Advertisement

ಕುಂಭ ಮೇಳ ಸಮನ್ವಯದ ಸಂಕೇತ: ಕಾಶಿ ಶ್ರೀ

10:14 AM Feb 23, 2019 | Team Udayavani |

ಯಾದಗಿರಿ: ಧರ್ಮ ಹಾಗೂ ಕೃಷಿ ಆಧಾರಿತ ದೇಶವಾಗಿರುವ ಭಾರತದಲ್ಲಿ ಇಡೀ ವಿಶ್ವದಲ್ಲಿಯೇ ಎಲ್ಲಿಯೂ ಕಾಣದ ವೈಶಿಷ್ಟಗಳನ್ನು ಕಾಣಬಹುದು. ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಿಂದ ದೇಶದ ಜನರಲ್ಲಿ ಸಮನ್ವಯತೆಯ ಸಾಮರಷ್ಯ ಮೂಡಿದೆ ಎಂದು ಕಾಶಿ ಪೀಠದ ಜಗದ್ಗುರು ಡಾ| ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.

Advertisement

ಪ್ರಯಾಗರಾಜ್‌ನ ಕುಂಭಮೇಳದಲ್ಲಿ ಗುರುವಾರ ಭಾಗವಹಿಸಿದ್ದ ಕನ್ನಡಿಗ ಭಕ್ತರಿಗೆ ಆಶೀರ್ವಚನ ನೀಡಿದ ಅವರು, ಕುಂಭಮೇಳಕ್ಕೆ ಸಾವಿರಾರು ವರ್ಷಗಳ ಭವ್ಯ ಇತಿಹಾಸ ಇದೆ. ಪವಿತ್ರ ತ್ರಿವೇಣಿ ಸಂಗಮದಲ್ಲಿ ಭಕ್ತರು ಪುಣ್ಯ ಸ್ನಾನಮಾಡಿದರೆ ಅವರಿಗೆ ಜ್ಞಾನದ ಬೆಳಕು ಸಿಗುವ ಮೂಲಕ
ಸನ್ಮಾರ್ಗದಲ್ಲಿ ಬದುಕು ಸಾಧಿ ಸಲು ಆಧ್ಯಾತ್ಮಿಕ ಪ್ರೇರಣೆ ಸಿಗುತ್ತದೆ ಎಂದು ಹೇಳಿದರು.

ಈ ಕುಂಭಮೇಳದಲ್ಲಿ ಸರ್ವ ಧರ್ಮಗಳ ಜನತೆ ಜೊತೆಗೆ ಇಡೀ ವಿಶ್ವದ ಜನತೆ ಪಾಲ್ಗೊಂಡಿದ್ದಾರೆ. ನಾವು ಅವರಲ್ಲಿ ಧರ್ಮ ಜಾಗೃತಿ ಮೂಡಿಸುವ ಜೊತೆಗೆ ದೇಶದ ಐಕ್ಯತೆ ಕಾಪಾಡಿಕೊಳ್ಳಲು ಸೂಕ್ತ ವಿಚಾರಗಳನ್ನು ನೀಡುತ್ತಿದ್ದೇವೆ. ಅವುಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ದೇಶದ ಪ್ರಗತಿಗೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದರು.

ಶ್ರೀಶೈಲ ಜಗದ್ಗುರು ಡಾ| ಚನ್ನಸಿದ್ಧರಾಮ ಪಂಡಿತಾರಾಧ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಇಂತಹ ಕುಂಭಮೇಳದಿಂದ ದೇಶದ ಸಂಸ್ಕೃತಿ, ಧಾರ್ಮಿಕ ಪರಂಪರೆ ಉಳಿಸಿ ಬೆಳೆಸಿಕೊಂಡು ಹೋಗಲು ಅನುಕೂಲ ಆಗುತ್ತದೆ ಎಂದು ಹೇಳಿದರು. ಈ ಬಾರಿ ಇಲ್ಲಿ ಭಕ್ತರಿಗೆ ಉತ್ತರ ಪ್ರದೇಶ ಸರ್ಕಾರ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದರ ಜತೆಗೆ ಯಾವುದೇ ಸಣ್ಣ ಘಟನೆ ಜರುಗದಂತೆ ಎಚ್ಚರಿಕೆ ವಹಿಸಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ ಎಂದರು.

ಉಜ್ಜಯಿನಿ ಜಗದ್ಗುರು ಪೂಜ್ಯ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ದೇವರಭೂಪುರದ ಪೂಜ್ಯ ಅಭಿನವ ಗಜದಂಡ ಶಿವಾಚಾರ್ಯ ಮಹಾಸ್ವಾಮೀಜಿ, ಗೋಕಾಕದ ಬ್ರಹ್ಮಲಿಂಗ ಸ್ವಾಮೀಜಿ, ಶಿವಾನಂದ ಸ್ವಾಮೀಜಿ, ಜಾಲಹಳ್ಳಿಯ ಜೆ. ಶಾಂತಲಿಂಗೇಶ್ವರ ಸ್ವಾಮೀಜಿ, ಮಲ್ಲಿಕಾರ್ಜುನರೆಡ್ಡಿ ಹತ್ತಿಕುಣಿ, ಶಿವಲಿಂಗಯ್ಯ ಶಾಸ್ತ್ರಿ ಬಳ್ಳಾರಿ ಸೇರಿದಂತೆ ಕನ್ನಡಿಗರ ಭಕ್ತರು ಇನ್ನಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next