ಬಡಗನ್ನೂರು: ಅನಿಯಮಿತ ವಿದ್ಯುತ್ ಕಡಿತದಿಂದಾಗಿ ಜನ ರೋಸಿ ಹೋಗಿದ್ದಾರೆ. ಬೇಡಿಕೆಗೆ ತಕ್ಕಂತೆ ವಿದ್ಯುತ್ ಸರಬರಾಜು ಮಾಡಲು ಮೆಸ್ಕಾಂ ಎಲ್ಲ ವಿಧದ ತಯಾರಿ ನಡೆಸಿಕೊಂಡಿದ್ದರೂ ಓವರ್‌ಲೋಡ್ ಸಮಸ್ಯೆಯಿಂದಾಗಿ ಕುಂಬ್ರ ವಿದ್ಯುತ್ ಸಬ್‌ಸ್ಟೇಷನ್ ಬಳಕೆದಾರರಿಗೆ ಪೂರ್ಣ ಪ್ರಮಾಣದ ವಿದ್ಯುತ್ ನೀಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ದಿನದಲ್ಲಿ 6 ಗಂಟೆ ಪವರ್ ಕಟ್ ಮಾಡಲು ಮೆಸ್ಕಾಂ ಮುಂದಾಗಿದೆ.
ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿಯ ಕುಂಬ್ರ ವಿದ್ಯುತ್ ಸಬ್ ಸ್ಟೇಷನ್ 1994ರಲ್ಲಿ ನಿರ್ಮಾಣಗೊಂಡಿದೆ. ಕುಂಬ್ರ-ಬೆಳ್ಳಾರೆ ರಸ್ತೆಯಲ್ಲಿ ಕುಂಬ್ರ ಪೇಟೆಯಿಂದ 1 ಕಿ.ಮೀ. ದೂರದಲ್ಲಿ ಸಬ್ ಸ್ಟೇಷನ್ ಇದೆ. ಇಲ್ಲಿ ತಲಾ 4 ಮೆಗಾ ವ್ಯಾಟ್ ಸಾಮರ್ಥ್ಯದ 2 ಟಿಸಿ ಇದೆ. ಒಟ್ಟು 8 ಮೆಗಾವ್ಯಾಟ್ ಸಾಮರ್ಥ್ಯವನ್ನು ಹೊಂದಿದ್ದು, ಇದೀಗ ಸುಮಾರು 20 ಮೆಗಾವ್ಯಾಟ್ ವಿದ್ಯುತ್ ಸರಬರಾಜು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕುಂಬ್ರ ಸಬ್‌ಸ್ಟೇಷನ್‌ನಿಂದ ಕುಂಬ್ರ, ಪರ್ಪುಂಜ, ಬೆಟ್ಟಂಪಾಡಿ, ಇರ್ದೆ, ಪಾಣಾಜೆ, ಬಡಗನ್ನೂರು ಸುಳ್ಯಪದವು ಕೊನೆಯವರೆಗೆ ಹಾಗೂ ಜಾಲ್ಸೂರು, ಪೆರ್ಲಂಪಾಡಿ, ಮಾಡಾವು, ಕೆದಂಬಾಡಿ ಈ ಭಾಗಗಳಿಗೆ ವಿದ್ಯುತ್ ಸರಬರಾಜು ಇದೆ. ಈಶ್ವರಮಂಗಲ ಫೀಡರ್‌ನಿಂದ ಕರ್ನೂರು, ಗಾಳಿಮುಖ ತನಕ ವಿದ್ಯುತ್ ಸರಬರಾಜು ಇರುತ್ತದೆ. ಈ ಎಲ್ಲ ಪ್ರದೇಶಗಳ ಮನೆ, ಪಂಪ್ ಹೌಸ್ ಸಹಿತ ಸುಮಾರು 25 ಸಾವಿರ ಸಂಪರ್ಕಗಳು ಕುಂಬ್ರ ಸಬ್‌ಸ್ಟೇಷನ್ ವ್ಯಾಪ್ತಿಯಲ್ಲಿ ಬರುತ್ತವೆ.
