Advertisement

ಕುಂದಲಹಳ್ಳಿ ಅಂಡರ್‌ಪಾಸ್‌ ಕೆಲಸ ಚುರುಕು

12:22 AM Sep 29, 2019 | Lakshmi GovindaRaju |

ಬೆಂಗಳೂರು: ಆರು ತಿಂಗಳಿಂದ ನನೆಗುದಿಗೆ ಬಿದ್ದಿದ್ದ ಕುಂದಲಹಳ್ಳಿ ಜಂಕ್ಷನ್‌ ಅಂಡರ್‌ಪಾಸ್‌ ಕಾಮಗಾರಿಗೆ ಮತ್ತೆ ಚಾಲನೆ ದೊರೆತಿದೆ. ಮುಖ್ಯಮಂತ್ರಿಯವರ ನಗರ ಪ್ರದಕ್ಷಿಣೆ ನಂತರ ಚುರುಕುಗೊಂಡಿದೆ. ಮಾರ್ಚ್‌ನಲ್ಲಿ ಕುಂದಲಹಳ್ಳಿ ಜಂಕ್ಷನ್‌ ಅಂಡರ್‌ಪಾಸ್‌ ಕಾಮಗಾರಿಗೆ ಚಾಲನೆ ನೀಡಿ ಆರು ತಿಂಗಳ ಗುಡುವು ನೀಡಿದ್ದರೂ ಕಾಮಗಾರಿಯಲ್ಲಿ ಪ್ರಗತಿ ಕಂಡಿರಲಿಲ್ಲ. ಭೂಸ್ವಾಧೀನ ಸಮಸ್ಯೆ ಹಾಗೂ ಸ್ಥಳೀಯರ ಪರ್ಯಾಯ ರಸ್ತೆ ಬೇಡಿಕೆಗಳಿಂದ ಕಾಮಗಾರಿ ಆಮೆ ವೇಗದಲ್ಲಿ ನಡೆಯುತ್ತಿತ್ತು.

Advertisement

ಇತ್ತೀಚೆಗೆ ಮುಖ್ಯಮಂತ್ರಿಯವರು ಸ್ಥಳಕ್ಕೆ ಭೇಟಿ ನೀಡಿ ಭೂಸ್ವಾಧೀನಕ್ಕೆ ಅಗತ್ಯವಿರುವ ಅಂದಾಜು 42 ಕೋಟಿ ರೂ.ಗಳನ್ನು ಶೀಘ್ರ ಬಿಡುಗಡೆ ಮಾಡುವುದಾಗಿ ಭರವಸೆ ನೀಡುತ್ತಿದ್ದಂತೆ ಕಾಮಗಾರಿ ವೇಗ ಪಡೆದುಕೊಂಡಿದೆ. ಈ ಹಿಂದೆ ಕುಂದಲಹಳ್ಳಿ ಜಂಕ್ಷನ್‌ನಲ್ಲಿ ಅಂಡರ್‌ಪಾಸ್‌ ಕಾಮಗಾರಿಗೆ 20 ಕೋಟಿ ರೂ. ಮೀಸಲಿಟ್ಟು, ಭೂಸ್ವಾಧೀನ ಪ್ರಕ್ರಿಯೆಗೆ 20 ಕೋಟಿ ರೂ. ವೆಚ್ಚ ಮಾಡಲಾಗಿತ್ತು. ಇದೀಗ ಭೂ ಸ್ವಾಧೀನಕ್ಕೆ ಹೆಚ್ಚುವರಿ ಹಣದ ಅಗತ್ಯ ಇರುವುದರಿಂದ 42 ಕೋಟಿ ರೂ. ಬಿಡುಗಡೆಗೆ ಮನವಿ ಮಾಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಕುಂದಲಹಳ್ಳಿ ಜಂಕ್ಷನ್‌ ಅಂಡರ್‌ಪಾಸ್‌ 50 ಮೀಟರ್‌ ಅಗಲವಿದ್ದು, (ಅಂಡರ್‌ಪಾಸ್‌ನ ಮುಖ್ಯ ಭಾಗ ಬಾಕ್ಸ್‌), ಒಂದು ಪಾರ್ಶ್ವದಲ್ಲಿ 135 ಮೀಟರ್‌ ಮತ್ತೂಂದು ಪಾರ್ಶ್ವದಲ್ಲಿ 95 ಮೀಟರ್‌ ಉದ್ದದ ರ್‍ಯಾಂಪ್‌ ಇರಲಿದೆ. ಎರಡೂ ಬದಿಯ ಸವೀರ್ಸ್‌ ರಸ್ತೆ 7.5 ಮೀಟರ್‌ ಹಾಗೂ ಪಾದಚಾರಿ ಮಾರ್ಗಗಳು 2.5 ಮೀಟರ್‌ ಗಲ ಇರಲಿವೆ. ಅಂಡರ್‌ಪಾಸ್‌ 311.14 ಮೀ. ಉದ್ದವಿರಲಿದೆ ಎಂದು ಹೇಳಿದರು.

