ಕುಮಟಾ: ವನವಾಸಿಗಳು ಸಮಾಜದಲ್ಲಿ ವಿಶೇಷ ಗೌರವ ಆದರ ಉಳಿಸಿಕೊಂಡಿದ್ದಾರೆ. ಇದರೊಟ್ಟಿಗೆ ಬಿಸಿಲು-ಮಳೆಗೆ ಧೃತಿಗೆಡದೇ ತಾಲೂಕಿನ ಕ್ರೀಡಾಳುಗಳು ವರ್ಷದಿಂದ ವರ್ಷಕ್ಕೆ ಸಾಕಷ್ಟು ಉನ್ನತ ಕ್ರೀಡಾ ಸಾಧನೆಯೊಂದಿಗೆ ಕೀರ್ತಿ ತಂದಿದ್ದಾರೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ವನವಾಸಿ ಕಲ್ಯಾಣದ ಜಿಲ್ಲಾಮಟ್ಟದ ಕ್ರೀಡಾ ಸ್ಪರ್ಧೆಯನ್ನು ಕಲಭಾಗ ವಿದ್ಯಾಗಿರಿಯ ಕೊಂಕಣ ಶಿಕ್ಷಣ ಸಂಸ್ಥೆ ಮೈದಾನದಲ್ಲಿ ರವಿವಾರ ಉದ್ಘಾಟಿಸಿ ಅವರು ಮಾತನಾಡಿದರು. ವನವಾಸಿ ಸಮುದಾಯಗಳ ಬದುಕು ಪಟ್ಟಣದಿಂದ ದೂರ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿ ಕಾಡುಮೇಡುಗಳ ನಡುವೆ ಇದ್ದರೂ ವನವಾಸಿ ಕಲ್ಯಾಣದಂತಹ ಸಂಸ್ಥೆಗಳು ವನವಾಸಿಗಳನ್ನು ಮುಖ್ಯವಾಹಿನಿಗೆ ತರುವಲ್ಲಿ ಸಾಕಷ್ಟು ಯಶಸ್ಸು ಸಾಧಿಸುತ್ತಿರುವುದು ಸಂತಸದ ಸಂಗತಿ. ವನವಾಸಿ ಕಲ್ಯಾಣದ ಸೇವಾಕಾರ್ಯಗಳು ಶ್ಲಾಘನೀಯ ಎಂದರು.
ವನವಾಸಿಗಳಲ್ಲಿ ಕ್ರೀಡಾ ಸಾಮರ್ಥ್ಯ ವಿಶೇಷವಾಗಿದೆ. ವನವಾಸಿಗಳಲ್ಲಿನ ಸುಪ್ತ ಪ್ರತಿಭೆಗಳನ್ನು ಬೆಳೆಸುವುದಕ್ಕಾಗಿ ಇಲ್ಲಿ ನಡೆಸುತ್ತಿರುವ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಎಲ್ಲ ಕ್ರೀಡಾಪಟುಗಳು ಕ್ರೀಡಾಮನೋಭಾವದಿಂದ ಭಾಗವಹಿಸಿ ಜಿಲ್ಲೆಗೆ ಕೀರ್ತಿ ತರುವಂತಾಗಲಿ ಎಂದರು. ಉದ್ಯಮಿ ವೆಂಕಟೇಶ ನಾಯಕ ಮಾತನಾಡಿ, ದೇಶ ಕಟ್ಟುವ ಕಾರ್ಯದಲ್ಲಿ ನಿರತವಾಗಿರುವ ವನವಾಸಿ ಕಲ್ಯಾಣ ಸಂಸ್ಥೆ ವ್ಯಕ್ತಿತ್ವ ನಿರ್ಮಾಣದ ಜೊತೆಯಲ್ಲಿ ದೇಶಾಭಿಮಾನವನ್ನೂ ಬೆಳೆಸುತ್ತಿದೆ. ವನವಾಸಿಗಳು ತೀರಾ ಹಿಂದುಳಿದ ಜನಾಂಗದವರಾಗಿದ್ದು, ಅವರನ್ನು ಮುಖ್ಯವಾಹಿನಿಗೆ ತರುವ ಕಾರ್ಯವನ್ನು ವನವಾಸಿ ಕಲ್ಯಾಣವು ನಡೆಸುತ್ತಿದೆ ಎಂದರು.
ಪ್ರಮುಖರಾದ ವನವಾಸಿ ಜಿಲ್ಲಾಧ್ಯಕ್ಷ ಗಿರಿಯಾ ಗೌಡ, ಬಿ.ಎಸ್. ಗೌಡ, ಚಂದ್ರಶೇಖರ ನಾಯ್ಕ, ಜಿ.ಬಿ. ಮರಾಠಿ, ದಯಾನಂದ ಶೇಟ್, ಎಂ.ಐ. ಭಟ್ಟ, ಜಯರಾಜ ಮತ್ತಿತರರು ಇದ್ದರು. ವನವಾಸಿ ಕಲ್ಯಾಣದ ಜಿಲ್ಲಾ ಕಾರ್ಯದರ್ಶಿ ಗಣೇಶ ಶಿಂಗನಕುಳಿ ಸ್ವಾಗತಿಸಿದರು. ಜಿಲ್ಲಾ ಗ್ರಾಮವಿಕಾಸ ಪ್ರಮುಖ ಶ್ರೀಧರ ಸಾಲೆಹಕ್ಕಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಯೋಗೇಶ ಪಟಗಾರ ನಿರೂಪಿಸಿದರು. ವಿಜೇತರಾದ ಕ್ರೀಡಾಪಟುಗಳಿಗೆ ಪದಕ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು.