Advertisement

ಕುಂದಾಪುರ: ಅಪಾಯದಲ್ಲಿ ಎಪಿಎಂಸಿ ಕಟ್ಟಡ!

10:36 AM Sep 09, 2019 | sudhir |

ಕುಂದಾಪುರ: ಸುಮಾರು 34 ವರ್ಷಗಳ ಹಿಂದೆ ನಿರ್ಮಾಣವಾದ ಕುಂದಾಪುರ ಕೃಷ್ಯುತ್ಪನ್ನ ಮಾರಾಟ ಕೇಂದ್ರದ ಕಟ್ಟಡ ಅಪಾಯದಲ್ಲಿದೆ. ಮಳೆ ಬಂದರೆ ನೀರೆಲ್ಲ ಕೊಠಡಿಯ ಒಳಗೆ ಇರುತ್ತದೆ. ಮಳೆಗೆ ನೀರು ಸೋರಿ ಕಟ್ಟಡದ ಅಂದವಷ್ಟೇ ಹಾಳಾದುದಲ್ಲ ಆಯುಷ್ಯವೇ ಮುಗಿದಿದೆ.

Advertisement

ಉದ್ಘಾಟನೆಗೆ ಮುನ್ನ ಸೋರಿಕೆ

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣಕ್ಕೆ 1978ರಲ್ಲಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಶಿಲಾನ್ಯಾಸಗೈದು, ಸಹಕಾರಿ ಸಚಿವ ಕೆ.ಎಚ್. ರಂಗನಾಥ್‌ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಗಣವನ್ನು 1985 ಜ. 26ರಂದು ಮಾಜಿ ಶಾಸಕ ಡಾ| ಬಿ.ಬಿ. ಶೆಟ್ಟಿ ಅಧ್ಯಕ್ಷತೆಯಲ್ಲಿ ಮಾರುಕಟ್ಟೆ ಹಾಗೂ ಉಗ್ರಾಣಗಳ ಸಚಿವ ಎ.ಎಸ್‌. ಬಂಡಿಸಿದ್ದೇ ಗೌಡ ಉದ್ಘಾಟಿಸಿದ್ದರು. ದುರಂತದ ಗ್ರಹಚಾರ ಅಂದೇ ಆರಂಭಗೊಂಡಿತ್ತು. ಉದ್ಘಾಟನೆಗೆ ಮುನ್ನವೇ ಕಟ್ಟಡ ಸೋರುತ್ತಿತ್ತು. ಕಳಪೆ ಕಾಮಗಾರಿಗೆ ದಿಟ್ಟ ಸಾಕ್ಷಿ ಹೇಳುತ್ತಿತ್ತು. ರಚನೆಯಾಗಿ ಒಂದಷ್ಟು ಸಮಯ ಉಪಯೋಗಕ್ಕೆ ದೊರೆಯದೇ ಬಳಿಕ ಕೆಲವರ ಒತ್ತಡ, ಒತ್ತಾಯದಿಂದಾಗಿ ಉದ್ಘಾಟನೆ ನಡೆದಿತ್ತು.

ಭಯಭೀತ ಸಿಬಂದಿ

ಇದರೊಳಗೆ ಕೆಲಸ ಮಾಡಲು ಸಿಬಂದಿ ಹೆದರುತ್ತಿದ್ದಾರೆ. ಕಟ್ಟಡದ ಅವ್ಯವಸ್ಥೆ ಸಲುವಾಗಿಯೇ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಂಗನವಾಡಿಗೆ ಆಹಾರ ಸಾಮಗ್ರಿ ಸರಬರಾಜು ಮಾಡುವ ಗೋದಾಮನ್ನು ಸ್ಥಳಾಂತರಿಸಲಾಗಿದೆ. ನೀರು ಸೋರಿ ಆಹಾರ ಸಾಮಗ್ರಿ ಹಾಳಾಗುವ ಭಯದಲ್ಲಿ, ಕಟ್ಟಡದ ಭದ್ರತೆ ಕುರಿತು ಧೈರ್ಯ ಸಾಲದೇ ಗೋದಾಮನ್ನು ಸ್ಥಳಾಂತರಿಸಲಾಗಿದೆ. ನಾಲ್ಕು ವರ್ಷ ಗಳ ಹಿಂದೆ ರಚನೆಯಾದ ಮಿನಿ ವಿಧಾನಸೌಧಕ್ಕೆ ಕೂಡಾ ಇಂತಹದ್ದೇ ಇತಿಹಾಸವಿದೆ. ಅದು ಕೂಡಾ ಉದ್ಘಾಟನೆಗೆ ಮುನ್ನವೇ ಕಳಪೆ ಕಾಮಗಾರಿಯ ಪ್ರದರ್ಶನ ಮಾಡಿತ್ತು. ಹಾಗಿದ್ದರೂ ಉದ್ಘಾಟನೆ ನಡೆದಿತ್ತು, ಗುತ್ತಿಗೆದಾರರ ಮೇಲೆ ಯಾವುದೇ ಕ್ರಮ ಆಗಿರಲಿಲ್ಲ. ಈಗ ಒಂದೊಂದೇ ಪದರ ಅಲ್ಲಿ ಕೆಲಸ ಮಾಡುವ ಸಿಬಂದಿ ಮೇಲೆ ಬೀಳುತ್ತಿದೆ. ಇದೇ ಪರಿಸ್ಥಿತಿ ಎಪಿಎಂಸಿ ಕಟ್ಟಡದಲ್ಲೂ ಇದೆ. ಎಪಿಎಂಸಿ ಕಾರ್ಯಾಲಯ, ಗೋದಾಮು, ಬೀಜನಿಗಮ, ರೈತಭವನ ಎಲ್ಲೆಲ್ಲೂ ನೀರೇ ನೀರು.

