ಕುಂದಾಪುರ: ಉಡುಪಿ ಜಿಲ್ಲೆಯಲ್ಲೇ ಅತೀ ಹೆಚ್ಚು ಅಡಿಕೆ ಬೆಳೆಯುವ ಕುಂದಾಪುರ ತಾಲೂಕಿನ ಹಳ್ಳಿಹೊಳೆ, ಕಮಲಶಿಲೆ ಯಡಮೊಗೆ ಮತ್ತು ಆಜ್ರಿ ಪ್ರದೇಶದ ಅಡಿಕೆ ಹಾಗೂ ವಿವಿಧ ಬೆಳೆಗಾರರ ರೈತ ನಿಯೋಗ ಸೋಮವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ರಜತಾದ್ರಿಯಲ್ಲಿ ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿಯವರನ್ನು ಭೇಟಿಯಾಗಿ, ಅತೀ ಮಳೆ ಹಾಗೂ ಬೇಸಗೆಯಲ್ಲಿ ನೀರಿನ ಅಭಾವದಿಂದಾಗಿ ಅಡಿಕೆ ಸೇರಿದಂತೆ ತೆಂಗು, ಬಾಳೆ, ರಬ್ಬರ್, ಕೋಕೋ ಬೆಳೆಗಳಿಗೆ ಅಪಾರ ಹಾನಿಯಿಂದಾಗಿ ನಷ್ಟಕ್ಕೆ ಪರಿಹಾರ ನೀಡುವಂತೆ ಮನವಿ ಸಲ್ಲಿಸಲಾಯಿತು.
ಇದೇ ವೇಳೆ ಪ್ರಮುಖ ನದಿಗಳಾದ ಚಕ್ರ ಮತ್ತು ಕುಬಾj ನದಿಗೆ ವಾರಾಹಿಯಿಂದ ಹೆಚ್ಚುವರಿಯಾಗಿ ಅರಬ್ಬಿ ಸಮುದ್ರಕ್ಕೆ ಸೇರುವ ನೀರನ್ನು ಭೌಗೋಳಿಕ ಕ್ರಮದ ಮೂಲಕ ಹರಿಸಲು ರೈತರು ಮನವಿ ಮಾಡಿಕೊಂಡರು.
ಕೆಲವು ತಾಂತ್ರಿಕ ಕಾರಣಗಳಿಂದಾಗಿ ರೈತರ ಖಾತೆಗೆ ಬರಬೇಕಾದ ಸಾಲ ಮನ್ನಾ ಪಾವತಿಯು ಮತ್ತೆ ಅಪೆಕ್ಸ್ ಬ್ಯಾಂಕ್ ಖಾತೆಗೆ ಸಂದಾಯ ಆಗಿದ್ದು, ತಾಂತ್ರಿಕ ಕಾರಣಗಳನ್ನು ಸರಿ ಪಡಿಸಿ ರೈತರ ಖಾತೆಗೆ ಶೀಘ್ರ ಹಣ ಸಂದಾಯ ಮಾಡುವಂತೆ ಹಾಗೂ ಕೆಲ ಸರಕಾರಿ ನಿಯಮದಂತೆ ರೈತರಿಗೆ ತಮ್ಮ ಕೃಷಿ ಭೂಮಿಯಲ್ಲಿ ಬೋರ್‌ವೆಲ್ ಕೊರೆಯಲು ಅಡೆ – ತಡೆಗಳಿದ್ದು, ಕಾನೂನು ಪ್ರಕ್ರಿಯೆಯನ್ನು ಸಡಿಲಗೊಳಿಸಿ ಅವಕಾಶ ಮಾಡಿಕೊಡಲು ಒತ್ತಾಯಿಸಿದರು.
ನಿಯೋಗದಲ್ಲಿ ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಮತ್ತು ಸಂಘದ ಅಧ್ಯಕ್ಷ ಎಸ್. ಶಂಕರನಾರಾಯಣ ಯಡಿಯಾಳ, ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಬಿ. ಶ್ರೀಕಾಂತ್ ಕನ್ನಂತ, ಮಾಜಿ ಅಧ್ಯಕ್ಷ ವಾಸುದೇವ ಯಡಿಯಾಳ, ಗೋಪಾಲಕೃಷ್ಣ ಯಡಿಯಾಳ ಸೇರಿದಂತೆ ನಿರ್ದೇಶಕರು ಸದಸ್ಯರು ಮತ್ತು ಗ್ರಾಮದ 50 ಹೆಚ್ಚು ರೈತರು ಉಪಸ್ಥಿತರಿದ್ದರು.
ರೈತರ ನಿಯೋಗದ ಮನವಿಯನ್ನು ಸ್ವೀಕರಿಸಿದ ಜಿಲ್ಲಾ ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಸಮಸ್ಯೆಗಳಿಗೆ ಸ್ಪಂದಿಸಿ ಜಿಲ್ಲಾಡಳಿತ, ವಿವಿಧ ಇಲಾಖೆ ಮೂಲಕ ಚರ್ಚಿಸಿ, ರಾಜ್ಯ ಸರಕಾರದ ಗಮನಕ್ಕೆ ತರಲಾಗುವುದು, ಪರಿಹಾರ ನೀಡುವಲ್ಲಿ ಕ್ರಮಕೈಗೊಳ್ಳುವ ಭರವಸೆಯಿತ್ತರು.