Advertisement

ಯಾರ ಮನಸಲ್ಲಿ ಯಾರಿದ್ದಾರೋ ದೇವರಾಣೆ ಗೊತ್ತಾಗಲ್ಲ!

06:20 AM May 06, 2018 | Team Udayavani |

ಕುಂದಾಪುರ: ಯಾರ ಮನಸಲ್ಲಿ ಯಾರಿದ್ದಾರೋ ದೇವರಾಣೆ ಗೊತ್ತಾಗಲ್ಲ. ಈ ಪಕ್ಷದವರು ಕೇಳಿದರೆ ನಿಮಗೇ ನನ್ನ ಮತ ಅಂತಾರೆ. ಆ ಪಕ್ಷದವರು ಕೇಳಿದರೆ ನನ್ನ ಓಟು ನಿಮಗೇನೇ ಅಂತಾರೆ. ಆದರೆ ಮನಸ್ಸಿನಲ್ಲಿದ್ದ ಅಭ್ಯರ್ಥಿಗೆ ಮತ ಚಲಾಯಿಸಿ ಬರುತ್ತಾರೆ. ಹಾಗಾಗಿ ಯಾರಾಗಲಿದ್ದಾರೆ ಹೀರೋ ಎಂದು ತಿಳಿಯುವುದು ಬಹಳ ಕಷ್ಟ ಎಂದು ನಶ್ಯದ ಡಬ್ಬದ ಮುಚ್ಚಳ ತೆರೆದು ಮೂಗರಳಿಸಿ ಹುಡಿ ಏರಿಸಿ ನುಡಿದರು ಹೇರಿಕುದ್ರುವಿನ ಸುಧಾಕರ ಶೆಟ್ಟಿ.

Advertisement

ಚುನಾವಣೆ ಕುರಿತು ಮತದಾರರ ಮನದಾಳದ ಒಳಸುಳಿ ಅರಿಯಲು “ಉದಯವಾಣಿ’ ನಡೆಸುತ್ತಿರುವ ಸುತ್ತಾಟದ ಸಂದರ್ಭ ಮಾತಿಗೆ ಸಿಕ್ಕವರು ಅವರು.

ಯಾರ್‌ ಕೊಟ್ರೂ ತಗೋತಾರೆ, ಒಂದ್‌ ಓಟ್‌ ಹಾಕ್ತಾರೆ
ಹೇರಿಕುದ್ರುವಿನ ಪಂಜು ಪೂಜಾರಿ ಹೇಳಿದರು, “30 ವರ್ಷ ಹಿಂದೆ ಆಶ್ರಯ ಮನೆ ಕಟ್ಟಲು 5 ಸಾವಿರ ರೂ. ಕೊಡುತ್ತಿದ್ದರು. ಮನೆಯೂ ಆಗುತ್ತಿತ್ತು. ಆದರೆ ಈಗ 2.5 ಲಕ್ಷ ರೂ. ಕೊಡ್ತದೆ ಸರಕಾರ. ಮನೆ ಅಲ್ಲಿಂದಲ್ಲಿಗೆ ಆಗ್ತದೆ. ಜನರೂ ಈಗ ಹಾಗೆಯೇ ಆಗಿದ್ದಾರೆ. ಆ ಪಕ್ಷದವರು ಕೊಟ್ಟರೂ ತೆಗೆದುಕೊಳ್ತಾರೆ. ಈ ಪಕ್ಷದವರು ಕೊಟ್ಟದ್ದನ್ನೂ ತೆಗೆದುಕೊಳ್ತಾರೆ. ಓಟು ಮಾತ್ರ ಯಾರಾದರೂ ಒಬ್ಬರಿಗೆ ಹಾಕ್ತಾರೆ. ಧರ್ಮಕ್ಕೆ ಸಿಗುವುದನ್ನು ಬಿಡುವುದು ಯಾಕೆ ಅಲ್ಲವಾ’ ಎಂದು ಮಾತು ಮುಗಿಸಿದರು. 

