ಶಿರಸಿ: ಕುಮಟಾ-ಶಿರಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೇತುವೆ ಮತ್ತು ದೇವಿಮನೆ ಘಟ್ಟದಲ್ಲಿ ರಸ್ತೆ ನಿರ್ಮಾಣ ಮಾಡಬೇಕಾದ್ದರಿಂದ ನವೆಂಬರ್ 1 ರಿಂದ 2024 ಮೇ 31 ರವರೆಗೆ ಸಂಪೂರ್ಣ ಸ್ಥಗಿತಗೊಳಿಸಲಾಗುತ್ತದೆ ಎಂದು ಸಹಾಯಕ ಆಯುಕ್ತ ದೇವರಾಜ ಆರ್. ತಿಳಿಸಿದರು.
ಶಿರಸಿ ತಾಲೂಕಾ ವ್ಯಾಪ್ತಿಯಲ್ಲಿ 3 ಸೇತುವೆ ಹಾಗೂ ದೇವಿಮನೆ ಘಟ್ಟದಲ್ಲಿ ಹೆದ್ದಾರಿ ನಿರ್ಮಾಣ ಮಾಡಬೇಕಾದ್ದರಿಂದ ಸ್ಥಗಿತಗೊಳಿಸುವುದು ಅನಿವಾರ್ಯ. 2020 ರಲ್ಲಿ ಗುತ್ತಿಗೆ ಪಡೆದ ಕಂಪೆನಿಯು ಶಿರಸಿ-ಕುಮಟಾ ಹೆದ್ದಾರಿ ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿತ್ತು. ಆ ಆದೇಶವನ್ನು ಮುಂದುವರೆಸಿ, ನ.1 ರಿಂದ 7 ತಿಂಗಳು ಹೆದ್ದಾರಿ ಸ್ಥಗಿತಗೊಳಿಸಲಾಗುತ್ತಿದೆ.
ಶಿರಸಿ ತಾಲೂಕಾ ವ್ಯಾಪ್ತಿಯ 33 ಕಿ.ಮೀ ಹೆದ್ದಾರಿಯಲ್ಲಿ27 ಕಿ.ಮೀ ಈಗಾಗಲೇ ಮುಕ್ತಾಯಗೊಂಡಿದೆ. 2 ಸೇತುವೆ ನಿರ್ಮಾಣವಾಗಬೇಕಾದ್ದರಿಂದ ರಸ್ತೆ ಸ್ಥಗಿತಗೊಳಿಸುವುದು ಅತ್ಯವಶ್ಯ. ತಾಲೂಕಾ ವ್ಯಾಪ್ತಿಯ ಸಾಕಷ್ಟು ಹಳ್ಳಿಗಳಿಗೆ ಈ ರಸ್ತೆಯ ಮೂಲಕ ತೆರಳಬೇಕಾದ್ದರಿಂದ ಅವರಿಗೆ ತೊಂದರೆಯಾಗದಂತೆ ಪಕ್ಕದಲ್ಲಿ ಸಣ್ಣ ರಸ್ತೆ ನಿರ್ಮಿಸಿಕೊಟ್ಟು ಅನುಕೂಲ ಕಲ್ಪಿಸಬೇಕು. ದೇವಿಮನೆ ಘಟ್ಟ ಸಂಪೂರ್ಣ 7 ತಿಂಗಳು ಸ್ಥಗಿತಗೊಳ್ಳಲಿದೆ. ಬೃಹತ್ ವಾಹನ ಸಂಚಾರಕ್ಕೆ ಅವಕಾಶವಿಲ್ಲ.
ಪ್ರಮುಖ ಸ್ಥಳಗಳಲ್ಲಿ ರಸ್ತೆ ಮಾರ್ಗದ ನಾಮಫಲಕ ಅಳವಡಿಸಿ, ನಿಲೇಕಣಿ ಕ್ರಾಸ್ ಮತ್ತು ಹೆಗಡೆಕಟ್ಟಾ ಕ್ರಾಸ್ ಬಳಿ ನಾಕಾ ಬಂಧಿ ಆರಂಭಿಸಿ, ಯಾವುದೇ ಕಾರಣಕ್ಕೂ ಪ್ರಯಾಣಿಕರಿಗೆ ಗೊಂದಲ ಉಂಟಾಗದಂತೆ ನೋಡಿಕೊಳ್ಳಬೇಕು. ತಾಲೂಕಿನ ಅಮ್ಮಿನಳ್ಳಿ ವರೆಗೆ 2 ಸೇತುವೆ ನಿರ್ಮಾಣವಾಗಬೇಕಿದ್ದು, ಆ ಸಮಯದಲ್ಲಿ ರಸ್ತೆ ಮಾರ್ಗ ಕಡಿತಗೊಂಡು ತೊಂದರೆ ಎದುರಿಸಬೇಕಾಗಿ, ನಗರ ಸಂಪರ್ಕ ಕಡಿತಗೊಳ್ಳುತ್ತದೆ. ಅವರಿಗೆ ಅನಾನುಕೂಲ ಆಗದಂತೆ ಪಕ್ಕದಲ್ಲಿ ಸಣ್ಣ ರಸ್ತೆ ನಿರ್ಮಿಸಿ, ದ್ವಿಚಕ್ರ ವಾಹನ ಮತ್ತು ಕಾರುಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ ಎಂದೂ ತಿಳಿಸಿದರು.