Advertisement

ದುರಸ್ತಿಯಿಲ್ಲ

ಕಟ್ಟಡ ಇಷ್ಟು ಅಪಾಯಕಾರಿ ಸ್ಥಿತಿಯಲ್ಲಿದ್ದರೂ ಕಟ್ಟಡ ಕೆಡಹುವಂತೆಯೂ ಇಲ್ಲ. ಏಕೆಂದರೆ ಕಟ್ಟಡ ಕೆಡಹುವಷ್ಟು ಶಿಥಿಲವಾಗಿದೆ ಎಂದು ಎಂಜಿನಿಯರ್‌ ಪ್ರಮಾಣಪತ್ರ ನೀಡುತ್ತಿಲ್ಲ. ಕೇವಲ 35 ವರ್ಷದಲ್ಲಿ ಸರಕಾರಿ ಕಟ್ಟಡ ಕೆಡಹುವಂತೆ ಆದರೆ ಇದಕ್ಕಿಂತ ಕಳಪೆ ಬೇರೆ ಉದಾಹರಣೆ ಬೇಕೆ. ಕಟ್ಟಡದ ಎದುರು ಕಾಂಕ್ರೀಟ್, ಇಂಟರ್‌ಲಾಕ್‌ ಯಾವುದೂ ಹಾಕದ ಕಾರಣ ಕೆಸರ ಕೊಚ್ಚೆಯಲ್ಲಿ ಗೇಟಿನ ಮೂಲಕ ಒಳಗೆ ಬರುವುದೇ ಕಷ್ಟ ಎಂಬಂತಿದೆ.

ನೆರೆ ನೀರು

ಹೆದ್ದಾರಿಗೆ ತಾಗಿಕೊಂಡಂತೆ ಇರುವ ಇಲ್ಲಿ ಚರಂಡಿ ಕಾಮಗಾರಿಯ ಅವ್ಯವಸ್ಥೆಯಿಂದಾಗಿ ನೆರೆ ನೀರು ನಿಂತಂತೆ ಇರುತ್ತದೆ. ಐಆರ್‌ಬಿ ಸಂಸ್ಥೆಯವರ ಅಸಮರ್ಪಕ ಕಾಮಗಾರಿ, ತಾಂತ್ರಿಕ ಸಲಹೆ ಪಡೆಯದೇ ನಿರ್ಮಿಸಿದಂತಿರುವ ಚರಂಡಿಯಿಂದಾಗಿ ನೀರು ಸರಾಗವಾಗಿ ಹರಿಯು ವುದಿಲ್ಲ. ಮಳೆ ಬಂದಾಗ ಸಂತೆ ತುಂಬೆಲ್ಲ ನೀರು. ವಾಹನಗಳು ಕೂಡಾ ಪ್ರಾಂಗಣದೊಳಗೆ ಪ್ರವೇಶಿಸಲು ಕಟ್ಟಪಡುತ್ತವೆ.

ಕುರೂಪಿ ಕಟ್ಟಡ

ಮಳೆನೀರಿನಿಂದಾಗಿ ಕಟ್ಟಡ ತನ್ನ ಸುರೂಪವನ್ನು ಕಳೆದುಕೊಂಡಿದೆ. ಅಲ್ಲಲ್ಲಿ ಬಿರುಕುಬಿಟ್ಟ ಗೋಡೆಯಲ್ಲಿ ನೀರು ಸುರಿದು ಗೋಡೆಯಲ್ಲೆಲ್ಲ ಹಾವಸೆ (ಪಾಚಿ) ಬೆಳೆದಿದೆ. ಆಗ ಗದ್ದೆಯಾಗಿದ್ದ ಈ ಜಾಗದಲ್ಲಿ ಉತ್ತರ ಕರ್ನಾಟಕದ ಮಳೆ ಕಡಿಮೆ ಇರುವ ಪ್ರದೇಶದ ನಕ್ಷೆಯ ಯೋಜನೆಯಂತೆ ಕಟ್ಟಡ ನಿರ್ಮಿಸಿದ ಕಾರಣ ಇಲ್ಲಿನ ಮಳೆಗೆ ಕಟ್ಟಡವನ್ನು ಹೊರುವ ಸಾಮರ್ಥ್ಯ ಈ ಜಾಗಕ್ಕಿಲ್ಲ. ಆದ್ದರಿಂದ ಭೂಪ್ರದೇಶಕ್ಕ ಧಾರಣಾ ಸಾಮರ್ಥ್ಯ ಇಲ್ಲದೇ ಕಟ್ಟಡವೇ ಸ್ವಲ್ಪ ಪ್ರಮಾಣದಲ್ಲಿ ಕುಸಿತಕ್ಕೊಳಗಾದಂತೆ ಕಾಣುತ್ತಿದೆ. ಈವರೆಗೆ ದುರಸ್ತಿ ಕಾಣದ ಈ ಕಟ್ಟಡದಲ್ಲಿ ನೀರು ಸೋರದಂತೆ ಛಾವಣಿ ಮೇಲೆ ಹಂಚು ಅಳವಡಿಸಲಾಗಿದೆ.

