ಬೆಂಗಳೂರು: ಕ್ರಿಕೆಟ್ ಆಡಿದ್ರೆ ಓದುವುದಕ್ಕಾಗಲ್ಲ. ಓದಿದ್ರೆ ಕ್ರಿಕೆಟ್ ಆಡುವುದಿಲ್ಲ ಎಂದು ಎಲ್ಲರೂ ಹೇಳುತ್ತಿರುತ್ತಾರೆ. ಆದರೆ, ನಾನು ಓದಿದ್ದರಿಂದಲೇ ಕ್ರಿಕೆಟ್ ಆಡಿದ್ದು, ಇಲ್ಲದಿದ್ರೆ ಎಂಜಿನಿಯರಿಂಗ್ ಪೂರೈಸಲು ಸಾಧ್ಯವಾಗುತ್ತಿರಲಿಲ್ಲ. ಪ್ರತಿಯೊಬ್ಬರಲ್ಲೂ ಒಂದಿಲ್ಲೊಂದು ರೀತಿಯ ಸಾಮರ್ಥ್ಯ ಇರುತ್ತದೆ. ಯಾವುದೇ ಸಮಸ್ಯೆ ಬಂದರೂ ನಿರ್ಲಕ್ಷಿéಸದೇ, ಆತ್ಮವಿಶ್ವಾಸದಿಂದ ಮುನ್ನುಗ್ಗಬೇಕು ಗೆಲುವು ಸಿಕ್ಕೇ ಸಿಗುತ್ತದೆ ಎಂದು ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಹೇಳಿದರು.
ಶುಕ್ರವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಯುವಿಸಿಇ ಹಳೇ ವಿದ್ಯಾರ್ಥಿಗಳ ಫೌಂಡೇಷನ್ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರತಿಭಾವಂತ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಿ ಮಾತನಾಡಿದರು.
ಅಧ್ಯಯನ: ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಬೇಕು. ಸಮಸ್ಯೆಗೆ ಪರಿಹಾರ ಕಂಡುಹಿಡಿಯುವುದೇ ಎಂಜಿನಿಯರಿಂಗ್. ನಾನು ವೃತ್ತಿಜೀವನದಲ್ಲಿ ಎಂಜಿನಿಯರ್ ಆಗದೇ ಇದ್ದರೂ, ಕ್ರಿಕೆಟ್‌ನ ಸಮಸ್ಯೆಗಳನ್ನು ಪರಿಹರಿಸುತ್ತಾ ಬಂದಿದ್ದೇನೆ. ಹೀಗಾಗಿ ಮೈದಾನದಲ್ಲಿ ದಿನವೂ ಎಂಜಿನಿಯರಿಂಗ್ ವರ್ಕ್ ಮಾಡುತ್ತಿದ್ದೆ. ಕ್ರಿಕೆಟ್ ಜೀವನದ 18 ವರ್ಷವೂ ಎಂಜಿನಿಯರಿಂಗ್ ತಂತ್ರಗಾರಿಕೆಯನ್ನು ಬಳಸಿಕೊಂಡಿದ್ದೇನೆ ಎಂದು ತಮ್ಮ ಅನುಭವ ಹಂಚಿಕೊಂಡರು.
ಸಾಧನೆ: ಕಾಮೆಂಟ್ರಿಯಲ್ಲಿ ಟೀಕೆ ಮಾಡುವುದು ಸುಲಭ. ಆದರೆ, ಪಂದ್ಯದಲ್ಲಿ ವಿಕೆಟ್ ಉರುಳಿಸುವುದು ತುಂಬಾ ಕಷ್ಟ. ಎಂಜಿನಿಯರಿಂಗ್ ಪರೀಕ್ಷೆ ಹೇಗೆ ಪಾಸ್ ಮಾಡಬೇಕೆಂಬುದು ಗೊತ್ತಿತ್ತು. ಆದರೆ, ವಿಷಯದ ಬಗ್ಗೆ ಈಗಲೂ ನನಗೆ ಪೂರ್ಣ ಮಾಹಿತಿ ಇಲ್ಲ. ಬಾಲ್ ತಿರುಗಿಸಲ್ಲ. ವಿದೇಶದಲ್ಲಿ ವಿಕೆಟ್ ತೆಗಿಯಲ್ಲ ಹೀಗೆ ಎಲ್ಲರೂ ನನ್ನಿಂದ ಏನೂ ಆಗಲ್ಲ ಎಂದೇ ಟೀಕೆ ಮಾಡುತ್ತಿದ್ದಾಗ, ಆಗುತ್ತೇ ಅನ್ನುವುದನ್ನು ಮಾಡಿ ತೋರಿಸಿದ್ದೇನೆ. ಇದಕ್ಕಾಗಿ ಸಾಕಷ್ಟು ತ್ಯಾಗ ಕೂಡ ಮಾಡಿದ್ದೇನೆ ಎಂದರು.