ಸಾಮರ್ಥ್ಯ ಹೆಚ್ಚುತ್ತಿಲ್ಲ
ಕುಂಬ್ರ ಸಬ್‌ಸ್ಟೇಷನ್ ವ್ಯಾಪ್ತಿಯಲ್ಲಿ ಪ್ರತಿವರ್ಷ 500ಕ್ಕೂ ಅಧಿಕ ಹೊಸ ಸಂಪರ್ಕಗಳು ಸೇರ್ಪಡೆಯಾಗುತ್ತಲಿವೆ. ಆದರೆ ಸಬ್ ಸ್ಟೇಷನ್ ಸಾಮರ್ಥ್ಯ ಮಾತ್ರ ಹೆಚ್ಚುತ್ತಿಲ್ಲ. ಅದೇ 8 ಮೆಗಾವ್ಯಾಟ್ ಸಾಮರ್ಥ್ಯ ಇದೆ. ಓವರ್ ಲೋಡ್ ಆಗುತ್ತಿದೆ. ಹಾಗಾಗಿ ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಮೆಸ್ಕಾಂ ಸಹಾಯಕ ಎಂಜಿನಿಯರ್ ನಿತ್ಯಾನಂದ ತೆಂಡೂಲ್ಕರ್ ಅವರು ಹೇಳಿದ್ದಾರೆ.
ಈಶ್ವರಮಂಗಲ ಮತ್ತು ಸುಳ್ಯಪದವು ಫೀಡರ್‌ನಿಂದ ಸರಿಸುಮಾರು 7 ಮೆಗಾ ವ್ಯಾಟ್ ವಿದ್ಯುತ್ ಸರಬರಾಜು ಆಗುತ್ತಿದೆ. ಕುಂಬ್ರ ಸಬ್‌ಸ್ಟೇಷನ್‌ನಿಂದ ಒಟ್ಟು 7 ತ್ರಿಫೇಸ್ ಲೈನ್‌ಗಳಿವೆ. ಇದರಲ್ಲಿ ದಿನದ ಹಗಲು 4 ಗಂಟೆ ತ್ರಿಫೇಸ್ ಮತ್ತು ರಾತ್ರಿ 2 ಗಂಟೆ ಒಟ್ಟು 6 ಗಂಟೆ ತ್ರಿಫೇಸ್ ಕೊಡಲು ಪ್ರಯತ್ನ ಪಡುತ್ತಿದ್ದೇವೆ. ಏಕಕಾಲದಲ್ಲಿ ಪಂಪುಗಳು ಚಾಲೂ ಆಗುವುದರಿಂದ ಓವರ್‌ಲೋಡ್ ಆಗುತ್ತದೆ.
4 ಗಂಟೆ ಕೂಡ ತ್ರೀಫೇಸ್ ವಿದ್ಯುತ್ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುವುದು ಜೆ.ಇ. ಅವರ ಅಭಿಪ್ರಾಯ. 7 ತ್ರೀಫೇಸ್‌ನಲ್ಲಿ ಹೊಂದಾಣಿಕೆ ಮಾಡಿಕೊಂಡು ದಿನದಲ್ಲಿ 2 ಗಂಟೆ ಸಿಂಗಲ್ ಫೇಸ್ ನೀಡುತ್ತಿದ್ದೇವೆ. ತ್ರೀಫೇಸ್ ಕೊಡುವ ಸಮಯ ವಾರಕ್ಕೊಮ್ಮೆ ಬದಲಾಗುತ್ತದೆ ಎಂದು ಎಂಜಿನಿಯರ್ ಹೇಳುತ್ತಾರೆ.
ಪುತ್ತೂರು ಮತ್ತು ಸುಳ್ಯ ತಾಲೂಕಿಗೆ ವಿದ್ಯುತ್ ಸರಬರಾಜು ಮಾಡಲು ಕೇವಲ ಒಂದು 110 ಕೆ.ವಿ. ವಿದ್ಯುತ್ ಸಬ್ ಸ್ಟೇಷನ್ ಇದೆ. ಉಳಿದ ತಾಲೂಕುಗಳನ್ನು ಅವಲೋಕನ ನಡೆಸಿದರೆ ಪ್ರತಿ ತಾಲೂಕಿಗೆ ತಲಾ ಎರಡು 110 ಕೆ.ವಿ. ಕುಂಬ್ರ ಸಬ್ ಸ್ಟೇಷನ್ ಇವೆ. ಮಾಡಾವಿನಲ್ಲಿ ನಿರ್ಮಾಣ ಹಂತದಲ್ಲಿರುವುದು 110 ಕೆ.ವಿ. ಆದರೆ ಈ ಸಬ್‌ಸ್ಟೇಷನ್ ಕಾಮಗಾರಿ ಆರಂಭವಾಗಿ 10 ವರ್ಷ ಕಳೆದಿದ್ದು, ಇನ್ನೂ ಪೂರ್ಣಗೊಂಡಿಲ್ಲ.
