Advertisement

ಕುಂದಾಪುರ: ಡೆಂಗ್ಯೂ ತಡೆಗೆ ಸರ್ವ ಪ್ರಯತ್ನ

08:47 AM Jul 30, 2019 | sudhir |

ಕುಂದಾಪುರ: ಕಳೆದ ತಿಂಗಳಿನಲ್ಲಿ ಕುಂದಾಪುರ ತಾಲೂಕಿನಲ್ಲಿ 17 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದವು. 6 ಮಲೇರಿಯಾ ಪ್ರಕರಣಗಳು ಸಿಕ್ಕಿದ್ದವು. ಕಳೆದ ತಿಂಗಳವರೆಗೆ ಒಟ್ಟು 58 ಎಚ್‌1ಎನ್‌1 ಪ್ರಕರಣಗಳು ಪತ್ತೆಯಾಗಿ 6 ಮಂದಿ ಮೃತಪಟ್ಟಿದ್ದರು. ಆದರೆ ತಾಲೂಕು ಆಡಳಿತ, ಆರೋಗ್ಯ ಇಲಾಖೆ ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ತೀವ್ರತರವಾದ ಕ್ರಮಗಳನ್ನು ಕೈಗೊಂಡಿದೆ. ಮಳೆಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಜ್ವರಕ್ಕಿಂತ ಈ ಬಾರಿ ಹೆಚ್ಚು ತಲ್ಲಣಗೊಳಿಸಿದ್ದು ಎಚ್‌1ಎನ್‌1 ಮಹಾಮಾರಿ. ಜತೆಗೆ ಗ್ರಾಮಾಂತರದಲ್ಲಿ ವೈದ್ಯಕೀಯ ಸಿಬಂದಿ ಕೊರತೆಯಿದೆ. ವೈದ್ಯಾಧಿಕಾರಿಗಳೇ ಎಲ್ಲ ರೀತಿಯ ಮಾಹಿತಿ ದಾಖಲೀಕರಣ ಹಾಗೂ ಚಿಕಿತ್ಸೆಗೆ ಹೆಣಗುತ್ತಿರುವುದು ಕಂಡುಬರುತ್ತಿದೆ. ಬಹುತೇಕ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಸಿಬಂದಿ ಕೊರತೆಯಿದೆ.

Advertisement

ಸಮಿತಿ ರಚನೆ
ಸಹಾಯಕ ಕಮಿಷನರ್‌ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಸಮಿತಿ ರಚಿಸಲಾಗಿದೆ. ಇದರಲ್ಲಿ ತಾಲೂಕು ಆರೋಗ್ಯಾಧಿಕಾರಿ, ಎಲ್ಲ ವೈದ್ಯಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳು, ಆರೋಗ್ಯ ಕಾರ್ಯಕರ್ತೆಯರು ಹಾಗೂ ಸ್ಥಳೀಯಾ ಡಳಿತದ ಅಧಿಕಾರಿಗಳಿದ್ದಾರೆ. ಜ್ವರ ಸಂಬಂಧಿ ಕಾರ್ಯ ಚಟುವಟಿಕೆ ಕುರಿತು ಈ ಸಮಿತಿ ನಿಗಾ ಇರಿಸಿ ಅಗತ್ಯ ಕ್ರಮ ಕೈಗೊಳ್ಳುತ್ತಿದೆ.

ಸರ್ವೆ ಮೂಲಕ ಮಾಹಿತಿ ಸಂಗ್ರಹ
ಆಶಾ ಕಾರ್ಯಕರ್ತೆಯರು ಪ್ರತಿದಿನ ಲಾರ್ವಾ ಸರ್ವೆ, ಜ್ವರ ಸರ್ವ ನಡೆಸುತ್ತಿದ್ದಾರೆ. ಜತೆಗೆ ಜ್ವರ ಪ್ರಕರಣಗಳಿದ್ದರೆ ಅವುಗಳ ಬೆನ್ನತ್ತಿ ಜ್ವರ ಇದ್ದವರು ಎಲ್ಲಿ ದಾಖಲಾಗಿದ್ದಾರೆ, ಹೇಗಿದ್ದಾರೆ ಇತ್ಯಾದಿ ಮಾಹಿತಿ ಸಂಗ್ರಹಿಸುತ್ತಾರೆ. ಖಾಸಗಿ ಆಸ್ಪತ್ರೆಗಳಿಂದಲೂ ಆರೋಗ್ಯ ಇಲಾಖೆಗೆ ಸಾಂಕ್ರಾಮಿಕ ರೋಗಗಳ ರೋಗಿ ದಾಖಲಾದರೆ ಮಾಹಿತಿ ನೀಡಲಾಗುತ್ತದೆ.

