Advertisement

ಕುಂಭಾಸಿ: ಬೇಸಗೆಗೂ ಮೊದಲೇ ನೀರಿನ ಅಭಾವ

11:45 PM Feb 03, 2020 | Sriram |

ತೆಕ್ಕಟ್ಟೆ: ಕುಂಭಾಸಿ ಗ್ರಾ.ಪಂ. ವ್ಯಾಪ್ತಿಯ ಕೊರವಡಿ ಹೊಳೆಕಟ್ಟು ದಲಿತ ಕಾಲನಿಯಲ್ಲಿ ಹಾಗೂ ಕುಂಭಾಸಿ ವಿನಾಯಕ ನಗರದಲ್ಲಿ ಕುಡಿಯುವ ನೀರಿನ ಅಭಾವ ಈಗಾಗಲೇ ಶುರುವಾಗಿದ್ದು, ಸಮರ್ಪಕ ನೀರಿನ ವ್ಯವಸ್ಥೆಗಾಗಿ ಜನರು ಎದುರು ನೋಡುತ್ತಿದ್ದಾರೆ.

Advertisement

ದಾಹ ನೀಗಿಸದ ಬಾವಿ
ವಿನಾಯಕ ನಗರದ ಪ್ರತಿಯೊಂದು ಮನೆಗೆ ಪೈಪ್‌ಲೈನ್‌ ಸಂಪರ್ಕ ಕಲ್ಪಿಸಲಾಗಿದ್ದು ಹೊಳೆಕಟ್ಟು ಪರಿಸರ ಸಮೀಪದ ಸರಕಾರಿ ಬಾವಿಯಿಂದ ನೀರು ಪೂರೈಕೆ ಮಾಡಲಾಗುತ್ತಿದೆ. ನಿತ್ಯ ಬಳಕೆಗೆ ಬೇಕಾಗುವಷ್ಟು ನೀರು ಪೂರೈಕೆಯಾಗುತ್ತಿದ್ದರೂ ಇದು ಕುಡಿಯಲು ಯೋಗ್ಯವಿಲ್ಲ.

ಪ್ರತಿ ವರ್ಷ ಸಮಸ್ಯೆ
ಬೇಸಗೆ ಆರಂಭವಾದರೆ ಇಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುತ್ತದೆ. ಈ ಭಾಗದಲ್ಲಿ ಮೂರು ಸರಕಾರಿ ಬಾವಿಗಳಿದ್ದು, ಅದರಲ್ಲಿ ನೀರಿದ್ದರೂ ಉಪ್ಪು ನೀರಿನ ಬಳಕೆಯಿಂದಾಗಿ ಕುಡಿಯಲು ಯೋಗ್ಯವಿಲ್ಲ. ಹೊಳೆಕಟ್ಟಿನ ಉತ್ತರ ಭಾಗದಲ್ಲಿರುವ ಮನೆಗಳಿಗೆ ಪಣ್‌ಹತ್ವಾರ್‌ ಬೆಟ್ಟು ಸಮೀಪದಿಂದ ನೀರು ಪೂರೈಕೆಯಾಗುತ್ತಿದೆ. ಆದರೂ
ಕೂಡ ನೀರು ಕಲುಷಿತವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಗ್ರಾಮ ಪಂಚಾಯತ್‌ ಗಮನಕ್ಕೆ ತಂದಿದ್ದೇವೆ ಎಂದು ಸ್ಥಳೀಯರು ಹೇಳುತ್ತಾರೆ.

