Advertisement

ಕುಂದಾಪುರ: ಕಲಿಕೆಗೊಂದು ವೇದಿಕೆ ರಜಾ ಶಿಬಿರ

08:33 PM May 02, 2019 | Sriram |

ಕುಂದಾಪುರ: ಒಂದಷ್ಟು ಮಕ್ಕಳು ಮಡಕೆ ಮಾಡುವುದನ್ನು ಕಲಿಯುತ್ತಿದ್ದರು. ಮತ್ತೂಂದಷ್ಟು ಮಂದಿ ಕಾಗದದ ಚೂರುಗಳನ್ನು ಹಿಡಿದು ಅವುಗಳಲ್ಲಿ ಚಿತ್ರ, ವಿಚಿತ್ರ ಎಂದು ಚಿತ್ತಾರ ಮಾಡುತ್ತಿದ್ದರು. ಮತ್ತೆ ಕೆಲವರು ಕಥೆ ಕವನ ಎಂದು ಬರೆಯುತ್ತಿದ್ದರು. ಮತ್ತೂಂದಷ್ಟು ಮಂದಿ ನಾಟಕ ತಾಲೀಮು ನಡೆಸುತ್ತಿದ್ದರು. ಇದು ಇಲ್ಲಿನ ಶಾಸ್ತ್ರಿ ಪಾರ್ಕ್‌ನ ಬಾಲಭವನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬಾಲಭವನ ಸೊಸೈಟಿ, ಸಮುದಾಯ ಕುಂದಾಪುರ, ಜೆಸಿಐ ಕುಂದಾಪುರ ವತಿಯಿಂದ ನಡೆಯುತ್ತಿರುವ ರಂಗ ರಂಗು ರಜಾ ಮೇಳ ಬೇಸಗೆ ಶಿಬಿರದಲ್ಲಿ ಕಂಡು ಬಂದ ಮಕ್ಕಳ ಕಲರವದ ದೃಶ್ಯ.

Advertisement

ಪ್ರೋತ್ಸಾಹ
ರಜಾದಿನಗಳಲ್ಲಿನ ಸಮಯ ಪೋಲು ಮಾಡುವ ಬದಲು ಇಲ್ಲಿ ಮಕ್ಕಳ ಅರಿವನ್ನು ಒರೆಗೆ ಹಚ್ಚುವ ಕಾಯಕ ನಡೆಯುತ್ತಿದೆ. ಪ್ರತಿಯೊಂದನ್ನೂ ಪ್ರಶ್ನಿಸುವ ಮನೋಭಾವ ಬೆಳೆಸುತ್ತಾ, ಮಕ್ಕಳಲ್ಲಿ ವಿಜ್ಞಾನದ ಕುತೂಹಲವನ್ನು ಇಮ್ಮಡಿಗೊಳಿಸುತ್ತಾ, ಕೆಲವೊಂದು ವಿಚಾರಗಳನ್ನು ಹೇಳಿಕೊಡಲಾಗುತ್ತಿದೆ. ಅವರಲ್ಲಿನ ಆಸಕ್ತಿಗೆ ನೀರೆರೆದು ಪ್ರತಿಭಾ ಪ್ರೋತ್ಸಾಹ ನೀಡುವುದೇ ಶಿಬಿರದ ಉದ್ದೇಶ.

ಮಡಕೆ ಮಾಡುವ ತರಬೇತಿ
ಆಲೂರಿನ ರಘು ಕುಲಾಲ್‌ ಅವರು ಮಕ್ಕಳಿಗೆ ಮಡಕೆ ಮಾಡುವ ಕುರಿತು ತರಬೇತಿ, ಪ್ರಾತ್ಯಕ್ಷಿಕೆ ನೀಡುತ್ತಿದ್ದರು. ಅವರು ಬೆಂಗಳೂರು, ಮೈಸೂರು, ಮಂಗಳೂರು ಎಂದು ರಾಜ್ಯದ ವಿವಿಧೆಡೆ ಐಟಿ ಕಂಪನಿ ಉದ್ಯೋಗಿಗಳು ಸೇರಿದಂತೆ ವಿವಿಧೆಡೆ ಮಡಕೆ ತಯಾರಿಯ ಪ್ರಾತ್ಯಕ್ಷಿಕೆ ನಡೆಸುತ್ತಾರೆ. ಮಣ್ಣಿನ ಆಭರಣಗಳನ್ನು ರಚಿಸುತ್ತಾರೆ. ವೈವಿಧ್ಯಮಯ ಮಡಿಕೆ, ಹೂಜಿ ಎಂದು ಮಣ್ಣಿನ ಉತ್ಪನ್ನಗಳಲ್ಲಿ ಮೌಲ್ಯವರ್ಧಿತ ಉತ್ಪನ್ನಗಳಾಗಿಸಿ ಅವುಗಳಿಗೊಂದು ಮಾರುಕಟ್ಟೆ ಒದಗಿಸುವುದು ಹೇಗೆ ಎನ್ನುವುದನ್ನು ಕಲಿಸುತ್ತಾರೆ. ಸಾಂಪ್ರದಾಯಿಕ ತಿರುಗುವ ಚಕ್ರದ ಬದಲು ಸೋಲಾರ್‌ ಕರೆಂಟ್‌ ಮೂಲಕ ಚಲಿಸುವ ಮೋಟಾರ್‌ ಕೂಡಿಸಿ ಚಕ್ರ ತಿರುಗಿಸಿ ಮಡಕೆ ತಯಾರಿಸುತ್ತಾರೆ.

ಕವನ ಸಂಕಲನ
ಮಕ್ಕಳೇ ಬರೆದ ಕವನಗಳನ್ನು ಸಂಕಲನ ಮಾಡಿ ಗಾಂಧಿ ಪಾರ್ಕಿನ ಹೊಸ ಹೂಗಳು ಎಂಬ ಶೀರ್ಷಿಕೆಯಲ್ಲಿ ಸಮುದಾಯ ಕುಂದಾಪುರ ಸಂಸ್ಥೆ ಮೂಲಕ ಮುದ್ರಣ ಮಾಡಲಾಗುತ್ತಿದೆ. ಈ ಮೂಲಕ ಮಕ್ಕಳ ಸಾಹಿತ್ಯ ಚಟುವಟಿಕೆಗೆ ಪ್ರೇರಣೆ ನೀಡಲಾಗುತ್ತಿದೆ.

ಮೌಡ್ಯ ಮರೆಸುವ ಕಾರ್ಯ
ನಾಲಗೆಯಲ್ಲಿ ಕರ್ಪೂರ ಉರಿಯುವುದು, ಅಂಗೈಯಲ್ಲಿ ಕರ್ಪೂರ ಉರಿಸುವುದು, ಅರಶಿನ ನೀರಲ್ಲಿ ಸಾಬೂನು ಮುಳುಗಿಸಿದಾಗ ಕೆಂಪಾಗುವುದು, ಆ ಕೆಂಪು ನೀರಿಗೆ ನಿಂಬೆ ಹಣ್ಣಿನ ರಸ ಹಾಕಿದಾಗ ಮತ್ತೆ ಅರಿಶಿನ ಬಣ್ಣ ಬರುವ ಚೋದ್ಯದ ಕುರಿತು ಉದಯ್‌ ಗಾಂವ್ಕರ್‌ ವಿವರಿಸಿದರು. ಕಸದಿಂದ ರಸ ಎಂಬಂತೆ ಕತ್ತರಿಸಿದ ಕಾಗದದ ಚೂರುಗಳಿಂದ ಕಲಾತ್ಮಕ ರಚನೆ ಮಾಡುವುದು ಹೇಗೆಂದು ಮಲ್ಲೇಶ್‌ ಕಂಬಾರ್‌ ಹೇಳಿಕೊಟ್ಟರು. ಸೃಜನಶೀಲ ಚಟುವಟಿಕೆಗಳಿಗೆ ಅಶೋಕ್‌ ತೆಕ್ಕಟ್ಟೆ, ಉದಯ ಶೆಟ್ಟಿ ಪಡುಕೆರೆ ಮೊದಲಾದವರ ತಂಡವೇ ಮಾರ್ಗದರ್ಶಿಯಾಗುತ್ತಿದೆ. ರಂಗಕರ್ಮಿ ವಾಸುದೇವ ಗಂಗೇರ ಅವರು ಮೇಳದ ಒಟ್ಟೂ ಸ್ವರೂಪಕ್ಕೆ ಒಂದು ದಿಕ್ಸೂಚಿಯಾಗಬಲ್ಲ ರಂಗತಾಲೀಮು ಹೇಳಿಕೊಡುತ್ತಿದ್ದಾರೆ.

