ಕುಮಟಾ: ತಾಲೂಕಿನ ಧಾರೇಶ್ವರದ ಗೋರೆ ಗೋಪಾಲ ಕೃಷ್ಣ ದೇವಸ್ಥಾನದ ಹಂಚು ತೆಗೆದು, ದೇವಸ್ಥಾನದ ಒಳಗೆ ಇಳಿದು ಚಿನ್ನಾಭರಣ ಕಳ್ಳತನ ನಡೆಸಿದ್ದ ಆರೋಪಿಗಳನ್ನು ಕುಮಟಾ ಪೋಲಿಸರು ಬಂಧಿಸಿದ್ದಾರೆ.
ದೇವಾಲಯದ ಗರ್ಭಗುಡಿಯ ಬಾಗಿಲು ಮುರಿದು, ಟ್ರಸರಿ ಡಬ್ಬದಲ್ಲಿದ್ದ ಸುಮಾರು 1,27,000 ರೂ ಮೌಲ್ಯದ ಚಿನ್ನದ ಚೈನ್, ಬಂಗಾರದ ನಾಮ, ಚಿನ್ನದ ಕಣ್ಣು, ಚಿನ್ನದ ತಾಳಿ ಚಿಪ್ಪು, ಬೆಳ್ಳಿಯ ಚೈನುಗಳನ್ನು ಕಳ್ಳತನ ಆಗಿರುವ ಕುರಿತು ದೇವಸ್ಥಾನದ ಅರ್ಚಕರಾದ ಶ್ರೀಧರ ವಿಷ್ಣು ಭಟ್ ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಕುಮಟಾ ಪಿ.ಎಸ್.ಐ. ಸುನಿಲ್ ಬಂಡಿವಡ್ಡರ್ ಹಾಗೂ ಅವರ ತಂಡ ಕಾರ್ಯಾಚರಣೆಗೆ ಮುಂದಾಗಿ ದೇವಸ್ಥಾನವನ್ನು ಹಾಗೂ ಅಲ್ಲಿದ್ದ ಸಿ.ಸಿ. ಕ್ಯಾಮರಾದ ಫೂಟೇಜ್‌ನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಕಳ್ಳರ ಸುಳಿವು ದೊರಕಿದೆ.
ಧಾರೇಶ್ವರದ ಮಂಗಳೂರು ಹೋಟೆಲ್ ಬಳಿ ಆರೋಪಿತನಾದ ಅಂಕೋಲಾ ಬೆಳಂಬಾರ ಮೂಲದ, ಹಾಲಿ ಧಾರೇಶ್ವರದಲ್ಲಿರುವ ವಿವೇಕಾನಂದ ದುರ್ಗಯ್ಯ ಖಾರ್ವಿ, (26) ಹಾಗೂ ಈತನ ಸಹಚರನಾದ ಹೊನ್ನಾವರ ತಾಲೂಕಿನ ಅಗ್ರಹಾರದ ಈಶ್ವರ ಅಮಾಸೆ ಮುಕ್ರಿ ಈರ್ವರನ್ನು ಬಂಧಿಸಿ ವಶಕ್ಕೆ ಪಡೆದು, ಇವರಿಂದ ಕಳ್ಳತನ ಮಾಡಿ ಮನೆಯಲ್ಲಿ ಬಚ್ಚಿಟ್ಟ 86,000 ರೂ ಮೌಲ್ಯದ ದೇವರ ಚಿನ್ನಾಭರಣಗಳನ್ನು ಹಾಗೂ 3.500 ರೂ ಮೌಲ್ಯದ ಬೆಳ್ಳಿಯ ಆಭರಣಗಳನ್ನು ವಶಕ್ಕೆ ಪಡೆದುಕೊಂಡು, ಆರೋಪಿತರನ್ನು ಕುಮಟಾ ಜೆ.ಎಂ.ಎಫ್.ಸಿ. ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದೆ.
ಆರೋಪಿತನಾದ ವಿವೇಕಾನಂದ ದುರ್ಗಯ್ಯ ಖಾರ್ವಿ ಈತನ ಮೇಲೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ಹಾಗೂ ದೇವಸ್ಥಾನ ಕಳವು ಪ್ರಕರಣಗಳು ಹಾಗೂ ಗೋಕರ್ಣ ಪೊಲೀಸ್ ಠಾಣೆಯಲ್ಲಿ ದೇವಸ್ಥಾನ ಕಳುವು ಪ್ರಕರಣ ಹಾಗೂ ಕುಮಟಾ ಪೊಲೀಸ್ ಠಾಣೆಯಲ್ಲಿ 2 ದೇವಸ್ಥಾನ ಕಳವು ಪ್ರಕರಣಗಳು ಈಗಾಗಲೇ ದಾಖಲಾಗಿದೆ.
ಅಲ್ಲದೇ ಈತನು ಅಂಕೋಲಾ ನ್ಯಾಯಾಲಯದ 3 ನಾನ್ ಬೇಲೆಬಲ್ ವಾರಂಟ್ ಗಳಲ್ಲಿ, ಕುಮಟಾ ನ್ಯಾಯಾಲಯದಲ್ಲಿ 03 ನಾನ್ ಬೇಲೆಬಲ್ ವಾರಂಟ್ ಗಳಲ್ಲಿ ಬೇಕಾದ ಆರೋಪಿಯಾಗಿದ್ದಾನೆ ಎಂದು ಪೋಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರಕರಣದ ಕಾರ್ಯಾಚರಣೆಯಲ್ಲಿ ಕುಮಟಾ ಪೊಲೀಸ್ ಠಾಣೆಯ ಪೊಲೀಸ ನಿರೀಕ್ಷಕರಾದ ತಿಮ್ಮಪ್ಪ ನಾಯ್ಕ, ಪಿ.ಎಸ್.ಐ. ಸುನಿಲ್ ಬಂಡಿವಡ್ಡರ್ ಹಾಗೂ ಸಿಬ್ಬಂದಿಗಳಾದ ಗಣೇಶ ನಾಯ್ಕ, ದಯಾನಂದ ನಾಯ್ಕ, ಗುರು ನಾಯಕ, ಪ್ರದೀಪ ನಾಯಕ ಭಾಗಿಯಾಗಿದ್ದರು.