ಬೆಳಗಾವಿ: ಅನಗೋಳದಲ್ಲಿರುವ ಶ್ರೀ ಮರಗಾಯಿ ದೇವಿಯ ಕುಂಭಮೇಳ ಮೆರವಣಿಗೆ ಬಳಿಕ ಎರಡು ಗುಂಪುಗಳ ಮಧ್ಯೆ ಮಂಗಳವಾರ ರಾತ್ರಿ ಗುಂಪು ಘರ್ಷಣೆಯಾಗಿ ಕಲ್ಲು ತೂರಾಟ ನಡೆದಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಶ್ರೀ ಮರಗಾಯಿ ದೇವರ ನೂತನ ಮಂದಿರ ನಿರ್ಮಾಣ ಹಿನ್ನೆಲೆಯಲ್ಲಿ ಸೋಮವಾರದಿಂದ ದೇವಿಯ ಆರಾಧನೆ ಹಾಗೂ ಮೆರವಣಿಗೆ ನಡೆದಿದೆ. ಮಂಗಳವಾರ ರಾತ್ರಿ ಮೆರವಣಿಗೆ ಮುಗಿಯುವ ವೇಳೆ ಈ ಗಲಾಟೆ ನಡೆದಿದೆ ಎಂದು ವರದಿಯಾಗಿದೆ.
ಅನಗೋಳದ ರಘುನಾಥ ಪೇಟೆಯ ಸೂರಜ ಸುರೇಶ ಬಿರ್ಜೆ(20), ಆಕಶ ಶಂಕರ ಜಿಂಗರುಚೆ(23) ಹಾಗೂ ಕಾಸಾರ ಗಲ್ಲಿಯ ತಬರೇಜ ಉಮರ ಸನದಿ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ. ಜಿಲ್ಲಾಸ್ಪತ್ರೆಗೆ ಹೊರ ರೋಗಿಗಳಾಗಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ವಾಹನಗಳು, ಮನೆಯ ಕಿಟಕಿಗಳು ಹಾಗೂ ಅಂಗಡಿಗಳ ಮೇಲೂ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಸ್ಥಳದಲ್ಲಿ ಖಡೇಬಜಾರ ಎಸಿಪಿ, ಟಿಳಕವಾಡಿ ಇನ್ಸ್ಪೆಕ್ಟರ್ ಸೇರಿದಂತೆ ಹಚ್ಚಿನ ಪೊಲೀಸ್ ಸಿಬ್ಬಂದಿ ಠಿಕಾಣಿ ಹೂಡಿದ್ದಾರೆ. ಸದ್ಯ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ತಡರಾತ್ರಿವರೆಗೂ ಟಿಳಕವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರಲಿಲ್ಲ.