Advertisement

ಕುಂದಾಪುರ: ಮುಂದುವರಿದ ಮರಳಿನ ಉರುಳು

09:03 AM May 18, 2019 | Team Udayavani |

ಕುಂದಾಪುರ: ಮರಳಿನ ಹೆಸರಿನಲ್ಲಿ ಅದೆಷ್ಟೋ ಚುನಾವಣೆಗಳು ಬಂದವು, ಹೋದವು. ಮರಳಿನ ಲಾಭ ಪಡೆದು ಕೆಲವರು ಗೆದ್ದರು, ಕೆಲವರು ಬಿದ್ದರು. ಆದರೆ ಮರಳು ಸಮಸ್ಯೆ ಇದುವರೆಗೂ ಇತ್ಯರ್ಥವಾಗಲೇ ಇಲ್ಲ. ಉಡುಪಿ ಜಿಲ್ಲೆಯಲ್ಲಿ ಮರಳು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಜಿಲ್ಲಾಡಳಿತ ಯತ್ನಿಸಿದೆಯಾದರೂ ಕುಂದಾಪುರ ತಾಲೂಕಿನಲ್ಲಿ ಮರಳು ದೊರೆಯಲು ಇದುವರೆಗೂ ಯಾವುದೇ ಕ್ರಮ ಗಳಾಗಿಲ್ಲ. ಕೊಡುತ್ತಿರುವ ಸ್ವಲ್ಪ ಮರಳಿನಲ್ಲೂ ಬರಿ ಕಲ್ಲು.

Advertisement

ಅಸಲಿಗೆ ಮಳೆಗಾಲದ ಎರಡು ತಿಂಗಳ ನಿಷೇಧ ಅವಧಿ ಮುಗಿದು ಕಳೆದ ವರ್ಷ ಆ. 1ರಿಂದಲೇ ಮರಳುಗಾರಿಕೆ ಆರಂಭವಾಗಬೇಕಿತ್ತು. ಸಿಆರ್‌ಝೆಡ್‌ ವ್ಯಾಪ್ತಿಯ ಮರಳು ದಿಬ್ಬ ತೆರವುಗಾರಿಕೆಯೂ ನಡೆದಿಲ್ಲ, ನಾನ್‌ ಸಿಆರ್‌ಝೆಡ್‌ ವ್ಯಾಪ್ತಿಯ ಮರಳುಗಾರಿಕೆಗೆ ಉಡುಪಿಯಲ್ಲಿ ಅನುಮತಿ ದೊರೆತಿದ್ದರೂ ಕುಂದಾಪುರದಲ್ಲಿ ದೊರೆತಿಲ್ಲ. ಇದರಿಂದಾಗಿ ಕಳೆದ ನಾಲ್ಕು ವರ್ಷಗಳಿಂದ ಬಾಕಿಯಾದ ಮನೆ ಕಟ್ಟಡ ಕಾಮಗಾರಿ ಇನ್ನೂ ಅರ್ಧಕ್ಕೆ ನಿಂತಿದೆ. ಬ್ಯಾಂಕ್‌ ಸಾಲ ಮಾಡಿ ಮನೆ ಅಥವಾ ವಾಣಿಜ್ಯ ಕಟ್ಟಡ ಕಟ್ಟಲಾರಂಭಿಸಿದವರು ಅತ್ತ ಬ್ಯಾಂಕಿಗೆ ಕಂತು ತುಂಬಲಾರದೇ, ಇತ್ತ ಕಟ್ಟಡ ಕಾಮಗಾರಿ ಪೂರೈಸಲಾಗದೇ ಒದ್ದಾಡುತ್ತಿದ್ದಾರೆ. ಬ್ಯಾಂಕ್‌ಗೆ ಕಂತು ಸಮರ್ಪಕವಾಗಿ ಕಟ್ಟದಿದ್ದರೆ ಸಾಲಗಾರರ ವಿಶ್ವಾಸಾರ್ಹತೆ (ಸಿಬಿಲ್ ರೇಟ್) ಕೂಡ ಕಡಿಮೆಯಾಗುತ್ತದೆ. ಸಾಲದ ಮೂರು ಕಂತು ಬಾಕಿಯಾದರೆ ಮುಂದಿನ ಕಾನೂನು ಕ್ರಮಕ್ಕೆ ಬ್ಯಾಂಕ್‌ನವರು ಮುಂದಾಗುವ ಆತಂಕ ಸಾಲಗಾರರದ್ದಾಗಿದೆ. ಮಳೆಗಾಲಕ್ಕೆ ಮುನ್ನ ಕಾಮಗಾರಿ ಮುಗಿಸಬೇಕೆಂದು ಮನೆ ದುರಸ್ತಿಗೆ ಮುಂದಾದವರಿಗೆ ಮರಳಿಲ್ಲದ ಆಘಾತ.

