Advertisement
ನ.4ರಂದು ಇಲ್ಲಿನ ತಾಲೂಕು ಪಂಚಾಯತ್‌ನಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಅವರು ಸಭೆ ಕರೆದಿದ್ದು ಇದಕ್ಕೆ ಹೆದ್ದಾರಿ ಎಂಜಿನಿಯರ್, ಅಧಿಕಾರಿಗಳು, ಗುತ್ತಿಗೆದಾರರು ಭಾಗವಹಿಸಲಿದ್ದಾರೆ. ಹೆದ್ದಾರಿ ಅವ್ಯವಸ್ಥೆ, ಕಾಮಗಾರಿ ಅಪೂರ್ಣ ಕುರಿತು ಚರ್ಚೆ ನಡೆಯಲಿದ್ದು ಗುತ್ತಿಗೆದಾರರಿಗೆ ಕಠಿನ ಸೂಚನೆ ನೀಡುವ ಸಾಧ್ಯತೆಗಳಿವೆ. ಆದರೆ ಗುತ್ತಿಗೆದಾರರು ಇಂತಹ ನೂರಾರು ಸೂಚನೆ, ಎಸಿ ನ್ಯಾಯಾಲಯದ ಆದೇಶಗಳನ್ನು ಪಡೆದೂ ಕಾಮಗಾರಿ ಮಾತ್ರ ಮಾಡಲೇ ಇಲ್ಲ. ಆದ್ದರಿಂದ ಈ ಸಭೆಯ ಫಲಶ್ರುತಿ ಕುರಿತು ಸಾರ್ವಜನಿಕರು ಕಾತರರಾಗಿದ್ದಾರೆ.
ಫ್ಲೈಓವರ್ ಕಾಮಗಾರಿ ಮುಗಿಯದ ಕಾರಣ ಕುಂದಾಪುರ ನಗರದ ಶೋಭೆಯೇ ಕಳೆಗುಂದಿದೆ. ಸಂಸದೆ ಶೋಭಾ ಕುಂದಾಪುರಕ್ಕೆ ಬರುವುದೇ ಅಪರೂಪವಾದ ಕಾರಣ ಜನರ ಸಮಸ್ಯೆಗಳು ಅವರ ಗಮನಕ್ಕೆ ಬಂದಂತಿಲ್ಲ. ಬಂದರೂ ಪರಿಹಾರಕ್ಕೆ ಮುತುವರ್ಜಿ ವಹಿಸಿದಂತಿಲ್ಲ. ಪ್ರಯತ್ನಪಟ್ಟರೂ ಒಂದೂ ಕಾರ್ಯಗತವಾಗಿಲ್ಲ. ಚುನಾವಣೆ ಸಂದರ್ಭ ಗೋ ಬ್ಯಾಕ್ ಶೋಭಾ ಅಭಿಯಾನ ನಡೆದಿತ್ತು. ಈ ಬಾರಿ ಮೋದಿಜಿಗಾಗಿ ಗೆಲ್ಲಿಸಿ, ಆಗಾಗ ಈ ಕ್ಷೇತ್ರಕ್ಕೆ ಭೇಟಿ ನೀಡುತ್ತೇನೆ, ಅರೆಬರೆ ಕಾಮಗಾರಿಗಳನ್ನೂ ಪೂರ್ಣಗೊಳಿಸುತ್ತೇನೆ ಎಂದು ಭರವಸೆ ನೀಡಿ ಗೆದ್ದು ಹೋಗಿ ಈಗ ಹೊಸ ವರಸೆಯಲ್ಲಿದ್ದಾರೆ. ಕ್ಷೇತ್ರದ ಭೇಟಿಯೂ ಇಲ್ಲ, ಸಮಸ್ಯೆಗಳ ಪರಿಹಾರವೂ ಇಲ್ಲ. ಜನರ ಸಮಸ್ಯೆಗಳಿಗೆ ಸ್ಪಂದನೆಯೂ ಇಲ್ಲ ಎಂಬಂತಾಗಿದೆ. ಕುಂದಾಪುರ ಭೇಟಿಯೇ ಅಪರೂಪ ಎಂದಾಗಿದೆ. ಸಮಸ್ಯೆಗಳು ನೂರಾರು
ಫ್ಲೈಓವರ್ ಕುರಿತಾಗಿ ದಿನಕ್ಕೊಂದು ಸಮಸ್ಯೆಗಳು ಹುಟ್ಟುತ್ತಿವೆ. ಶಾಸ್ತ್ರಿ ಸರ್ಕಲ್‌ನಲ್ಲಿ ಇರುವ ಫ್ಲೈಓವರ್ ಮುಕ್ತಾಯವಾಗುವುದು ಎಲ್ಲಿ ಎನ್ನುವ ಸ್ಪಷ್ಟ ಮಾಹಿತಿ ಯಾರಲ್ಲೂ ಇಲ್ಲ. ನೆಹರೂ ಮೈದಾನ ಬಳಿ ಫ್ಲೈಓವರ್‌ನಿಂದ ಇಳಿಯುವ ರಸ್ತೆ ಮುಕ್ತಾಯ ಮಾಡಿ ಅಲ್ಲಿಂದಲೇ ಬಸ್ರೂರು ಮೂರುಕೈ ಅಂಡರ್‌ಪಾಸ್‌ಗೆ ಸಂಪರ್ಕಕ್ಕೆ ರಸ್ತೆಯನ್ನು ಎತ್ತರಿಸಲಾಗುತ್ತದೆಯೇ ಎಂಬ ಮಾಹಿತಿ ಇಲ್ಲ. ಇಲ್ಲಿ ರಸ್ತೆಯನ್ನು ಸರ್ವಿಸ್ ರಸ್ತೆಗೆ ಪ್ರವೇಶ ನೀಡಲು ಅವಕಾಶ ನೀಡಬೇಕಾಗುತ್ತದೆ.
