ಕುಂದಾಪುರ:ಮುಂಬೈನಿಂದ ಹುಟ್ಟೂರಾದ ಕುಂದಾಪುರಕ್ಕೆ ಬಂದು ಸತೀಶ್ ಆಚಾರ್ಯ ಅವರು ಪರಿಸರ(ಕಲೆಯ ಮೂಲಕ ಸಮಾಜದ ಅಂಕು,ಡೊಂಕು ಎತ್ತಿಹಿಡಿಯುವ) ಮಾಲಿನ್ಯವನ್ನು ನಿವಾರಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಕಲೆಯಲ್ಲಿ ಮನುಷ್ಯ ಜಾತ್ಯತೀತನಾಗುತ್ತಾನೆ. ಜಾತಿ, ಧರ್ಮ, ಮತ, ಮೂಢನಂಬಿಕೆಗಳ ಕಸದಲ್ಲಿ ಉಳ್ಳವರು ಸಮಾಜವನ್ನು ಹಾಳು ಮಾಡುತ್ತಿರುವ ಸಮಯದಲ್ಲಿ ಅದನ್ನು ಮೀರಿ ಕಾರ್ಟೂನ್ ಗಳ ಮೂಲಕ ಸಮಾಜವನ್ನು ಮಾನವೀಯ ಕಣ್ಣುಗಳಿಂದ ನೋಡುವುದು ನಿಜವಾದ ಆಧ್ಯಾತ್ಮಿಕತೆ, ಧಾರ್ಮಿಕತೆಯಾಗಿದೆ ಎಂದು ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ ಹೇಳಿದರು.
ಅವರು ಗುರುವಾರ ಕುಂದಾಪುರದ ಕಲಾಮಂದಿರದಲ್ಲಿ ಖ್ಯಾತ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಅವರು ಆಯೋಜಿಸಿರುವ ನಾಲ್ಕು ದಿನಗಳ ಕಾರ್ಟೂನ್ ಹಬ್ಬವನ್ನು ಚಿತ್ರ ಬಿಡಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ನಗುವಿನ ದೊಡ್ಡ ದೇವರು ಅಂದರೆ ಅದು ಚಾರ್ಲಿ ಚಾಪ್ಲಿನ್. ಆತನ ಚಿತ್ರಗಳನ್ನು ನೋಡಿ, ಸಣ್ಣ, ಸಣ್ಣ ಪ್ರಹಸನಗಳನ್ನು ನೋಡಿ…ಆತ ಮಾಡದಿರುವುದನ್ನು ನಾವ್ಯಾರು ಮಾಡಲಿಲ್ಲ. ಆತ ಮಾಡಿದ ಚಿತ್ರಗಳಿಗಿಂತ ನಾವು ಒಂದು ಶಾಟ್ ಕೂಡಾ ಮುಂದಿಲ್ಲ. ಅಂತಹ ಅದ್ಭುತ ನಟ ಚಾಪ್ಲಿನ್. ಆ ಚಾಪ್ಲಿನ್ ನ ಗುಣ ನಿಜವಾದ ಕಾರ್ಟೂನ್ ಗುಣ. ನಾವು ಅದನ್ನು ಕ್ರಿಟಿಕಲ್ ಇನ್ ಸೈಡರ್ ಎಂದು ಕರೆಯುತ್ತೇವೆ. ನಾವು ಒಳಗಿನವರು ಆಗಿದ್ದುಕೊಂಡೇ ತಮಾಷೆ ಮಾಡುವುದು. ಮೊದಲು ನಾವು ನಮ್ಮನ್ನು ನಾವು ಗೇಲಿ ಮಾಡಿಕೊಂಡರೆ ಮಾತ್ರ ಬೇರೆಯವರನ್ನು ಗೇಲಿ ಮಾಡಲು ಸಾಧ್ಯ ಎಂದರು.
ಮುಂಬೈಯಲ್ಲಿದ್ದ ಪ್ರತಿಯೊಬ್ಬರಿಗೂ ಸಿಗುವುದು ಒಂದು ಅನಾಮಿಕತೆ. ನಾನು ಕೂಡಾ ಬರೆಯುವಾಗ ಅನಾಮಿಕನಾಗಿದ್ದೆ, ಅದು ಸತೀಶ್ ಆಚಾರ್ಯ ಆಗಿರಲಿ, ಜೇಮ್ಸ್ ವಾಜ್ ಆಗಲಿ, ರಾವ್ ಬೈಲ್ ಆಗಲಿ ಅವರು ಚಿತ್ರ ಬರೆಯಲಿಕ್ಕೆ ಕುಳಿತಾಗ ಅನಾಮಿಕರಾಗಿರುತ್ತಾರೆ. ಲತಾ ಮಂಗೇಶ್ಕರ್ ಹಾಡುವಾಗ ಅನಾಮಿಕರಾಗಿರುತ್ತಾರೆ, ಸಚಿನ್ ತೆಂಡೂಲ್ಕರ್ ಆಡುತ್ತಿದ್ದಾಗ ಅನಾಮಿಕರಾಗಿರುತ್ತಾರೆ. ಆ ಅನಾಮಿಕತೆಯನ್ನು ನಮಗೆ ಮುಂಬೈ ಜೀವನ ಕೊಟ್ಟಿದೆ. ಮತ್ತು ಸರಳವಾಗಿ ಬದುಕುವುದನ್ನು ಮುಂಬೈ ಶಹರ ಕಲಿಸಿದೆ ಎಂದು ಹೇಳಿದರು.
ತಮ್ಮ ಮಾತಿನುದ್ದಕ್ಕೂ ಮುಂಬೈ ಬದುಕನ್ನು ನೆನಪಿಸಿಕೊಂಡ ಕಾಯ್ಕಿಣಿ ಅವರು ರಾವ್ ಬೈಲ್, ವ್ಯಾಸರಾಯ ಬಲ್ಲಾಳ್, ಯಶವಂತ ಚಿತ್ತಾಲ, ಬೇಂದ್ರೆ, ಕುವೆಂಪು ಸೇರಿದಂತೆ ಹಲವರ ಬಗ್ಗೆ ಉಲ್ಲೇಖಿಸಿ ಹಾಸ್ಯ ಚಟಾಕಿ ಹಾರಿಸಿದರು.
ವೇದಿಕೆಯಲ್ಲಿ ಹಿರಿಯ ಪತ್ರಕರ್ತ, ಬರಹಗಾರ ಶ್ರೀನಿವಾಸ ಜೋಕಟ್ಟೆ, ಹಿರಿಯ ಫೋಟೊ ಜರ್ನಲಿಸ್ಟ್ ಯಜ್ಞ ಮಂಗಳೂರು, ಪತ್ರಕರ್ತ ದಯಾನಂದ ಚೌಟ, ಪತ್ರಕರ್ತ ಯುಕೆ ಕುಮಾರನಾಥ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಮಿಡ್ ಡೇ ಕ್ರೀಡಾ ಪತ್ರಕರ್ತ ಸುರೇಶ್ ಕೆ.ಕರ್ಕೆರಾ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದ ಉದ್ಘಾಟನೆಗೂ ಮುನ್ನ ನಮ್ಮನ್ನಗಲಿದ ಹಿರಿಯ ವ್ಯಂಗ್ಯಚಿತ್ರಕಾರ ರಾವ್ ಬೈಲ್ ಅವರಿಗೆ ಕಾರ್ಟೂನ್ ಕ್ಯಾರಿಕೇಚರ್ ಹಾಗೂ ಅವರ ಜೀವನಗಾಥೆಯ ವಿಡಿಯೋ ತುಣುಕು ಪ್ರದರ್ಶನದ ಮೂಲಕ ನಮನ ಸಲ್ಲಿಸಲಾಯಿತು. ಗಿರಿಧರ್ ಕಾರ್ಕಳ ಸ್ವಾಗತಿಸಿದರು, ರಾಮಕೃಷ್ಣ ಹೇರ್ಳೆ ಕಾರ್ಯಕ್ರಮ ನಿರೂಪಿಸಿದರು. ಸತೀಶ್ ಆಚಾರ್ಯ ವಂದಿಸಿದರು.