ಬೆಳಗಾವಿ: ಸೋತರೂ ಉಪಮುಖ್ಯಮಂತ್ರಿ ಆಗುವ ಭಾಗ್ಯ ಒಲಿದಿರುವ ಲಕ್ಷ್ಮಣ ಸವದಿ ಅವರು ಅನರ್ಹ ಶಾಸಕ ಮಹೇಶ ಕುಮಟಳ್ಳಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ. ಇದರಿಂದ ನೊಂದಿರುವ ಕುಮಟಳ್ಳಿ ಕಣ್ಣೀರು ಸುರಿಸಿದರೆ, ಇನ್ನೊಂದೆಡೆ ಸವದಿ ಯನ್ನು ತರಾಟೆಗೆ ತೆಗೆದುಕೊಂಡಿ ರುವ ರಮೇಶ ಜಾರಕಿಹೊಳಿ ನಾಲಿಗೆ ಬಿಗಿ ಹಿಡಿದು ಮಾತಾಡಲಿ ಎಂದು ಎಚ್ಚರಿಕೆ ನೀಡಿದ್ದಾರೆ.
ಎರಡು ತಿಂಗಳ ಹಿಂದೆ ಅಥಣಿ ಕ್ಷೇತ್ರದಲ್ಲಿ ಪ್ರವಾಹ ವೀಕ್ಷಣೆ ವೇಳೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಮೊಬೈಲ್‌ನಲ್ಲಿ ಕುಮಟಳ್ಳಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ಈಗ ವೈರಲ್ ಆಗಿದೆ. ಫೋನ್‌ನಲ್ಲಿ ಮಾತನಾಡುವಾಗ, “ಬಿಡೋ ಮಾರಾಯಾ, ಕುಮಟಳ್ಳಿಯನ್ನು ತೆಗೆದುಕೊಂಡು ಏನು ಮಾಡುತ್ತಿಯಾ. ಆ ದರಿದ್ರ ಕುಮಟಳ್ಳಿ ಬಗ್ಗೆ ಮಾತಾಡಿ ಯಾಕೆ ಮೂಡ್ ಹಾಳು ಮಾಡುತ್ತಿಯಾ’ ಎಂದಿರುವ ವಿಡಿಯೋ ವೈರಲ್ ಆಗಿ ಚರ್ಚೆಗೆ ಗ್ರಾಸವಾಗಿದೆ.
ಮನಸ್ಸಿಗೆ ನೋವಾಗಿದೆ: ಸವದಿ ಮಾತಿನಿಂದ ನೊಂದಿರುವ ಅನರ್ಹ ಶಾಸಕ ಮಹೇಶ ಕುಮಟಳ್ಳಿ ಕಣ್ಣೀರು ಸುರಿಸಿದ್ದಾರೆ. “ಸವದಿ ಹೇಳಿಕೆಯಿಂದ ಮನಸ್ಸಿಗೆ ನೋವಾಗಿದೆ. ನಾನು ಏನು ತಪ್ಪು ಮಾಡಿದ್ದೀನಿ ಎಂದು ಸವದಿ ಅವರು ಹಾಗೇ ಮಾತಾಡಿದ್ದಾರೆ ಎನ್ನುವುದು ಗೊತ್ತಾಗುತ್ತಿಲ್ಲ. ಯಾರು ಏನೇ ಅಂದರೂ, ಯಾರೇ ವಿಷ ಕೊಟ್ಟರೂ ಅದು ಅಮೃತ ಆಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಉನ್ನತ ಹುದ್ದೆಯಲ್ಲಿದ್ದು ಹೀಗೆ ಮಾತನಾಡಿದ್ದು ಅವರ ಘನತೆಗೆ ಶೋಭೆ ತರುವಂತದ್ದಲ್ಲ. ಅವರಿಗೆ ಒಳ್ಳೆಯದಾಗಲಿ, ರಾಜಕಾರಣ ಇಂದು ಇರುತ್ತೆ, ನಾಳೆ ಹೋಗುತ್ತೆ’ ಎಂದು ಕಣ್ಣೀರು ಹಾಕಿದ್ದಾರೆ.
ಈ ಕುರಿತು
“ಉದಯವಾಣಿ’ಗೆ ಪ್ರತಿಕ್ರಿಯಿಸಿರುವ ಕುಮಟಳ್ಳಿ, ಜವಾಬ್ದಾರಿ ಸ್ಥಾನದಲ್ಲಿ ಇದ್ದುಕೊಂಡು ಇಂತಹ ಮಾತುಗಳನ್ನು ಆಡಿರುವುದರಿಂದ ನನ್ನ ಮನಸ್ಸು ಭಾರವಾಗಿದೆ. ಸವದಿ ಹಾಗೂ ನನ್ನ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ, ಜಗಳವಿಲ್ಲ. ಯಾವ ಅರ್ಥದಲ್ಲಿ ನನ್ನನ್ನು ಹೀಯಾಳಿಸಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಕೆಟ್ಟ ಶಬ್ದದಿಂದ ನಿಂದಿಸಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ನಿಜವಾಗಲೂ ನನಗೆ ಶಾಕ್ ಆಗಿದೆ’ ಎಂದರು.
