ಮೈಸೂರು: ಉತ್ತರದ ಪ್ರಯಾಗದಲ್ಲಿ ಕೋಟಿ ಕೋಟಿ ಆಸ್ತಿಕರ ಪುಣ್ಯಸ್ನಾನದೊಂದಿಗೆ ಪೂರ್ಣ ಕುಂಭಮೇಳ ನಡೆಯುತ್ತಿರುವ ಬೆನ್ನಲ್ಲೇ, ದಕ್ಷಿಣದ ತಿರುಮಕೂಡಲು ಶ್ರೀಕ್ಷೇತ್ರದ ತ್ರಿವೇಣಿ ಸಂಗಮದಲ್ಲಿ ಮೂರು ದಿನಗಳ ಕಾಲ ನಡೆಯುವ ಹನ್ನೊಂದನೆಯ ಮಹೋದಯ ಪುಣ್ಯಸ್ನಾನ ಕುಂಭಮೇಳಕ್ಕೆ ಭಾನುವಾರ ವಿಧ್ಯುಕ್ತ ಚಾಲನೆ ದೊರೆಯಿತು. ಮೊದಲ ದಿನ ಪ್ರಾತಃಕಾಲ ಸೂರ್ಯೋದಯಕ್ಕೂ ಮುನ್ನ ಬೆಳಗ್ಗೆ 4 ಗಂಟೆಯಿಂದಲೇ ದೂರದ ಊರುಗಳಿಂದ ಆಗಮಿಸಿದ್ದ ಭಕ್ತರು ಗುಂಪು ಗುಂಪಾಗಿ ಮಾಘಮಾಸದ ಮಹೋದಯ ಪುಣ್ಯಸ್ನಾನ ಮಾಡಿ, ಶ್ರೀ ಅಗಸೆöàಶ್ವರ ಸ್ವಾಮಿ ಮತ್ತು ಗುಂಜಾ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಪುನೀತರಾದರು.
ಉನ್ನತ ಶಿಕ್ಷಣ ಸಚಿವ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಕೈಲಾಸಾಶ್ರಮದ ಜಯೇಂದ್ರಪುರಿ ಸ್ವಾಮೀಜಿ, ಶ್ರೀ ಅಗಸೆöàಶ್ವರ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಅನುಜ್ಞಾ ಕಾರ್ಯಕ್ರಮದ ನಂತರ ತ್ರಿವೇಣಿ ಸಂಗಮದಲ್ಲಿ (ನಡುಹೊಳೆ ಬಸಪ್ಪ) ನಿರ್ಮಿಸಿರುವ ಯಾಗ ಮಂಟಪದಲ್ಲಿ ಬೆಳಗ್ಗೆ 9 ಗಂಟೆ ಅಂಕುರಾರ್ಪಣೆ, ಪುಣ್ಯಾಹ, ಗಣಪತಿ ಹೋಮ, ಪೂರ್ಣಾಹುತಿ, ಅಭಿಷೇಕ, ದೇವತಾರಾಧನೆ, ರಾಷ್ಟ್ರಾಶೀರ್ವಾದ, ಮಹಾ ಮಂಗಳಾರತಿ ನೆರವೇರಿಸುವುದರೊಂದಿಗೆ 11ನೇ ಕುಂಭಮೇಳಕ್ಕೆ ವಿದ್ಯುಕ್ತ ಚಾಲನೆ ದೊರೆಯಿತು.
ಸಂಜೆ 4ಗಂಟೆಗೆ ಅಗ್ರತೀರ್ಥ ಸಂಗ್ರಹ ಸಮೇತ ಯಾಗಶಾಲಾ ಪ್ರವೇಶ, ಪುಣ್ಯಾಹ, ವಾಸ್ತುಹೋಮ ನೆರವೇರಿಸಲಾಯಿತು. ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ, ತಿ.ನರಸೀಪುರ ಕನಕಪೀಠದ ದೊರೆಸ್ವಾಮಿಗಳು ಉಪಸ್ಥಿತರಿದ್ದರು.
