, ಪುರಸಭೆ

Advertisement

Udayavani is now on Telegram. Click here to join our channel and stay updated with the latest news.

Next