Advertisement

Kumta: ಬೌದ್ಧಿಕ ಸದೃಢತೆಗೆ ಕರಾಟೆ ಸಹಕಾರಿ

06:35 PM Sep 06, 2023 | Team Udayavani |

ಕುಮಟಾ: ಕರಾಟೆಯು ವಿದ್ಯಾರ್ಥಿಗಳಲ್ಲಿ ರಕ್ಷಣೆಯ ಮೂಲ ಜ್ಞಾನವನ್ನು ನೀಡುತ್ತದೆ. ಆತ್ಮ ರಕ್ಷಣಾ ಕೌಶಲ್ಯ ಕಲಿಸುವುದಕ್ಕಾಗಿ ಜಾರಿಗೆ ಬಂದ ಕರಾಟೆ ಇಂದು ಪಾಠದ ಜೊತೆ ಜೊತೆಗೆ ಮಕ್ಕಳಲ್ಲಿ ಬೌದ್ಧಿಕ ಸಾಮರ್ಥ್ಯ ಬೆಳೆಸುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್‌.ಎಲ್‌. ಭಟ್‌ ಹೇಳಿದರು.

Advertisement

ಮೂರೂರಿನ ಪ್ರಗತಿ ವಿದ್ಯಾಲಯದಲ್ಲಿ ಜಿಲ್ಲಾ ಪಂಚಾಯತ್‌ ಉತ್ತರ ಕನ್ನಡ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕುಮಟಾ, ಜಿಲ್ಲಾ ಕರಾಟೆ ಶಿಕ್ಷಕರ ಸಂಘ ಹಾಗೂ ಕ್ರೀಡಾ ಸಂಘ ಹಾಗೂ ವಿದ್ಯಾನಿಕೇತನ ಸಂಸ್ಥೆ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಕರಾಟೆ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.

ಆಟಗಳು ಮಕ್ಕಳಲ್ಲಿ ಶಿಸ್ತನ್ನು ಕಲಿಸುತ್ತದೆ. ಅದು ನಮ್ಮನ್ನು ಪರಿಪೂರ್ಣಮಾಡುತ್ತದೆ. ಜೊತೆಗೆ ಕರಾಟೆಯಂತಹ ಕಲೆ ಕಲಿಯುವುದರಿಂದ ದೈಹಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಬಹುದಾಗಿದೆ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್‌.ಬಿ. ನಾಯಕ ಮಾತನಾಡಿ, ಪ್ರಥಮ ಬಾರಿಗೆ ಜಿಲ್ಲಾಮಟ್ಟದ ಪಂದ್ಯಾವಳಿಯ ಸಂಘಟನೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ಪಂದ್ಯಾವಳಿಯ ಉದ್ದೇಶಗಳು ಹಾಗೂ ನಿಯಮಗಳನ್ನು ತೆರೆದಿಟ್ಟು ಆಟಗಾರರಿಗೆ ಹಾಗೂ ತರಬೇತಿದಾರರಿಗೆ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯಾನಿಕೇತನ ಸಂಸ್ಥೆ ಕಾರ್ಯಧ್ಯಕ್ಷ ಆರ್‌.ಜಿ. ಭಟ್ಟ ಮಾತನಾಡಿ, ವೇದೋಪನಿಷತ್ತುಗಳಲ್ಲಿ, ಮಹಾಕಾವ್ಯಗಳಲ್ಲಿ ಉಲ್ಲೇಖಿಸಿರುವಂತೆ ಈ ಕಲೆ ಭಾರತೀಯರ ಜನಪ್ರಿಯವಾದ ಕಲೆ. ಇದು ಆತ್ಮ ರಕ್ಷಣೆಯ ಕಲೆಯೂ ಹೌದು. ಯುದ್ಧ ಕೌಶಲ್ಯದ ಕಲೆಯೂ ಹೌದು. ಅಂತಹ ಕಲೆಯನ್ನು ಪ್ರೋತ್ಸಾಹಿಸಬೇಕು ಎಂದರು.

ವಿದ್ಯಾನಿಕೇತನ ಸಂಸ್ಥೆ ಕಾರ್ಯದರ್ಶಿ ಟಿ.ಎಸ್‌. ಭಟ್ಟ, ಭಾರತೀ ಕಲಾಕೇಂದ್ರದ ಸಂಚಾಲಕರಾದ ಜಿ.ವಿ. ಹೆಗಡೆ, ಡಿ.ಸಿ. ಭಟ್ಟ, ಕರಾಟೆ ತರಬೇತುದಾರ ಎಸ್‌.ಪಿ. ಹಂದೆ, ಸಾಗರ ಜಾದವ್‌, ಅರವಿಂದ ನಾಯ್ಕ ಇದ್ದರು. ಕರಾಟೆ ಸ್ಪರ್ಧೆಯನ್ನು ಉತ್ತಮವಾಗಿ ಸಂಘಟನೆ ಮಾಡಿದ್ದಕ್ಕಾಗಿ ಕರಾಟೆ ಶಿಕ್ಷಕರ ಸಂಘದಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್‌.ಎಲ್‌. ಭಟ್ಟ, ಆರ್‌ .ಜಿ. ಭಟ್ಟ ಹಾಗೂ ಎಸ್‌.ಪಿ. ಹಂದೆ ಅವರನ್ನು ಗೌರವಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next