Advertisement

Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!

03:37 PM Nov 25, 2024 | Team Udayavani |

ಕುಂದಾಪುರ: ಇಲ್ಲಿನ ಕೋಡಿ, ಬೀಜಾಡಿ ಮೊದಲಾದೆಡೆಯ ಬೀಚ್‌ಗಳು ಮೋಜು ಮಸ್ತಿಯ ಅಡ್ಡೆಗಳಾಗುತ್ತಿವೆ. ಸ್ಥಳೀಯ ಸಾರ್ವಜನಿಕರು ಎಷ್ಟೇ ಎಚ್ಚರಿಕೆ ನೀಡಿದರೂ ದೂರದಿಂದ ಬರುವ ಪ್ರವಾಸಿಗರು ಗಣನೆಗೆ ತೆಗೆದುಕೊಳ್ಳದೇ ದಿನದಿಂದ ದಿನಕ್ಕೆ ಅಪಾಯಕಾ ಬೀಚ್‌ ಎಂಬ ಹಣೆಪಟ್ಟಿ ಕಟ್ಟಿಕೊಳ್ಳುವತ್ತ ಸಾಗಿದೆ.

Advertisement

ಸಾವು, ರಕ್ಷಣೆ 
ಕೋಟೇಶ್ವರ ಸಮೀಪದ ಬೀಜಾಡಿ ಅಮಾಸೆಕಡು ಎಂಬಲ್ಲಿ ಸಮುದ್ರಕ್ಕೆ ಈಜಲು ತೆರಳಿದ್ದ ನಾಲ್ವರು ಯುವಕರ ಪೈಕಿ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಅ.27ರಂದು ನಡೆದಿತ್ತು. ಇದಲ್ಲದೇ ಕೋಡಿ, ಬೀಜಾಡಿ ಮೊದಲಾದೆಡೆ ಕೆಲವರು ಬೀಚ್‌ನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೀನುಗಾರರು ಸಾವಿಗೀಡಾಗಿದ್ದಾರೆ. ಅನೇಕ ಪ್ರವಾಸಿಗರನ್ನು ರಕ್ಷಿಸಲಾಗಿದೆ. ಎಚ್ಚರಿಕೆ ಕೊಟ್ಟು ಬಿಡಲಾಗಿದೆ.

ನಿರ್ಲಕ್ಷ್ಯ: ಕಡಲತಡಿ ವೀಕ್ಷಣೆಗೆಂದೇ ರಾಜ್ಯದ ನಾನಾ ಭಾಗದಿಂದ ಆಗಮಿಸುವ ಪ್ರವಾಸಿಗರು ಇಲ್ಲಿ ಸಮುದ್ರ ಕಂಡೊಡನೆ
ಓಡೋಡುತ್ತಾ ಕಡಲಿಗಿಳಿಯುತ್ತಾರೆ. ಉಬ್ಬರ ಇಳಿತ ಸೇರಿದಂತೆ ಅನೇಕ ಸಂದರ್ಭಗಳಲ್ಲಿ ಕಡಲು ಶಾಂತವಾಗಿ ಇರುವುದಿಲ್ಲ. ಇದು ಸ್ಥಳೀಯ ಮೀನುಗಾರರಿಗೆ ಸ್ಪಷ್ಟವಾಗಿ ತಿಳಿದಿರುತ್ತದೆ. ಸಂಜೆಯಾಗುತ್ತಿದ್ದಂತೆ, ಕತ್ತಲಾವರಿಸುತ್ತಿದ್ದಂತೆಯೇ ಯಾರಾದರೂ
ಸಮುದ್ರಕ್ಕೆ ಇಳಿದರೆ ಬೃಹತ್‌ ಅಲೆಗಳ ನಡುವೆ ಇಳಿದವರು ಮರಳಿ ದಡಕ್ಕೆ ಬಂದರೇ ಎಂದು ಹುಡುಕುವುದೂ ಕಷ್ಟ.

