ಕುಂಬಳೆ ಕುಂಬಳೆ ಗ್ರಾಮ ಪಂಚಾಯತ್ ಅಧೀನದಲ್ಲಿದ್ದ ಕುಂಬಳೆ ಪೇಟೆಯ ಬಸ್ ನಿಲ್ದಾಣ ಕೆಡವಿ ವರ್ಷ ಸಮೀಪಿಸುತ್ತಿದೆ. ಆದರೆ ಹೊಸ ನಿಲ್ದಾಣ ನಿರ್ಮಾಣವಿನ್ನೂ ಸಾಕಾರಗೊಳ್ಳಲೇ ಇಲ್ಲ. ವಾಣಿಜ್ಯ ಸಂಕೀರ್ಣ ಬಸ್ ನಿಲ್ದಾಣ ಕಟ್ಟಡದ ಆಯುಷ್ಯ ಮುಗಿದ ನೆಪದಲ್ಲಿ ನಿಲ್ದಾಣವನ್ನು ಬಿಗಿ ಕಾನೂನು ಕ್ರಮ ಕೈಗೊಂಡು ಕೆಡವಲಾಗಿದೆ.ಕಟ್ಟಡದಲ್ಲಿ ವ್ಯಾಪಾರ ನಡೆಸುತ್ತಿದ್ದ ಸುಮಾರು 25 ರಷ್ಟಿದ್ದ ವ್ಯಾಪಾರಿಗಳನ್ನು ಎಬ್ಬಿಸಲಾಗಿದೆ.
ಕಟ್ಟಡ ಕೆಡವಿದ ತಿಂಗಳ ಬಳಿಕ ಗ್ರಾಮ ಪಂಚಾ ಯತ್ ಆಡಳಿತ ಸ್ಥಳೀಯ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಸಹಾಯದೊಂದಿಗೆ ನಿಲ್ದಾಣವಿದ್ದ ಸ್ಥಳದಲ್ಲಿ ತಾತ್ಕಾಲಿಕ ಶೀಟಿನ ಶೆಡ್ ನಿರ್ಮಿಸಿದೆ. ಆದರೆ ಇದರಲ್ಲಿ ಮಳೆಗಾಲದ ಗಾಳಿ ಮಳೆಗೆ ಪ್ರಯಾಣಿಕರಿಗೆ ಆಶ್ರಯ ಪಡೆಯಲು ಅನನುಕೂಲವಾಗುವುದು. ಆದರೆ ಅನಿವಾರ್ಯವಾಗಿ ಇದನ್ನು ಸಹಿಸಲೇಬೇಕಿದೆ.
ನಿಲ್ದಾಣವಿದ್ದ ಸ್ಥಳದಲ್ಲಿ 5 ಕೋಟಿ ರೂ. ನಿಧಿಯಲ್ಲಿ 3 ಮಳಿಗೆಯ ಶಾಪಿಂಗ್ ಕಾಂಪ್ಲೆಕ್ಸ್ ಕಂ ಬಸ್‌ಸ್ಟಾಂಡ್ ಕಟ್ಟಡ ನಿರ್ಮಿಸುವ ಯೋಜನೆಗೆ ನೀಲಿನಕಾಶೆ ಸಿದ್ಧ ಪಡಿಸಿ ಸರಕಾರಕ್ಕೆ ಗ್ರಾಮ ಪಂಚಾಯತ್ ಆಡಳಿತ ಪ್ರಸ್ತಾವನೆ ಸಲ್ಲಿಸಿದೆ. ತಾಂತ್ರಿಕ ಅನುಮತಿ ದೊರೆತು ಸರಕಾರದ ಅರ್ಬನ್ ಸಹಕಾರಿ ಬ್ಯಾಂಕಿನಿಂದ ಸಾಲ ಮಂಜೂರಾದ ಬಳಿಕ ಕಟ್ಟಡದ ಕಾಮಗಾರಿ ನಡೆಯಲಿದೆ. ಆದುದರಿಂದ ಸರಕಾರ ಮತ್ತು ಇಲಾಖೆಯ ವಿಳಂಬ ನೀತಿಯಿಂದ ಬಸ್ ನಿಲ್ದಾಣ ಕಾಮಗಾರಿ ನಿಧಾನವೇ ಪ್ರಧಾನವಾಗಲಿದೆ.ಆದರೆ ಇದರಿಂದ ಪ್ರಯಾಣಿಕರು ಇನ್ನೂ ಸಂಕಷ್ಟ ಪಡಬೇಕಾಗಿದೆ. ಗ್ರಾಮ ಪಂಚಾಯತ್‌ನ ಆಡಳಿತ ಮತ್ತು ವಿಪಕ್ಷಗಳು ಈ ಕುರಿತು ಹೆಚ್ಚಿನ ತಲೆಕೆಡಿಸಿಕೊಳ್ಳದೆ ತೆಪ್ಪಗಿದೆ ಎಂಬ ಆರೋಪ ಸಾರ್ವಜನಿಕರದು.