ನೇರವಾಗಿ ಎಸೆಯುವುದು, ಲೆಗ್ ಅಥವಾ ಆಫ್ಸ್ಪಿನ್ ಹೀಗೆ ಕ್ರಿಕೆಟ್‌ನಲ್ಲಿ ಮೂರು ರೀತಿಯ ಬೌಲಿಂಗ್ ಮಾಡಬಹುದು. ಇದೇ ಮೂರು ವಿಧಾನದಲ್ಲಿ ಬೇರೆ ಬೇರೆ ತಂತ್ರಗಾರಿಕೆ ಬಳಿಸಿ ಆಟಗಾರನ್ನನ್ನು ಔಟ್ ಮಾಡಬೇಕು. ಇದೇ ತಂತ್ರವನ್ನು ಜೀನದಲ್ಲೂ ಬಳಸಬೇಕು. ಕಷ್ಟ ಎಷ್ಟೇ ಬಂದರೂ ಆತ್ಮ ವಿಶ್ವಾಸ ಕಳೆದುಕೊಳ್ಳದೇ ಮುನ್ನುಗ್ಗಬೇಕು. ಸಮಸ್ಯೆಯನ್ನು ಅರ್ಥೈಸಿಕೊಂಡು ಬಗೆಹರಿಸಬೇಕು ಎಂದು ಹೇಳಿದರು.
ಯುವಿಸಿಇ ಫೌಂಡೇಷನ್ ವತಿಯಿಂದ 229 ಪ್ರತಿಭಾನ್ವಿತ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ 25.25 ಲಕ್ಷ ಮೌಲ್ಯದ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಮಾಜಿ ಅಥ್ಲೆಟ್ ಹಾಗೂ ನಟಿ ಅಶ್ವಿನಿ ನಾಚಪ್ಪ, ತೇಜಸ್ ನೆಟ್‌ವರ್ಕ್ ಮುಖ್ಯಸ್ಥ ಗುರುರಾಜ್ ದೇಶಪಾಂಡೆ, ಯುವಿಸಿಇ ಫೌಂಡೇಷನ್ ಅಧ್ಯಕ್ಷ ಬಿ.ವಿ.ಜಗದೀಶ್, ಯುವಿಸಿಇ ಪ್ರಾಂಶುಪಾಲ ಪ್ರೊ. ಕೆ.ಆರ್.ವೇಣುಗೋಪಾಲ್ ಇತರರು ಇದ್ದರು.
25 ವರ್ಷದ ಕ್ರಿಕೆಟ್ ಜೀವನ ಮುಗಿದಿದೆ. ದೇಶಿ ಹಾಗೂ ಅಂತಾರಾಷ್ಟ್ರೀಯ ಪಂದ್ಯ ಆಡಿದ್ದೇನೆ, ಭಾರತದ ತಂಡದ ತರಬೇತುದಾರನಾಗಿಯೂ ಸೇವೆ ಸಲ್ಲಿಸಿದ್ದೇನೆ. ಹಲವು ರೀತಿಯ ಟೀಕೆಯನ್ನು ಎದುರಿಸಿದ್ದೇನೆ. ಆತ್ಮ ವಿಶ್ವಾಸ ಇದ್ದುದ್ದರಿಂದಲೇ ಎಲ್ಲವನ್ನು ಎದುರಿಸಲು ಸಾಧ್ಯವಾಗಿದೆ. ಇನ್ಮುಂದೆ ಎಂಜಿನಿಯರಿಂಗ್ ವೃತ್ತಿ ಆರಂಭಿಸಲಿದ್ದೇನೆ.
-ಅನಿಲ್ ಕುಂಬ್ಳೆ, ಮಾಜಿ ಕ್ರಿಕೆಟಿಗ