Advertisement

ಕುಂದಾಪುರ ಸರಕಾರಿ ಆಸ್ಪತ್ರೆ: ರಾತ್ರಿಯೂ ಡಯಾಲಿಸಿಸ್‌

08:58 PM Nov 22, 2021 | Team Udayavani |

ವಿಶೇಷ ವರದಿ-ಕುಂದಾಪುರ: ಹಾಳಾದ ಡಯಾಲಿಸಿಸ್‌ ಯಂತ್ರಗಳು, ನಿರ್ವಹಣ ಸಂಸ್ಥೆಯ ಸಿಬಂದಿ ರಾಜೀನಾಮೆ, ಇರುವ ಸಿಬಂದಿಗೆ ಬರದ ವೇತನದಿಂದಾಗಿ ಇಲ್ಲಿನ ಸರಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ಹಗಲು, ರಾತ್ರಿ ಡಯಾಲಿಸಿಸ್‌ ಮಾಡಲಾಗುತ್ತಿದೆ. ವಾರದಲ್ಲಿ ಮೂರು ದಿನ ಮಧ್ಯರಾತ್ರಿ ವೇಳೆ ರೋಗಿಗಳು ಚಿಕಿತ್ಸೆ ಮುಗಿಸಿ ಮನೆ ತಲುಪುವ ಕುರಿತು ಚಿಂತಿಸಬೇಕಿದೆ.

Advertisement

ನಿರ್ವಹಣೆ ಖಾಸಗಿ ಸಂಸ್ಥೆಗೆ
2015 ಮಾರ್ಚ್‌ನಿಂದ ಸರಕಾರ ರಾಜ್ಯದ ಎಲ್ಲೆಡೆ 23 ಜಿಲ್ಲೆಗಳ 122 ಸರಕಾರಿ ಆಸ್ಪತ್ರೆಗಳ ಡಯಾಲಿಸಿಸ್‌ ಘಟಕ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗೆ ಒಪ್ಪಿಸಿತು. ಆ ಸಂಸ್ಥೆ ಒಬ್ಬ ಸೂಪರ್‌ ಸ್ಪೆಷಲಿಸ್ಟ್‌, ಒಬ್ಬರು ವೈದ್ಯರನ್ನು ಪ್ರತೀ ಕೇಂದ್ರಕ್ಕೆ ಒದಗಿಸಬೇಕಿತ್ತು. ಪ್ರತೀ ರೋಗಿಗೆ 2 ಚುಚ್ಚುಮದ್ದನ್ನು ಸಂಸ್ಥೆಯೇ ನೀಡಬೇಕು. ಡಯಾಲಿಸಿಸ್‌ ಯಂತ್ರಗಳ ತಂತ್ರಜ್ಞ 2, ನರ್ಸ್‌ 3, ಗ್ರೂಪ್‌ ಡಿ 3 ಸಿಬಂದಿಯನ್ನು ನೀಡಬೇಕು. ಇದಿಷ್ಟಕ್ಕೆ ಸರಕಾರ ಪಾವತಿ ಮಾಡುವುದು ಎಂದಾಗಿತ್ತು.

