ಕುಂದಾಪುರ: ಭಾರತದಲ್ಲಿ ಕ್ಯಾನ್ಸರ್‌ನಿಂದ ಸಾಯುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಅದೊಂದು ಮಾರಕ ರೋಗವಾಗಿ ಕಂಡುಬರುತ್ತಿದೆ. ಈ ರೋಗದ ಬಗ್ಗೆ ಅರಿವು ಹಾಗೂ ಜಾಗೃತಿ ಮೂಡಿಸುವ ಬಗ್ಗೆ ಯುವ ಬಂಟರ ಸಂಘ ಹಮ್ಮಿಕೊಂಡ ಕಾರ್ಯ ಶ್ಲಾಘನೀಯ. ಅಲ್ಲದೇ ರಕ್ತದಾನ ಜೀವ ಉಳಿಸುವ ಒಂದು ಮಹತ್ತರವಾದ ದಾನ, ಒಂದು ಯುನಿಟ್ ರಕ್ತದಿಂದ ಮೂರು ಜೀವಗಳನ್ನು ಉಳಿಸಲು ಸಾಧ್ಯ, ಅಲ್ಲದೇ ರಕ್ತದಾನದಿಂದ ಕೊಟ್ಟವನ ಆರೋಗ್ಯವೂ ವೃದ್ಧಿಯಾಗುತ್ತದೆ ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಕುಂದಾಪುರ ಘಟಕದ ಅಧ್ಯಕ್ಷ ಎಸ್. ಜಯಕರ ಶೆಟ್ಟಿ ಹೇಳಿದರು.
ಅವರು ಇಂಡಿಯನ್ ರೆಡ್‌ಕ್ರಾಸ್ ಸಂಸ್ಥೆ, ರಕ್ತನಿಧಿ ಘಟಕ, ಕುಂದಾಪುರ ಇವರ ಆಶ್ರಯದಲ್ಲಿ ಕುಂದಾಪುರ ತಾಲೂಕು ಯುವ ಬಂಟರ ಸಂಘ ಮತ್ತು ರಾಷ್ಟ್ರೀಯ ಸೇವಾ ಯೋಜನೆ, ಭಂಡಾರ್‌ಕಾರ್ಸ್ ಕಾಲೇಜು, ಕುಂದಾಪುರ ಇವರ ಸಹಯೋಗದೊಂದಿಗೆ ಫೆ. 25ರಂದು ಕುಂದಾಪುರದ ಆರ್.ಎನ್. ಶೆಟ್ಟಿ ಸಭಾಭವನದಲ್ಲಿ ನಡೆದ ಕ್ಯಾನ್ಸರ್ ಅರಿವು ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಬೆಂಗಳೂರಿನ ವೈದ್ಯ ಪ್ರಮೋದ್ ಚಂದರ್ ಅವರು ಕ್ಯಾನ್ಸರ್ ರೋಗದ ನಿರ್ಮೂಲನೆಯ ಕುರಿತು ಪ್ರಾತ್ಯಕ್ಷಿಕೆ ಗಳ ಮೂಲಕ ಮಾಹಿತಿ ನೀಡಿದರು.
ಕುಂದಾಪುರ ತಾಲೂಕು ಯುವ ಬಂಟರ ಸಂಘ (ರಿ.) ಕುಂದಾಪುರ ಇದರ ಅಧ್ಯಕ್ಷ ಸುಕೇಶ್ ಶೆಟ್ಟಿ ಹೊಸ್ಮಠ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕುಂದಾಪುರ ಬಂಟರ ಯಾನೆ ನಾಡವರ ಮಾತೃ ಸಂಘದ ಸಂಚಾಲಕ ಸಂಪಿಗೇಡಿ ಸಂಜೀವ ಶೆಟ್ಟಿ, ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿನ ಪ್ರಾಂಶುಪಾಲ ಡಾ| ಎನ್.ಪಿ. ನಾರಾಯಣ ಶೆಟ್ಟಿ, ಕುಂದಾಪುರದ ಖ್ಯಾತ ಮೂಳೆ ತಜ್ಞ ಡಾ| ದಿನೇಶ್ ಕುಮಾರ್ ಶೆಟ್ಟಿ, ನೇತ್ರತಜ್ಞ ಡಾ| ಶ್ರೀಕಾಂತ್ ಶೆಟ್ಟಿ, ಡಾ|ಎಚ್.ಎಸ್ ಮಲ್ಲಿ , ವಾಸೈ ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಸಿ.ಶಂಕರ ಶೆಟ್ಟಿ, ಕಂದಾವರ ಕೆಳಾಮನೆ ಸತೀಶ್ ಶೆಟ್ಟಿ ಉಪಸ್ಥಿತರಿದ್ದರು.
ಸಂಘದ ಕೋಶಾಧಿಕಾರಿ ಮನೋರಾಜ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅವಿನಾಶ್ ರೈ, ಶಿಬಿರದ ಸಂಚಾಲಕರಾದ ಚೇತನ್ ಕುಮಾರ್ ಶೆಟ್ಟಿ ಕೊವಾಡಿ, ಪ್ರದೀಪ್ ಕುಮಾರ್ ಶೆಟ್ಟಿ ಬೆಳ್ಳಾಲ ಮೊದಲಾದವರು ಉಪಸ್ಥಿತರಿದ್ದರು.ಸುಕೇಶ್ ಶೆಟ್ಟಿ ಹೊಸಮಠ ಸ್ವಾಗತಿಸಿದರು. ಸಚಿನ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.