Advertisement

ಇನ್ನೂ ಆರಂಭವಾಗದ ಕುಂದಾಪುರ ಡಿಪೋ ನವೀಕರಣ ಕಾಮಗಾರಿ

11:32 PM Jan 02, 2020 | Sriram |

ಕುಂದಾಪುರ: ಕೆಎಸ್‌ಆರ್‌ಟಿಸಿ ಬಸ್‌ ಡಿಪೋದ ಕಟ್ಟಡ ಹಾಗೂ ಎಲ್ಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು 4.5 ಕೋ.ರೂ. ಮಂಜೂರಾಗಿ ವರ್ಷ ಕಳೆದರೂ ಇನ್ನೂ ನವೀಕರಣ ಕಾಮಗಾರಿ ಮಾತ್ರ ಆರಂಭವೇ ಆಗಿಲ್ಲ. ಮೊದಲ ಟೆಂಡರ್‌ ಪ್ರಕ್ರಿಯೆಯಲ್ಲಿ ಏನೋ ಗೊಂದಲ ಉಂಟಾಗಿದ್ದರಿಂದ ಈಗ ಮತ್ತೆ ಮರು ಟೆಂಡರ್‌ಗೆ ಹಾಕಲಾಗಿದೆ ಎನ್ನುವ ಮಾಹಿತಿ ಇದೆ.

Advertisement

2018 ರ ನ.16 ರಂದು ಕುಂದಾಪುರಕ್ಕೆ ಭೇಟಿ ನೀಡಿದ್ದ ಆಗಿನ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಅವರು, ಕುಂದಾಪುರದ ಹಳೆಯ ಕೆಎಸ್‌ಆರ್‌ಟಿಸಿ ಘಟಕವನ್ನು ಕೆಡವಿ, ಮರು ನಿರ್ಮಾಣಕ್ಕೆ 4.5 ಕೋ.ರೂ. ಅನುದಾನವನ್ನು ಘೋಷಿಸಿದ್ದರು. ಸಚಿವರು ಘೋಷಣೆ ಮಾಡಿ ವರ್ಷ ಕಳೆದರೂ, ಇನ್ನೂ ಯೋಜನೆ ಟೆಂಡರ್‌ ಪ್ರಕ್ರಿಯೆಯಲ್ಲಿಯೇ ಇದೆ.

ಹೆಚ್ಚು ಬಸ್‌ ನಿಲುಗಡೆ
ಈಗ ಸುಮಾರು 56-60 ಬಸ್‌ಗಳನ್ನು ಈ ಘಟಕದಲ್ಲಿ ಪ್ರತಿ ನಿತ್ಯ ನಿಲ್ಲಿಸಲಾಗುತ್ತದೆ. ಹೊಸದಾಗಿ ಡಿಪೋ ನವೀಕರಣಗೊಂಡ ಬಳಿಕ 85 ಕ್ಕೂ ಹೆಚ್ಚು ಬಸ್‌ಗಳ ನಿಲುಗಡೆಗೆ ಜಾಗ ಸಿಗಲಿದೆ.

ಕುಂದಾಪುರದಿಂದ ಬೆಂಗಳೂರು, ಶಿವಮೊಗ್ಗ, ಮೈಸೂರು, ಉತ್ತರ ಕನ್ನಡ, ಹುಬ್ಬಳ್ಳಿ ಸಹಿತ ಹೆಚ್ಚಿನ ಎಲ್ಲ ಜಿಲ್ಲೆಗಳಿಗೂ ಬಸ್‌ ಸಂಪರ್ಕವಿದೆ. ಇನ್ನು ಬಸ್‌ ಸಂಪರ್ಕವಿಲ್ಲದ ಕೆಲವು ಕಡೆಗಳಿಗೆ ಹೊಸದಾಗಿ ಬಸ್‌ ಆರಂಭಿಸಲು ಕೂಡ ಇದು ಅನುಕೂಲವಾಗಲಿದೆ.