ಅಲೆಗಳ ಅಪಾಯಕ್ಕೆ ಸಿಲುಕಿದರೆ ಅವರ ರಕ್ಷಣೆಯೂ ಕಷ್ಟ. ಅಷ್ಟಲ್ಲದೇ ಇಲ್ಲಿ ಆಳವೂ ಇದೆ. ತೀರಾ ಮೊಣಕಾಲು ಆಳದ ನೀರು ನಿಲ್ಲುವ ಪ್ರವಾಸಿ ತಾಣದ ಬೀಚ್‌ ಇದಲ್ಲ. ಇದೆಲ್ಲ ಸ್ಥಳೀಯರಿಗೆ ಸ್ಪಷ್ಟ ಅರಿವಿದೆ. ಈ ಕಾರಣಕ್ಕೆ ಯಾರಾದರೂ ಪ್ರವಾಸಿಗರು ಮಿತಿ ಮೀರಿ ವರ್ತಿಸಿದರೆ ಸೂಚನೆ ಕೊಡುತ್ತಾರೆ.

ಸಲಹೆ ನೀಡುತ್ತಾರೆ. ಕೇಳದೇ ಇದ್ದರೆ ಎಚ್ಚರಿಕೆಯನ್ನೂ ನೀಡುತ್ತಾರೆ. ಆದರೆ ಬಹುತೇಕ ಯುವಜನತೆ ಹಾಗೂ ಪ್ರವಾಸಿಗರು ಸ್ಥಳೀಯರ ಮಾತನ್ನು ನಿರ್ಲಕ್ಷಿಸುತ್ತಾರೆ. ಮಾತಿನ ಸಂಘರ್ಷ ನಡೆಯುತ್ತದೆ. ಹೊಯ್‌ ಕೈ ಹಂತಕ್ಕೂ ಹೋಗುತ್ತದೆ. ಅನಗತ್ಯ ಕೇಸು, ವಿಚಾರಣೆಗಳಿಂದ ಪಾರಾಗಲು ಸ್ಥಳೀಯರು ಮೌನಕ್ಕೆ ಶರಣಾಗುತ್ತಾರೆ. ಇಂತಹ ಅವಕಾಶವನ್ನೇ ಕಾದು ಕುಳಿತ ಜವರಾಯ ಶರಧಿಗಿಳಿದ ಪ್ರವಾಸಿಗರ ಜೀವ ಕಸಿಯುತ್ತಾನೆ.

Advertisement

ಹೋಮ್‌ ಗಾರ್ಡ್‌: ಕೋಡಿ  ಸೀವಾಕ್‌ ಸಮೀಪ ತಾಲೂಕು ಆಡಳಿತದ ವತಿಯಿಂದ ಇಬ್ಬರು ಹೋಮ್‌ ಗಾರ್ಡ್‌ ಗಳನ್ನು ನೇಮಿಸಲಾಗಿದೆ. ಮಳೆಗಾಲದಲ್ಲಿ ಅಪಾಯಕಾರಿ ನೀರಿನ ಮಟ್ಟ ಇರುವಾಗ ಯಾರೂ ಸಮುದ್ರಕ್ಕೆ ಇಳಿಯದಂತೆ
ಇವರು ಸೂಚನೆ ಕೊಡುತ್ತಾರೆ. ಸೀವಾಕ್‌ಗೆ ಬರುವ ಪ್ರಯಾಣಿಕರು ಇದರಿಂದ ಎಚ್ಚರ ವಹಿಸುತ್ತಾರೆ. ಆದರೆ ದೇಶದ ಅತಿ
ಉದ್ದದ ಬೀಚ್‌ಗಳಲ್ಲಿ ಒಂದಾದ ಇಲ್ಲಿ 5 ಕಿ.ಮೀ.ನಷ್ಟು ಉದ್ದ ಇರುವ ಬೀಚ್‌ಗೆ ಇಬ್ಬರು ಕಾವಲುಗಾರರು ಸಾಲುವುದಿಲ್ಲ.
ಪ್ರವಾಸಿಮಿತ್ರ ಮಾದರಿಯಲ್ಲಿ ನುರಿತ ಈಜುಗಾರ ರಕ್ಷಕರ ನೇಮಕ ನಡೆಯಬೇಕಿದೆ.

