Advertisement

ಯೋಗ ಲಕ್ಷ್ಮೀ ನರಸಿಂಹಸ್ವಾಮಿಗೆ ಕುಂಭಾಭಿಷೇಕ

09:09 PM Feb 15, 2020 | Lakshmi GovindaRaj |

ತುಮಕೂರು: ಮಂತ್ರಾಲಯದ ರಾಘವೇಂದ್ರ ಸ್ವಾಮಿ ಆದಿಯಾಗಿ ಪೀಠಾಧಿಗಳಾಗಿದ್ದವರು ಕರಿಗಿರಿ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದ ಬಗ್ಗೆ ಮಠದ ಇತಿಹಾಸದಲ್ಲಿ ಉಲ್ಲೇಖವಿದೆ ಎಂದು ಮಂತ್ರಾಲಯದ ಪೀಠಾಧಿಪತಿ ಸುಭುದೇಂದ್ರ ತೀರ್ಥರು ತಿಳಿಸಿದರು.

Advertisement

ತಾಲೂಕಿನ ದೇವರಾಯನದುರ್ಗದ ಶ್ರೀ ಯೋಗ ಲಕ್ಷ್ಮೀ ನರಸಿಂಹಸ್ವಾಮಿ ಕುಂಭಾಭಿಷೇಕ ಮಹೋತ್ಸವ ಹಾಗೂ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿ, ಸಕಲ ಪಾಪ ದೋಷ ನಿವಾರಣೆಗೆ ಕರಿಗಿರಿ ಕ್ಷೇತ್ರ ಪ್ರಸಿದ್ಧವಾಗಿದೆ. 12 ವರ್ಷಕ್ಕೊಮ್ಮೆ ಕುಂಭಾಭಿಷೇಕ ಹಾಗೂ ಕಳಸಾಭಿಷೇಕ ನಡೆಸಿಕೊಂಡು ಬರಲಾಗುತಿದ್ದು, ಹಾವೇರಿಯ ವೇದ ವಿದ್ವಾಂಸ ವೇದವ್ಯಾಸಾಚಾರ್‌ ನಿರ್ಮಿಸಿರುವ ರಜತ ಕವಚ ಅರ್ಪಿಸಲಾಗಿದೆ ಎಂದು ತಿಳಿಸಿದರು.

ಕರಿಗಿರಿ ಕ್ಷೇತ್ರಕ್ಕೂ ಮಂತ್ರಾಲಯಕ್ಕೂ ನಿಕಟ ಸಂಬಂಧವಿದೆ. ದೇಗುಲದ ಅಭಿವೃದ್ಧಿ ವಿಚಾರಕ್ಕೆ ಶ್ರೀಮಠ ಸಿದ್ಧವಿದ್ದು, ಕುಂಬಾಭಿಷೇಕ ಮಹೋತ್ಸವದ ಅಂಗವಾಗಿ ದೇಗುಲಕ್ಕೆ ರಜತ ಕೊಬ್ಬರಿಗೆ ಹುಂಡಿ ಅರ್ಪಿಸಲಾಗಿದ್ದು, ದೇವಿಗೆ ಪೀಠವನ್ನು ಮಠದಿಂದ ನಿರ್ಮಿಸಿ ನೀಡಲು ಸಂಕಲ್ಪ ಮಾಡಿರುವುದಾಗಿ ತಿಳಿಸಿದರು.

ತಾಲೂಕು ತಹಶೀಲ್ದಾರ್‌ ಮೋಹನ್‌ ಮಾತನಾಡಿ, ಶಾಸ್ತ್ರೋಸ್ತ್ರವಾಗಿ ಕಾರ್ಯಕ್ರಮ ನಡೆಸಲು ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು. ಮುಜರಾಯಿ ಮತ್ತು ಧಾರ್ಮಿಕ ಧತ್ತಿ ಇಲಾಖೆ ದೇವರಾಯನದುರ್ಗ ದೇಗುಲದ ಕಾರ್ಯನಿರ್ವಾಹಣಾಧಿಕಾರಿ ಎಚ್‌.ಸವಿತಾ ಮಾತನಾಡಿದರು.

ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಊರ್ಡಿಗೆರೆ ಕರಿಗಿರಿಯಪ್ಪ, ಅರ್ಚಕ ಡಿ.ಎನ್‌.ನರಸಿಂಹಭಟ್ಟರ್‌, ಆಗಮಿಕ ವಾಸುದೇವಭಟ್ಟರ್‌, ಪ್ರಧಾನ ಅರ್ಚಕ ವೆಂಕಟರಾಜು ಭಟ್ಟರ್‌, ಡಿ.ಕೆ.ಲಕ್ಷ್ಮೀನಾರಾಯಣ ಭಟ್ಟರ್‌, ಕಂದಾಯಾಧಿಕಾರಿ ಪಿ.ಶಿವಣ್ಣ ಸೇರಿ ವ್ಯವಸ್ಥಾಪನ ಸಮಿತಿ ಸದಸ್ಯರು ಹಾಗೂ ದೇಗುಲ ಅಭಿವೃದ್ಧಿ ಮಂಡಳಿ ಸದಸ್ಯರು ಇದ್ದರು.

Advertisement

ರಜತ ಕವಚ ಸಮರ್ಪಣೆ: ರಾಜ್ಯದ ಐತಿಹಾಸಿಕ ಪ್ರಸಿದ್ಧ ದೇವಾಲಯಗಳೊಂದಾದ ದೇವರಾಯನ ದುರ್ಗದ ಶ್ರೀ ಯೋಗ ನರಸಿಂಹ ಸ್ವಾಮಿಗೆ 12 ವರ್ಷಕ್ಕೊಮ್ಮೆ ನಡೆಯುವ ಕುಂಭಾಭಿಷೇಕ ಮಹೋತ್ಸವ ನೆರವೇರಿತು. ಪೂಜಾ ಕಾರ್ಯಕ್ರಮ ಬೆಳಗ್ಗೆಯಿಂದಲೇ ನಡೆದವು. ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಶ್ರೀ ಯೋಗ ಲಕ್ಷ್ಮೀನರಸಿಂಹ ಸ್ವಾಮಿಗೆ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥರು ರಜತ ಕವಚ ಸಮರ್ಪಿಸಿದರು.

ವಿವಿಧ ಪೂಜಾ ಕಾರ್ಯಕ್ರಮ: ಕುಂಭಾಭಿಷೇಕದ ಅಂಗವಾಗಿ ಶುಕ್ರವಾರ ಪುಣ್ಯಾಹ ವಾಚನ, ಕಳಶಾರಾಧನೆ, ಪಂಚಗವ್ಯಸ್ನಪನ, ಛಾಯಾಸ್ನಾಪನ, ಶಾಂತಿಹೋಮ, ಪ್ರಧಾನ ಹೋಮಗಳು, ಪಾರಾಯಣಗಳು, ಮಹಾನಿವೇದನ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಮಾಡಲಾಯಿತು.

ಸಂಜೆ 6 ಗಂಟೆಗೆ ಶುದ್ಧಿ ಪುಣ್ಯಾಹ, ಪಾರಾಯಣ, ಮಹಾ ಕುಂಭಾರಾಧನೆ, ಪ್ರಧಾನ ಹೋಮ, ಜೀವಾದಿತತ್ವ ಹೋಮಗಳು, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆದವು. ಶನಿವಾರ ಬೆಳಗ್ಗೆಯಿಂದ ಕಳಶಾರಾಧನೆ, ಪ್ರಧಾನ ಹೋಮಗಳು, ಶಾಂತಿ ಹೋಮ, ಪೂರ್ಣಾಹುತಿ, ಕುಂಭೋದ್ವಾಸನೆ, ವಿಮಾನಗೋಪುರ ಮತ್ತು ರಾಜಗೋಪುರ ಕುಂಭಾಭಿಷೇಕ, ಬಲಿಪ್ರಧಾನ, ಶ್ರೀಯರಿಗೆ ಪಂಚಾಮೃತ ಅಭಿಷೇಕ‌, ಅಲಂಕಾರ, ಮಹಾನಿವೇದನ, ಮಹಾಮಂಗಳಾರತಿ ಸೇರಿ ಪೂಜಾ ಕಾರ್ಯಕ್ರಮ ನಡೆದವು.

Advertisement

Udayavani is now on Telegram. Click here to join our channel and stay updated with the latest news.

Next