ಕುಮಟಾ: ದಿನನಿತ್ಯ ಸಾವಿರಾರು ಪ್ರಯಾಣಿಕರು ಬಂದು ಹೋಗುವ ಪಟ್ಟಣದ ಹೊಸ ಬಸ್ ನಿಲ್ದಾಣ ಸುಸಜ್ಜಿತವಾಗಿದ್ದರೂ, ಕೆಲ ಮೂಲ ಸೌಕರ್ಯ ಹಾಗೂ ಸ್ವಚ್ಛತೆಯಿಂದ ದೂರ ಉಳಿದಿದೆ.
ಪ್ರಯಾಣಿಕರಿಗೆ ಅಗತ್ಯವಿರುವ ಶೌಚಾಲಯ ಹಾಗೂ ಶುದ್ಧ ಕುಡಿಯುವ ನೀರಿನ ಸಮಸ್ಯೆ ಇತ್ತೀಚಿಗೆ ಹೆಚ್ಚಾಗಿ ಕಾಡತೊಡಗಿದೆ. ಇರುವ ಕುಡಿಯುವ ನೀರಿನ ಘಟಕವೂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ನಿಲ್ದಾಣದ ಸುತ್ತಲೂ ಕಸ ಹಾಗೂ ಪ್ಲಾಸ್ಟಿಕ್‌ಗಳು ತುಂಬಿ ಗಬ್ಬು ನಾರುತ್ತಿದೆ. ಶೌಚಾಲಯದ ನಿರ್ವಹಣೆ ಸರಿಯಾಗಿಲ್ಲದೇ ಕೆಲ ಶೌಚಾಲಯಗಳ ಬಾಗಿಲನ್ನು ಮುಚ್ಚಲಾಗಿದೆ. ಇನ್ನು ತೆರೆದ ಶೌಚಾಲಯವೂ ಸ್ವಚ್ಛತೆಯಿಲ್ಲದೆ, ಮೂತ್ರದ ವಾಸನೆ ಮೂಗಿಗೆ ರಾಚುವಂತಾಗಿದೆ. ಸಂಬಂಧಪಟ್ಟವರು ಯಾರೂ ಇಂಥ ದಿನನಿತ್ಯದ ಸಮಸ್ಯೆ ಬಗ್ಗೆ ಗಮನಕೊಟ್ಟಿಲ್ಲದಿರುವುದು ಎದ್ದು ಕಾಣುತ್ತಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಅಂಚಿನಲ್ಲೇ ಹೊಸ ಬಸ್ ನಿಲ್ದಾಣ ಇರುವುದರಿಂದ ಹಾಗೂ ಬಸ್‌ಗಳ ಆಗಮನ ನಿರ್ಗಮನದ ದ್ವಾರ ಅವೈಜ್ಞಾನಿಕವಾಗಿರುವುದರಿಂದ ಹೆದ್ದಾರಿಯಲ್ಲಿ ಟ್ರಾಫಿಕ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
Advertisement
ಕುಮಟಾ ಬಸ್ ನಿಲ್ದಾಣ ಸದಾ ಪ್ರಯಾಣಿಕರಿಂದ ಗಿಜಿಗುಡುತ್ತಿರುತ್ತದೆ. ಜಿಲ್ಲೆ ಹಾಗೂ ರಾಜ್ಯದ ಎಲ್ಲ ಭಾಗಗಳಿಗೆ ಸಾರಿಗೆ ಸಂಚಾರಕ್ಕೆ ಕುಮಟಾ ಕೇಂದ್ರ ಸ್ಥಾನವಾಗುವುದರಿಂದ ಹಾಗೂ ರೈಲು ನಿಲ್ದಾಣವೂ ಸನಿಹವೇ ಇರುವುದರಿಂದ ದೂರ ಸಂಚಾರದ ಪ್ರಯಾಣಿಕರ ಓಡಾಟ ಬಹಳ ಇರುತ್ತದೆ. ಕೆಲ ವರ್ಷದ ಹಿಂದೆ ತರಾತುರಿಯಲ್ಲಿ ಹೊಸ ಬಸ್ ನಿಲ್ದಾಣ ಕಾಮಗಾರಿ ಮುಗಿಸಿ ಉದ್ಘಾಟನೆ ಮಾಡಿದ ಸಂದರ್ಭದಲ್ಲಿ ನಿಲ್ದಾಣದಲ್ಲಿ ಹಾಕಲಾದ ಅಸಮರ್ಪಕ ಆಸನ ವ್ಯವಸ್ಥೆ ಬಗೆಗೆ ಜನರಿಂದ ಸಾಕಷ್ಟು ಅಸಮಾಧಾನ ವ್ಯಕ್ತವಾಗಿತ್ತು. ಅಷ್ಟೊಂದು ದೊಡ್ಡ ನಿಲ್ದಾಣದೊಳಗೆ ಕೇವಲ ಎರಡು ಸಾಲುಗಳಲ್ಲಿ ಕಿರಿದಾದ ಮತ್ತು 4-5 ಮಂದಿ ಕುಳಿತುಕೊಳ್ಳಬಹುದಾದ ಕಲ್ಲಿನ ಹಲಗೆಗಳನ್ನು ಬೇಂಚಿನ ಮಾದರಿಯಲ್ಲಿ ಹಾಕಲಾಗಿದೆ. ನಿಲ್ದಾಣದಲ್ಲಿ ಒಟ್ಟೂ 16 ಬೇಂಚುಗಳನ್ನು ಹಾಕಲಾಗಿದ್ದು 70-80 ಮಂದಿ ಮಾತ್ರ ಕೂರಬಹುದಾಗಿದೆ. ಮುಖ್ಯವಾಗಿ ಇಂಥ ಬೇಂಚುಗಳಲ್ಲಿ ಪುರುಷರು ಹಾಗೂ ಮಹಿಳೆಯರು ಒಟ್ಟಿಗೆ ಕುಳಿತುಕೊಳ್ಳುವುದಕ್ಕೆ ಮುಜುಗರ ಪಡುವಷ್ಟು ಕಿರಿದಾಗಿದೆ.
ಬಸ್ ನಿಲ್ದಾಣ ಹೆದ್ದಾರಿ ಪಕ್ಕದಲ್ಲಿ ಬಂದ ನಂತರ ಇಲ್ಲಿ ಬಹಳ ಸಮಸ್ಯೆಯುಂಟಾಗಿದೆ. ದಿನದ ಎಲ್ಲಾ ಸಮಯದಲ್ಲೂ ಇಲ್ಲಿ ಟ್ರಾಫಿಕ್ ಕಿರಿಕಿರಿಯಾಗುತ್ತಿದ್ದು ತುರ್ತಾಗಿ ಇದಕ್ಕೊಂದು ಪರಿಹಾರ ಕಂಡುಕೊಳ್ಳಬೇಕಿದೆ. ಬಸ್ ಚಾಲಕರಿಗೂ ಇದು ಸೂಕ್ಷ್ಮ ಸ್ಥಳವೇ ಆಗಿದೆ. ಸ್ವಲ್ಪ ಗಮನ ತಪ್ಪಿದರೂ ಅಪಘಾತವಾಗುತ್ತದೆ. ಅನಾಹುತವಾಗುವ ಮುನ್ನ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳುವದು ಸಾರ್ವಜನಿಕರ ಹಿತದೃಷ್ಟಿಯಿಂದ ಒಳಿತು. – ರವೀಂದ್ರ ಭಟ್ಟ ಸೂರಿ. ಅಧ್ಯಕ್ಷರು, ಸರಕಾರಿ ನೌಕರರ ಸಂಘ. ಕುಮಟಾ
•ಕೆ. ದಿನೇಶ ಗಾಂವ್ಕರ