ಉಚಿತ ಸಾರಿಗೆ ವ್ಯವಸ್ಥೆ: ದೂರದ ಊರುಗಳಿಂದ ಬರುವ ಭಕ್ತರಿಗಾಗಿ ತಿ.ನರಸೀಪುರದಲ್ಲಿ ನಾಲ್ಕು ಕಡೆಗಳಲ್ಲಿ ತಾತ್ಕಾಲಿಕ ಬಸ್ ನಿಲ್ದಾಣಗಳನ್ನು ಸ್ಥಾಪಿಸಲಾಗಿದೆ. ಅಲ್ಲದೆ, ಈ ನಿಲ್ದಾಣಗಳಿಂದ ದೇವಸ್ಥಾನ ಮತ್ತು ತ್ರಿವೇಣಿ ಸಂಗಮದ ಬಳಿಗೆ ಬರಲು ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.ಕುಂಭಮೇಳಕ್ಕೆ ಬರುವ ಭಕ್ತರಿಗಾಗಿ ತಿ.ನರಸೀಪುರದ ಜೆಎಸ್‌ಎಸ್ ಸಭಾಭವನ, ಆದಿಚುಂಚನಗಿರಿ ಸಭಾ ಮಂಟಪಗಳಲ್ಲಿ ಭಕ್ತರ ದಾಸೋಹಕ್ಕೆ ಪ್ರಸಾದ ವಿತರಣೆ ಮಾಡಲಾಗುತ್ತದೆ. ಈ ಮೂರು ಸ್ಥಳಗಳಲ್ಲಿ ದಾಸೋಹ ವ್ಯವಸ್ಥೆ ಮಾಡಲಾಗಿದೆ.
ಬ್ಯಾರಿಕೇಡ್: ತ್ರಿವೇಣಿ ಸಂಗಮದ ಎರಡೂ ನಡುಗಡ್ಡೆಗಳ ಬಳಿ ಬ್ಯಾರಿಕೇಡ್‌ಗಳನ್ನಿರಿಸಿ ಮೇಳಕ್ಕೆ ಬರುವ ಭಕ್ತಾದಿಗಳ ಪುಣ್ಯಸ್ನಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಭಕ್ತರ ಸುರಕ್ಷತೆಗಾಗಿ ನದಿಯ ಎರಡೂ ಬದಿಯಲ್ಲಿ ಯೋಧರನ್ನು ನಿಯೋಜಿಸಲಾಗಿದೆ. ಪಾಳಿಗಳಲ್ಲಿ ಯೋಧರು ದೋಣಿಗಳಲ್ಲಿ ಕುಳಿತು ಭದ್ರತೆ ನೀಡಲಿದ್ದಾರೆ.
ಸೋಮವಾರ (ಫೆ.18) ಬೆಳಗ್ಗೆ ಧಾರ್ಮಿಕ ಸಭೆ ನಡೆಯಲಿದೆ. ಸಂಜೆ 4 ಗಂಟೆಗೆ ಯಾಗ ಶಾಲಾ ಪ್ರವೇಶ ಮತ್ತು ಪೂರ್ಣಾಹುತಿ, ಸಂಜೆ 7ಕ್ಕೆ ವಾರಾಣಸಿ ಮಾದರಿಯಲ್ಲಿ ಸಾರ್ವಜನಿಕ ಗಂಗಾಪೂಜೆ, ದೀಪಾರತಿ ನಡೆಯಲಿದೆ. ಮಂಗಳವಾರ (ಫೆ.19) ಬೆಳಗ್ಗೆ 9.35 ರಿಂದ 9.50, 11.30ರಿಂದ 12 ರ ವರೆಗೆ ಮಹೋದಯ ಪುಣ್ಯ ಮಾಘಸ್ನಾನ ನಡೆಯಲಿದೆ.
1,500- ಇಷ್ಟು ಮಂದಿ ಪೊಲೀಸರು
100- ಅಧಿಕ ಮಂದಿ ಕಮಾಂಡೋಗಳು
75- ಸಿಸಿಟಿವಿ ಕ್ಯಾಮರಾಗಳು
04- ವೀಕ್ಷಣಾ ಗೋಪುರಗಳು
5 ಲಕ್ಷ ಭಕ್ತರು ಪುಣ್ಯಸ್ನಾನ ನಿರೀಕ್ಷೆ
ಕರ್ನಾಟಕದ ವಿವಿಧೆಡೆ ಸೇರಿದಂತೆ, ಆಂಧ್ರಪ್ರದೇಶ, ತಮಿಳುನಾಡಿನಿಂದ ತ್ರಿವೇಣಿ ಸಂಗಮಕ್ಕೆ ಭಕ್ತರ ದಂಡು ಹರಿದು ಬರುತ್ತಿದೆ. ಮೊದಲ ದಿನವೇ 50ಸಾವಿರಕ್ಕೂ ಹೆಚ್ಚು ಭಕ್ತರು ಪುಣ್ಯಸ್ನಾನ ಮಾಡಿ ಹೋಗಿದ್ದು, ಮೂರು ದಿನಗಳಲ್ಲಿ ಸುಮಾರು 5 ಲಕ್ಷ ಭಕ್ತರು ಪುಣ್ಯಸ್ನಾನ ಮಾಡುವ ನಿರೀಕ್ಷೆ ಇದೆ.
– ಗಿರೀಶ್ ಹುಣಸೂರು