ಆರಂಭದಲ್ಲೇ ಎಡವಿತು
ಸೂಪರ್‌ ಸ್ಪೆಷಲಿಸ್ಟ್‌ಗಳನ್ನು ನೀಡಲಿಲ್ಲ, ವೈದ್ಯರನ್ನು ಒದಗಿಸಲಿಲ್ಲ, ಚುಚ್ಚುಮದ್ದು ಕೊಡಲಿಲ್ಲ. ಇವೆಲ್ಲ ಸರಕಾರಿ ಆಸ್ಪತ್ರೆಯಿಂದಲೇ ನೀಡಲ್ಪಡುತ್ತಿತ್ತು. ಆರೋಗ್ಯ ರಕ್ಷಾ ನಿಧಿಯಿಂದ ಖರ್ಚಾಗುತ್ತಿತ್ತು. ಕೊನೆಗೆ ಸರಕಾರ ಈ ಮೊತ್ತ ಕಳೆದು ಬಾಕಿ ಮೊತ್ತ ಸಂಸ್ಥೆಗೆ ನೀಡಲಾರಂಭಿಸಿತು. 5 ಯಂತ್ರಗಳಿದ್ದುದು 2 ಹಾಳಾಗಿ 3ಕ್ಕೆ ಇಳಿಯಿತು. ಯಂತ್ರಗಳನ್ನು ನೀಡಿದ ಸಂಸ್ಥೆ ನಿರ್ವಹಣೆ ಮಾಡಲಿಲ್ಲ, ದುರಸ್ತಿ ಮಾಡಲಿಲ್ಲ. ಇದಕ್ಕೆ ಸಂಸ್ಥೆ ಹಾಗೂ ಕಂಪೆನಿ ನಡುವಿನ ವ್ಯವಹಾರ ಕಾರಣ ಎನ್ನಲಾಗಿದೆ. ಘಟಕದಲ್ಲಿ ಡಯಾ
ಲಿಸಿಸ್‌ಗೆ ಬೇಕಾಗುವ ರಾಸಾಯನಿಕ ವಸ್ತುಗಳು ಮತ್ತು ಫಿಲ್ಟರ್‌ಗಳು ಖಾಲಿಯಾಗಿ ಸಂಸ್ಥೆ ಪೂರೈಸುವುದನ್ನು ನಿಲ್ಲಿಸಿದೆ.

ಸಿಬಂದಿ ರಾಜೀನಾಮೆ
2021 ಮೇ ತಿಂಗಳಿನಿಂದ ಸಿಬಂದಿಗೆ ವೇತನ ಪಾವತಿಯಾಗದ ಕಾರಣ ಇಲ್ಲಿನ ಆಸ್ಪತ್ರೆಯಲ್ಲಿ ಅಕ್ಟೋಬರ್‌ನಲ್ಲಿ ಇಬ್ಬರು ಸಿಬಂದಿ ರಾಜೀನಾಮೆ ನೀಡಿದರು. ನವೆಂಬರ್‌ನಲ್ಲಿ ಇನ್ನೊಬ್ಬರು ರಾಜೀನಾಮೆ ನೀಡಿದ್ದಾರೆ. ಡಿಸೆಂಬರ್‌ನಿಂದ ಖಾಸಗಿ ನಿರ್ವಹಣೆ ಮುಕ್ತ ಡಯಾಲಿಸಿಸ್‌ ಕೇಂದ್ರ ಆಗಲಿದೆ. ಎಂಬಲ್ಲಿಗೆ 2015ಕ್ಕಿಂತ ಮೊದಲೇ ಇದ್ದ ಸರಕಾರಿ ವ್ಯವಸ್ಥೆ§ಯೇ ಜಾರಿಗೆ ಬರಲಿದೆ. ಕೇವಲ ಖಾಸಗಿಯವರಿಗೆ ಹಣ ಮಾಡಲು ಈ ನಿರ್ವಹಣ ಯೋಜನೆ ಮಾಡಿದಂತಾಗಿದೆ ಎನ್ನುವುದು ಸಾರ್ವಜನಿಕರ ಆರೋಪ.

