Advertisement

ಕುಂಬಳೆ: ಯುವಕನ ಅಪಹರಿಸಿ ರಹಸ್ಯ ಸ್ಥಳದಲ್ಲಿ ಹತ್ಯೆ

11:39 PM Jun 27, 2022 | Team Udayavani |

ಕುಂಬಳೆ : ವಿದೇಶದಲ್ಲಿದ್ದ ಯುವಕನನ್ನು ಕರೆಸಿ ತಂಡವೊಂದು ಅಪಹರಿಸಿ ಕೊಲೆಗೈದ ಘಟನೆ ಪುತ್ತಿಗೆಯ ಮುಗು ರೋಡು ಎಂಬಲ್ಲಿ ನಡೆದಿದೆ. ಸ್ಥಳೀಯ ದಿ| ಅಬ್ದುಲ್‌ ರಹ್ಮಾನ್‌ ಎಂಬವರ ಪುತ್ರ ಅಬೂಬಕ್ಕರ್‌ ಸಿದ್ಧಿಖ್‌ (31) ಕೊಲೆಯಾದ ಯುವಕ.

Advertisement

ಗಲ್ಫ್ ಉದ್ಯೋಗದಲ್ಲಿದ್ದ ಅವರು ವಾರದ ಹಿಂದೆ ಊರಿಗೆ ಮರಳಿದ್ದರು. ಈತ ತಾಯ್ನಾಡಿಗೆ ಮರಳುವ ನಾಲ್ಕು ದಿನಗಳ ಹಿಂದೆ ಈತನ ಸಹೋದರ ಅನ್ವರ್‌ ಮತ್ತು ಮಿತ್ರ ಅನ್ಸರ್‌ ಅವರನ್ನು ಕೊಟೇಶನ್‌ ತಂಡವೊಂದು ಅಪಹರಿಸಿ ಅಜ್ಞಾತ ಸ್ಥಳದಲ್ಲಿ ದಿಗ್ಬಂಧನದಲ್ಲಿರಿಸಿ ಅವರ ಮೂಲಕ ಅಬೂಬಕ್ಕರ್‌ ಸಿದ್ಧಿಕ್‌ ಅವರನ್ನು ಸಂಪರ್ಕಿಸಿ ಕೂಡಲೇ ಮನೆಗೆ ಮರಳಬೇಕೆಂಬುದಾಗಿ ಕರೆಸಿದ್ದರು.

ಇದರಂತೆ ಜೂ. 26ರಂದು ವಿದೇಶದಿಂದ ಸಿದ್ಧಿಖ್‌ ಮನೆಗೆ ಆಗಮಿಸಿದ್ದರು. ಬೆಳಗ್ಗೆ ಮಲಗಿದ್ದಾಗ ಕರೆಯೊಂದು ಬಂದು ಮಾತನಾಡಿದ ಬಳಿಕ ತಾನು ಪೈವಳಿಕೆಗೆ ಹೋಗಿ ಬರುವೆನೆಂದು ಮನೆಯವರಲ್ಲಿ ತಿಳಿಸಿ ತೆರಳಿದ್ದ ಸಿದ್ಧಿಖ್‌ ರಾತ್ರಿವರೆಗೂ ಮರಳದ ಕಾರಣ ಮನೆಯವರು ಆತಂಕದಲ್ಲಿದ್ದರು.ರಾತ್ರಿ 7.30ಕ್ಕೆ ಬಂದ್ಯೋಡಿನ ಖಾಸಗೀ ಆಸ್ಪತ್ರೆಗೆ ತಂಡವೊಂದು ಸಿದ್ಧಿಖ್‌ಅವರನ್ನು ಚಿಕಿತ್ಸೆಗೆ ದಾಖಲಿಸಿ ಪರಾರಿಯಾಗಿತ್ತು. ವೈದ್ಯರು ಇವರನ್ನು ತಪಾಸಣೆ ನಡೆಸಿದಾಗ ಕಾಲಿನ ಅಡಿಭಾಗಕ್ಕೆ ಗಂಭೀರ ಗಾಯಗೊಂಡಿದ್ದು ಸಿದ್ಧಿಖ್‌ ಮೃತಪಟ್ಟಿದ್ದರು. ಆಸ್ಪತ್ರೆಯವರು ಕುಂಬಳೆ ಪೊಲೀಸರಿಗೆ ಮಾಹಿತಿ ನೀಡಿದರು. ಕಾಸರಗೋಡು ಎಸ್‌ಪಿ ವೈಭವ್‌ ಸಕ್ಸೇನ ಮತ್ತು ಉನ್ನತ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿ ಮೃತದೇಹವನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಒಯ್ಯಲಾಗಿದೆ.