ಹೊರಗಿನಿಂದ ಬಂದವರಲ್ಲಿ ಜ್ವರ ಜಾಸ್ತಿ
ಈವರೆಗೆ ತಾಲೂಕಿನಲ್ಲಿ ಕಂಡು ಬಂದ ಜ್ವರ ಪ್ರಕರಣಗಳಲ್ಲಿ ಇಲ್ಲಿ ಆರಂಭವಾದ ಜ್ವರಕ್ಕಿಂತ ಇತರೆಡೆಯಿಂದ ಜ್ವರ ಪೀಡಿತರಾಗಿ ಬಂದು ದಾಖಲಾಗಿ ಚಿಕಿತ್ಸೆ ಪಡೆದವರ ಸಂಖ್ಯೆ ಹೆಚ್ಚು. ಈಚೆಗೆ ಕೊಲ್ಲೂರಿನಲ್ಲಿ ಪತ್ತೆಯಾದ 4 ಪ್ರಕರಣಗಳ ಪೈಕಿ 3 ಪ್ರಕರಣಗಳು ಬೆಂಗಳೂರಿನಿಂದ ಬಂದವರು. ಮತ್ತೂಬ್ಬರಿಗೆ ಹೇಗೆ ಬಂತು ಎನ್ನುವುದು ಇನ್ನೂ ನಿಖರವಾಗಿಲ್ಲ.

ಜಾಗೃತಿ
ಸಾಂಕ್ರಾಮಿಕ ರೋಗಗಳ ನಿಯಂತ್ರಣ ರಥಯಾತ್ರೆಯನ್ನು ಕುಂದಾಪುರದಲ್ಲಿ ಮೊದಲ ಬಾರಿ ಆರಂಭಿಸಲಾಗಿತ್ತು. ಈಗ ಉಡುಪಿ, ಕಾರ್ಕಳ, ಕುಂದಾಪುರದಲ್ಲಿ ವಾರಕ್ಕೆ ಎರಡು ದಿನದಂತೆ ಈ ರಥಯಾತ್ರೆ ಸಂಚರಿಸಿ ಮಾಹಿತಿ ನೀಡುತ್ತಿದೆ. ಕೊಲ್ಲೂರಿಗೆ ಶ್ರೀಲಂಕಾ ಪ್ರಧಾನಿ ಭೇಟಿಯ ಹಿಂದಿನ ದಿನ ಕೂಡಾ ಜ್ವರ ಜಾಗೃತಿ ನಡೆಸಲಾಗಿತ್ತು.

Advertisement

ಪುರಸಭೆ ವ್ಯಾಪ್ತಿ
ಪುರಸಭೆ ವ್ಯಾಪ್ತಿಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ಆರೋಗ್ಯ ಪುರುಷ ಸಹಾಯಕರನ್ನು ನಿಯೋಜಿಸಿ ಲಾರ್ವಾ, ಜ್ವರ ಸರ್ವೆ ಮಾಡಲಾಗುತ್ತಿದೆ. ಏಕೆಂದರೆ ಪುರಸಭೆ ವ್ಯಾಪ್ತಿಯಲ್ಲಿ ಆರೋಗ್ಯ ಇಲಾಖೆಯ 8 ಮಂದಿ ಆಶಾ ಕಾರ್ಯಕರ್ತೆಯರು ಮಾತ್ರ ಇರುವುದು. ಪುರಸಭೆ ಸಹಕಾರದಲ್ಲಿ ಕರಪತ್ರಗಳನ್ನು ವಿತರಿಸಲಾಗುತ್ತಿದೆ. ಪಂಚಾಯತ್‌ ವತಿಯಿಂದಲೂ ಕರಪತ್ರಗಳನ್ನು ವಿತರಿಸಲಾಗುತ್ತಿದೆ. ತಾಲೂಕಿನಾದ್ಯಂತ ಅಲ್ಲಲ್ಲಿ ಫಾಗಿಂಗ್‌ ಮಾಡಲಾಗುತ್ತಿದೆ. ಆದರೆ ಇದೇ ಪರಿಹಾರವಲ್ಲ. ಏಕೆಂದರೆ ಬಿಸಿಲು ಮಳೆ ಎಂದು ಇದ್ದರೆ ಡೆಂಗ್ಯೂ ರೋಗಾಣು ನಾಶವಾಗುವುದಿಲ್ಲ. ನಿರಂತರ ಮಳೆ ಬಂದರೆ ಡೆಂಗ್ಯೂ ಬರುವುದಿಲ್ಲ. ನೀರು ನಿಲ್ಲದಂತೆ ಜಾಗೃತಿ ಅಳವಡಿಸಿಕೊಳ್ಳಬೇಕು.