ಮರಳು ಪೂರೈಕೆ

ಜಿಲ್ಲಾಡಳಿತ ವಿವಿಧ ಇಲಾಖೆಗಳಿಗೆ ಮರಳು ದಿಬ್ಬ ಗುರುತಿಸಿ ಸರಕಾರಿ ದರದಲ್ಲಿ ನೀಡುವಂತೆ ಸೂಚನೆ ನೀಡಿದೆ. ಆದರೆ ಅದು ಸಾಲುತ್ತಿಲ್ಲ. ಜತೆಗೆ ದರವೂ ಹೆಚ್ಚಾಯಿತು ಎಂಬ ಅಭಿಪ್ರಾಯ ಇದೆ. ಸರಕಾರದ ವಸತಿ ಯೋಜನೆಗೆ 1.25 ಲಕ್ಷ ರೂ. ಅನುದಾನ ಕೊಟ್ಟರೆ ಅದರಲ್ಲಿ 6 ಲೋಡು ಮರಳು ಬರುವುದಿಲ್ಲ. ಕೆಆರ್‌ಐಡಿಎಲ್ ಮೂಲಕ ಹಾಲಾಡಿ ಹೊಳೆಯಿಂದ ಮರಳು ನೀಡಲು ಅವಕಾಶ ಇದೆ. ಆದರೆ ಅಲ್ಲಿನ ಮರಳಿನಲ್ಲಿ ಕಲ್ಲಿನ ಪ್ರಮಾಣವೇ ಹೆಚ್ಚಾದ ಕಾರಣ ಜನರಿಗೆ ಉಪಕಾರಕ್ಕಿಂತ ಉಪದ್ರವೇ ಆಗುತ್ತಿದೆ. 50 ಶೇ.ದಷ್ಟು ಕೂಡ ಉತ್ತಮ ಮರಳು ಇರುವುದಿಲ್ಲ ಎನ್ನುತ್ತಾರೆ ಮರಳು ತಂದ ಫ‌ಲಾನುಭವಿಗಳು. ಇದರಿಂದಾಗಿ ಅನೇಕರು ಮರಳು ಬೇಕೆಂದು ಡಿಡಿ ಕೊಟ್ಟವರು ಇಂತಹ ಮರಳು ಬೇಕಿಲ್ಲ ಎಂದು ಹಣ ವಾಪಸ್‌ ಪಡೆಯುತ್ತಿರುವ ವಿದ್ಯಮಾನ ನಡೆದಿದೆ ಎನ್ನಲಾಗಿದೆ.

ಸ್ಥಗಿತ

Advertisement

ಅಗತ್ಯವಿರುವ ಇಲಾಖೆಗಳಿಗೆ ಮರಳು ದಿಬ್ಬ ಗುರುತಿಸಿ ನೀಡಲಾಗುತ್ತಿದೆ. ಆದರೆ ಲೋಕೋಪಯೋಗಿ ಇಲಾಖೆಗೆ ಇನ್ನೂ ನೀಡಿಲ್ಲ. ಎರಡು ದಿಬ್ಬಗಳನ್ನು ಗುರುತಿಸಲಾಗಿದ್ದರೂ ಚುನಾವಣೆ ಘೊಷಣೆಯಾದ ಕಾರಣ ಪ್ರಕ್ರಿಯೆ ಬಾಕಿಯಾಗಿದೆ. ಇದರಿಂದಾಗಿ ಬಹುತೇಕ ಸರಕಾರಿ ಕಾಮಗಾರಿಗಳು ಸ್ಥಗಿತಗೊಂಡಿವೆ. ತುರ್ತು ಕಾಮಗಾರಿಗೆ ಉಡುಪಿಯಿಂದ ಮರಳು ತರಲಾಗುತ್ತಿದೆ. ಇದು ಟೆಂಡರ್‌ ವಹಿಸಿಕೊಂಡ ದರಕ್ಕಿಂತ ದುಬಾರಿಯಾಗುತ್ತಿದೆ ಎನ್ನುತ್ತಾರೆ ಗುತ್ತಿಗೆದಾರರು.