Related Articles
Advertisement
ಶಾಸ್ತ್ರಿ ಸರ್ಕಲ್ ಬಳಿಯ ಫ್ಲೈಓವರ್ ಅನಂತರ ಕ್ಯಾಟಲ್ ಪಾಸ್ ಅಂಡರ್‌ಪಾಸ್ ರಚನೆಯಾಗುತ್ತಿದ್ದು ಕೆಎಸ್‌ಆರ್‌ಟಿಸಿ ಬಳಿ ಇಳಿಕೆಯಾಗುವುದು ಕಷ್ಟ. ಆಗ ಕೆಎಸ್‌ಆರ್‌ಟಿಸಿಯ ನೂರಾರು ಬಸ್‌ಗಳ ಓಡಾಟ ಗೊಂದಲವಾಗಲಿದೆ. ಇನ್ನೊಂದೆಡೆ ವಿನಾಯಕ ಥಿಯೇಟರ್ ಬಳಿಯೂ ಗೊಂದಲ ಮೂಡಿದೆ. ಅಲ್ಲಿ ಬಸ್ರೂರು ಮೂರುಕೈಯ ಅಂಡರ್‌ಪಾಸ್‌ನ ಮುಕ್ತಾಯ ಆಗದಿದ್ದರೆ ಕೋಡಿ ಕಡೆಗೆ ಹೋಗಲು ಕಷ್ಟ. ಕೋಡಿಗೆ ಬಸ್ ಸಂಪರ್ಕ ಕೂಡ ಇದ್ದು ಕಡಲತಡಿಯಷ್ಟೇ ಅಲ್ಲ, ಕಾಲೇಜು, ಇತರ ಸಂಸ್ಥೆಗಳೂ ಇವೆ. ಆದ್ದರಿಂದ ನಿತ್ಯದಲ್ಲಿ ಸಾವಿರಾರು ಜನ ಈ ಭಾಗದ ರಸ್ತೆಯನ್ನು ಅವಲಂಬಿಸಿದ್ದಾರೆ. ಇಲ್ಲಿ ಮುಖ್ಯರಸ್ತೆಯ ಸಂಪರ್ಕ ರಸ್ತೆ ಕೊಡದಿದ್ದರೆ ಕೋಡಿ ಭಾಗದ ನಾಗರಿಕರಿಗೆ ತೊಂದರೆಯಾಗಲಿದೆ. ಇವೆಲ್ಲದರ ಮಧ್ಯೆ ಫ್ಲೈಓವರ್‌ನಿಂದಾಗಿ ವಿನಾಯಕ ಥಿಯೇಟರ್ ಬಳಿಯಿಂದ ಸಂಗಮ್ ತನಕ ಹೆದ್ದಾರಿ ಜನರಿಂದ ದೂರವಾಗಲಿದೆ. ನಗರಕ್ಕೆ ಸಂಪರ್ಕವೇ ಇಲ್ಲದಂತೆ ಆಗಲಿದೆ. ನಗರಕ್ಕಾಗಿಯೇ ಬರುವವರು ಮಾತ್ರ ಸರ್ವಿಸ್ ರಸ್ತೆ ಆಶ್ರಯಿಸಲಿದ್ದು ಹೆದ್ದಾರಿ ಮೂಲಕ ಹೋಗುವವರು ನಗರದ ಜತೆ ಸಂಪರ್ಕ ಕಡಿದುಕೊಳ್ಳಲಿದ್ದಾರೆ. ಇದು ವ್ಯಾಪಾರ ವಹಿವಾಟಿನ ಮೇಲೆ ತೀವ್ರತರ ಪರಿಣಾಮ ಬೀರಲಿದೆ. ಕುಂದಾಪುರ ನಗರ ಎನ್ನುವುದು ದ್ವೀಪದಂತೆ ಆಗಲಿದೆ. ಫ್ಲೈಓವರ್ ಸಹವಾಸವೇ ಬೇಡವಿತ್ತು ಎಂಬ ಮನಸ್ಥಿತಿಗೆ ಜನ ಬಂದಿದ್ದಾರೆ. ಅತ್ತ ಕಾಮಗಾರಿಯೂ ಮುಗಿಯುವುದಿಲ್ಲ, ಇತ್ತ ಮುಗಿದರೂ ನೆಮ್ಮದಿ ಇಲ್ಲ ಎಂಬ ಸ್ಥಿತಿ.
ಇಂದು ಸಭೆಯಿದೆಶಾಸ್ತ್ರಿ ಸರ್ಕಲ್ ಬಳಿಯ ಫ್ಲೈಓವರ್ ಹಾಗೂ ವಿನಾಯಕ ಚಿತ್ರಮಂದಿರದಿಂದ ಸಂಗಮ್ ಜಂಕ್ಷನ್‌ವರೆಗಿನ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿಯನ್ನು ಆದಷ್ಟು ಶೀಘ್ರ ಪೂರ್ಣಗೊಳಿಸುವ ಸಂಬಂಧ ನ. 4ರಂದು ಸಭೆ ಕರೆಯಲಾಗಿದೆ. ಈಗಾಗಲೇ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರಲ್ಲಿ ಆಮೆಗತಿಯ ಕಾಮಗಾರಿ ಕುರಿತಂತೆ ಗಮನಕ್ಕೆ ತರಲಾಗಿದ್ದು, ಅವರು ಕೂಡ ಈ ಬಗ್ಗೆ ಗಮನಹರಿಸುವ ಭರವಸೆ ನೀಡಿದ್ದಾರೆ.
-ಶೋಭಾ ಕರಂದ್ಲಾಜೆ, ಸಂಸದೆ