Advertisement

ಕುಂದಾಪುರ: ಎಗ್ಗಿಲ್ಲದೆ ಸಾಗಿದೆ ಅಕ್ರಮ ಮರಳುಗಾರಿಕೆ

10:54 PM Nov 15, 2019 | Team Udayavani |

ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಮರಳುಗಾರಿಕೆಗೆ 2 ಕಡೆ ಸರಕಾರದಿಂದ ಅನುಮತಿ ದೊರೆತಿದ್ದು ಕುಂದಾಪುರ ವಿಧಾನಸಭಾ ಕ್ಷೇತ್ರದ ಇನ್ನಷ್ಟು ಕಡೆ ಮಾನ್ಯತೆ ದೊರೆಯ ಬೇಕಿದೆ. ಕುಂದಾಪುರ, ಬೈಂದೂರು ತಾಲೂಕಿನ ವಿವಿಧೆಡೆ ಅಕ್ರಮವಾಗಿ ಮರಳುಗಾರಿಕೆ ಅಡ್ಡೆಗಳು ತಲೆಯೆತ್ತಿದ್ದು ಕಾನೂನು ಪಾಲಕರಿಗೆ ಚಿಂತೆಯಾಗಿದೆ. ಸಕ್ರಮವಾಗಿಯೂ ಮರಳುಗಾರಿಕೆ ಆರಂಭವಾದ ಕಾರಣ ಅಕ್ರಮ ಯಾವುದು ಸಕ್ರಮ ಯಾವುದು ಎಂದು ತಿಳಿಯಲು ಬಿಗಿ ತಪಾಸಣೆ ನಡೆಸಬೇಕಿದೆ.

Advertisement

ಕರಾವಳಿ ತೀರದಲ್ಲಿ
ಉಡುಪಿಯ ಉದ್ಯಾವರದಿಂದ ಬ್ರಹ್ಮಾವರದ ಮಾಬುಕಳದವರೆಗೆ ಸಿಆರ್‌ಝಡ್‌ ಪ್ರದೇಶಗಳಲ್ಲಿ ಗುರುತಿಸಲಾದ ಅಂದಾಜು 8 ಲಕ್ಷ ಮೆಟ್ರಿಕ್‌ ಟನ್‌ ಮರಳು ದಿಬ್ಬಗಳನ್ನು ತೆಗೆಯಲು ಸುಮಾರು 165 ನೊಂದಾಯಿತ ಪರವಾನಿಗೆದಾರರಿಗೆ ಅನುಮತಿ ನೀಡಿ ಮರಳುಗಾರಿಕೆ ಆರಂಭಿಸಲಾಗಿತ್ತು. ಸಿಆರ್‌ಝಡ್‌ ವ್ಯಾಪ್ತಿಯ ಪ್ರದೇಶಗಳನ್ನು ಹೊರತು ಪಡಿಸಿ ಸಿಹಿ ನೀರು ಪ್ರದೇಶದಲ್ಲಿನ ಮರಳುಗಾರಿಕೆಗಾಗಿ ಕುಂದಾಪುರ ತಾಲೂಕಿನ ಬಳ್ಕೂರು, ಹಳ್ನಾಡು ಪ್ರದೇಶವನ್ನು ಗುರುತಿಸಿ ಟೆಂಡರ್‌ ಕರೆದು ಅಧಿಕೃತ ಮರಳುಗಾರಿಕೆ ಆರಂಭಿಸಲಾಗಿದೆ.