ಸರಕಾರಿ ಮರಳು ಖಾಸಗಿಯಷ್ಟು ಅಲ್ಲದಿದ್ದರೂ ದೂರದಿಂದ ತರಬೇಕಾದ ಕಾರಣ ದುಬಾರಿಯಾಗಿದೆ. ಹಾಲಾಡಿಯಿಂದ ಬೈಂದೂರಿಗೆ 5 ಸಾವಿರ ರೂ., ಹೆಮ್ಮಾಡಿಗೆ 4 ಸಾವಿರ ರೂ. ಲಾರಿ ಬಾಡಿಗೆ ಇದೆ. 3 ಯುನಿಟ್ ಮರಳು ತುಂಬುವ ಸಾಮರ್ಥ್ಯದ ಲಾರಿಗೆ ಕೇವಲ 2 ಯುನಿಟ್ ಮಾತ್ರ ಕಳುಹಿಸಲಾಗುತ್ತಿದೆ. ಇದರಿಂದಾಗಿ ಹೆಚ್ಚುವರಿ ಬೇಕಾದರೆ ಎರಡನೇ ಬಾರಿ ಹೋಗಬೇಕಾದ ಅನಿವಾರ್ಯ. 8 ಯುನಿಟ್ ಮರಳಿಗೆ 20,500 ರೂ. ದರ ವಿಧಿಸಲಾಗುತ್ತಿದೆ. ಆದರೆ ಕಲ್ಲು ಹೆಚ್ಚಾದ ಕಾರಣ ನಷ್ಟವಾಗುತ್ತಿದೆ ಎಂದು ಫ‌ಲಾನುಭವಿಗಳು ದೂರುತ್ತಿದ್ದಾರೆ.

ಪಿಡಬ್ಲ್ಯುಡಿಗೆ ಇಲ್ಲ

ಲೋಕೋಪಯೋಗಿ ಇಲಾಖೆಗೆ ಇನ್ನೂ ಮರಳು ದಿಬ್ಬ ವಿಂಗಡಿಸಿ ನೀಡಿಲ್ಲ. ಟೆಂಡರ್‌ ಪ್ರಕ್ರಿಯೆಗಳು ಚುನಾವಣೆಯಿಂದಾಗಿ ಬಾಕಿಯಾಗಿವೆೆ. ಕಾಮಗಾರಿಗಳು ಕೂಡ ಬಾಕಿಯಾಗಿವೆ.
-ರಾಘವೇಂದ್ರ, ಎಂಜಿನಿಯರ್‌, ಲೋಕೋಪಯೋಗಿ ಇಲಾಖೆ, ಕುಂದಾಪುರ ವಿಭಾಗ
ನಷ್ಟವೇ ಜಾಸ್ತಿ

ಸರಕಾರಿ ದರದಲ್ಲಿ ತಂದ ಮರಳಿನಲ್ಲಿ ಕಲ್ಲಿನ ಪ್ರಮಾಣ ಜಾಸ್ತಿಯಿದ್ದ ಕಾರಣ ನಷ್ಟವಾಗಿದೆ. ಅರ್ಧದಷ್ಟು ಕೂಡ ಉತ್ತಮ ಮರಳು ದೊರೆಯುತ್ತಿಲ್ಲ. ಸಾರ್ವಜನಿಕರಿಗೆ ಸಾಮಾನ್ಯ ದರದಲ್ಲಿ ಮರಳು ದೊರೆಯದಿದ್ದರೆ ಮನೆ ದುರಸ್ತಿ ಕಷ್ಟವಾಗುತ್ತದೆ.
-ಗಣೇಶ್‌, ತೆಗ್ಗರ್ಸೆ

– ಲಕ್ಷ್ಮೀ ಮಚ್ಚಿನ 

Advertisement

Udayavani is now on Telegram. Click here to join our channel and stay updated with the latest news.

Next