ಕೊಟೇಶನ್‌ ತಂಡ ಅಪಹರಿಸಿ ಕೊಲೆಗೈಯ್ಯಲು ಕಾರಣವೇನೆಂದು ತಿಳಿದು ಬಂದಿಲ್ಲವಾದರೂ, ಆರ್ಥಿಕ ವ್ಯವಹಾರವೇ ಕಾರಣವಾಗಿರಬಹುದೆಂಬುದಾಗಿ ಶಂಕಿಸಲಾಗಿದೆ. ಮರಣೋತ್ತರ ಪರೀಕ್ಷೆಯ ಬಳಿಕವೇ ಕೊಲೆಯ ಚಿತ್ರಣ ಬಯಲಾಗಲಿದೆ. ಮೃತ ಸಿದ್ಧಿಖ್‌ ಪತ್ನಿ ಮತ್ತು 11 ತಿಂಗಳ ಮಗುವನ್ನು ಅಗಲಿದ್ದಾರೆ.

ವಂಚನೆ ಹಿನ್ನೆಲೆಯಲ್ಲಿ ಕೊಲೆ
ಉಪ್ಪಳದಲ್ಲಿ ಚಪ್ಪಲಿ ಅಂಗಡಿ ಹೊಂದಿದ ಅಬೂಬಕ್ಕರ್‌ ಸಿದ್ಧಿಖ್‌ ಕೊಲೆಯ ಸೂತ್ರದಾರರ ಕುರಿತು ಮಾಹಿತಿಯನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಸಿದ್ಧಿಖ್‌ರನ್ನು ಆಸ್ಪತ್ರೆಗೆ ದಾಖಲಿಸಿ ಪರಾರಿಯಾದ ಕಾರು ತೊಕ್ಕೊಟ್ಟು ಪ್ರದೇಶದಲ್ಲಿ ಉಪೇಕ್ಷಿಸಲಾಗಿದ್ದು ಇದನ್ನು ಮಂಜೇಶ್ವರ ಪೊಲೀಸರು ವಶಪಡಿಸಿದ್ದಾರೆ. ಸಿದ್ಧಿಖ್‌ ಅವರ ಎದೆಗೆ ಕಾಲಿನಿಂದ ಒದೆಯಲಾಗಿದ್ದು ದೇಹಕ್ಕೆ ಬಲವಾದ ಏಟು ಬಿದ್ದಿದೆ. ಕಾಲನ್ನು ಅಗಲಿಸಿ ಹಲ್ಲೆ ನಡೆಸಲಾಗಿದೆ. ಒಂದು ಕಿವಿಯಿಂದ ರಕ್ತ ಸೋರಿದೆ. ಎಂಟು ಮಂದಿಯ ತಂಡ ಕೊಲೆಯಲ್ಲಿ ಭಾಗಿಯಾಗಿರುವುದಾಗಿ ತಿಳಿದು ಬಂದಿದೆ. ಕಾರಿನ ಆರ್‌ಸಿ ಮಾಲಕನ ಸಂಬಂಧಿಕನೋರ್ವನನ್ನು ಕಸ್ಟಡಿ ಯಲ್ಲಿರಿಸಿ ತನಿಖೆ ನಡೆಸಲಾಗುತ್ತಿದೆ. ವಿದೇಶದಿಂದ ಸಿದ್ಧಿಖ್‌ನಲ್ಲಿ ಡಾಲರ್‌ ಮತ್ತು ಚಿನ್ನವನ್ನು ನೀಡಿರುವುದನ್ನು ಹೇಳಿದ ವ್ಯಕ್ತಿಗೆ ನೀಡದೆ ಸಿದ್ಧಿಖ್‌ ವಂಚಿಸಿರುವುದಕ್ಕೆ ತಂಡದಿಂದ ಕೊಲೆ ನಡೆಸಲಾಗಿದೆ ಎಂಬುದಾಗಿ ತಿಳಿದು ಬಂದಿದೆ.

Advertisement

ಸಿದ್ಧಿಖ್‌ ಸಹೋದರ ಅನ್ವರ್‌ ಮತ್ತು ಮಿತ್ರ ಅನ್ಸಾರ್‌ ಅವರನ್ನು ಕೊಟೇಶನ್‌ ತಂಡ ಪೈವಳಿಕೆಗೆ ಕರೆಸಿ ಕಟ್ಟಿಹಾಕಿ ಮಾರಕವಾಗಿ ಥಳಿಸಿ ದೇಹಕ್ಕೆ ವಿದ್ಯುತ್‌ ಶಾಕ್‌ ನೀಡಿರುವುದಾಗಿ ತಿಳಿದು ಬಂದಿದೆ. ಇವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೆ ತಂಡವು ಸಿದ್ಧಿಖ್‌ ಅವರಿಗೆ ವಿದೇಶದಿಂದ ತತ್‌ಕ್ಷಣ ಬರಬೇಕು ಇಲ್ಲವಾದಲ್ಲಿ ನಮ್ಮೊಂದಿಗಿರುವ ನಿನ್ನ ಸಹೋದರ ಮತ್ತು ಮಿತ್ರನನ್ನು ಕೊಲೆ ಮಾಡುವುದಾಗಿ ಬೆದರಿಸಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ. ಕುಂಬಳೆ ಸಿಐ ಪ್ರಮೋದ್‌ ಮತ್ತು ಎಸ್‌ಐ ವಿ. ಕೆ. ಅಶ್ರಫ್‌ ನೇತೃತ್ವದಲ್ಲಿ ಇನ್ನಷ್ಟು ತನಿಖೆ ನಡೆಯತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next