Advertisement

ಕುಂದಾಪುರ ಫ್ಲೈಓವರ್‌: ಮತ್ತೆ ಗೊಂದಲದ ಗೂಡು

01:00 AM Feb 06, 2019 | Harsha Rao |

ಕುಂದಾಪುರ: ಇಲ್ಲಿನ ಶಾಸ್ತ್ರೀ ಸರ್ಕಲ್‌ನಲ್ಲಿ ನಡೆಯುತ್ತಿರುವ ಫ್ಲೈಓವರ್‌ ಕಾಮಗಾರಿಗೆ ಮುಕ್ತಿ ದೊರೆಯಲಿದೆ ಎಂಬ ನಿರೀಕ್ಷೆಯ ಜತೆಗೆ ಜನರಿಗೆ ಹೆದ್ದಾರಿ ಕುರಿತು ಗೊಂದಲ ಮೂಡತೊಡಗಿದೆ. 

Advertisement

ಹೈವೇಗೆ ಪ್ರವೇಶ ಎಲ್ಲಿ?
ಫ್ಲೈಓವರ್‌ ಮೂಲಕ ಹಾದು ಹೋಗಲು ಸಂಗಮ್‌ನಿಂದ ಪ್ರವೇಶಾವಕಾಶ ದೊರೆಯುವ ಸಾಧ್ಯತೆ ಹೆಚ್ಚು. ಫ್ಲೈಓವರ್‌ನ ಕೊನೆ ನೆಹರೂ ಮೈದಾನ ಬಳಿ ಸೇರುವ ಸಾಧ್ಯತೆ ಕಡಿಮೆ. ಹಾಗಾಗಿ ಅಲ್ಲಿ ನಿರ್ಗಮನ ಇಲ್ಲದಿದ್ದರೆ ಮೇಲ್‌ ರಸ್ತೆ ನೇರವಾಗಿ ಬಸ್ರೂರು ಮೂರುಕೈ ಅಂಡರ್‌ಪಾಸ್‌ಗೆ ಸೇರುತ್ತದೆ. ಹೀಗಾದಲ್ಲಿ ವಿನಾಯಕ ಥಿಯೇಟರ್‌ ಬಳಿ ನಿರ್ಗಮನ ಪಥ ದೊರೆಯುತ್ತದೆ. ಇದೇ ಅಂತಿಮವಾದರೆ ಕುಂದಾಪುರ ಪೇಟೆಗೆ ಬರಬೇಕಾದವರು ಥಿಯೇಟರ್‌ ಬಳಿಯಿಂದಲೇ ಸರ್ವಿಸ್‌ ರಸ್ತೆಗೆ ಬರಬೇಕಾಗುತ್ತದೆ. ಪೇಟೆಗೆ ಬಂದವರು ಹೆದ್ದಾರಿ ಪ್ರವೇಶಿಸಲು ಸಂಗಮ್‌ ತನಕ ಸರ್ವಿಸ್‌ ರಸ್ತೆಯಲ್ಲಿ ಹೋಗಬೇಕಾದ ಅನಿವಾರ್ಯತೆ ಎದುರಾಗುತ್ತದೆ. 

ಎಲ್ಲರಿಗೂ ತೊಂದರೆ
ಬಸ್ರೂರು ರಸ್ತೆ ಮೂಲಕ ಶಿವಮೊಗ್ಗ ಹೆದ್ದಾರಿ ಯಲ್ಲಿ ಬರು ವವರು ಮೂರುಕೈ ಅಂಡರ್‌ಪಾಸ್‌ನಲ್ಲಿ ಬರಬಹುದು. ಆದರೆ ವಿನಾಯಕ ಕೋಡಿ ರಸ್ತೆಯ ಬಳಿಕ ಕುಂದಾಪುರ ಶಾಸ್ತ್ರೀ ಸರ್ಕಲ್‌ವರೆಗೆ ದೊರೆಯುವ ಅಡ್ಡ ರಸ್ತೆಯವರು ಸರ್ಕಲ್‌ವರೆಗೆ ಬಂದು ಫ್ಲೈಓವರ್‌ ಅಡಿಯ ರಸ್ತೆಯಲ್ಲಿಯೇ ಬಸ್ರೂರು ಕಡೆಗೆ ಹೋಗಬೇಕಾಗುತ್ತದೆ. ಕೆಎಸ್‌ಆರ್‌ಟಿಸಿ ಬಸ್ಸುಗಳು ಬೈಂದೂರು ಕಡೆಗೆ ಹೋಗಬೇಕಾದರೆ ಒಂದು ಭಾಗದ ಸರ್ವಿಸ್‌ ರಸ್ತೆಯಲ್ಲಿ ಸರ್ಕಲ್‌ವರೆಗೆ ಬಂದು ಮರಳಿ ಇನ್ನೊಂದು ಕಡೆಯ ಸರ್ವಿಸ್‌ ರಸ್ತೆಯಲ್ಲಿ ಸಂಗಮ್‌ತನಕ ಹೋಗಿ ಹೆದ್ದಾರಿಗೆ ಸೇರಬೇಕಾಗುತ್ತದೆ. 