ವೈಟ್‌ಫೀಲ್ಡ್‌, ಮಾರತ್ತಹಳ್ಳಿ ಮತ್ತು ಕುಂದಲಹಳ್ಳಿ ಸುತ್ತಲ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿರುವುದರಿಂದ ಕುಂದಲಹಳ್ಳಿ ಜಂಕ್ಷನ್‌ ಅಂಡರ್‌ಪಾಸ್‌ ಕಾಮಗಾರಿಯನ್ನು ಇದೇ ವರ್ಷದ ಮಾರ್ಚ್‌ ತಿಂಗಳಲ್ಲಿ ಕೈಗೆತ್ತಿಕೊಳ್ಳಲಾಗಿತ್ತು. ಮಾರತ್‌ಹಳ್ಳಿಯಿಂದ ವರ್ತೂರು ಕೋಡಿ ಹಾಗೂ ವರ್ತೂರೂ ಕೋಡಿಯಿಂದ ಮಾರತ್‌ಹಳ್ಳಿಯ ನಡುವಿನ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಅಂಡರ್‌ಪಾಸ್‌ ನಿರ್ಮಿಸುವುದು ಮಹತ್ವ ಪಡೆದುಕೊಂಡಿದೆ.

ದಟ್ಟಣೆಯ ಕೇಂದ್ರಬಿಂದು: “ಕುಂದಲಹಳ್ಳಿ ಜಂಕ್ಷನ್‌ ಮಾರ್ಗವು ಹೊರವರ್ತುಲ ರಸ್ತೆ, ಐಟಿಪಿಎಲ್‌, ವರ್ತೂರು ರಸ್ತೆ ಸೇರಿದಂತೆ ವಿವಿಧ ಪ್ರಮುಖ ರಸ್ತೆಗಳಿಗೆ ಸಂರ್ಪಕ ಕಲ್ಪಿಸುತ್ತದೆ. ಅದೇ ರೀತಿ ಈ ಭಾಗದಲ್ಲಿ ಹಲವು ಅಂತಾರಾಷ್ಟ್ರೀಯ ಕಂಪನಿಗಳು ಹಾಗೂ ಮಾಲ್‌ಗ‌ಳು ಇರುವುದರಿಂದ ಸಾವಿರಾರು ಜನ ಈ ಮಾರ್ಗವನ್ನೇ ಬಳಸುತ್ತಾರೆ. ಈ ಜಂಕ್ಷನ್‌ ಮೂಲಕ ಪ್ರತಿ ಗಂಟೆಗೆ ಅಂದಾಜು ಎರಡು ಸಾವಿರ ವಾಹನಗಳು ಹಾದುಹೋಗುತ್ತವೆ.

Advertisement

ವಾರಾಂತ್ಯದ ದಿನಗಳಲ್ಲಿ ಕಿ.ಮೀ ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ. ಮಾರತ್ತಹಳ್ಳಿ, ಶಿರಡಿ ಸಾಯಿಬಾಬಾ ಬಡಾವಣೆ ಹಾಗೂ ವೈಟ್‌ಫೀಲ್ಡ್‌ಗೆ ಹೋಗಲು ಸಾರ್ವಜನಿಕರು ಈ ಮಾರ್ಗವನ್ನೇ ಬಳಸುತ್ತಾರೆ. ಹೀಗಾಗಿ, ಸಂಚಾರ ದಟ್ಟಣೆಯನ್ನು ತಗ್ಗಿಸುವುದು ಸವಾಲಾಗಿದೆ’ ಎಂದು ಸಂಚಾರ ಪೊಲೀಸರು ಹೇಳುತ್ತಾರೆ.

ಸೆ.8ರಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ನಗರ ಪ್ರದಕ್ಷಣೆ ಮಾಡಿದ ಸಂದರ್ಭದಲ್ಲಿ ಕುಂದಲಹಳ್ಳಿ ಜಂಕ್ಷನ್‌ನ ಅಂಡರ್‌ಪಾಸ್‌ ಕಾಮಗಾರಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಕಾಮಗಾರಿ ವಿಳಂಬಕ್ಕೆ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಕಾಮಗಾರಿ ಚುರುಕು ಪಡೆದುಕೊಂಡಿದ್ದು, ಅಂಡರ್‌ಪಾಸ್‌ ಕಾಮಗಾರಿಗೆ ರಸ್ತೆ ಅಗೆಯಬೇಕಾಗಿರುವುದರಿಂದ ಇದಕ್ಕೆ ಪರ್ಯಾಯ ರಸ್ತೆಗೆ ಡಾಂಬರೀಕರಣ ಮಾಡಲಾಗುತ್ತಿದೆ.

ಈ ಭಾಗದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿರುವುದರಿಂದ ಅಂಡರ್‌ಪಾಸ್‌ ಅವಶ್ಯವಾಗಿದೆ. ಈ ವರ್ಷ ಮಾರ್ಚ್‌ನಲ್ಲಿ ಕಾಮಗಾರಿಗೆ ಚಾಲನೆ ನೀಡಿದ್ದರೂ, ಪ್ರಗತಿ ಕಂಡಿರಲಿಲ್ಲ. ಮುಖ್ಯಮಂತ್ರಿಗಳ ಭೇಟಿ ನಂತರ ಕಾಮಗಾರಿ ವೇಗವಾಗಿ ನಡೆಯುತ್ತಿದೆ.
-ಶ್ವೇತಾ ವಿಜಯಕುಮಾರ್‌, ದೊಡ್ಡನೆಕ್ಕುಂದಿ ವಾರ್ಡ್‌ ಸದಸ್ಯೆ

* ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next