Advertisement

ಕುಂದಾಪುರ: 1,239 ಪ್ರಕರಣ 6.73 ಲಕ್ಷ ರೂ. ದಂಡ

11:17 PM Sep 21, 2019 | Sriram |

ಕುಂದಾಪುರ: ಹೊಸ ಮೋಟಾರು ವಾಹನ ಕಾಯ್ದೆ ಜಾರಿಯಾದ ಬಳಿಕ ಅಂದರೆ ಸೆ. 5ರ ಅನಂತರದಿಂದ ಸೆ. 20ರ ವರೆಗೆ ಕುಂದಾಪುರ ಉಪ ವಿಭಾಗ ವ್ಯಾಪ್ತಿಯಲ್ಲಿ ಒಟ್ಟು 1,239 ಪ್ರಕರಣ ದಾಖಲಾಗಿದ್ದು, 6,73,700 ರೂ. ದಂಡ ವಿಧಿಸಲಾಗಿದೆ. ಈ ಪೈಕಿ ಸೆ. 16ರಂದು ಗರಿಷ್ಠ 241 ಕೇಸು ದಾಖಲಾಗಿದ್ದು, 1.51 ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ.

Advertisement

ರಾಜ್ಯದಲ್ಲಿ ಹೊಸ ಸಾರಿಗೆ ನಿಯಮ ಜಾರಿಯಾದ ಬಳಿಕ ದಂಡ ಉಲ್ಲಂಘನೆ ಮಾಡುತ್ತಿರುವ ವಾಹನ ಸವಾರರ ಬಗ್ಗೆ ಪೊಲೀಸರಿಂದ ಕಾರ್ಯಾಚರಣೆ ಚುರುಕು ಗೊಂಡಿದೆ. ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ದಂಡದ ಪ್ರಮಾಣವೂ ಏರಿಕೆಯಾಗಿದೆ.

ಎಚ್ಚೆತ್ತುಕೊಳ್ಳುತ್ತಿರುವ ಸವಾರರು
ದಂಡದ ಪ್ರಮಾಣ ಹೆಚ್ಚಳವಾಗುತ್ತಿದ್ದಂತೆ ವಾಹನ ಸವಾರರು ಕೂಡ ಈಗೀಗ ಎಚ್ಚೆತ್ತು ಕೊಳ್ಳುತ್ತಿದ್ದಾರೆ. ಹೆಲ್ಮೆಟ್‌ ಧರಿಸದಿದ್ದವರು ಈಗ ಧರಿಸುತ್ತಿದ್ದಾರೆ, ಸೀಟ್‌ ಬೆಲ್ಟ್ ಉಲ್ಲಂಘನೆ, ವಿಮೆ ಪಾವತಿ ಇನ್ನಿತರ ನಿಯಮ ಉಲ್ಲಂಘನೆ ಮಾಡು ತ್ತಿರುವವರ ಸಂಖ್ಯೆ ಇಳಿಮುಖವಾಗುತ್ತಿದೆ. ಚಾಲನಾ ಪರವಾನಿಗೆ ಇಲ್ಲದವರು ಹೊಸದಾಗಿ ಪರವಾನಿಗೆ ಮಾಡಿಸಿಕೊಳ್ಳಲು ಮುಂದಾಗಿದ್ದು, ಹೊಗೆ ತಪಾಸಣೆಗೂ ಮುಗಿಬೀಳುತ್ತಿರುವುದು ಕಂಡುಬರುತ್ತಿದೆ.

ಹೆಲ್ಮೆಟ್‌ ರಹಿತವೇ ಹೆಚ್ಚು
ಕಳೆದ 15 ದಿನಗಳಲ್ಲಿ ವಿಧಿಸಿರುವ ಒಟ್ಟು 1,239 ಪ್ರಕರಣಗಳ ಪೈಕಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್‌ರಹಿತವಾಗಿ ಚಲಾಯಿಸಿದ ಪ್ರಕರಣವೇ ಹೆಚ್ಚಿದೆ. ಕಳೆದ 4 ದಿನಗಳಲ್ಲಿ ಹೆಲ್ಮೆಟ್‌ರಹಿತ ದ್ವಿಚಕ್ರ ವಾಹನ ಚಲಾಯಿಸಿದ 81 ಪ್ರಕರಣಗಳು ಕುಂದಾಪುರ ಉಪ ವಿಭಾಗ ವ್ಯಾಪ್ತಿಯಲ್ಲಿ ದಾಖಲಾಗಿವೆ.

