ಕುಂದಾಪುರ: ತಾಲೂಕಿನಾದ್ಯಂತ ಸೋಮವಾರ ಬೆಳಗ್ಗೆ ಗುಡುಗು, ಸಿಡಿಲು ಸಹಿತ ಉತ್ತಮ ಮಳೆಯಾಗಿದ್ದು, ಕೆಲವೆಡೆ ಸಿಡಿಲಿನ ಆರ್ಭಟಕ್ಕೆ ಹಾನಿ ಉಂಟಾಗಿದೆ. ನಿರಂತರ ಒಂದು ತಾಸು ಮಳೆ ಸುರಿದಿದ್ದರಿಂದ ವಾತಾವರಣ ತಂಪಾಗಿದೆ. ಕುಂದಾಪುರ-ಕಾರವಾರ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು ಅರೆಬರೆ ಕಾಮಗಾರಿಯಿಂದಾಗಿ ರಸ್ತೆ ಚರಂಡಿಯಾಗಿ ಪರಿವರ್ತನೆಗೊಂಡಿತು.
Advertisement
ಸೋಮವಾರ ಬೆಳಗ್ಗೆ ಕೊಲ್ಲೂರು, ಬೈಂದೂರು, ಗಂಗೊಳ್ಳಿ, ಮರವಂತೆ, ಹೆಮ್ಮಾಡಿ, ತಲ್ಲೂರು, ಕೋಟೇಶ್ವರ, ಕುಂದಾಪುರ, ಕುಂಭಾಶಿ, ತೆಕ್ಕಟ್ಟೆ, ಕೆದೂರು, ಕೊರ್ಗಿ, ಬೇಳೂರು ಮೊದಲಾದೆಡೆ ನಿರಂತರ ಒಂದು ತಾಸು ಸಿಡಿಲು ಸಹಿತ ಮಳೆಯಾಯಿತು. ಬೇಳೂರು ಗ್ರಾ.ಪಂ. ವ್ಯಾಪ್ತಿಯ ಗುಳ್ಳಾಡಿಯ ನಾರಾಯಣ ಶೆಟ್ಟಿ ಅವರ ಮನೆಯ ದನವೊಂದು ಸಿಡಿಲ ಆಘಾತಕ್ಕೆ ಹೃದಯಾಘಾತಗೊಂಡು ಮೃತಪಟ್ಟಿತು. ಅಲ್ಲದೇ ಸಿಡಿಲು ಬಡಿದು ವಿದ್ಯುತ್ ಉಪಕರಣಗಳು ಹಾನಿಯಾಗಿದೆ. ಕುಂದಾಪುರ ಪುರಸಭಾವ್ಯಾಪ್ತಿಯಲ್ಲಿ ಒಳಚರಂಡಿ ಕಾಮಗಾರಿ ನಡೆಯುತ್ತಿದ್ದು ರಸ್ತೆ ಅಗೆತದಿಂದಾಗಿ ನೀರು ನುಗ್ಗಿ ಸಂಚಾರ ಅಸ್ತವ್ಯಸ್ತವಾಯಿತು.
ಕುಂದಾಪುರದಿಂದ ಬೈಂದೂರಿನತ್ತ ಸಾಗುವ ಹೆದ್ದಾರಿಯಲ್ಲಿ ಅಲ್ಲಲ್ಲಿ ಅರೆಬರೆ ಕಾಮಗಾರಿ ನಡೆಸಿದ ಪರಿಣಾಮ ಮೊದಲ ಮಳೆಗೆ ರಾಷ್ಟ್ರೀಯ ಹೆದ್ದಾರಿ ಚರಂಡಿಯಾಗಿ ಮಾರ್ಪಟ್ಟಿದೆ. ಬೈಂದೂರಿನಿಂದ ಕುಂದಾಪುರ ತನಕವೂ ರಸ್ತೆಯ ಪಾರ್ಶ್ವದಲ್ಲಿ ಹೊಂಡ ತೋಡಿ ಮಣ್ಣು ಹಾಗೆಯೇ ಬಿಟ್ಟಿದ್ದು, ಇಂದು ಮಳೆಗೆ ಮಣ್ಣು ಹೆದ್ದಾರಿಯಲ್ಲಿ ನಿಂತು ರಸ್ತೆ ಕೆಸರುಮಯವಾಗಿದೆ. ಟ್ರಾಫಿಕ್ ಜಾಮ್ ಆದ ಪರಿಣಾಮ ಗುಡ್ಡೆಯಂಗಡಿ, ಪಡುಕೋಣೆ, ಆಲೂರಿನಿಂದ ಕುಂದಾಪುರಕ್ಕೆ ಆಗಮಿಸುವ ದ್ವಿಚಕ್ರ ಹಾಗೂ ಲಘು ವಾಹನಗಳ ಸವಾರರು ಸುತ್ತು ಬಳಸಿ ಸಂಚರಿಸಿದರು.