ಏನಾಗಬೇಕು
ನೆಹರೂ ಮೈದಾನ ಬಳಿ ಹೆದ್ದಾರಿಗೆ ಸಂಪರ್ಕ ಕೊಡುವಂತಹ ವ್ಯವಸ್ಥೆ ಆಗಬೇಕು. ಆದರೆ ಅದು ಅಷ್ಟು ಸುಲಭವಲ್ಲ. ಏಕೆಂದರೆ ಅಲ್ಲಿ ಅಂಡರ್‌ಪಾಸ್‌ನ ರಸ್ತೆಯ ಎತ್ತರಕ್ಕೆ ಸಂಪರ್ಕ ಕೊಡದೇ ಇದ್ದರೆ ಫ್ಲೈಓವರ್‌ನಿಂದ ರಸ್ತೆಯನ್ನು ಇಳಿಸಿ ಮತ್ತೆ ಅಂಡರ್‌ಪಾಸ್‌ ರಸ್ತೆಗೆ ಏರಿಸಬೇಕಾಗುತ್ತದೆ. ಆದರೆ ಈ ಪ್ರಕ್ರಿಯೆ ಅಸಾಧ್ಯ. ಆದ್ದರಿಂದ ಹೇರಿಕುದ್ರುವಿನಲ್ಲಿ ಮಾಡಿದಂತೆ ಇಳಿಜಾರು ಮಾಡಿಯಾದರೂ ಹೆದ್ದಾರಿ -ಸರ್ವಿಸ್‌ ರಸ್ತೆ ಸಂಪರ್ಕ ಕೊಡಬೇಕು ಎಂಬ ಬೇಡಿಕೆಯಿದೆ. 

ಕಷ್ಟದ ದಿನಗಳು
ಸಂಪರ್ಕ ರಸ್ತೆ ಕೊಡದಿದ್ದರೆ ವಿನಾಯಕ ಥಿಯೇಟರ್‌ ಬಳಿಯಿಂದ ಸಂಗಮ್‌ ತನಕ ಹೆದ್ದಾರಿ ಜನರಿಂದ ದೂರವಾಗಲಿದೆ. ನಗರಕ್ಕೆ ಸಂಪರ್ಕವೇ ಇಲ್ಲದಂತೆ ಆಗಲಿದೆ. ನಗರಕ್ಕಾಗಿಯೇ ಬರುವವರು ಮಾತ್ರ ಸರ್ವಿಸ್‌ ರಸ್ತೆಯನ್ನು ಆಶ್ರಯಿಸಲಿದ್ದು ಹೆದ್ದಾರಿ ಮೂಲಕ ಹೋಗುವವರು ನಗರದ ಜತೆ ಸಂಪರ್ಕ ಕಡಿದುಕೊಳ್ಳಲಿದ್ದಾರೆ.

Advertisement

ಎಸಿ ಆದೇಶ
ಕುಂದಾಪುರ ಸಹಾಯಕ ಕಮಿಷನರ್‌ ಟಿ. ಭೂಬಾಲನ್‌ ಅವರಿದ್ದಾಗ, ಸಾರ್ವಜನಿಕ ಹಿತಾಸಕ್ತಿ ದೂರಿನ ಮೇಲೆ ಉಡುಪಿ ನವಯುಗ ಕನ್‌ಸ್ಟ್ರಕ್ಷನ್‌ ಕಂಪೆನಿಯ ವಿಚಾರಣೆ ನಡೆಸಿ ಮಾ.30ರ ಒಳಗೆ ಹೆದ್ದಾರಿ ಫ್ಲೈಓವರ್‌ ಕಾಮಗಾರಿ ಪೂರ್ಣಗೊಳಿಸಿ ಸಂಚಾರಕ್ಕೆ ಬಿಟ್ಟುಕೊಡುವಂತೆ ಆದೇಶಿಸಿದ್ದಾರೆ. ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಅವರು ಕೂಡ ಸಕಾಲದಲ್ಲಿ ಕಾಮಗಾರಿ ಮುಗಿಸದ್ದರಿಂದ ಕಪ್ಪುಪಟ್ಟಿಗೆ ಸೇರಿಸಲು ಶಿಫಾರಸು ಮಾಡಲಾಗುವುದು ಎಂದಿದ್ದರು.  

ವ್ಯವಸ್ಥೆ ಮಾಡಲಿ
ಕಾಮಗಾರಿ ನಡೆಸುತ್ತಿರುವವರು ಯಾವುದೇ ಮಾಹಿತಿಯನ್ನು ಯಾರಿಗೂ ಕೊಡುತ್ತಿಲ್ಲ. ಆದ್ದರಿಂದ ಅವರು ಶ್ವೇತಪತ್ರ ಹೊರಡಿಸಬೇಕು. ನಗರದ ಜತೆಗೆ ಹೆದ್ದಾರಿ ಬೆಸೆಯುವಂತೆ ಸಂಪರ್ಕಕ್ಕೆ ಏನಾದರೂ ವ್ಯವಸ್ಥೆ ಮಾಡಲೇಬೇಕು. ಇಲ್ಲದಿದ್ದಲ್ಲಿ ಅನಾವಶ್ಯಕ ಗೊಂದಲವಾಗಲಿದೆ. 
– ಕೆಂಚನೂರು ಸೋಮಶೇಖರ ಶೆಟ್ಟಿ ಹೋರಾಟಗಾರರು

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next