ಮೋಜು ಮಸ್ತಿ: ನೀರು ನೋಡಲು, ಸಮುದ್ರ ತೀರದಲ್ಲಿ ಕುಳಿತು ಕುಳಿರ್ಗಾಳಿ ಸೇವಿಸಲು, ಕಡಲತಡಿಯ ಸೌಂದರ್ಯ
ಆಸ್ವಾದಿಸಲು ಬರುವ ವರ್ಗ ಒಂದಾದರೆ ಸಮುದ್ರ ತೀರದಲ್ಲಿ ಕುಳಿತು ಅಲೆಗಳ ನಿನಾದದ ನಡುವೆ ಮದ್ಯಪಾನ ಮಾಡಲು
ಬರುವವರೂ ಇದ್ದಾರೆ. ಅದಕ್ಕಾಗೇ ಇರುವ ಅಧಿಕೃತ ತಾಣಗಳನ್ನು ಬಿಟ್ಟು ಸಾರ್ವಜನಿಕವಾಗಿ ಬೀಚ್‌ನಲ್ಲಿ ಕುಳಿತು ಕುಡಿದು ಇತರ ಪ್ರಯಾಣಿಕರಿಗೂ ತೊಂದರೆ ಮಾಡಿ ಪಂದಷ್ಟು ಮದ್ಯದ ಬಾಟಲಿಗಳನ್ನು ಬಿಟ್ಟು ಹೋಗುತ್ತಾರೆ. ಬರುವ ಅನೇಕ
ಪ್ರವಾಸಿಗರು ಪ್ಲಾಸ್ಟಿಕ್‌ ಮೊದಲಾದ ತ್ಯಾಜ್ಯವನ್ನೂ ಇಲ್ಲೇ ಎಸೆದು ಹೋಗುತ್ತಾರೆ.

ಕ್ಲೀನ್‌ ಕುಂದಾಪುರ ಪ್ರಾಜೆಕ್ಟ್, ಕೋಡಿ  ಬ್ಯಾರೀಸ್‌ ಶಿಕ್ಷಣ ಸಂಸ್ಥೆಗಳು ಸೇರಿದಂತೆ ಅನೇಕ ಸಂಘ ಸಂಸ್ಥೆಯವರು ಶ್ರದ್ಧೆಯಿಂದ
ಸ್ವತ್ಛ ಮಾಡುವ ಕೈಂಕರ್ಯ ಮಾಡುತ್ತಿದ್ದು ಇಂತಹ ಪುಂಡ ಪೋಕರಿಗಳು ತಿಂದು ಬಿಸುಟಿದ್ದನ್ನು ಶುಚಿಗೊಳಿಸುವ ಕೆಲಸ
ಮಾಡಬೇಕಿದೆ. ವಾರ ವಾರ ರಾಶಿ ರಾಶಿ ಬಾಟಲಿಗಳು ದೊರೆಯುತ್ತವೆ. ಹೀಗೆ ಕುಡಿದು ಹೋಗುವವರಲ್ಲಿ ಕೇವಲ ಹೊರ
ಊರಿನವರಷ್ಟೇ ಅಲ್ಲ, ಈ ಜಿಲ್ಲೆ, ಪಕ್ಕದ ಜಿಲ್ಲೆಯವರೂ ಇರಬಹುದು!