ಸಬ್‌ಸ್ಟೇಷನ್ ನಿರ್ಮಾಣದಿಂದ ಪರಿಹಾರ
ವಿದ್ಯುತ್ ಬಳಕೆದಾರರ ಸಂಖ್ಯೆ ಹೆಚ್ಚುತ್ತಿದ್ದರೂ ಸಬ್‌ಸ್ಟೇಷನ್ ಸಾಮರ್ಥ್ಯ ಹೆಚ್ಚಳವಾಗಿಲ್ಲ. ಓವರ್‌ಲೋಡ್ ಸಮಸ್ಯೆ ಉಂಟಾಗಿದ್ದು, ಲೈನ್ ಟ್ರಿಪ್ ನಂತಹ ಸಮಸ್ಯೆಗಳು ಉಂಟಾಗುತ್ತಿವೆ. ಮುಖ್ಯವಾಗಿ ಕಾವು ಮತ್ತು ಮಾಡಾವಿನಲ್ಲಿ ನಿರ್ಮಾಣವಾಗಲಿರುವ 110 ಕೆ.ವಿ. ವಿದ್ಯುತ್ ಸಬ್‌ಸ್ಟೇಷನ್‌ಗಳು ಪೂರ್ಣಗೊಂಡರೆ ಬಹುತೇಕ ಸಮಸ್ಯೆ ನಿವಾರಣೆಯಾಗಬಹುದು.
2009ರಲ್ಲಿ ಆರಂಭವಾದ ಮಾಡಾವು ಸಬ್ ಸ್ಟೇಷನ್ ಕಾಮಗಾರಿ ಇನ್ನೂ ಪ್ರಗತಿಯಲ್ಲಿದೆ. ಶೀಘ್ರವಾಗಿ ಈ ಕಾಮಗಾರಿ ಪೂರ್ಣಗೊಂಡರೆ ಕುಂಬ್ರ ಭಾಗದ ವಿದ್ಯುತ್ ಸಮಸ್ಯೆ ಕೊನೆಯಾಗಬಹುದು.
ಪವರ್ ಕಟ್ ಅನಿವಾರ್ಯ
ಕುಂಬ್ರ ಸಬ್‌ಸ್ಟೇಷನ್‌ನಲ್ಲಿ ವಿಪರೀತ ಓವರ್‌ಲೋಡ್ ಇರುವುದರಿಂದ ಗ್ರಾಹಕರಿಗೆ ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಕೊಡಲು ಸಾಧ್ಯವಾಗುತ್ತಿಲ್ಲ. ಸಬ್‌ಸ್ಟೇಷನ್ 8 ಮೆಗಾವ್ಯಾಟ್ ಸಾಮರ್ಥ್ಯ ಹೊಂದಿದ್ದು, ಪ್ರಸ್ತುತ 20 ಮೆಗಾವ್ಯಾಟ್ ವಿದ್ಯುತ್ ಸರಬರಾಜು ಮಾಡಬೇಕಾದ ಅನಿವಾರ್ಯತೆ ಇದೆ. ಇದರಿಂದ ಓವರ್‌ಲೋಡ್ ಆಗುತ್ತಿದೆ. ಆದ್ದರಿಂದ ದಿನದಲ್ಲಿ 6 ಗಂಟೆ ಪವರ್ ಕಟ್ ಮಾಡಬೇಕಾದ ಅನಿವಾರ್ಯತೆ ಇದೆ. ಮಾಡಾವು ಮತ್ತು ಕಾವು ಸಬ್‌ಸ್ಟೇಷನ್ ಕಾಮಗಾರಿ ಪೂರ್ಣಗೊಂಡರೆ ಬಹುತೇಕ ಸಮಸ್ಯೆ ನಿವಾರಣೆಯಾಗಬಹುದು.
– ನಿತ್ಯಾನಂದ ತೆಂಡೂಲ್ಕರ್
ಜೂ. ಎಂಜಿನಿಯರ್, ಕುಂಬ್ರ ಮೆಸ್ಕಾಂ
ದಿನೇಶ್ ಪೇರಾಲು