Advertisement

ಅಪಾಯದಲ್ಲಿ ಕುಂದಾಪುರ ಫ್ಲೈಓವರ್‌!

11:30 PM Jun 17, 2019 | Sriram |

ಕುಂದಾಪುರ: ತೊಕ್ಕೊಟ್ಟು ಮೇಲ್ಸೇತುವೆ ಉದ್ಘಾಟನೆಯಾಯಿತು. ಪಂಪ್‌ವೆಲ್‌ ಫ್ಲೈಓವರ್‌ ಇನ್ನೇನು ಕೆಲವೇ ದಿನಗಳಲ್ಲಿ ಲೋಕಾರ್ಪಣೆಯಾಗಲಿದೆ ಎಂದು ಅಲ್ಲಿನ ಸಂಸದರೇ ಹೇಳಿದ್ದಾರೆ. ಆದರೆ ನಟ್ಟನಡು ರಸ್ತೆಯಲ್ಲಿ ಕಳೆದ ಏಳು ವರ್ಷಗಳಿಂದ ಎದ್ದುನಿಂತ ಕುಂದಾಪುರ ಫ್ಲೈಓವರ್‌ ಮಾತ್ರ ಇನ್ನೂ ಹಾಗೆಯೇ ಇದೆ. ಇದರ ಉದ್ಘಾಟನೆ ಗಗನಕುಸುಮವಾಗಿದೆ. ಸದ್ಯದ ಮಟ್ಟಿಗೆ ಮೇಲೇಳುವ ಲಕ್ಷಣ ಕಾಣುವುದಿಲ್ಲ. ಸ್ಥಗಿತವಾದ ಕಾಮಗಾರಿ ಕೈಗೊಳ್ಳುವ ಯಾವುದೇ ಸೂಚನೆಗಳಿಲ್ಲ. ಈ ಮಧ್ಯೆ ಊರ ಜನರಿಗೆ ಫ್ಲೈಓವರ್‌ ಅಪಾಯದಲ್ಲಿದೆ ಎಂಬ ಆತಂಕ ಕಾಡತೊಡಗಿದೆ.

Advertisement

ಏನಿದು ಆತಂಕ
ಬಸ್ರೂರು ಮೂರುಕೈಯಲ್ಲಿ ಅಂಡರ್‌ಪಾಸ್‌ ಕಾಮಗಾರಿ ಅರ್ಧಕ್ಕೆ ಸ್ಥಾಗಿತ್ಯವಾಗಿದೆ. ಇದಕ್ಕೆ ಹಾಕಿದ ಕಬ್ಬಿಣದ ಸಲಕರಣೆಗಳು ಹಾಗೆಯೇ ಇವೆ. ಕೆಲವು ಕಡೆ ಕಾಂಕ್ರೀಟ್‌ ಕಾಮಗಾರಿ ಕೂಡಾ ಆಗಿದೆ. ಅರ್ಧರ್ಧ ನಡೆದ ಕಾಮಗಾರಿಗೆ ಅಳವಡಿಸಿದ ಕಬ್ಬಿಣ ಕೂಡಾ ತೆಗೆಯಲಾಗಿಲ್ಲ. ಮಳೆಗೆ ಈ ಕಬ್ಬಿಣ ತುಕ್ಕು ಹಿಡಿದರೆ ಅಂಡರ್‌ಪಾಸ್‌ಗೆ ಅಪಾಯ ಆಗಲಾರದೇ ಎಂಬ ಅನುಮಾನ ಕಾಡತೊಡಗಿದೆ. ಹಾಗೂ ಇದರ ಸುತ್ತಮುತ್ತ ಮಳೆಯ ಕೆಸರು ನೀರು ನಿಲ್ಲುತ್ತದೆ. ಈಗಾಗಲೇ ಸರ್ವಿಸ್‌ ರಸ್ತೆಯಲ್ಲಿ ಓಡಾಡುವ ಹೆದ್ದಾರಿಯ ವಾಹನಗಳು ಈ ಆವರಣದಲ್ಲಿ ಬಿದ್ದು ಹಾನಿ ಸಂಭವಿಸಿದೆ. ಇನ್ನು ನೀರು ತುಂಬಿದ ಗುಂಡಿಗೆ ವಾಹನಗಳು ಬೀಳದಿದ್ದರೆ ಸಾಕು ಎಂದು ಜನ ಪ್ರಾರ್ಥಿಸುತ್ತಿದ್ದಾರೆ.

