ಕೆ. ದಿನೇಶ ಗಾಂವ್ಕರ
ಕುಮಟಾ: ಪಟ್ಟಣದ ಹಲವು ಕಡೆಗಳಲ್ಲಿ ಹಗಲು, ರಾತ್ರಿ ಎನ್ನದೆ ಬೀದಿ ನಾಯಿಗಳು ನೀಡುತ್ತಿರುವ ಕಾಟದಿಂದ ವಾಹನ ಸವಾರರು ಸೇರಿದಂತೆ ಪಾದಚಾರಿಗಳು ತೊಂದರೆ ಅನುಭವಿಸುತ್ತಿದ್ದಾರೆ.
ಸಾರ್ವಜನಿಕರಿಗೆ ಕಾಟ ನೀಡುತ್ತಿರುವ ಬೀದಿನಾಯಿಗಳ ಹಾವಳಿ ನಿಯಂತ್ರಿಸುವುದು ಅಥವಾ ಅವುಗಳ ಸಂತಾನ ಶಕ್ತಿ ಹರಣದಂತಹ ಶಸ್ರ¤ಚಿಕಿತ್ಸೆಗೆ ಪುರಸಭೆ ಕ್ರಮಕೈಗೊಳ್ಳುತ್ತಿಲ್ಲ ಎಂಬುದು ಬೇಸರದ ಸಂಗತಿ.
ಹೊಸ ಬಸ್ ನಿಲ್ದಾಣದ ಸುತ್ತಮುತ್ತಲೂ, ಉಪ್ಪಾರಕೇರಿ ರಸ್ತೆ, ಹಳೆ ಮೀನು ಮಾರುಕಟ್ಟೆ, ಬಸ್ತಿಪೇಟೆ ಹಾಗೂ ಹೊಸ ಹೆರವಟ್ಟಾ ರಸ್ತೆ ಸೇರಿದಂತೆ ಪಟ್ಟಣದ ಹಲವು ಕಡೆಗಳಲ್ಲಿ ದಿನದಿಂದ ದಿನಕ್ಕೆ ನಾಯಿಗಳ ದಂಡು ಹೆಚ್ಚುತ್ತಲೇ ಇವೆ. ಆರು ವರ್ಷಗಳ ಹಿಂದೆ ಪುರಸಭೆ ಬೀದಿನಾಯಿಗಳ ನಿಯಂತ್ರಣದ ಬಗ್ಗೆ ಕೆಲ ಕ್ರಮ ಕೈಗೊಂಡಿದ್ದನ್ನು ಹೊರತುಪಡಿಸಿದರೆ, ಇತ್ತಿಚಿನ ದಿನಗಳಲ್ಲಿ ಯಾವುದೇ ಸೂಕ್ತ ಯೋಜನೆ ಜಾರಿಗೆ ತಂದಿಲ್ಲ ಎಂಬುದು ಪಟ್ಟಣ ನಿವಾಸಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಪುರಸಭೆ ಅಧಿಕಾರಿಗಳ ವಾದ: ಪಟ್ಟಣದ ಎಲ್ಲಾ ವಲಯಗಳ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಲು ಸಾಕಷ್ಟು ಹಣದ ಅವಶ್ಯಕತೆಯಿದೆ. ಶಸ್ತ್ರಚಿಕಿತ್ಸೆ ನಂತರವೂ ನಾಯಿಗಳ ಸಂತಾನ ನಿಲ್ಲುತ್ತದೆ ಎನ್ನಲು ಸಾಧ್ಯವಿಲ್ಲ ಮತ್ತು ಕಚ್ಚುವುದಿಲ್ಲ ಎಂದು ಹೇಳಲಾಗುವುದಿಲ್ಲ.
ಇದೊಂದು ರಾಜ್ಯ ವ್ಯಾಪಿ ಸಾಮಾಜಿಕ ಸಮಸ್ಯೆ. ಕೇವಲ ಪುರಸಭೆ ವತಿಯಿಂದ ನಾಯಿಗಳ ಹಾವಳಿ ನಿಯಂತ್ರಿಸಲು ಸಾಧ್ಯವಿಲ್ಲ. ಹುಚ್ಚು ಹಿಡಿದ ಹಾಗೂ ಅತೀ ವ್ಯಾಘ್ರವಾಗಿ ವರ್ತಿಸುವ ನಾಯಿಗಳ ಬಗ್ಗೆ ಮಾಹಿತಿ ದೊರೆತರೆ ತಕ್ಷಣ ನಾಶ ಪಡಿಸುವ ಯೋಜನೆ ಹಮ್ಮಿಕೊಂಡಿದ್ದೇವೆ.
ಕಚ್ಚಿದ ಬಳಿಕವೇ ಕಾರ್ಯಾಚರಣೆಗೆ ಮುಂದಾಗಬೇಕೆ?: ಜನರಿಗೆ ಕಚ್ಚಿದ ಸುದ್ದಿಯಾದಾಗ ಮಾತ್ರವೇ ಕಾರ್ಯಾಚರಣೆ ಪ್ರಾರಂಭಿಸಲು ಮುಹೂರ್ತ ಕೂಡಿಬರುತ್ತದೆಯೆ ಎಂಬ ಸಾರ್ವಜನಿಕರ ಪ್ರಶ್ನೆಗೆ ಪುರಸಭೆಯವರು ಉತ್ತರಿಸಬೇಕಾಗಿದೆ.