ನೀರಿನ ಅಭಾವ ಮಧ್ಯೆ ಅಪವ್ಯಯ
ವಿನಾಯಕ ನಗರ ಹಾಗೂ ಗಣೇಶ್‌ ನಗರ ಸೇರಿದಂತೆ ಈ ಭಾಗದಲ್ಲಿ 180ಕ್ಕೂ ಅಧಿಕ ಮನೆಗಳಿದೆ. ಹೆಚ್ಚಿನ ಮನೆಗಳಲ್ಲಿ ಸ್ವಂತ ಬಾವಿಯೂ ಇದೆ. ಆದರೂ ಇಲ್ಲಿನವರು ಗ್ರಾ.ಪಂ. ನಳ್ಳಿ ನೀರನ್ನು ಪಡೆದು ಅದನ್ನು ತೆಂಗಿನ ತೋಟ ಮತ್ತುಹೂವಿನ ಗಿಡಗಳಿಗೆ ಬಳಸುತ್ತಾರೆ. ಹೊಳೆಕಟ್ಟು ಪರಿಸರದಲ್ಲಿ ಕೊರವಡಿ ಶ್ರೀನಿಧಿ ಕಾಂಪ್ಲೆಕ್ಸ್‌ ಸಮೀಪದ ಸರಕಾರಿ ಬಾವಿಯಿಂದ ಸುಮಾರು 16 ಮನೆಗಳಿರುವ ದಲಿತ ಕಾಲನಿಗೆ
ಪೂರೈಕೆಯಾಗುವ ಪೈಪ್‌ಲೈನ್‌ನ ಮಧ್ಯೆ ಕೆಲವು ಮನೆಗಳವರು ಮನೆ ನೀರಿನ ಟ್ಯಾಂಕ್‌ಗೆ ನೀರು ಹಾಯಿಸಿ ಅನ್ಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಾರೆ ಎನ್ನುವ ಆರೋಪ ಸಾರ್ವಜನಿಕ ವಲಯದಲ್ಲಿದೆ.

ಕೊರವಡಿ ದಲಿತ ಕಾಲನಿ, ಕುಂಭಾಸಿ ವಿನಾಯಕ ನಗರದಲ್ಲಿ ಕುಡಿಯುವ ನೀರಿನ ಅಭಾವವಿದೆ. ಇಲ್ಲಿಗೆ ಹೊಳೆಕಟ್ಟು ಪರಿಸರದ ಸರಕಾರಿ ಬಾವಿಯಿಂದ ನೀರು ಪೂರೈಕೆಯಾಗುತ್ತಿದೆ. ಆದರೂ ನಿತ್ಯ ಬಳಕೆಗೆ ಬೇಕಾಗುವಷ್ಟು ನೀರು ಪೂರೈಕೆಯಾಗಿದ್ದರೂ ಇದು ಕುಡಿಯಲು ಮಾತ್ರ ಯೋಗ್ಯವಾಗಿಲ್ಲ.

Advertisement

ಶುದ್ಧ ನೀರಿನ ಘಟಕ: ಬಳಕೆ ಕಡಿಮೆ
ಬಳಕೆಯಾಗುವ ಶುದ್ಧ ಕುಡಿಯುವ ನೀರಿನ ಘಟಕ ಶುದ್ಧ ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸುವ ನಿಟ್ಟಿನಿಂದ ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ, ಜಿಲ್ಲಾ ಪಂಚಾಯತ್‌ ಉಡುಪಿ, ತಾಲೂಕು ಪಂಚಾಯತ್‌ ಕುಂದಾಪುರ ಹಾಗೂ ಗ್ರಾ.ಪಂ. ಕುಂಭಾಸಿ ಇವುಗಳ ಸಹಯೋಗದೊಂದಿಗೆ ಎಸ್‌ಸಿಪಿ/ಟಿಎಸ್‌ಪಿ ಯೋಜನೆಯಡಿಯಲ್ಲಿ 2 ಸಾವಿರ ಲೀ. ಸಾಮರ್ಥ್ಯ ಹೊಂದಿದ ಅತ್ಯಾಧುನಿಕ ತಂತ್ರಜ್ಞಾನದ ಶುದ್ಧ ಕುಡಿಯುವ ನೀರಿನ ಘಟಕವನ್ನು ತೆರೆಯಲಾಗಿದೆ. ನಮೂದಿಸಿದ ಜಾಗದಲ್ಲಿ ಹೊಸ ಒಂದು ರೂಪಾಯಿ ನಾಣ್ಯವನ್ನು ಬಳಸಿ ಸುಮಾರು 10 ಲೀ.ಗಳ‌ಷ್ಟು ಶುದ್ಧ ನೀರನ್ನು ಪಡೆಯಲು ಗ್ರಾ.ಪಂ. ಅವಕಾಶ ಕಲ್ಪಿಸಿದೆ. ಆದರೆ ಈ ಘಟಕ ನಿರೀಕ್ಷಿತ ಪ್ರಮಾಣದಲ್ಲಿ ಬಳಕೆಯಾಗುತ್ತಿಲ್ಲ. ಇಲ್ಲಿಂದ ನೀರನ್ನು ಕೊಂಡೊಯ್ಯುವವರ ಸಂಖ್ಯೆ ತೀರ ಕಡಿಮೆಯಿದೆ.

