ವಾಡಿ: ಬೆಳೆಗೆ ನೀರಿಲ್ಲದಾಗ ಹರಕೆ ಹೊತ್ತು ಕರೆದರೂ ಬಾರದ ಮಳೆರಾಯ, ಥರಗುಟ್ಟುವ ಚಳಿಗಾಲದ ಶುಭಾರಂಭವನ್ನೇ ರದ್ದುಗೊಳಿಸಿ ಮಲೆನಾಡ ರೂಪದ ಮಳೆ ಹುಯ್ಯುತ್ತಿದ್ದಾನೆ. ಬಿರುಕುಬಿಟ್ಟು ಭಣಗುಡುತ್ತಿದ್ದ ಚಿತ್ತಾಪುರ ತಾಲೂಕಿನ ಕೆರೆಯಂಗಳಕ್ಕೆ ಜಲ ಸಂಪತ್ತು ಹರಿಸಿದ್ದಾನೆ. ಹಳ್ಳ-ಕೊಳ್ಳಗಳನ್ನು ತುಂಬಿಸಿ ಜೀವಕಳೆ ಮೂಡಿಸಿದ್ದಾನೆ.
ಬಿಸಿಲು ನಾಡು, ಕಲ್ಲು ಗಣಿಗಳ ಬೀಡು ನಾಲವಾರ ಹೋಬಳಿ ವಲಯದ ವಿವಿಧೆಡೆ ಕಳೆದ ಮೂರ್‍ನಾಲ್ಕು ದಿನಗಳಿಂದ ತುಂತುರು ಹನಿಗಳ ಜತೆಗೆ ಧಾರಾಕಾರ ಮಳೆಯಾಗುತ್ತಿದ್ದು, ಈ ಭಾಗದ ಹಲವು ಕೆರೆಗಳು ನೀರಿನಿಂದ ತುಂಬಿಕೊಂಡಿವೆ. ಅಲ್ಪ ಪ್ರಮಾಣದ ನೀರಿಗೆ ಸಾಕ್ಷಿಯಾಗುತ್ತಿದ್ದ ಲಾಡ್ಲಾಪುರ ಗ್ರಾಮದ ಕೋಗಿಲಕೆರೆ ಈಗ ನೀರ ನೊರೆಗಳ ತಾಣವಾಗಿದೆ. ಅಲೆಗಳ ಮೇಲೆ ತೇಲಿ ಹೋಗುವ ಹಕ್ಕಿಗಳು ಗ್ರಾಮೀಣ ಜನರ ಗಮನ ಸೆಳೆಯುತ್ತಿವೆ.
ಯಾಗಾಪುರ, ರಾಂಪೂರಹಳ್ಳಿ, ನಾಲವಾರ ಕೆರೆಯಂಗಳಕ್ಕೂ ಮಳೆ ನೀರು ಧಾವಿಸಿದ್ದು, ಬಿಸಿಲುನಾಡಿನ ಪರಿಸರ ಹಸಿರಿನಿಂದ ಕಂಗೊಳಿಸತೊಡಗಿದೆ. ಕಳೆದ 14 ವರ್ಷಗಳಿಂದ ನೀರಿಲ್ಲದೇ ಬೀಳುಬಿದ್ದಿದ್ದ ಕುಂಬಾರಹಳ್ಳಿ ಕೆರೆಯಂಗಳದಲ್ಲಿ ಮುಳ್ಳುಕಂಟಿ ಬೆಳೆಯುವುದೇ ಮುಂದುವರಿದಿತ್ತು. ಹಳ್ಳಿಯ ಜನರು ಬಯಲು ಶೌಚಕ್ಕೆ ಈ ಜಾಗ ಬಳಸಿಕೊಂಡು ಕೆರೆಯ ಮೌಲ್ಯವನ್ನು ಮಣ್ಣಾಗಿಸಿದ್ದರು. ಗ್ರಾಮ ಪಂಚಾಯಿತಿ ವತಿಯಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಹೂಳೆತ್ತಲು ಕೆರೆಯಲ್ಲಿ ಹನಿ ನೀರು ಕೂಡಾ ಸಂಗ್ರಹವಾಗಿರಲಿಲ್ಲ. ಹವಾಮಾನ ವೈಪರಿತ್ಯದ ಪರಿಣಾಮ ಸದ್ಯ ಅಕಾಲಿಕ ಮಳೆಯಾಗುತ್ತಿದ್ದು, 98 ಎಕರೆ ವಿಸ್ತೀರ್ಣದ ಕುಂಬಾರಹಳ್ಳಿ ಕೆರೆಯಲ್ಲಿ ಎತ್ತ ನೋಡಿದರತ್ತ ನೀರೇ ಕಾಣುತ್ತಿದೆ.