ಯಾವ್ಯಾವ ದಿನ ಎಷ್ಟೆಷ್ಟು?
ಉಡುಪಿ ಜಿಲ್ಲೆಯಲ್ಲಿ ಸೆ. 5ರಿಂದ ಈ ನಿಯಮ ಜಾರಿಗೆ ಬಂದಿದೆ. ಸೆ. 5ರಂದು 71 ಪ್ರಕರಣ, 15,200 ರೂ. ದಂಡ; ಸೆ. 6ರಂದು 46 ಪ್ರಕರಣ, 24,500 ರೂ. ದಂಡ; ಸೆ. 7ರಂದು 92 ಪ್ರಕರಣ, 52,800 ರೂ.; ಸೆ. 8ರಂದು 27 ಪ್ರಕರಣ, 14,100 ರೂ.; ಸೆ. 9ರಂದು 90 ಪ್ರಕರಣ, 54,100 ರೂ. ದಂಡ; ಸೆ. 11ರಂದು 85 ಪ್ರಕರಣ, 49,200 ರೂ. ದಂಡ; ಸೆ.12ರಂದು 53 ಪ್ರಕರಣ, 32, 500 ರೂ. ದಂಡ; ಸೆ. 13ರಂದು 69 ಪ್ರಕರಣ, 37,400 ರೂ. ದಂಡ; ಸೆ. 14ರಂದು 39,000 ರೂ. ದಂಡ ವಿಧಿಸಲಾಗಿದೆ.

Advertisement

ಕುಂದಾಪುರ ಉಪ ವಿಭಾಗ ವ್ಯಾಪ್ತಿಯ ವಿವಿಧ ಠಾಣೆಗಳಲ್ಲಿ ಸೆ.16ರ ಒಂದೇ ದಿನದಲ್ಲಿ ಗರಿಷ್ಠ 241 ಪ್ರಕರಣಗಳು ದಾಖಲಾಗಿವೆ. ಆ ದಿನ ವಿಧಿಸಿದ ದಂಡದ ಮೊತ್ತ ಬರೋಬ್ಬರಿ 1.51 ಲಕ್ಷ ರೂ. ಅದರಲ್ಲೂ ಬೈಂದೂರು ಠಾಣೆಯ ವ್ಯಾಪ್ತಿಯೊಂದರಲ್ಲಿಯೇ ಆ ದಿನ ಗರಿಷ್ಠ 57 ಪ್ರಕರಣ ದಾಖಲಾಗಿದ್ದು, 54,700 ರೂ. ದಂಡ ಸಂಗ್ರಹಿಸಿದ್ದಾರೆ.

ಜನರಲ್ಲಿ ಜಾಗೃತಿ
ಜನರ ಹಿತದೃಷ್ಟಿಯಿಂದ ನಾವು ಈ ಹೊಸ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿದ್ದೇವೆ. ಈಗೀಗ ವಾಹನ ಸವಾರರಿಗೂ ಜಾಗೃತಿ ಮೂಡುತ್ತಿದ್ದು, ಇದರಿಂದ ದಿನೇ ದಿನೇ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆ. ಮೊದಲಿಗೆ ದ್ವಿಚಕ್ರ ವಾಹನ, ನಾಲ್ಕು ಚಕ್ರ ವಾಹನಗಳು, ಅನಂತರ ಘನ ವಾಹನಗಳು ಹೀಗೆ ಹಂತ – ಹಂತವಾಗಿ ತಪಾಸಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.
-ಹರಿರಾಂ ಶಂಕರ್‌, ಎಎಸ್ಪಿ ಕುಂದಾಪುರ

-ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next