Advertisement

ಕುಂದಗೋಳ ಬಂಡಾಯ ಶಮನ: ಜಾರಕಿಹೊಳಿಗೆ ಜವಾಬ್ದಾರಿ

06:50 AM May 01, 2019 | Team Udayavani |

ಬೆಂಗಳೂರು: ಕುಂದಗೋಳ ವಿಧಾನಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅನುಕಂಪಕ್ಕಿಂತ ಸ್ವಪಕ್ಷೀಯರ ಬಂಡಾಯವೇ ಹೆಚ್ಚಾಗಿದ್ದು, ಮೂವರು ಬಂಡಾಯಗಾರರಾಗಿ ನಾಮಪತ್ರ ಸಲ್ಲಿಸಿದ್ದಾರೆ. ಬಂಡಾಯ ಶಮನಕ್ಕೆ ಅರಣ್ಯ ಸಚಿವ ಸತೀಶ್‌ ಜಾರಕಿಹೊಳಿಗೆ ಜವಾಬ್ದಾರಿ ವಹಿಸಲಾಗಿದೆ.

Advertisement

ಮಾಜಿ ಸಚಿವ ಸಿ.ಎಸ್‌.ಶಿವಳ್ಳಿ ಅವರ ಪತ್ನಿ ಕುಸುಮಾವತಿ ಶಿವಳ್ಳಿಗೆ ಟಿಕೆಟ್‌ ನೀಡಿರುವುದನ್ನು ವಿರೋಧಿಸಿ ಶಿವಾನಂದ ಬೆಂತೂರ್‌, ಸುರೇಶ್‌ ಸವಣೂರು ಹಾಗೂ ವಕೀಲ ನದಾಫ್ ಅವರು ಬಂಡಾಯ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಈಗಾಗಲೇ ಬಂಡಾಯ ಅಭ್ಯರ್ಥಿಗಳ ಜತೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಮಾತುಕತೆ ನಡೆಸಿ ಮನವೊಲಿಸುವ ಪ್ರಯತ್ನ ನಡೆಸಿದ್ದರು. ಆದರೂ, ಬಂಡಾಯಗಾರರು ನಾಮಪತ್ರ ವಾಪಸ್‌ ಪಡೆಯುವ ಬಗ್ಗೆ ಸ್ಪಷ್ಟ ಸಹಮತ ವ್ಯಕ್ತಪಡಿಸದ ಹಿನ್ನೆಲೆಯಲ್ಲಿ ಸತೀಶ್‌ ಜಾರಕಿಹೊಳಿ ಅವರಿಗೆ ಬಂಡಾಯ ಶಮನದ ಹೊಣೆ ವಹಿಸಲಾಗಿದೆ ಎಂದು ತಿಳಿದು ಬಂದಿದೆ.

ಮೇ 2ರಂದು ನಾಮಪತ್ರ ವಾಪಸ್‌ ಪಡೆಯಲು ಕೊನೆಯ ದಿನವಾಗಿರುವುದರಿಂದ ಸತೀಶ್‌ ಜಾರಕಿಹೊಳಿಯವರು ಬುಧವಾರ ಬಂಡಾಯ ಅಭ್ಯರ್ಥಿಗಳ ಜೊತೆ ಮಾತುಕತೆ ನಡೆಸಿ, ನಾಮಪತ್ರ ವಾಪಸ್‌ ಪಡೆಯುವಂತೆ ಮನವೊಲಿಸುವ ಪ್ರಯತ್ನ ಮಾಡುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ನಾಮಪತ್ರ ಸಲ್ಲಿಕೆಗೂ ಮೊದಲು ಸತೀಶ್‌ ಜಾರಕಿಹೊಳಿಯವರು ಕ್ಷೇತ್ರದಲ್ಲಿನ ಬಂಡಾಯದ ಬಗ್ಗೆ ಮುಖಂಡರ ಅಭಿಪ್ರಾಯ ಪಡೆದಿದ್ದು, ಬಂಡಾಯ ಅಭ್ಯರ್ಥಿಗಳು ನಾಮಪತ್ರ ವಾಪಸ್‌ ಪಡೆಯದಿದ್ದರೆ,

Advertisement

ಗೆಲುವು ಕಷ್ಟ ಎಂಬ ಮಾಹಿತಿಯನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ನೀಡಿದ್ದಾರೆ ಎನ್ನಲಾಗಿದೆ. ಅದೇ ಕಾರಣಕ್ಕೆ ಕ್ಷೇತ್ರದಲ್ಲಿನ ಬಂಡಾಯ ಶಮನ ಮಾಡುವಂತೆ ಸಿದ್ದರಾಮಯ್ಯನವರು ಸತೀಶ್‌ ಜಾರಕಿಹೊಳಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಮೇ 4ಕ್ಕೆ ಉಸ್ತುವಾರಿಗಳ ಸಭೆ: ಕುಂದಗೋಳ ಕ್ಷೇತ್ರದ ಚುನಾವಣಾ ಕಾರ್ಯತಂತ್ರ ಕುರಿತಂತೆ ಚರ್ಚಿಸಲು ಮೇ 4ರಂದು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿ ಉಸ್ತುವಾರಿಗಳ ಸಭೆ ಕರೆಯಲಾಗಿದೆ. ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕಾರ್ಯದರ್ಶಿ ಮಾಣಕ್ಯಂ ಠಾಕೂರ್‌ ಸೇರಿದಂತೆ ಉಸ್ತುವಾರಿ ಸಚಿವರು ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಸಭೆಯಲ್ಲಿ ಪಾಲ್ಗೊಳಲಿದ್ದಾರೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next