“ಭಣಗುಡುತ್ತಿದ್ದ ಕೆರೆಯಲ್ಲಿ ಅಪಾರ ಪ್ರಮಾಣದ ನೀರು ಶೇಖರಣೆಯಾಗಿದ್ದನ್ನು ಕಂಡು ಗ್ರಾಮಸ್ಥರು ಹರ್ಷಗೊಂಡಿದ್ದಾರೆ. ಅಂತರ್ಜಲ ಸಂರಕ್ಷಣೆ ಜತೆಗೆ ರೈತರ ಜಮೀನುಗಳಿಗೆ ನೀರಿನ ಅನುಕೂಲತೆ ಒದಗಿದೆ. ಮೋಡಗಳು ಮುಸುಕು ಹಾಕಿಕೊಂಡಿದ್ದು, ಮಳೆ ಮುಂದುವರಿಯುವ ಲಕ್ಷಣ ಕಾಣುತ್ತಿದೆ. ಕೆರೆಗಳಿಗೆ ಮತ್ತಷ್ಟು ನೀರು ಬಂದರೆ ಜನರ ದಂಡೇ ಕೆರೆಗಳತ್ತ ಹರಿದು ಬರುವ ಪ್ರಸಂಗ ಸೃಷ್ಟಿಯಾಗಲಿದೆ. ಕೆರೆಯ ಜಲ ಸಂಪತ್ತು ಸದ್ಬಳಕೆ ಮಾಡಿಕೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚಿಸುತ್ತೇನೆ’ ಎನ್ನುತ್ತಾರೆ ನಾಲವಾರ ಗ್ರಾಪಂ ಪಂಚಾಯಿತಿ ಅಧ್ಯಕ್ಷೆ ಮಲ್ಲಮ್ಮ ಸಾಯಬಣ್ಣ ಜಾಲಗಾರ.
ಸುಮಾರು ಹತ್ತರಿಂದ ಹದಿನಾಲ್ಕು ವರ್ಷಗಳಾಯಿತು ನಮ್ಮೂರ ಕೆರೆಗೆ ಇಷ್ಟು ನೀರು ಯಾವತ್ತೂ ಬಂದಿರಲಿಲ್ಲ. 98.04 ಎಕರೆ ಕೆರೆ ಜಾಗದಲ್ಲಿ ಒಂದು ಎಕರೆಯಷ್ಟಾದರೂ ನೀರು ಕಾಣುತ್ತಿರಲಿಲ್ಲ. ಕಳೆದ ವರ್ಷದಿಂದ ಕೆರೆಯಲ್ಲಿ ತುಸು ನೀರು ಕಾಣುತ್ತಿದ್ದೇವೆ. ಬಿರುಕಿನಿಂದ ಕೂಡಿದ್ದ ಕೆರೆಯಲ್ಲಿ ನೀರು ಕಂಡು ಖುಷಿಯಾಗುತ್ತಿದೆ. ಕೆರೆ ಜಾಗದಲ್ಲಿ ಬೆಳೆದಿರುವ ದಟ್ಟವಾದ ಮುಳ್ಳುಕಂಟಿ ಬನ ಕತ್ತರಿಸಲು ಪಂಚಾಯಿತಿ ಅಧಿಕಾರಿಗಳು ಮುಂದಾದರೆ ರೈತರಿಗೆ ನಡೆದಾಡಲು ರಸ್ತೆಯಾಗುತ್ತದೆ. ಕೆರೆ ಪರಿಸರವೂ ಶುಚಿಯಾಗುತ್ತದೆ. –
ವೆಂಕಟೇಶ ದುರ್ಗದ್, ಸಾಮಾಜಿಕ ಕಾರ್ಯಕರ್ತ, ಕುಂಬಾರಹಳ್ಳಿ ನಿವಾಸಿ
-ಮಡಿವಾಳಪ್ಪ ಹೇರೂರ