ಕುಮಟಾ-ದೊಡ್ಮನೆ-ಸಿದ್ದಾಪುರ-ಶಿರಸಿ ಮಾರ್ಗದಲ್ಲಿ ಲಘು ಗಾತ್ರದ ವಾಹನ, ಹೊನ್ನಾವರ-ಮಾವಿನಗುಂಡಿ, ಸಿದ್ದಾಪುರ, ಶಿರಸಿ ಮಾರ್ಗದಲ್ಲಿ ಎಲ್ಲ ತರದ ವಾಹನ, ಶಿರಸಿ-ಯಾಣ-ವಡ್ಡಿ-ಕುಮಟಾ ಮಾರ್ಗದಲ್ಲಿ ಲಘು ಗಾತ್ರದ ವಾಹನ, ಶಿರಸಿ, ಯಲ್ಲಾಪುರ, ಅಂಕೋಲಾ ಮಾರ್ಗದಲ್ಲಿ ಎಲ್ಲ ತರತ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಯಾಣ ಮತ್ತು ದೊಡ್ಮನೆ ಮಾರ್ಗದ ರಸ್ತೆ ಕಿರಿದಾಗಿದ್ದರಿಂದ ಲಘು ವಾಹನಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಆ ಮಾರ್ಗದಲ್ಲಿ ಯಾವುದೇ ಬೃಹತ್ ಗಾತ್ರದ ವಾಹನಗಳಿಗೆ ಅವಕಾಶವಿಲ್ಲ. ಸ್ಥಳೀಯ ಬಸ್‌ಗಳು ಮಾತ್ರ ಈ ರಸ್ತೆಯಲ್ಲಿ ಸಂಚರಿಸಬಹುದು, ದೂರ ಮಾರ್ಗಗಳ ಬಸ್‌ಗಳು ಮಾವಿನಗುಂಡಿ ಮತ್ತು ಯಲ್ಲಾಪುರ ಮಾರ್ಗದಲ್ಲಿ ಘಟ್ಟದ ಕೆಳಗಿನ ತಾಲೂಕುಗಳಿಗೆ ತೆರಳಬೇಕಿದೆ ಎಂದರು.
ರಾಜ್ಯ ಪ್ರಸಿದ್ಧ ಶಿರಸಿಯ ಮಾರಿಕಾಂಬಾ ದೇವಿಯ ಜಾತ್ರೆಯು ಮಾರ್ಚ್ ತಿಂಗಳಿನಲ್ಲಿ ನಡೆಯುವುದರಿಂದ ಹೆದ್ದಾರಿ ಬಂದ್ ಮಾಡುವುದರಿಂದ ಘಟ್ಟದ ಕೆಳಗಿನ ಕುಮಟಾ ತಾಲೂಕಿನವರಿಗೆ ಬಹಳ ತೊಂದರೆಯಾಗುತ್ತದೆ. 15 ದಿನದ ಅವಧಿಗೆ ಕುಮಟಾ ತಾಲೂಕಿನ ಭಕ್ತರ ಕಾರು ಮತ್ತು ದ್ವಿಚಕ್ರ ವಾಹನಗಳಿಗೆ ಅವಕಾಶ ನೀಡಬೇಕು. ಇಲ್ಲವಾದಲ್ಲಿ ಬಹಳ ಸಮಸ್ಯೆ ಉಂಟಾಗುತ್ತದೆ. ಶಿರಸಿ ಸಮೀಪದ ಸೇತುವೆಯನ್ನು ಶೀಘ್ರವಾಗಿ ಕಾಮಗಾರಿ ಕೈಗೆತ್ತುಕೊಂಡು ಮುಕ್ತಾಯಗೊಳಿಸಿದರೆ, ಸಮೀಪದ ಹಳ್ಳಿಗಳ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಇದರ ಕುರಿತು ಆರ್.ಎನ್.ಎಸ್ ಕಂಪೆನಿ ಕ್ರಮ ವಹಿಸಬೇಕು ಎಂದೂ ತಿಳಿಸಿದ್ದಾರೆ.