ಬೆಂಗಳೂರು: ದಕ್ಷಿಣ ಗಂಗಾ ಖ್ಯಾತಿಯ ಕಾವೇರಿ ನದಿಯ ತ್ರಿವೇಣಿ ಸಂಗಮ ಮೈಸೂರು ಜಿಲ್ಲೆಯ ಶ್ರೀ ಕ್ಷೇತ್ರ ತಿರುಮಕೂಡಲುವಿನಲ್ಲಿ ಫೆ.17ರಿಂದ 19ರವರೆಗೆ ’11ನೇ ಕುಂಭಮೇಳ’ ನಡೆಯಲಿದ್ದು, ಆಗಮಿಸುವ ಭಕ್ತರಿಗೆ ಅಗತ್ಯ ಸೌಲಭ್ಯ, ಮೂಲ ಸೌಕರ್ಯ ಕಲ್ಪಿಸಲು ಅಗತ್ಯ ಆರ್ಥಿಕ ನೆರವು ನೀಡಲು ಸರ್ಕಾರ ಬದ್ಧ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಕುಂಭಮೇಳಕ್ಕೆ ಸಂಬಂಧಪಟ್ಟಂತೆ ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಕೈಲಾಸ ಆಶ್ರಮದ ಜಯೇಂದ್ರಪುರಿ ಸ್ವಾಮೀಜಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಹಲವು ಸಚಿವರು, ಮಂಡ್ಯ, ಮೈಸೂರು ಜಿಲ್ಲೆಯ ಹಲವು ಶಾಸಕರು ಹಾಗೂ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ನಗರದ ವಿಜಯನಗರದಲ್ಲಿರುವ ಆದಿಚುಂಚನಗಿರಿ ಮಠದ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಮುಖ್ಯಮಂತ್ರಿಗಳು ಈ ಭರವಸೆ ನೀಡಿದರು.
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುವ ಕುಂಭಮೇಳದಲ್ಲಿ ಪಾಲ್ಗೊಳ್ಳಲು ಅನಾನುಕೂಲವಾಗಲಿದೆ ಎಂಬ ಕಾರಣಕ್ಕೆ 1989ರಿಂದ ತಿ.ನರಸೀಪುರದಲ್ಲೇ ಪ್ರತಿ ಮೂರು ವರ್ಷಕ್ಕೊಮ್ಮೆ ಕುಂಭ ಮೇಳ ನಡೆಯುತ್ತಾ ಬಂದಿದೆ. ಈ ಬಾರಿಯ ಕುಂಭಮೇಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಅಗತ್ಯ ಸಿದ್ಧತೆಯನ್ನು ಅಚ್ಚುಕಟ್ಟಾಗಿ ಕಲ್ಪಿಸಬೇಕು. ಭಕ್ತರಿಗೆ ಅನಾನುಕೂಲವಾಗದಂತೆ ಕ್ರಮ ವಹಿಸಬೇಕು. ಕುಂಭಮೇಳಕ್ಕೆ ಪೂರ್ವಭಾವಿಯಾಗಿ ತಾತ್ಕಾಲಿಕ ಕಾಮಗಾರಿಗಳಿಗೆ ಸೀಮಿತಗೊಳಿಸದೆ ಕಾಯಂ ಸೌಲಭ್ಯ ಕಲ್ಪಿಸುವತ್ತ ಗಮನ ಹರಿಸಬೇಕು. ಹಾಗೆಯೇ ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದಲೂ ಸಮಗ್ರ ನೀಲನಕ್ಷೆ ಸಿದ್ಧಪಡಿಸಿ ಸಲ್ಲಿಸಬೇಕು ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿದರು.
ಆರ್ಥಿಕ ಸ್ಥಿತಿ ಸುಭದ್ರ: ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಿದ್ದು, ಸರ್ಕಾರದಲ್ಲಿ ಹಣವಿಲ್ಲ ಎಂಬ ಮಾತುಗಳಿದ್ದು, ಇದಕ್ಕೆ ಕಿವಿಗೊಡಬೇಡಿ. ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿ ಸುಭದ್ರವಾಗಿದೆ. ಹಣಕಾಸಿನ ಬಗ್ಗೆ ಚಿಂತೆ ಮಾಡಬೇಡಿ. ಕುಂಭಮೇಳಕ್ಕೆ ಬರುವ ಭಕ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಕುಂಭಮೇಳ ನಡೆಯುತ್ತಿದ್ದು, ಕೇಂದ್ರ ಸರ್ಕಾರ ಮೂಲ ಸೌಕರ್ಯ ಸೇರಿದಂತೆ ಇತರ ಸೌಲಭ್ಯಕ್ಕಾಗಿ 4,200 ಕೋಟಿ ರೂ.ವೆಚ್ಚ ಮಾಡಿದೆ. ಇಬ್ಬರು ಅಧಿಕಾರಿಗಳು ಪ್ರಯಾಗ್‌ರಾಜ್‌ಗೆ ಭೇಟಿ ನೀಡಿ ಭಕ್ತರಿಗೆ ಕಲ್ಪಿಸಿರುವ ವ್ಯವಸ್ಥೆ ಬಗ್ಗೆ ನೋಡಿಕೊಂಡು ಬರಲಿ. ಆಂಧ್ರ ಪ್ರದೇಶ, ತಮಿಳುನಾಡು ಸೇರಿದಂತೆ ನಾನಾ ರಾಜ್ಯಗಳಿಂದ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಎಲ್ಲ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಹೇಳಿದರು.
ಕೈಲಾಸ ಆಶ್ರಮದ ಜಯೇಂದ್ರಪುರಿ ಸ್ವಾಮೀಜಿ, ಸಚಿವರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಸಂಸದ ಎಲ್.ಆರ್.ಶಿವರಾಮೇಗೌಡ, ಶಾಸಕರಾದ ಎಚ್.ವಿಶ್ವನಾಥ್, ಡಾ.ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಹಲವು ಶಾಸಕರು, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.