ಶಿಷ್ಯನ ಬೆನ್ನಿಗೆ ನಿಂತ ರಮೇಶ: ಈ ಬೆಳವಣಿಗೆ ನಡೆಯುತ್ತಿ ದ್ದಾಗಲೇ ಅಥಣಿ ತಾಲೂಕಿನ ದರೂರ ಗ್ರಾಮದಲ್ಲಿ ಕುಮಟಳ್ಳಿ ಹಮ್ಮಿಕೊಂಡಿದ್ದ ಜನಸ್ಪಂದನ ಕಾರ್ಯಕ್ರಮಕ್ಕೆ ಹೋಗಿದ್ದ ಗೋಕಾಕನ ಅನರ್ಹ ಶಾಸಕ ರಮೇಶ ಜಾರಕಿಹೊಳಿ, “ಸವದಿ ನಾಲಿಗೆ ಬಿಗಿ ಹಿಡಿದು ಮಾತನಾಡಲಿ. ನಾಲಿಗೆಯಿಂದಲೇ ಸವದಿ ಹಾಳಾಗಿ ಹೋಗಿದ್ದಾನೆ. 2018ರ ಸೋಲಿಗೆ ನಾಲಿಗೆಯೇ ಕಾರಣ. ಇನ್ನು ಮುಂದೆ ಮಾತ ನಾಡುವಾಗ ಮೈಮೇಲೆ ಎಚ್ಚರ ಇರಲಿ’ ಎಂದು ಎಚ್ಚರಿಕೆ ನೀಡಿದ್ದಾರೆ. ಆ ಮೂಲಕ ಕುಮಟಳ್ಳಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಕಳೆದ ವಿಧಾನಸಭೆ ಚುನಾವಣೆ ವೇಳೆ ಅಥಣಿ ಕ್ಷೇತ್ರದಲ್ಲಿ ಲಕ್ಷ್ಮಣ ಸವದಿ ಹಾಗೂ ಕುಮಟಳ್ಳಿ ಮಧ್ಯೆ ತುರುಸಿನ ಸ್ಪರ್ಧೆ ನಡೆದಿತ್ತು. ಸವದಿ ಸೋಲಿಸಿ ಶಾಸಕನಾಗಲು ರಮೇಶ ಜಾರಕಿಹೊಳಿಯೇ ಕಾರಣ ಎಂದು ಕುಮಟಳ್ಳಿ ಬಹಿರಂಗವಾಗಿ ಹೇಳಿಕೊಂಡಿದ್ದರು.
ಕುಮಟಳ್ಳಿ ಬಗ್ಗೆ ಮಾತಾಡಿಲ್ಲ: ವಿಡಿಯೋ ವೈರಲ್ ಆಗುತ್ತಿದ್ದಂತೆ ಹೇಳಿಕೆ ಬಿಡುಗಡೆ ಮಾಡಿರುವ ಡಿಸಿಎಂ ಲಕ್ಷ್ಮಣ ಸವದಿ, “ಮಹೇಶ ಕುಮಟಳ್ಳಿ ಬಗ್ಗೆ ನಾನು ತಪ್ಪಾಗಿ ಮಾತನಾಡಿಲ್ಲ. ಮತ್ತೂಬ್ಬ ಸ್ನೇಹಿತನಾದ ಕುಮಟಳ್ಳಿ ಬಗ್ಗೆ ನಾನು ಮಾತನಾಡಿದ್ದೇನೆ. ಆ ಹೇಳಿಕೆಗೂ, ಮಹೇಶನಿಗೂ ಯಾವುದೇ ಸಂಬಂಧವಿಲ್ಲ. ಕೆಲವರು ನನ್ನ ಹಾಗೂ ಮಹೇಶನ ಮಧ್ಯೆ ಭಿನ್ನಾಭಿಪ್ರಾಯ ತರುವ ಪ್ರಯತ್ನ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ನಾವು ಜೊತೆಯಾಗಿಯೇ ಹೋಗುತ್ತೇವೆ’ ಎಂದು ಸ್ಪಷ್ಟನೆ ನೀಡಿದ್ದಾರೆ.
ಸವದಿ ನಾಲಿಗೆ ಬಿಗಿ ಹಿಡಿದು ಮಾತನಾಡಲಿ. ನಾಲಿಗೆಯಿಂದಲೇ ಸವದಿ ಹಾಳಾಗಿ ಹೋಗಿದ್ದಾನೆ. 2018ರ ವಿಧಾನಸಭೆಯಲ್ಲಿ ಆತನ ಸೋಲಿಗೆ ನಾಲಿಗೆಯೇ ಕಾರಣ. ಇನ್ನು ಮುಂದೆ ಮಾತನಾಡುವಾಗ ಮೈಮೇಲೆ ಎಚ್ಚರ ಇರಲಿ.
-ರಮೇಶ ಜಾರಕಿಹೊಳಿ, ಅನರ್ಹ ಶಾಸಕ