ನಿಲ್ದಾಣ ಪ್ರದೇಶದಲ್ಲಿ ಪ್ರಕೃತ ಸುತ್ತಮುತ್ತ ವಾಹನಗಳು ಬೆಳಗ್ಗಿನಿಂದ ಸಂಜೆ ತನಕ ತಂಗಿರುವುದನ್ನು ಕಾಣಬಹುದು. ಸಾಲದುದಕ್ಕೆ ಕೆಲವರು ವಾಹನಗಳಲ್ಲೇ ಇಲ್ಲಿ ಹಣ್ಣು ಹಂಪಲು ಇನ್ನಿತರ ವ್ಯಾಪಾರ ಭರ್ಜರಿಯಾಗಿ ನಡೆಸುತ್ತಿರುವರು. ಇದರಿಂದಾಗಿ ಬಸ್ ನಿಲ್ದಾಣ ದೊಳಗೆ ಪ್ರವೇಶಿಸಲು ಬಸ್ ಇಳಿದು ಪ್ರಯಾಣಿಕರಿಗೆ ಪೇಟೆಗೆ ತೆರಳಲು ನಿಲ್ದಾಣದೊಳಗೆ ಪ್ರವೇಶಿಸಲು ಹರಸಾಹಸ ಪಡಬೇಕಾಗಿದೆ.
ನಿಲ್ದಾಣದ ಕಟ್ಟಡದೊಳಗೆ ವ್ಯಾಪಾರ ನಡೆಸಿ ಹೊರದಬ್ಬಲ್ಪಟ್ಟ ವ್ಯಾಪಾರಿಗಳು ಆಡಳಿತಕ್ಕೆ ಹಿಡಿಶಾಪಹಾಕುತ್ತಿದ್ದಾರೆ. ನಾವು ಅನೇಕ ವರ್ಷಗಳಿಂದ ಗ್ರಾಮ ಪಂಚಾಯತ್ ವತಿಯಿಂದ ಪರವಾನಿಗೆ ಪಡೆದು ತೆರಿಗೆ ಪಾವತಿಸಿ ವ್ಯಾಪಾರ ನಡೆಸುತ್ತಿದ್ದ ನಮ್ಮನ್ನು ಕಳಪೆ ಕಟ್ಟಡದ ನೆಪದಲ್ಲಿ ಕಾನೂನಿನ ಬಲಪ್ರಯೋಗ ನಡೆಸಿ ಕಟ್ಟಡದಿಂದ ತೆರವುಗೊಳಿಸಲಾಗಿದೆ. ನಿಲ್ದಾಣದ ಪಕ್ಕದಲ್ಲಿ ಬಸ್ ನಿಲ್ದಾಣದ ಕಟ್ಟಡಕ್ಕಿಂತಲೂ ಹಳೆಯ ಕಟ್ಟಡ ಇದ್ದು ಯಾವುದೇ ಅಪಾಯದ ಭೀತಿ ಇಲ್ಲದೆ ಇದೆ.ಆದರೆ ವಿನಾ ಕಾರಣ ನಿಲ್ದಾಣ ಕಟ್ಟಡವನ್ನು ನಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಹೊರಹಾಕಿ ಕಟ್ಟಡ ಕೆಡವಲಾಗಿದೆ. ಕಟ್ಟಡ ಕೆಡವಿದ ಈ ಪ್ರದೇಶದಲ್ಲಿ ಇದೀಗ ಕಾನೂನು ಬಾಹಿರವಾಗಿ ಬಹಿರಂಗವಾಗಿ ವ್ಯಾಪಾರ ನಡೆಸುವವರ ಮತ್ತು ವಾಹನಗಳನ್ನು ಬೆಳಗ್ಗಿನಿಂದ ಸಂಜೆ ತನಕ ಪಾರ್ಕ್ ಮಾಡುವವರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳಲು ಆಡಳಿತಪಕ್ಷವಾಗಲೀ ವಿಪಕ್ಷವಾಗಲಿ ಆತುರ ಪಡುತ್ತಿಲ್ಲವೆಂಬುದಾಗಿ ಆರೋಪಿಸುತ್ತಿರುವರು.