ರಸ್ತೆ ಕುಸಿಯುವ ಅಪಾಯ
ಎಲ್‌ಐಸಿ ಕಚೇರಿ, ಲೋಕೋಪಯೋಗಿ ಇಲಾಖೆ ಕಚೇರಿ, ಡಿವೈಎಸ್‌ಪಿ ಕಚೇರಿ, ವಡೇರಹೋಬಳಿ ಕಡೆಗೆ ಹೋಗುವ ರಸ್ತೆ ಇರುವಲ್ಲಿ ಹೆದ್ದಾರಿಗೆ ಫ್ಲೈಓವರ್‌ನಿಂದ ಇಳಿಯುವ ರಸ್ತೆ ನಿರ್ಮಿಸುವ ಸಲುವಾಗಿ ರಾಶಿ ರಾಶಿ ಮಣ್ಣು ತಂದು ಹಾಕಲಾಗಿದೆ. ಇದಕ್ಕೆ ಸೂಕ್ತ ತಡೆ ನಿರ್ಮಿಸಿಲ್ಲ. ಭಾರೀ ಮಳೆಯಾದರೆ ಅಲ್ಲಲ್ಲಿ ಹಾಕಿದ ಅರೆಬರೆ ಕಾಮಗಾರಿಯ ತಡೆಯೇ ಕುಸಿಯುವ ಅಪಾಯವಿದೆ. ಮಣ್ಣಿನ ರಾಶಿಯ ಪಕ್ಕದಲ್ಲಿ ನೀರು ಹಾದು ಹೋಗಲು ಸೂಕ್ತ ಚರಂಡಿ ಮಾಡಿಲ್ಲ. ಈ ಮಣ್ಣು ಪಕ್ಕದ ರಸ್ತೆಗೆ ಬೀಳುವ ಸಾಧ್ಯತೆಯಿದೆ. ಹಾಗಾದಾಗ ಹೆದ್ದಾರಿಯೇ ಆದ ಸರ್ವಿಸ್‌ ರಸ್ತೆಯಲ್ಲಿ ವಾಹನಗಳ ಓಡಾಟ ಅಸಾಧ್ಯ.

ಫ್ಲೈಓವರ್‌
ಶಾಸ್ತ್ರಿ ಸರ್ಕಲ್‌ನಲ್ಲಿ ಫ್ಲೈಓವರ್‌ ಕಾಮಗಾರಿ ಬಾಕಿಯಾಗಿದೆ. ಇದಕ್ಕೆಂದು ತಂದ ಸಲಕರಣೆಗಳನ್ನು ಫ್ಲೈಓವರ್‌ನ ಕೆಳಗೆ ರಾಶಿ ಹಾಕಲಾಗಿದೆ. ಅವು ತುಕ್ಕು ಹಿಡಿದು ಹಾಳಾಗುತ್ತಿವೆ. ಅಲ್ಲಿ ಕೊಳಚೆ ನೀರು ನಿಲ್ಲುವುದು, ಕಬ್ಬಿಣ ಸಲಕರಣೆಗಳ ರಾಶಿಯಲ್ಲಿ ವಾಹನಗಳ್ಳೋ ಮನುಷ್ಯರೋ ಓಡಾಡಿದರೆ ಅಪಾಯ ಸಂಭವಿಸದೇ ಇರಲಾರದು.

ಗುತ್ತಿಗೆ ಸಮಸ್ಯೆ
ನವಯುಗ ಕಂಪೆನಿಗೆ ಗುತ್ತಿಗೆ ದೊರೆತಿದ್ದು ಅವರ ಹಣಕಾಸಿನ ಸಮಸ್ಯೆಯಿಂದಾಗಿ ಕಾಮಗಾರಿ ಕುಂಟುತ್ತಾ ಸಾಗಿದೆ. ಆದರೆ ಟೋಲ್‌ ಸಂಗ್ರಹ ಮಾತ್ರ ನಿಂತಿಲ್ಲ. ಈಗ ಆಂಧ್ರಪ್ರದೇಶದಲ್ಲಿ ನವಯುಗ ಕಂಪೆನಿಯ ಸ್ಥಾಪಕರದ್ದೇ ಸರಕಾರ ಅಸ್ತಿತ್ವಕ್ಕೆ ಬಂದಿದ್ದು ಇನ್ನಾದರೂ ಕಾಮಗಾರಿ ಚುರುಕಾದೀತೇ ಎಂಬ ಆಶಾವಾದ ಜನರದ್ದು.