ಇದನ್ನೂ ಓದಿ:ಶ್ರೀರಂಗಪಟ್ಟಣ : ಜನರನ್ನು ಭಯಭೀತರನ್ನಾಗಿಸಿದ್ದ ಬೃಹದಾಕಾರದ ಮೊಸಳೆ ಬಲೆಗೆ

Advertisement

ಬದಲಿ ವ್ಯವಸ್ಥೆ
ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಬದಲಿ ವ್ಯವಸ್ಥೆ ಮೂಲಕ ಡಯಾಲಿಸಿಸ್‌ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಖಾಸಗಿ ನಿರ್ವಹಣ ಸಂಸ್ಥೆ ಸಿಬಂದಿ ರಾಜೀನಾಮೆ ನೀಡುತ್ತಿದ್ದಂತೆಯೇ ಏಜೆನ್ಸಿ ಮೂಲಕ ಸಿಬಂದಿ ಪಡೆದು ಅವರಿಗೆ ತರಬೇತಿ ಕೊಡಿಸಲಾಗಿದೆ. 3 ಗ್ರೂಪ್‌ ಡಿ, 3 ನರ್ಸ್‌, 2 ತಂತ್ರಜ್ಞರು ಏಜೆನ್ಸಿ ಸರಕಾರಿ ಆಸ್ಪತ್ರೆಯೇ ನಿರ್ವಹಣ ಸಂಸ್ಥೆಯ ಹಂಗು ತೊರೆದು ನೇಮಿಸಿದೆ. ಈಗ ಖಾಲಿಯಾಗುವ ಹುದ್ದೆಗೂ ಇದೇ ಮಾದರಿ ಅನುಸರಿಸಲಾಗುತ್ತಿದೆ. ಬಾಕಿಯಾದ ವೇತನ ಪಾವತಿಗೆ ಸರಕಾರಕ್ಕೆ ಬರೆಯಲಾಗಿದೆ. ಮೂರೇ ಯಂತ್ರಗಳು ಇರುವ ಕಾರಣ ಮೂರು ಪಾಳಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಯಂತ್ರಕ್ಕೆ ವಿಶ್ರಾಂತಿಯೂ ಬೇಕಾದ ಕಾರಣ ಹಗಲು ಸಾಲದೇ ರಾತ್ರಿಯೂ ಚಿಕಿತ್ಸೆ ನೀಡಬೇಕಿದೆ. ರಾತ್ರಿ ವೇಳೆ ಚಿಕಿತ್ಸೆ ಪಡೆದು ಮನೆಗೆ ಮರಳುವವರಿಗೆ ಆತಂಕ ಉಂಟಾಗಿದೆ. ಅನಿವಾರ್ಯ ಆದವರಿಗೆ ಆಸ್ಪತ್ರೆಯಲ್ಲೇ ಉಳಿದುಕೊಳ್ಳಲು ಅನುಮತಿ ನೀಡಲಾಗಿದೆ.

ದುರಸ್ತಿ
5 ಯಂತ್ರಗಳ ಪೈಕಿ 2 ಹಾಳಾಗಿದೆ. ಹಾಳಾದ ಯಂತ್ರಗಳ ದುರಸ್ತಿ ಸರಕಾರಿ ವೆಚ್ಚದಲ್ಲಿ ಮಾಡಿಸುವಂತಿಲ್ಲ. ಏಕೆಂದರೆ ಅದು ಸಂಸ್ಥೆಯ ಯಂತ್ರಗಳು. ಆ ಸಂಸ್ಥೆಯ ನಿರ್ವಹಣೆ ಹೊಣೆ ಕಳಚಿಕೊಂಡಾಗ ಈ ಯಂತ್ರಗಳನ್ನೂ ಮರಳಿಸಬೇಕಾಗುತ್ತದೆಯೋ ಎಂಬ ಸಂದಿಗ್ಧ ಒದಗಿದೆ. ಹಾಗೊಂದು ವೇಳೆ ಪರಿಸ್ಥಿತಿ ಬಂದಲ್ಲಿ ರಾಜ್ಯಾದ್ಯಂತ ಡಯಾಲಿಸಿಸ್‌ ರೋಗಿಗಳ ಹಾಹಾಕಾರ ಉಂಟಾಗಲಿದೆ. ಒಂದೊಮ್ಮೆ ದಾನಿಗಳು ಯಂತ್ರ ನೀಡಿದರೂ ಅದರ ಸಿಬಂದಿ, ನಿರ್ವಹಣೆ ಹೊಣೆ ಸರಕಾರಿ ಆಸ್ಪತ್ರೆಯೇ ಮಾಡಬೇಕಿದೆ.