ಶೌಚಾಲಯವಿಲ್ಲ
ದೂರದೂರಿನಿಂದ ಕುಂಬಳೆ ಪೇಟೆಗೆ ಆಗಮಿಸಿದವರಿಗೆ ಶೌಚಾಲಯ ವ್ಯವಸ್ಥೆ ಇಲ್ಲ. ಪೇಟೆಯಿಂದ ದೂರದ ಐ.ಎಚ್.ಆರ್.ಡಿ. ಕಾಲೇಜು ಬಳಿಯಲ್ಲಿ ಗ್ರಾಮ ಪಂಚಾಯತ್ ವತಿಯಿಂದ 21 ಲಕ್ಷ ರೂ. ವೆಚ್ಚದಲ್ಲಿ ಶೌಚಾಲಯ ನಿರ್ಮಿಸುವ ಕಾಮಗಾರಿ ನಡೆಯುತ್ತಿದೆ. ಆದರೆ ಇದು ಪೇಟೆಯಿಂದ ಬಲು ದೂರವೆಂಬ ಆರೋಪ ಕೇಳಿಬರುತ್ತಿದೆ.
ಎಚ್ಚರಿಸಲಾಗಿದೆ!
ಹೊಸ ಬಸ್ ನಿಲ್ದಾಣ ನಿರ್ಮಾಣಕ್ಕೆ ಆಡಳಿತ ವಿಶೇಷ ಗಮನಹರಿಸಿದೆ. ನಿಲ್ದಾಣದ ಸುತ್ತಮುತ್ತ ಪಾರ್ಕಿಂಗ್‌ಗೆ ನಿಷೇಧ ಹೇರಲಾಗಿದೆ. ವ್ಯಾಪಾರ ನಡೆಸುವುದನ್ನು ತಡೆಯಲಾಗಿದೆ. ಇವರಿಗೆ ಎಚ್ಚರಿಕೆ ನೀಡಲಾಗಿದೆ. ಪೊಲೀಸ ರಲ್ಲಿ ಕಾನೂನು ಕ್ರಮ ಕೈಗೊಳ್ಳಲು ಸೂಚಿಸ ಲಾಗಿದೆ. ಹೊಸ ಬಸ್ ನಿಲ್ದಾಣ ನಿರ್ಮಾಣ ದಲ್ಲಿ ಶೌಚಾಲಯವೂ ಒಳಪಟ್ಟಿದೆ.
–
ಪುಂಡರೀಕಾಕ್ಷ ಕೆ.ಎಲ್.
ಅಧ್ಯಕ್ಷರು, ಕುಂಬಳೆ ಗ್ರಾ. ಪಂ.
ಆಡಳಿತದ ಹಿಂದೇಟು
ಬಸ್ ನಿಲ್ದಾಣ ಪರಿಸರದಲ್ಲಿ ವಾಹನಗಳು ತಂಗುವುದನ್ನು ಮತ್ತು ವ್ಯಾಪಾರ ನಡೆಸುವುದನ್ನು ತೆರವುಗೊಳಿಸಬೇಕೆಂಬುದಾಗಿ ತಾನು ಆಡಳಿತದಲ್ಲಿ ವಿನಂತಿಸಿ ಅಜೆಂಡಾದಲ್ಲಿ ಅಂಗೀಕಾರವಾಗಿದೆ. ಆದರೆ ಇದನ್ನು ಪಾಲಿಸದೆ ತೆರವುಗೊಳಿಸಲು ಆಡಳಿತ ಹಿಂದೇಟು ಹಾಕಿದೆ.
-ಕೆ. ರಮೇಶ್ ಭಟ್
ಸದಸ್ಯರು ಕುಂಬಳೆ ಗ್ರಾ. ಪಂ.