ಬೋಟ್‌ಗಳಿರುವಲ್ಲಿ
ಮುಂದಿನ ವಾರದಿಂದ ಬೋಟ್‌ಗಳು ಇರುವಲ್ಲಿ ಆರೋಗ್ಯ ಇಲಾಖೆ ತಂಡ ತೆರಳಿ ಮಾಹಿತಿ ನೀಡಲು ನಿರ್ಧರಿಸಿದೆ. ನೀರು ಸಂಗ್ರಹವಾಗುವುದು ಸೇರಿದಂತೆ ಸಾಂಕ್ರಾಮಿಕ ರೋಗಗಳ ತಡೆಗೆ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ| ನಾಗಭೂಷಣ್‌ ಉಡುಪ ಹೇಳಿದ್ದಾರೆ. 3 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಒಬ್ಬರಂತೆ ಪುರುಷ ಆರೋಗ್ಯ ಸಹಾಯಕರನ್ನು ನಿಯೋಜಿಸಿ 24 ಪಿಎಚ್‌ಸಿಗಳ ನಿರ್ವಹಣೆಯ ಜವಾಬ್ದಾರಿ ನೀಡಲಾಗಿದೆ.

ಗ್ರಾಮಾಂತರದಲ್ಲಿ
ಈ ಬಾರಿ ನಗರಕ್ಕಿಂತ ಹೆಚ್ಚು ಗ್ರಾಮಾಂತರ ಪ್ರದೇಶದಲ್ಲಿ ಡೆಂಗ್ಯೂ ಹಾಗೂ ಇತರ ಜ್ವರಬಾಧೆ ಕಾಣಿಸಿಕೊಂಡಿದೆ. ಕೆಲ ದಿನಗಳ ಹಿಂದೆ ಮರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಸಾಮೂಹಿಕ ಜ್ವರ ಕಾಣಿಸಿಕೊಂಡಿತ್ತು.

ಖಾಸಗಿಗೂ ರೋಗಿಗಳು
ಕೇವಲ ಸರಕಾರಿ ಆಸ್ಪತ್ರೆಯಷ್ಟೇ ಅಲ್ಲ ಖಾಸಗಿ ಆಸ್ಪತ್ರೆಗಳಿಗೂ ರೋಗಿಗಳು ಎಡತಾಕುತ್ತಿದ್ದಾರೆ. ವಿವಿಧ ಆಸ್ಪತ್ರೆಗಳಿಗೆ ಜ್ವರ ಪ್ರಕರಣದವರು ಭೇಟಿ ನೀಡುತ್ತಿದ್ದು ಹೆಚ್ಚಾಗಿ ಸಾಮಾನ್ಯ ಜ್ವರದವರೇ ಇದ್ದಾರೆ.