Advertisement

ಶಿಬಿರದ ಕೊನೆಯ ದಿನ ಈ ನಾಟಕದ ಪ್ರದರ್ಶನ ಇದ್ದು, ಪಾರ್ವತಿ ಐತಾಳ್‌ ಅವರು ಬರೆದ ತಂತ್ರಗಾರ್ತಿ ಹಾಗೂ ಉದಯ್‌ ಗಾಂವ್ಕರ್‌ ಅವರ ನಾಟಕದ ತರಬೇತಿ ನಡೆಯುತ್ತಿದೆ. ಕಾರ್ಮಿಕ ದಿನದಂದು ಮಕ್ಕಳ ಸಂತೆ, ಮೇ 4ರಂದು ಸೀತಾನದಿ ಕಾಡಿಗೆ ಪಯಣ ನಡೆಯಲಿದ್ದು ಮೇ 6ರಂದು ಶಿಬಿರ ಸಮಾಪನಗೊಳ್ಳಲಿದೆ.

ಶಿಬಿರದಲ್ಲಿ ವಲಸೆ ಕಾರ್ಮಿಕರ 16 ಮಕ್ಕಳು, ಸರಕಾರಿ ಶಾಲೆಯ 40 ಮಕ್ಕಳು ಸೇರಿ ಒಟ್ಟು 114 ಮಕ್ಕಳಿದ್ದಾರೆೆ. 2ನೇ ತರಗತಿಯಿಂದ ಪ್ರಥಮ ಪಿಯುಸಿವರೆಗಿನ ಮಕ್ಕಳಿದ್ದಾರೆ.

ಕಲಿಕೆಗೆ ಅವಕಾಶ
ಸತತ ಎಂಟನೇ ವರ್ಷ ಶಿಬಿರ ನಡೆಯುತ್ತಿದೆ. ಅಷ್ಟೂ ವರ್ಷಗಳಿಂದ ಭಾಗವಹಿಸುತ್ತಿರುವ ಮಕ್ಕಳೂ ಇದ್ದಾರೆ. ಚಟುವಟಿಕೆಯಿಂದ ತೊಡಗಿಸಿಕೊಂಡಿದ್ದಾರೆ. ಮನರಂಜನೆ ಜತೆ ಕಲಿಕೆ, ಪ್ರತಿಭೆಗೆ ಪ್ರೋತ್ಸಾಹ, ಪ್ರತಿಭೆಗೆ ಒಂದು ಸ್ಪಷ್ಟ ದಿಕ್ಸೂಚಿ ಈ ಶಿಬಿರದ ಮೂಲಕ ಸಾಕಾರವಾಗುತ್ತಿದೆ.
-ಸದಾನಂದ ಬೈಂದೂರು,
ಕ್ಷೇತ್ರ ಸಂಪನ್ಮೂಲ ವ್ಯಕ್ತಿ,ಶಿಕ್ಷಣ ಇಲಾಖೆ

ಖುಷಿ ಕೊಡುತ್ತಿದೆ
ಶಿಬಿರ ಖುಷಿ ಕೊಡುತ್ತಿದೆ. ಕಲಿಕೆಗೆ ಅಪಾರ ಅವಕಾಶ ಇದೆ.
– ಅಕ್ಷರ,ಶಿಬಿರಾರ್ಥಿ

Advertisement

Udayavani is now on Telegram. Click here to join our channel and stay updated with the latest news.

Next