Advertisement

ಕುಂದಾಪುರ: ಆಧಾರ್‌ಗೆ ಹೆಚ್ಚುವರಿ ಮೆಶಿನ್‌

11:08 PM Oct 23, 2019 | sudhir |

ಕುಂದಾಪುರ: ಇಲ್ಲಿನ ಮಿನಿ ವಿಧಾನಸೌಧದಲ್ಲಿ ಆಧಾರ್‌ ಪ್ರಕ್ರಿಯೆಗಾಗಿ ಮಂಗಳವಾರದಿಂದ ಹೆಚ್ಚುವರಿ ಉಪಕರಣಗಳನ್ನು ಅಳವಡಿಸಲಾಗಿದೆ. ಈಗ ಎರಡು ಕಂಪ್ಯೂಟರ್‌ಗಳಲ್ಲಿ ಆಧಾರ್‌ ಪ್ರಕ್ರಿಯೆ ನಡೆಸಬಹುದಾಗಿದೆ.

Advertisement

ಈವರೆಗೆ ಒಂದೇ ಕಂಪ್ಯೂಟರ್‌ನಲ್ಲಿ ಆಧಾರ್‌ ನೋಂದಣಿ, ತಿದ್ದುಪಡಿ, ಸೇರ್ಪಡೆ, ತೆಗೆಯುವಿಕೆ ಇತ್ಯಾದಿ ಮಾಡಲಾಗುತ್ತಿತ್ತು. ನೂರಾರು ಜನರ ಸರದಿ ಸಾಲು ಇದ್ದರೂ ಕೇವಲ 50 ಮಂದಿಯ ಪ್ರಕ್ರಿಯೆ ಮಾತ್ರ ಸಾಧ್ಯವಾಗುತ್ತಿತ್ತು.

ಈಗ ಎರಡು ಘಟಕಗಳಲ್ಲಿ ಆಧಾರ್‌ ಪ್ರಕ್ರಿಯೆ ನಡೆಯುವ ಕಾರಣ ಹೆಚ್ಚುವರಿಯಾಗಿ 50-60ರಷ್ಟು ಮಂದಿ ಪ್ರಯೋಜನ ಪಡೆಯಬಹುದು.
ಮಿನಿ ವಿಧಾನಸೌಧದಲ್ಲಿ ಆಧಾರ್‌ಗಾಗಿ ಜನ ಬೈಂದೂರು ಹಾಗೂ ಕುಂದಾಪುರ ತಾಲೂಕಿನ ವಿವಿಧೆಡೆಯಿಂದ ಆಗಮಿಸುತ್ತಾರೆ. ಆದರೆ ಬೇರೆ ಬೇರೆ ಕಾರಣಗಳಿಂದ ಸಾಧ್ಯವಾಗದೇ ಮರಳಿ ಹೋಗುತ್ತಾರೆ. ಇಲ್ಲಿನ ಎಸ್‌ಬಿಐ, ಕೆನರಾ ಬ್ಯಾಂಕ್‌ ಹಾಗೂ ಅಂಚೆ ಕಚೇರಿಯಲ್ಲಿ ಈ ಸೌಲಭ್ಯ ಇದ್ದರೂ ಅವರು ದಿನವೊಂದಕ್ಕೆ 10 ಮಂದಿಯ ಪ್ರಕ್ರಿಯೆ ಮಾತ್ರ ನಡೆಸುವ ಕಾರಣ ತೀರಾ ದೊಡ್ಡ ಪ್ರಮಾಣದಲ್ಲಿ ಬೇಡಿಕೆ ಈಡೇರಿಕೆಯಾಗುತ್ತಿಲ್ಲ. ಕೆಲವು ದಿನಗಳ ಹಿಂದೆ ಆಧಾರ್‌ ಕೊಡುವ ಸಿಬಂದಿಯ ಹೆಬ್ಬೆರಳಿನ ಗುರುತು ನವೀಕರಣದ ತಾಂತ್ರಿಕ ದೋಷದಿಂದ ಒಂದು ವಾರ ಆಧಾರ್‌ ಸಂಬಂಧಿ ಕೆಲಸಗಳು ನಡೆಯುತ್ತಿರಲಿಲ್ಲ.

ಇದೇ ರವಿವಾರ ಅಂಚೆ ಇಲಾಖೆಯವರು ಆಧಾರ್‌ ಅದಾಲತ್‌ ನಡೆಸಿದ್ದರು. ಅಲ್ಲಿ ಕೂಡಾ ಸುಮಾರು 300 ಮಂದಿಯ ನಿರೀಕ್ಷೆ ಇಟ್ಟು ಅದಕ್ಕೆ ತಕ್ಕುದಾದ ವ್ಯವಸ್ಥೆಗಳನ್ನು ಸಜ್ಜುಗೊಳಿಸಿದ್ದರು. ಆದರೆ ಬೆಳ್ಳಂಬೆಳಗ್ಗೆಯೇ ಸಾವಿರಾರು ಜನ ಸೇರಿದ್ದ ಕಾರಣ ಇನ್ನೆರಡು ಹೆಚ್ಚುವರಿ ಘಟಕಗಳ ವ್ಯವಸ್ಥೆ ಮಾಡಿದ್ದರು. ಹಾಗಿದ್ದರೂ ಸಾವಿರಾರು ಮಂದಿಗೆ ಆಧಾರ್‌ ಪ್ರಕ್ರಿಯೆ ಲಾಭ ದೊರೆಯದೇ ನಿರಾಶರಾಗಿದ್ದರು. ಇದನ್ನು ತಾಲೂಕು ಆಡಳಿತ ಕೂಡ ಮನಗಂಡಂತಿದೆ.

ಇದೀಗ ಹೆಚ್ಚುವರಿ ಕಂಪ್ಯೂಟರ್‌ ಅಳವಡಿಸಲಾಗಿದೆ. ಆದರೆ ಇದು ಮೂರು ತಿಂಗಳ ಅವಧಿಗೆ ಮಂಜೂರಾಗಿದ್ದು ಶಾಶ್ವತ ಮಂಜೂರಾತಿಗೆ ಜನಪ್ರತಿನಿಧಿಗಳ ಪ್ರಯತ್ನದ ಅಗತ್ಯವಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next