Advertisement

ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ತಂಡದಿಂದ ಸ್ಥಳ ಪರಿಶೀಲನೆ

01:44 AM Mar 11, 2022 | Team Udayavani |

ಕುಂದಾಪುರ: ಬೈಂದೂರು – ಕುಂದಾಪುರ ರಾಷ್ಟ್ರೀಯ ಹೆದ್ದಾರಿಯ ಬಾಕಿ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವುದರ ಜತೆಗೆ ಅಗತ್ಯವಿರುವಲ್ಲಿ ಮೇಲ್ಸೇತುವೆ, ಅಂಡರ್‌ಪಾಸ್‌, ಸರ್ವಿಸ್‌ ರಸ್ತೆ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದ್ದು, ಗುರುವಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಂಗಳೂರಿನ ಯೋಜನಾ ನಿರ್ದೇಶಕ ನಿಂಗೇಗೌಡ ಮತ್ತು ತಂಡದವರು ಸ್ಥಳ ಪರಿಶೀಲನೆ ಮಾಡಿದರು.

Advertisement

ಆದಷ್ಟು ಶೀಘ್ರ ಅಂದಾಜು ಪಟ್ಟಿ ತಯಾರಿಸಿ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸುವುದಾಗಿ ಅವರು ತಿಳಿಸಿದ್ದಾರೆ.
ಕೇಂದ್ರ ಭೂ ಸಾರಿಗೆ ನಿತಿನ್‌ ಗಡ್ಕರಿ ಇತ್ತೀಚೆಗೆ ಮಂಗಳೂರಿಗೆ ಬಂದಿದ್ದಾಗ ಸಂಸದ ಬಿ.ವೈ. ರಾಘವೇಂದ್ರ, ಮರವಂತೆ ಬೀಚ್‌ ಅಭಿವೃದ್ಧಿ ಹಾಗೂ ಕುಂದಾಪುರ – ಶಿರೂರು ವರೆಗಿನ ಹೆದ್ದಾರಿಯಲ್ಲಿ ಬಾಕಿ ಇರುವ ಹಾಗೂ ಇನ್ನು ಆಗಬೇಕಿರುವ ಅಭಿವೃದ್ಧಿ ಕಾಮಗಾರಿಗಳ ಕುರಿತು ಗಮನಸೆಳೆದಿದ್ದರು. ಸಚಿವರು ಸ್ಥಳದಲ್ಲೇ ಒಪ್ಪಿಗೆ ನೀಡಿದ್ದು, ಅದರಂತೆ ಕಾಮಗಾರಿಯ ಡಿಪಿಆರ್‌ ತಯಾರಿ ಬಗ್ಗೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಅದಕ್ಕೂ ಹಿಂದೆ ಮಾಜಿ ಸಿಎಂ ಯಡಿಯೂರಪ್ಪ ಮತ್ತು ಸಂಸದರು ಪತ್ರ ಬರೆದಿದ್ದರು.

5 ಕಡೆ ಅಂಡರ್‌ಪಾಸ್‌/ಮೇಲ್ಸೇತುವೆ
ಹೆದ್ದಾರಿಯ ಪ್ರಮುಖ 5 ಜಂಕ್ಷನ್‌ಗಳಾದ ತಲ್ಲೂರು, ಹೆಮ್ಮಾಡಿ, ತ್ರಾಸಿ, ಯಡ್ತರೆ, ಬೈಂದೂರು ತಾಲೂಕು ಕಚೇರಿ ಬಳಿ ಅಂಡರ್‌ ಪಾಸ್‌ ಅಥವಾ ಮೇಲ್ಸೇತುವೆ ನಿರ್ಮಾಣ, ಶೀರೂರು ಪೇಟೆ ಹಾಗೂ ನಿರ್ಗದ್ದೆ ಬಳಿ ಎರಡು ಕಡೆ ಸರ್ವಿಸ್‌ ರಸ್ತೆ ಹಾಗೂ ಬೀದಿದೀಪ ಅಳವಡಿಕೆಗಾಗಿ ಪರಿಶೀಲನೆ ನಡೆಸಲಾಯಿತು.

ಪ್ರಾಧಿಕಾರದ ಇಬ್ಬರು ಎಂಜಿನಿಯರ್‌ಗಳು, ಐಆರ್‌ಬಿ ಸಿಬಂದಿ, ರಾ.ಹೆ. ಶಿವಮೊಗ್ಗ ವಿಭಾಗದ ಪೀರ್‌ ಪಾಷ, ರಾ.ಹೆ. ಸಮಾಲೋಚಕರಾದ ತಿಮ್ಮ ರೆಡ್ಡಿ, ಪ್ರವೀಣ್‌ ಹಾಗೂ ಬೈಂದೂರಿನ ವೆಂಕಟೇಶ್‌ ಕಿಣಿ ಉಪಸ್ಥಿತರಿದ್ದರು.

ಮರವಂತೆಗೂ ಭೇಟಿ
ಮರವಂತೆ ಬೀಚ್‌ನಲ್ಲಿ ಹೆದ್ದಾರಿ ಪ್ರಾಧಿಕಾರದಿಂದ 200 ಕೋ.ರೂ. ವೆಚ್ಚದಲ್ಲಿ ಏನೆಲ್ಲ ಅಭಿವೃದ್ಧಿಪಡಿಸಬಹುದು ಎನ್ನುವ ಕುರಿತು ಡಿಪಿಆರ್‌ ತಯಾರಿಸುವ ಕುರಿತಂತೆ ಪ್ರಾಧಿಕಾರದ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿತು.

Advertisement

ಉದಯವಾಣಿ
ಸರಣಿ ಪರಿಣಾಮ
ಕುಂದಾಪುರ-ಶಿರೂರು ಹೆದ್ದಾರಿ ಅವ್ಯವಸ್ಥೆ ಬಗ್ಗೆ “ಉದಯವಾಣಿ ಸುದಿನ’ ಕಳೆದ ವರ್ಷ “ರಾಷ್ಟ್ರೀಯ ಹೆದ್ದಾರಿ 66- ರಸ್ತೆ ಒಂದು ಸಮಸ್ಯೆ ನೂರಾ ಒಂದು’ ಸರಣಿ ಯಲ್ಲಿ ಸಮಗ್ರವಾಗಿ ತೆರೆದಿಟ್ಟಿತ್ತು. ಆಗ ಅಧಿಕಾರಿಗಳ ಸಭೆ ಕರೆದ ಸಂಸದರು ಗಮನಹರಿಸುವ ಭರವಸೆ ನೀಡಿದ್ದರು. ಮರವಂತೆ ಬೀಚ್‌ಅಭಿವೃದ್ಧಿ ಬಗ್ಗೆಯೂ “ಉದಯ ವಾಣಿ’ ಮಾ. 10ರಂದು ವಿಶೇಷ ವರದಿ ಪ್ರಕಟಿಸಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next