ಕಡಲಾಮೆಗೆ ಅಪಾಯ
ಸ್ವಚ್ಛತೆಯ ಕಾರಣದಿಂದಲೇ ಕಡಲಾಮೆಗಳು ಇಲ್ಲಿ ಸಾವಿರಾರು ಮೊಟ್ಟೆಗಳನ್ನು ಇಡಲಾರಂಭಿಸಿದ್ದು ಸಾರ್ವಜನಿಕರ
ಅಪಾಯಕಾರಿ ವರ್ತನೆಯಿಂದ ಮೊಟ್ಟೆಗಳಿಗೆ ಹಾನಿಯಾಗುವ ಸಾಧ್ಯತೆಯಿದೆ. ಸೀವಾಕ್‌ ಈಗಾಗಲೇ ಬಿರುಕು ಬಿಟ್ಟಿದ್ದು ಇದರ ಅರಿವಿಲ್ಲದೇ ಜನ ತೆರಳಿದರೆ ಮತ್ತಷ್ಟು ಅಪಾಯ ಆಗುವ ಸಾಧ್ಯತೆಗಳಿವೆ.

ಸಿಬಂದಿಗಳಿರುತ್ತಾರೆ
ಕೋಡಿ ಬೀಚ್‌ನಲ್ಲಿ ಜನಸಂದಣಿ ಇರುವ ಸಂದರ್ಭಗಳಲ್ಲಿ ಪೊಲೀಸ್‌ ನೇಮಿಸಲಾಗುತ್ತದೆ. ಬೀಜಾಡಿಯಲ್ಲಿ ಪ್ರಸ್ತುತ ಪೊಲೀಸರನ್ನು ನೇಮಿಸುತ್ತಿಲ್ಲ. ಕರಾವಳಿ ಕಾವಲು ಪಡೆಯವರು ಗಸ್ತಿನಲ್ಲಿರುತ್ತಾರೆ. ಯಾವುದೇ “ಅಹಿತಕರ ಘಟನೆ ನಡೆದರೆ 112ಗೆ ಕರೆ ಮಾಡಿದರೆ ತತ್‌ಕ್ಷಣ ಪೊಲೀಸ್‌ ಸಿಬಂದಿ ಸ್ಥಳಕ್ಕಾಗಮಿಸುತ್ತಾರೆ.
ಬೆಳ್ಳಿಯಪ್ಪ ಕೆ.ಯು., 
ಡಿವೈಎಸ್‌ಪಿ, ಕುಂದಾಪುರ

ಅಪಾಯಕಾರಿಯಾಗುತ್ತಿದೆ…
ಕೋಡಿ ಬೀಚ್‌ ಎಲ್ಲರೂ ತಿಳಿದಷ್ಟು ಕಡಿಮೆ ಆಳದ ಬೀಚ್‌ ಅಲ್ಲ. ಇದರ ಭೂ ಆಕೃತಿ ಬದಲಾಗಿದೆ. ಆದ್ದರಿಂದ ನೀರಿನ ಆಳ
ತಿಳಿಯದೇ ಅನೇಕರು ಪ್ರಾಣ ಳೆದುಕೊಳ್ಳುತ್ತಿದ್ದಾರೆ. ಪಾರ್ಟಿ ಅಡ್ಡೆಗಳಂತಾಗಿ ಮೋಜು ಮಸ್ತಿ ಹೆಸರಿನಲ್ಲಿ, ಕುಡಿದು ಬಾಟಲಿಗಳ ತ್ಯಾಜ್ಯ ಹಾಕಿ ಹೋಗುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವ ಅಗತ್ಯವಿದೆ. ಇಲ್ಲದಿದ್ದರೆ ಕಡಲಾಮೆಗೂ ಅಪಾಯ ಇದೆ.
ದಿನೇಶ್‌ ಸಾರಂಗ, ಸದಸ್ಯ,
ರೀಫ್‌ ವಾಚ್‌ ಸಂಘಟನೆ, ಕುಂದಾಪುರ

*ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next