ಹೊಸ ಕಟ್ಟಡ ರಚನೆಯಾಗಬೇಕು

ಈ ಕಟ್ಟಡವನ್ನು ಪೂರ್ಣ ಕೆಡವಿ ಹೊಸ ಕಟ್ಟಡ ರಚಿಸಬೇಕು. ಈ ಕಟ್ಟಡ ಯಾವತ್ತಿದ್ದರೂ ಅಪಾಯ. ಪ್ರಾದೇಶಿಕವಾಗಿ ಸಹ್ಯವಾಗುವ ಕಟ್ಟಡದ ನೀಲನಕಾಶೆ ತಯಾರಿಸಬೇಕು.
– ಕೆಂಚನೂರು ಸೋಮಶೇಖರ ಶೆಟ್ಟಿ,ಮಾಜಿ ನಿರ್ದೇಶಕರು

ದುರಸ್ತಿ ಪ್ರಸ್ತಾವವಿದೆ

ಯಾರ್ಡ್‌, ರೈತಭವನ, ಎಪಿಎಂಸಿ ಕಟ್ಟಡ ದುರಸ್ತಿಗೆ ಬರೆದುಕೊಳ್ಳ ಲಾಗಿದೆ. 2.35 ಕೋ.ರೂ. ವೆಚ್ಚದಲ್ಲಿ ಅಂದಾಜುಪಟ್ಟಿ ತಯಾರಿ ನಡೆಯುತ್ತಿದೆ. ಟೆಂಡರ್‌ ಕರೆದು ದುರಸ್ತಿ ಕಾರ್ಯ ನಡೆಯಲಿದೆ.
– ಶಿವಾನಂದ,ಕಾರ್ಯದರ್ಶಿ, ಎಪಿಎಂಸಿ
ಎಪಿಎಂಸಿ ಪ್ರಾಂಗಣ ಎಂದರೆ ವಾರದ ಸಂತೆಗಷ್ಟೇ ಮೀಸಲು ಎಂದಾಗಿದೆ. ನಿತ್ಯ ಸಂತೆ ಇಲ್ಲ. ತೆಂಗಿನಕಾಯಿ ವ್ಯವಹಾರ ಹೊರತಾಗಿ ಇತರ ಯಾವುದೇ ಕೃಷಿ ಉತ್ಪನ್ನಗಳ ಮಾರಾಟ ಈ ಪ್ರಾಂಗಣದಲ್ಲಿ ನಡೆಯುವುದಿಲ್ಲ. ಅಷ್ಟರ ಮಟ್ಟಿಗೆ ಇದು ಜನರಿಂದ ದೂರವಾಗಿದೆ. ವಾರದ ಸಂತೆಯಿಂದ ಎಪಿಎಂಸಿಗೆ ಮಾಸಿಕ 80 ಸಾವಿರ ರೂ. ಆದಾಯ ದೊರೆತರೆ ಸಂತೆ ಬಳಿಕದ ಸ್ವಚ್ಛತೆಗಾಗಿ 70 ಸಾವಿರ ರೂ. ಖರ್ಚಾಗುತ್ತದೆ. ಭತ್ತಕ್ಕೆ ಬೆಂಬಲ ಘೋಷಣೆಯಾದಾಗ ಭತ್ತ ಖರೀದಿಗೆ ಸೂಚನೆ ಬರುತ್ತದೆ. ಆದರೆ ಖರೀದಿಸಿದ ಭತ್ತ ಸಂಗ್ರಹಿಸಿ ಇಡಲು ಇಲ್ಲಿ ಸೂಕ್ತ ಗೋದಾಮು ಇಲ್ಲ. ಕಳೆದ ವರ್ಷ 2.86 ಕೋ.ರೂ. ತೆರಿಗೆ ಸಂಗ್ರಹ ಗುರಿಯಲ್ಲಿ 2.87 ಕೋ.ರೂ. ಸಂಗ್ರಹವಾಗಿದ್ದು ಈ ವರ್ಷ 3.86 ಕೋ.ರೂ. ಗುರಿ ನೀಡಲಾಗಿದೆ.
– ಲಕ್ಷ್ಮೀ ಮಚ್ಚಿನ
Advertisement

Udayavani is now on Telegram. Click here to join our channel and stay updated with the latest news.

Next