ಭರವಸೆ ಕೇಳಲು ಚೆಂದ
ಸಂಗಮ್‌ ಸಮೀಪ ಬಂದಾಗ ಅಲ್ಲೊಬ್ಬರು ಬೈಕ್‌ ತಳ್ಳುತ್ತಾ ಬರುತ್ತಿದ್ದರು. “ಏನ್‌ ಮಾರಾಯೆ ಕಥೆ’ ಎಂದರೆ, “ಪೆಟ್ರೋಲ್‌ ಇಲ್ಲ. ನಿನ್ನೆಯಷ್ಟೇ 100 ರೂ. ಪೆಟ್ರೋಲ್‌ ಹಾಕಿದ್ದೆ. ಎಲ್ಲ ರಾಜಕೀಯ ಪಕ್ಷದವರೂ ಅಧಿಕಾರಕ್ಕೆ ಬಂದರೆ ಪೆಟ್ರೋಲ್‌ಗೆ 30 ರೂ. ಮಾಡುತ್ತೇನೆ ಎಂದು ಭರವಸೆ ಕೊಟ್ಟದ್ದೇ ಕೊಟ್ಟದ್ದು. ಹೋಗಲಿ ರಾಜ್ಯದ ಬಾಬಾ¤¤ದರೂ ತೆರಿಗೆ ಕಡಿತ ಮಾಡುತ್ತಿದ್ದರೆ ಬದುಕಿಕೊಳ್ಳಬಹುದಿತ್ತು. ಆದರೆ ಅವರು ಕೊಡುವುದಿಲ್ಲ, ಇವರು ಬಿಡುವುದಿಲ್ಲ. ನಾವು ತಳ್ಳುವುದು ನಿಲ್ಲುವುದಿಲ್ಲ ಎಂದಾಗಿದೆ ಸ್ಥಿತಿ. ನಮ್ಮ ಬದುಕಿನ ಗಾಡಿ ತಳ್ಳಲು ಯಾವ ರಾಜಕಾರಣಿಯೂ ಬರುವುದಿಲ್ಲ. ಅವರಿಗೆ ಅವರ ಜೋಳಿಗೆ ತುಂಬುವುದೇ ಮುಖ್ಯ. ನಮಗೆ ಸಿಹಿ ಹೋಳಿಗೆ ಕೊಡುವುದಿಲ್ಲ. ಎಲ್ಲ ಭರವಸೆಗಳೂ ಚುನಾವಣೆ ಕಾಲಕ್ಕೆ ಕೇಳಲು ಚಂದ. ಅಧಿಕಾರ ಬಂದ ಮೇಲೆ ಅವರ ಮರ್ಜಿ ಬೇರೆಯೇ. ನಾವ್ಯಾರೋ ಅವರ್ಯಾರೋ’ ಎಂದು ಬೆವರೊರೆಸಿಕೊಂಡರು. 

ಒಂಟಿ ಸೀನಿನ ನಿಖರತೆ
ಹೇರಿಕುದ್ರುವನ್ನು 2 ಭಾಗ ಮಾಡಿದ್ದು ಈ ಫ್ಲೈ ಓವರ್‌. ಆದರೆ ನಮಗೊಂದು ಅಂಡರ್‌ಪಾಸ್‌ ಕೊಟ್ಟಿದ್ದಾರೆ. ಹಾಗಾಗಿ ನಮಗದರ ಬಗ್ಗೆ ಪ್ರೀತಿ ಇದೆ. ಊರನ್ನು ಇಬ್ಭಾಗ ಮಾಡಿದರೂ ಸಂಪರ್ಕ ಕಡಿದು ಹಾಕಲಿಲ್ಲ ಎನ್ನುವ ಸಮಾಧಾನ ಇದೆ. ಈ ಊರು 1986ರಲ್ಲಿಯೇ ಅಭಿವೃದ್ಧಿ ಕಾಣಲಾರಂಭಿಸಿದೆ. ಇಲ್ಲಿಗೊಂದು ರಸ್ತೆ ಮಾಡಿಕೊಟ್ಟ ಪುಣ್ಯಾತ್ಮ ಅಶೋಕ್‌ ಕುಮಾರ್‌ ಹೆಗ್ಡೆ ಅವರು. ಸಣ್ಣ ಚುನಾವಣೆಗಳಲ್ಲಿ ಗೆದ್ದರೂ ಎಂಎಲ್‌ಎ ಚುನಾವಣೆಯಲ್ಲಿ ಅವರಿಗೆ ಗೆಲ್ಲಲಾಗಲಿಲ್ಲ. ದುರಂತ ನೋಡಿ, ಅಪಘಾತದಲ್ಲಿ ಅವರನ್ನು ಕಳಕೊಳ್ಳುವಂತಾಯಿತು ಎಂದು ಅವರು ಹೇಳಿದ್ದಕ್ಕೂ ನಶ್ಯದ ಪ್ರಭಾವದಿಂದ ಅವರಿಗೆ ಒಂಟಿ ಸೀನು ಬಂದದ್ದಕ್ಕೂ ಸರಿಯಾಯಿತು. 

Advertisement

ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next