ಗಂಗೊಳ್ಳಿ : ಜ್ವರ ಪೀಡಿತರ ಸಂಖ್ಯೆ ಹೆಚ್ಚಳ
ಗಂಗೊಳ್ಳಿ: ಬಂದರು ಪ್ರದೇಶವನ್ನು ಹೊಂದಿರುವ ಗಂಗೊಳ್ಳಿ ಭಾಗದಲ್ಲಿ ಸಾಮಾನ್ಯ ಜ್ವರ ಪೀಡಿತರ ಸಂಖ್ಯೆ ಹೆಚ್ಚಿದೆ. ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರತಿ ನಿತ್ಯ ನೂರಕ್ಕೂ ಮಿಕ್ಕಿ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯಕ್ಕೆ ಗಾಬರಿ ಪಡುವ ಅಗತ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ಈಗಾಗಲೇ ಎಲ್ಲ ರೀತಿಯ ಜ್ವರಗಳಿಗೆ ಸಂಬಂಧಿಸಿದಂತೆ ಎಲ್ಲ ರೀತಿಯ ಔಷಧಗಳನ್ನು ದಾಸ್ತಾನು ಇರಿಸಲಾಗಿದ್ದು, ಸದ್ಯಕ್ಕೆ ಔಷಧಗಳ ಕೊರತೆಯಿಲ್ಲ. ಆದರೆ ಈಗ ಸಾಂಕ್ರಾಮಿಕ ರೋಗಗಳು ಹರಡುವ ಸೀಸನ್‌ ಆಗಿರುವುದರಿಂದ ಆಸ್ಪತ್ರೆಯಲ್ಲಿ ಸಿಬಂದಿ ಕೊರತೆಯಿಂದ ಸಮಸ್ಯೆಯಾಗುತ್ತಿದೆ.
ಸಂಬಂಧಪಟ್ಟ ಇಲಾಖೆಯವರು ಈ ಬಗ್ಗೆ ಶೀಘ್ರ ಸ್ಪಂದಿಸಿ, ಆದ್ಯತೆ ಮೇರೆಗೆ ತಾತ್ಕಾಲಿಕವಾಗಿಯಾದರೂ ಬದಲಿ ವ್ಯವಸ್ಥೆ ಮಾಡಲಿ ಎನ್ನುವುದು ಜನರ ಆಗ್ರಹವಾಗಿದೆ.

ಸ್ವತ್ಛತೆ ಕಾಪಾಡಿ
ಇದು ಮೀನುಗಾರಿಕಾ ಚಟುವಟಿಕೆ ನಡೆಯುವ ಪ್ರದೇಶವಾಗಿರುವುದರಿಂದ ಇಲ್ಲಿನ ಬಂದರು, ಮನೆಯ ಸುತ್ತಮುತ್ತಲಿನ ಪ್ರದೇಶ, ನೀರು ಹರಿದು ಹೋಗುವ ಕಡೆಗಳಲ್ಲಿ ಸ್ವತ್ಛತೆಗೆ ಹೆಚ್ಚಿನ ಆದ್ಯತೆ ಕೊಡಬೇಕಾಗಿದೆ. ಕೊಳಚೆ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕಾಗಿದೆ. ತೋಡು, ನದಿಗೆ ಕಸ, ತ್ಯಾಜ್ಯ, ಕೊಳಚೆ ನೀರು ಹರಿದು ಹೋಗದಂತೆ ಮುನ್ನೆಚ್ಚರಿಕೆ ವಹಿಸಬೇಕಾಗಿರುವುದು ಅತ್ಯಗತ್ಯವಾಗಿದೆ. ಇನ್ನು ವಿಲೇವಾರಿಗೂ ಸಮರ್ಪಕವಾದ ವ್ಯವಸ್ಥೆ ಇಲ್ಲದಿರುವುದರಿಂದ ರಸ್ತೆ ಬದಿ ಅಥವಾ ಮದಗ, ಕೆರೆಗಳು, ಸಮುದ್ರ ತೀರಕ್ಕೆ ಕಸ ಎಸೆಯುತ್ತಿದ್ದು, ಇದಕ್ಕೂ ಕಡಿವಾಣ ಹಾಕಬೇಕಾಗಿದೆ.

ತತ್‌ಕ್ಷಣ ಕ್ರಮ
ಜ್ವರ ಪ್ರಕರಣಗಳು ಕಂಡು ಬಂದರೆ ತತ್‌ಕ್ಷಣ ಕ್ರಮ ಕೈಗೊಳ್ಳಲಾಗುತ್ತಿದೆ. ಇದಕ್ಕಾಗಿ ಕ್ರಿಯಾಶೀಲ ವೈದ್ಯಕೀಯ ತಂಡವೇ ನಮ್ಮಲ್ಲಿದೆ. ವೈದ್ಯಾಧಿಕಾರಿಗಳು, ಆರೋಗ್ಯ ಇಲಾಖೆ ಸಿಬಂದಿ, ಪಂ.ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದ್ದರಿಂದಲೇ ಡೆಂಗ್ಯೂ ಅವಘಡಗಳು ತೀವ್ರತೆರನಾಗಿ ಬಾಧಿಸಿಲ್ಲ.
-ಡಾ| ನಾಗಭೂಷಣ್‌ ಉಡುಪ,
ತಾ| ಆರೋಗ್ಯಾಧಿಕಾರಿ ಹಾಗೂ ತಾ.ಪಂ. ಕಾರ್ಯನಿರ್ವಹಣಾಧಿಕಾರಿ (ಪ್ರಭಾರ)