ಅನುಮತಿಯಿಲ್ಲ
ಕುಂದಾಪುರ ಹಾಗೂ ಬೈಂದೂರು ತಾಲೂಕು ವ್ಯಾಪ್ತಿಯ ಸಿಆರ್‌ಝಡ್‌ವ್ಯಾಪ್ತಿಯ ಪ್ರದೇಶದಲ್ಲಿ ಮರಳುಗಾರಿಕೆಗೆ ತಾಂತ್ರಿಕ ಕಾರಣದಿಂದ ಇನ್ನೂ ಅನುಮತಿ ದೊರಕಿಲ್ಲ. ಸೌಪರ್ಣಿಕಾ, ಗಂಗಾವಳಿ, ವರಾಹಿ, ಕುಬ್ಜ, ಚಕ್ರಾ ಮುಂತಾದ ನದಿ ಪಾತ್ರಗಳಲ್ಲಿ ಸಕ್ರಮ ಮರಳುಗಾರಿಕೆಗಿಂತ ಅಕ್ರಮ ಮರಳುಗಾರಿಕೆಯೇ ಹೆಚ್ಚಾಗಿ ನಡೆಯುತ್ತಿದೆ ಎಂದು ಸಾರ್ವಜನಿಕ ದೂರುಗಳಿವೆ. ಹಕ್ಲಾಡಿ ಗ್ರಾಮದ ತೊಪ್ಲು, ನಾವುಂದ ಗ್ರಾಮದ ಬಡಾಕೆರೆ, ಕುಂದಾಪುರದ ಭಟ್ರಹಾಡಿ, ರಿಂಗ್‌ರಸ್ತೆ, ಹಟ್ಟಿಯಂಗಡಿ, ಮೊಗೆಬೆಟ್ಟು, ಬೈಂದೂರಿನ ಸೋಮೇಶ್ವರ ಮೊದಲಾದೆಡೆ ಅಕ್ರಮವಾಗಿ ರಾಜಾರೋಷವಾಗಿ ನಡೆಯುತ್ತಿದೆ. ಇಷ್ಟಲ್ಲದೇ 2 ತಾಲೂಕುಗಳ ಗ್ರಾಮೀಣ ಹಾಗೂ ಕರಾವಳಿ ಭಾಗದ ಹಲವು ಕಡೆ ಬೆಳಕಿಗೆ ಬಾರದೆ ಮರಳು ಅಕ್ರಮ ದಂಧೆ ನಿರಂತರವಾಗಿ ಮುಂದುವರಿದಿದೆ.

ಸಮನ್ವಯ ಕೊರತೆ
ಪೊಲೀಸ್‌ ಇಲಾಖೆ, ಕಂದಾಯ ಇಲಾಖೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಪರಸ್ಪರ ಸಮನ್ವಯದೊಂದಿಗೆ ಕಾರ್ಯಾಚರಣೆ ನಡೆಸಿದರೆ ಅಕ್ರಮ ಮರಳುಗಾರಿಕೆಗೆ ಕಡಿವಾಣ ಬೀಳಲಿದೆ ಎನ್ನುತ್ತಾರೆ ಕಲಾಕ್ಷೇತ್ರ ಸಂಸ್ಥೆಯ ಬಿ. ಕಿಶೋರ್‌ ಕುಮಾರ್‌. ಪೊಲೀಸ್‌ ಇಲಾಖೆ ನಿರ್ವಹಣೆ ಮಾಡು ವಂತೆ ಗಣಿ ಹಾಗೂ ಭೂ ವಿಜ್ಞಾನ ಇಲಾಖೆಯೂ ಗೃಹ ರಕ್ಷಕ ಸಿಬಂದಿ ನೆರವಿನೊಂದಿಗೆ ಚೆಕ್‌ಪೋಸ್ಟ್‌ಗಳನ್ನು ತೆರೆಯಬೇಕು, ಪೊಲೀಸ್‌ ಇಲಾಖೆ ಪ್ರಕರಣ ದಾಖ ಲಿಸಿದ ಅನಂತರ ವಿಳಂಬಿಸದೇ ಗಣಿ ಇಲಾಖೆಯೂ ಪ್ರಕರಣ ದಾಖಲಿಸಬೇಕು. ಮರಳುಗಾರಿಕೆಗೆ ನೀಡಿದ ಪರ್ಮಿಟ್‌ ಮೇಲೆ ಪೊಲೀಸರಂತೆ ಗಣಿ ಇಲಾಖೆಯ ಸಿಬಂದಿ ಮರಳುಗಾರಿಕೆಯ ಸ್ಥಳದಲ್ಲಿಯೇ ಸಹಿ ಮಾಡಬೇಕು ಎನ್ನುತ್ತಾರೆ ಅವರು.