ಏನೇನು ಇರಲಿದೆ?
ಬಸ್ರೂರು ಮೂರುಕೈ ಸಮೀಪ ಈಗಿರುವ ಕೆಎಸ್‌ಆರ್‌ಟಿಸಿ ಡಿಪೋ ಇರುವ ಜಾಗದಲ್ಲಿಯೇ ಅದನ್ನು ಕೆಡವಿ ಹೊಸದಾಗಿ ಕಟ್ಟಡ, ಬಸ್‌ ನಿಲ್ಲಿಸುವ ಬೇ, ಹೊಸ ಜನರೇಟರ್‌, ಚಾಲಕ – ನಿರ್ವಾಹಕರಿಗೆ ವಿಶ್ರಾಂತಿ ಕೊಠಡಿ, ವಾಷಿಂಗ್‌ ರ್‍ಯಾಂಪ್‌, ಆವರಣ ಗೋಡೆ ಸಹ ಹೊಸದಾಗಿ ನಿರ್ಮಾಣವಾಗಲಿದೆ.

Advertisement

3 ತಿಂಗಳು ವಿಳಂಬ?
ಇಲಾಖೆಯು ಈಗಾಗಲೇ ಯೋಜನೆ ಸಿದ್ಧಪಡಿಸಿದ್ದು, ಜುಲೈ -ಆಗಸ್ಟ್‌ನಲ್ಲಿಯೇ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡು, ಶಿಲಾನ್ಯಾಸಗೊಳ್ಳಲಿದೆ ಎನ್ನುವ ಮಾಹಿತಿಯಿದ್ದರೂ, ಈಗ ಡಿಸೆಂಬರ್‌ ಕಳೆದು, ಜನವರಿ ಆರಂಭವಾದರೂ, ಇನ್ನೂ ಕಾಮಗಾರಿ ಆರಂಭಕ್ಕೆ ಮಾತ್ರ ಕಾಲ ಕೂಡಿ ಬಂದಿಲ್ಲ. ಟೆಂಡರ್‌ ಪ್ರಕ್ರಿಯೆಯಲ್ಲಿ ಗೊಂದಲವಿದ್ದುದರಿಂದ, ಮೊದಲು ನಡೆದ ಟೆಂಡರ್‌ ಪ್ರಕ್ರಿಯೆಯನ್ನು ರದ್ದುಗೊಳಿಸಲಾಗಿದ್ದು, ಈಗ ಮತ್ತೆ ಮರು ಟೆಂಡರ್‌ ಕರೆಯಲಾಗಿದೆ. ಇದರಿಂದ ಈ ಎಲ್ಲ ಪ್ರಕ್ರಿಯೆ ಪೂರ್ಣಗೊಂಡು, ಕಾಮಗಾರಿ ಆರಂಭಕ್ಕೆ ಇನ್ನೂ ಕನಿಷ್ಠ 3 ತಿಂಗಳು ಆಗಬಹುದು.

ಮರು ಟೆಂಡರ್‌
ಈಗಾಗಲೇ ಕುಂದಾಪುರ ಕೆಎಸ್‌ಆರ್ಟಿಸಿ ಘಟಕದ ಪುನರ್‌ ನವೀಕರಣ ಸಂಬಂಧ ಕರಡು ಯೋಜನೆ ಸಿದ್ಧಪಡಿಸಿ, ನಿಗಮಕ್ಕೆ ಕಳುಹಿಸಲಾಗಿದೆ. 4.5 ಕೋ.ರೂ. ವೆಚ್ಚದಲ್ಲಿ ಡಿಪೋ ಅಭಿವೃದ್ಧಿಗೊಳ್ಳಲಿದೆ. ಟೆಂಡರ್‌ ಪ್ರಕ್ರಿಯೆಯಲ್ಲಿ ಗೊಂದಲ ಇದ್ದುದರಿಂದ ಮರು ಟೆಂಡರ್‌ ಕರೆಯಲಾಗಿದೆ.
-ದೇವೇಂದ್ರ ಗುಡಿಗಾರ್‌,
ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌, ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗ

- ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next