ಸ್ವತ್ಛತೆಗೆ ಆದ್ಯತೆ
ಪುರಸಭೆ ವ್ಯಾಪ್ತಿಯಲ್ಲಿ ಅಂಗಡಿ, ಹೊಟೇಲ್‌ ಮಾಲಕರು ಸಹಕರಿಸುತ್ತಿದ್ದಾರೆ. ಆದರೆ ಎಲ್ಲೆಲ್ಲಿಂದಲೋ ತಂದು ಅವೇಳೆಯಲ್ಲಿ ಕಸ ಎಸೆಯುವವರೇ ಸಮಸ್ಯೆಯಾಗುತ್ತಿದ್ದಾರೆ. ಸ್ವತ್ಛತೆಗೆ ಆದ್ಯತೆ ನೀಡಲಾಗುತ್ತಿದೆ. ಲಾರ್ವಾ ಸರ್ವೆ ನಡೆಯುತ್ತಿದೆ. ಕೊಳಚೆ ನಿಲ್ಲುವಲ್ಲಿ ತೆಗೆಯಲಾಗಿದೆ.
– ಗೋಪಾಲಕೃಷ್ಣ ಶೆಟ್ಟಿ, ಮುಖ್ಯಾಧಿಕಾರಿ, ಪುರಸಭೆ

58 ಎಚ್‌1ಎನ್‌1,
17 ಡೆಂಗ್ಯೂ,
6 ಮಲೇರಿಯಾ

ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಂಡು ಬಂದ ಡೆಂಗ್ಯೂ ವಿವರ ಹೀಗಿದೆ : ಬೆಳ್ವೆ 1, ಹಕ್ಲಾಡಿ 1, ಹಾಲಾಡಿ 2, ಕಂಡೂÉರು 2, ಕೊಲ್ಲೂರು 4, ಕೊರ್ಗಿ 1, ಶಂಕರನಾರಾಯಣ 2, ಶಿರೂರು 3, ವಂಡ್ಸೆ 1.
ಮಲೇರಿಯಾ ಪ್ರಕರಣಗಳು: ಕೋಡಿ 1, ಶಿರೂರು 1, ಗಂಗೊಳ್ಳಿ 1, ವಂಡ್ಸೆ 1, ಕೊಲ್ಲೂರು1 , ಬೈಂದೂರು 1.

ಎಚ್‌1ಎನ್‌1 ಪ್ರಕರಣಗಳು: ಆಲೂರು 4, ಬಸೂÅರು 3, ಬೆಳ್ವೆ 5, ಗಂಗೊಳ್ಳಿ 1, ಹಾಲಾಡಿ 4, ಕೊಲ್ಲೂರು 1, ಕೊರ್ಗಿ 1, ಮರವಂತೆ 1, ನಾಡಾ 2, ಶಂಕರನಾರಾಯಣ 1, ಶಿರೂರು 5, ಸಿದ್ದಾಪುರ 5, ವಂಡ್ಸೆ 1, ಕೋಡಿ 2, ಕೋಟೇಶ್ವರ 3, ಕಂಡೂÉರು 3, ಬೈಂದೂರು 4, ಕುಂದಾಪುರ
ಸರಕಾರಿ ಆಸ್ಪತ್ರೆ 12.

ಎಚ್‌1ಎನ್‌1 ಮೃತರ ವಿವರ: ಬಸೂÅರು 2, ಕೊರ್ಗಿ 1,
ನಾಡಾ 1, ಸಿದ್ದಾಪುರ 1.

Advertisement

Udayavani is now on Telegram. Click here to join our channel and stay updated with the latest news.

Next