Advertisement

ಸಂಸದರಿಗಿಲ್ಲ ಆಸಕ್ತಿ
ಚುನಾವಣೆ ಸಂದರ್ಭ ಸಾಕಷ್ಟು ಟ್ರೋಲ್‌ಗೆ, ಟೀಕೆಗೆ ಒಳಗಾದ ಸಂಸದರು ಈ ಕಾಮಗಾರಿಯನ್ನು ಪೂರೈಸಿಕೊಡುವ ನಿಟ್ಟಿನಲ್ಲಿ ಯಾವುದೇ ಆಸಕ್ತಿ ತೋರಿಸುತ್ತಿಲ್ಲ. ಜನರೇ ಯಾವುದಾದರೂ ರೂಪದಲ್ಲಿ ಹೋರಾಟ ಮಾಡದ ಹೊರತು ಇದಕ್ಕೊಂದು ಮುಕ್ತಿ ಸಾಧ್ಯವಿಲ್ಲವೇ ಎಂದಾಗಿದೆ.

ಎಸಿ ಆದೇಶ ಉಲ್ಲಂಘನೆ
ಫ್ಲೈಓವರ್‌ನ್ನು ಮಾ.31ರ ಒಳಗೆ ಪೂರ್ಣಗೊಳಿಸಿ ಎ. 1ರಿಂದ ಸಂಚಾರಕ್ಕೆ ಬಿಟ್ಟುಕೊಡಬೇಕು, ಅಂಡರ್‌ಪಾಸ್‌ ಕಾಮಗಾರಿಯನ್ನು ಎಪ್ರಿಲ್‌ ಅಂತ್ಯದ ಒಳಗೆ ಪೂರೈಸಬೇಕು ಎಂದು ಹಿಂದಿನ ಸಹಾಯಕ ಕಮಿಷನರ್‌ ಭೂಬಾಲನ್‌ ಅವರು ಎಸಿ ಕೋರ್ಟಿನಲ್ಲಿ ಆದೇಶ ನೀಡಿದ್ದರು. ಆದರೆ ಎಸಿಯವರ ಆದೇಶ ಉಲ್ಲಂಘನೆಯಾಗಿದ್ದು ಜಿಲ್ಲಾಧಿಕಾರಿಗಳ ನ್ಯಾಯಾಲಯಕ್ಕೆ ಕೇಸು ಹೋಗಲಿದೆಯೇ ಎನ್ನುವ ಅನುಮಾನ ಹಾಗೆಯೇ ಉಳಿದಿದೆ.

ತಳಪಾಯಕ್ಕೆ ಅಪಾಯ
ಫ್ಲೈಓವರ್‌ಗಾಗಿ ನಿರ್ಮಿಸಿದ ಪಿಲ್ಲರ್‌ನ ಬುಡದಲ್ಲಿ ಮಣ್ಣು ತೆಗೆಯಲಾಗಿದೆ. ಇಲ್ಲಿ ರಸ್ತೆ ನಿರ್ಮಿಸಿ ಫ್ಲೈಓವರ್‌ನಿಂದ ಮುಖ್ಯ ರಸ್ತೆಗೆ ಸಂಪರ್ಕ ಕೊಡುವುದು ಇದರ ಉದ್ದೇಶ. ಆದರೆ ಮಣ್ಣು ತೆಗೆಯುವ ಕಾಮಗಾರಿ ನಡೆದ ಬಳಿಕ ಒಟ್ಟು ಕಾಮಗಾರಿ ಸ್ಥಗಿತಗೊಂಡಿದೆ. ಪರಿಣಾಮ ತೆಗೆದಿಟ್ಟ ಗುಂಡಿ ಹಾಗೆಯೇ ಇದೆ. ಅದರಲ್ಲಿ ಮಳೆ ಬಂದಾಗ ನೀರು ನಿಲ್ಲುತ್ತದೆ. ಒಮ್ಮೆ ನಿಂತ ನೀರು ಕೆಲವು ದಿನಗಳಾದರೂ ಖಾಲಿಯಾಗುವುದಿಲ್ಲ. ಇದು ಪಿಲ್ಲರ್‌ನ ಬುಡದಲ್ಲಿ ಮಣ್ಣು ಕುಸಿತವಾಗುವಂತೆ ಮಾಡಿದರೆ ಒಟ್ಟು ಫ್ಲೈಓವರ್‌ ಕುಸಿದು ಬೀಳುವ ಅಪಾಯವಿದೆ.

ಸದ್ಯಕ್ಕಿಲ್ಲ
ಫ್ಲೈಓವರ್‌ ಕಾಮಗಾರಿ ಸದ್ಯಕ್ಕೆ ನಡೆಯುವ ಲಕ್ಷಣ ಕಾಣುತ್ತಿಲ್ಲ. ಮಳೆಗಾಲ ಮುಗಿದ ಬಳಿಕ ನೋಡಬೇಕಷ್ಟೇ.
-ಶೋಭಾ ಕರಂದ್ಲಾಜೆ, ಸಂಸದರು

-ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next