ಅನುದಾನ ದೊರೆತಿದೆ
ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಬಗ್ಗೆ ಶಾಸಕರ ಗಮನಕ್ಕೆ ತರುತ್ತೇನೆ. ಗೋಪಾಡಿ ಭಾಗದ ನೀರಿನ ಸಮಸ್ಯೆಗೆ ಜಿ.ಪಂ. ಅನುದಾನ ಸಿಕ್ಕಿದೆ. ಈಗಾಗಲೇ ಹೊಳೆಕಟ್ಟಿನಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ಬಾವಿ ನಿರ್ಮಾಣ, 300 ಮನೆಗಳಿಗೆ ಪೈಪ್‌ಲೈನ್‌ ವ್ಯವಸ್ಥೆ ಯೋಜನೆ ಟೆಂಡರ್‌ ಹಂತದಲ್ಲಿದೆ.
-ಶ್ರೀಲತಾ ಸುರೇಶ್‌ ಶೆಟ್ಟಿ ,ಸದಸ್ಯರು,ಜಿಲ್ಲಾ ಪಂಚಾಯತ್‌

ನಿರೀಕ್ಷೆಗೂ ಮೀರಿ ನೀರು ಬಳಕೆ
ನಮ್ಮ ಗ್ರಾಮಕ್ಕೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಾರ್ಯರೂಪಕ್ಕೆ ತರುವ ಬಗ್ಗೆ ಶಾಸಕರಿಗೆ ಈಗಾಗಲೇ ಮನವಿ ಮಾಡಲಾಗಿದೆ. ವಿನಾಯಕ ನಗರಕ್ಕೆ ಮೀಟರ್‌ ಅಳವಡಿಸಿ ಉತ್ತಮ ನೀರು ಪೂರೈಸಲಾಗುತ್ತಿದೆ. ಆದರೆ ನಿರೀಕ್ಷೆಗೂ ಮೀರಿ ನೀರು ಬಳಕೆಯಾಗುತ್ತಿದೆ ಆದರೆ ಗ್ರಾ.ಪಂ.ಗೆ ಮಾತ್ರ ಸಮರ್ಪಕವಾಗಿ ಮೀಟರ್‌ ರೀಡಿಂಗ್‌ ಬಿಲ್‌ ಪಾವತಿಯಾಗುತ್ತಿಲ್ಲ..
-ಮಹಾಬಲೇಶ್ವರ ಆಚಾರ್‌, ಉಪಾಧ್ಯಕ್ಷರು, ಗ್ರಾ.ಪಂ.ಕುಂಭಾಸಿ

ಶುದ್ಧ ಕುಡಿಯುವ ನೀರಿನ ಸಮಸ್ಯೆ
ಹಲವು ದಶಕಗಳಿಂದಲೂ ಕೂಡ ಕುಂಭಾಸಿ ವಿನಾಯಕ ನಗರದಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ. ಪಂಚಾಯತ್‌ ನೀರು ಸರಬರಾಜಾಗುತ್ತಿದ್ದರೂ ಗಡಸು ನೀರಾಗಿದೆ. ಶಾಶ್ವತ ಪರಿಹಾರಕ್ಕಾಗಿ ಜನಪ್ರತಿನಿಧಿಗಳು ಗಮನಹರಿಸಬೇಕು. .
– ಮುತ್ತು,ಸ್ಥಳೀಯರು

– ಲೋಕೇಶ್‌ ಆಚಾರ್‌ ತೆಕ್ಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next