ಚಿಕಿತ್ಸೆ
ಒಟ್ಟು 38 ಜನ ಕುಂದಾಪುರದಲ್ಲಿ, ರಾಜ್ಯದಲ್ಲಿ 3,500 ಜನ ಡಯಾಲಿಸಿಸ್‌ನ್ನು ಸರಕಾರಿ ಆಸ್ಪತ್ರೆ ಮೂಲಕ ಪಡೆಯುತ್ತಿದ್ದಾರೆ. ಕಿಡ್ನಿ ಸಂಬಂಧಿ ಕಾಯಿಲೆಗೆ ಒಮ್ಮೆ ಡಯಾಲಿಸಿಸ್‌ ಪಡೆದರೆ ಆಜೀವಪರ್ಯಂತ, ವಾರದಲ್ಲಿ 2 ದಿನ ಡಯಾಲಿಸಿಸ್‌ ಪಡೆಯಬೇಕಾಗುತ್ತದೆ. ಹೊಸ ರೋಗಿಗಳ ನೋಂದಣಿಯಾಗಬೇಕಾದರೆ ಹೊಸಯಂತ್ರಗಳು ಹಾಗೂ ಅವುಗಳ ನಿಯಂತ್ರಣಕ್ಕೆ ಸಿಬಂದಿ ಬೇಕಾಗುತ್ತದೆ.

ಸರಕಾರದಿಂದ ಪಾವತಿ
ಖಾಸಗಿ ಸಂಸ್ಥೆ ಸಿಬಂದಿಗೆ ವೇತನ ನೀಡದ ಕಾರಣ ಆಗಸ್ಟ್‌ನಲ್ಲಿ ಸರಕಾರವೇ ಮೇಯಿಂದ ಆಗಸ್ಟ್‌ವರೆಗಿನ ವೇತನ ಬಿಡುಗಡೆ ಮಾಡಿದೆ. ಸೆಪ್ಟಂಬರ್‌, ಅಕ್ಟೋಬರ್‌ನಲ್ಲಿ ನೀಡಬೇಕಿದೆ.

ಬದಲಿ ವ್ಯವಸ್ಥೆ
ರೋಗಿಗಳಿಗೆ ತೊಂದರೆಯಾಗದಂತೆ ಬದಲಿ ವ್ಯವಸ್ಥೆ ಮಾಡಲಾಗಿದೆ. ಏಜೆನ್ಸಿ ಮೂಲಕ ಸಿಬಂದಿ ನೇಮಿಸಿಕೊಳ್ಳಲಾಗಿದೆ. ಅಗತ್ಯಕ್ಕಿರಲಿ ಎಂದು ನಮ್ಮ ಸಿಬಂದಿಗೂ ತರಬೇತಿ ಕೊಡಿಸಲಾಗುತ್ತಿದೆ. ಯಂತ್ರಗಳ ಕೊರತೆ ಇರುವ ಕಾರಣ ಮೂರು ಪಾಳಿಯಲ್ಲಿ ರಾತ್ರಿವರೆಗೆ ಚಿಕಿತ್ಸೆ ಕೊಡುತ್ತಿರುವುದು ಹೌದು. ರಾತ್ರಿ ಚಿಕಿತ್ಸೆ ಪಡೆದವರು ಆಸ್ಪತ್ರೆಯಲ್ಲೇ ಉಳಿದುಕೊಳ್ಳಲು ಅನುಮತಿ ನೀಡಲಾಗಿದೆ.
 - ಡಾ| ರಾಬರ್ಟ್‌ ರೆಬೆಲ್ಲೋ
ಶಸ್ತ್ರಚಿಕಿತ್ಸಕ ಆಡಳಿತಾಧಿಕಾರಿ, ಉಪವಿಭಾಗ ಆಸ್ಪತ್ರೆ ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next