ಕಾನೂನು ಕ್ರಮ
ಪೊಲೀಸರು ಆಗಾಗ ಅಕ್ರಮ ಮರಳುಗಾರಿಕೆ ಹಾಗೂ ಸಾಗಾಟ ಪತ್ತೆ ಮಾಡುತ್ತಿದ್ದಾರೆ. ಪರವಾನಿಗೆ ಪಡೆದು ಮರಳುಗಾರಿಕೆ ನಡೆಸುವವರು ಸಾಗಾಟ ಮಾಡುವ ಪರ್ಮಿಟ್‌ಗಳನ್ನು ಗುರುತಿಸಿ ಅದಕ್ಕೆ ಪೊಲೀಸ್‌ ಸಿಬಂದಿ ಸಹಿ ಮಾಡುವ, ಸಾರ್ವಜನಿಕ ಮಾಹಿತಿ ಇರುವ ಸ್ಥಳಗಳಿಗೆ ಪೊಲೀಸ್‌ ಸಿಬಂದಿ ಯನ್ನು ಕಳುಹಿಸುವ ಹಾಗೂ ಚೆಕ್‌ಪೋಸ್ಟ್‌ ಗಳನ್ನು ಬಿಗಿಗೊಳಿಸುವ ಕ್ರಮಕ್ಕೆ ಮುಂದಾಗಿತ್ತು. ಸಾರ್ವಜನಿಕ ಆಸ್ತಿಯನ್ನು ಲೂಟಿ ಮಾಡುತ್ತಾರೆ ಎಂದು 379 ಸೆಕ್ಷನ್‌ ಅಡಿಯಲ್ಲಿ ಅಕ್ರಮ ದಂಧೆಕೋರರ ವಿರುದ್ಧ ಪ್ರಕರಣ ದಾಖಲಿಸಿ, ವಾಹನ ಮುಟ್ಟುಗೋಲು ಮಾಡಿಕೊಳ್ಳಲಾಗಿತ್ತು. ಪ್ರಕರಣದಲ್ಲಿ ಜಾಮೀನು ಪಡೆದುಕೊಳ್ಳುವ ದಂಧೆಕೋರರು ಕೆಲವು ದಿನ ಸುಮ್ಮನಿದ್ದು ಮತ್ತೆ ಹಳೆಯ ಚಾಳಿಗೆ ಮರಳುತ್ತಾರೆ. ಅಕ್ರಮ ಮರಳು ಗಣಿ ನಡೆಸುವವರ ವಿರುದ್ಧ ಗೂಂಡಾ ಕಾಯಿದೆ ಹಾಕುವ ಕುರಿತು ಎಚ್ಚರಿಕೆಯನ್ನೂ ನೀಡಲಾಗಿದೆ.

Advertisement

ಮಾಹಿತಿದಾರರು
ಮರಳು ಸಂಗ್ರಹ ಪ್ರದೇಶಗಳನ್ನು ಗುರುತಿಸಿ, ನದಿಯ ಬದಿಯಲ್ಲಿನ ಪೊದೆಗಳಲ್ಲಿ ದೋಣಿಗಳನ್ನು ಇರಿಸಿ ಕಾಯುವ ದಂಧೆಕೋರರು, ಪೊಲೀಸ್‌ ಹಾಗೂ ಇತರ ಇಲಾಖೆಯ ಅಧಿಕಾರಿಗಳ ಚಲನವಲನದ ಮಾಹಿತಿ ಪಡೆಯುವುದಕ್ಕಾಗಿ ಮಾಹಿತಿದಾರರನ್ನು ಇರಿಸಿಕೊಂಡು ರಾತ್ರಿ, ಹಗಲೆನ್ನದೆ ಮರಳುಗಾರಿಕೆ ನಡೆಸುತ್ತಾರೆ. ಇತ್ತೀಚೆಗೆ ಹಕ್ಲಾಡಿ ಗ್ರಾಮ ತೊಪ್ಲು ಯಳೂರಿನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಮರಳನ್ನು ಜಪ್ತಿ ಮಾಡಿಕೊಂಡಿದ್ದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಪ್ರಕರಣವನ್ನು ದಾಖಲಿಸಿತ್ತು.

ಕಟ್ಟುನಿಟ್ಟಿನ ಕ್ರಮ
ಇಲಾಖೆ ಹಾಗೂ ಸಾರ್ವಜನಿಕ ಮಾಹಿತಿ ಆಧಾರದಲ್ಲಿ ಪೊಲೀಸರು ಅಕ್ರಮ ಮರಳು ದಂಧೆ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಇಲಾಖೆಯ ಕ್ರಮಗಳನ್ನು ಮೀರಿ ಅಕ್ರಮ ನಡೆಸುವವರ ವಿರುದ್ಧ ಇಲಾಖೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಿದೆ.
-ಹರಿರಾಂ ಶಂಕರ್‌, ಎಎಸ್‌ಪಿ, ಕುಂದಾಪುರ.

Advertisement

Udayavani is now on Telegram. Click here to join our channel and stay updated with the latest news.

Next