ಕುಮಟಾ: ತಾಲೂಕಿನ ಮಿರ್ಜಾನ್ ಗ್ರಾಪಂ ವ್ಯಾಪ್ತಿಯ ನಾಗೂರು ಗ್ರಾಮದ ಖಂಡಗಾರ ಕಿರು ಡ್ಯಾಮ್‌ಗೆ ಮಳೆಗಾಲದಲ್ಲಿ ಹೆಚ್ಚೆಚ್ಚು ಪ್ರವಾಸಿಗರು ಲಗ್ಗೆ ಇಡುತ್ತಿದ್ದು, ಮೂಲ ಸೌಕರ್ಯ ಕಲ್ಪಿಸಬೇಕಿದೆ.
ಪಟ್ಟಣದಿಂದ ಮಿರ್ಜಾನ ಒಳ ಮಾರ್ಗದ ಮುಖಾಂತರ ಖಂಡಗಾರ ಮಾರ್ಗವಾಗಿ ಕ್ರಮಿಸಿದರೆ ಮಧ್ಯದಲ್ಲೇ ಈ ಕಿರು ಡ್ಯಾಮ್ ಕಾಣಸಿಗುತ್ತದೆ. ಈ ಜಲಧಾರೆಗೆ ಖಂಡಗಾರ ಫಾಲ್ಸ್ ಎಂದೂ ಕರೆಯುತ್ತಾರೆ. ಮಳೆಗಾಲದಲ್ಲಿ ಮೇಲಿಂದ ಹರಿದು ಬರುವ ನೀರಿಗೆ ಅಡ್ಡಲಾಗಿ ಕಟ್ಟೆ ಕಟ್ಟಲಾಗಿದ್ದು, ನೀರು ನಿಯಮಿತ ಪ್ರಮಾಣದಲ್ಲಿ ಹರಿದು ಹೋಗಿ ಕಟ್ಟೆ ಕೆಳಗಡೆ ಧುಮುಕುವುದರಿಂದ ಆ ದೃಶ್ಯ ರಮಣೀಯವಾಗಿರುತ್ತದೆ.
ಇಲ್ಲಿನ ನೀರು ಶುಚಿಯಾಗಿದ್ದು, ಪರಿಸರ ಕೂಡ ಸ್ವಚ್ಛವಾಗಿದೆ. ನೀರಿನ ಮಟ್ಟ ಒಂದೇ ಪ್ರಮಾಣದಲ್ಲಿ ಇರುವುದರಿಂದ ಚಿಕ್ಕ ಮಕ್ಕಳಿಂದ ಹಿಡಿದು, ಸಾಕಷ್ಟು ಜನರು ಈಜು ಕಲಿಯಲು ಇಲ್ಲಿಗೆ ಆಗಮಿಸುತ್ತಾರೆ. ಸ್ಥಳೀಯರು ಹೇಳುವ ಪ್ರಕಾರ ಮಳೆಗಾಲ ಪ್ರಾರಂಭದಿಂದ ಪ್ರತಿದಿನ 200 ಕ್ಕೂ ಅಧಿಕ ಪ್ರವಾಸಿಗರು ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು ಈ ಸ್ಥಳಕ್ಕೆ ಭೇಟಿ ನೀಡಿ, ಇಲ್ಲಿನ ರಮಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಾರೆ.
ವ್ಯವಸ್ಥೆ ಕಲ್ಪಿಸಿ: ಈ ಕಿರು ಡ್ಯಾಮ್ ಅರಣ್ಯ ಇಲಾಖೆ ಅಧೀನದಲ್ಲಿದೆ. ಮಳೆಗಾಲದಲ್ಲಿ ಪ್ರವಾಸಿಗರು ಆಗಮಿಸುವುದರಿಂದ ಕುಳಿತುಕೊಳ್ಳುವ ಬೇಂಚು ಅಥವಾ ಆಸನದ ವ್ಯವಸ್ಥೆಯನ್ನು ಅರಣ್ಯ ಇಲಾಖೆ ಅಥವಾ ಪ್ರವಾಸೋದ್ಯಮ ಇಲಾಖೆ ಕಲ್ಪಿಸಬೇಕಾಗಿದೆ. ಒಂದು ಶೌಚಾಲಯ ಹಾಗೂ ಮಹಿಳೆಯರಿಗಾಗಿ ವಿಶೇಷ ಕೊಠಡಿ ನಿರ್ಮಿಸಿದರೆ ಸಾಕಷ್ಟು ಮಹಿಳೆಯರೂ ಆಗಮಿಸುತ್ತಿದ್ದರು ಎಂಬ ಮಾತು ಕೇಳಿಬಂದಿದೆ.
ಮೂಲ ಸೌಕರ್ಯದ ಕೊರತೆ: ಹೆಚ್ಚೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಈ ಸ್ಥಳಕ್ಕೆ ಹಲವಾರು ಸಮಸ್ಯೆಗಳಿವೆ. ಇಲ್ಲಿ ಓಡಾಡುವ ರಸ್ತೆ ಕಿರಿದಾಗಿದ್ದು, ಅಪಾಯಕಾರಿ ತಿರುವುಗಳಿವೆ. ಹಾಗೆ ಇಲ್ಲಿ ಬರುವ ಪ್ರವಾಸಿಗರಿಗೆ ಉಳಿದುಕೊಳ್ಳಲು ಯಾವುದೇ ವಸತಿ ವ್ಯವಸ್ಥೆಯಿಲ್ಲ. ಕನಿಷ್ಠ ಶೌಚಾಲಯದ ವ್ಯವಸ್ಥೆ, ಬಟ್ಟೆ ಬದಲಾಯಿಸಿಕೊಳ್ಳಲು ಕೊಠಡಿ ಸೌಲಭ್ಯವೂ ಇಲ್ಲ. ಇದರಿಂದ ವಿಶೇಷವಾಗಿ ಮಹಿಳೆಯರು ಕಿರಿಕಿರಿ ಅನುಭವಿಸುವಂತಾಗಿದೆ. ಹಾಗೆ ಊಟ, ತಿಂಡಿಗಾಗಿ ಒಂದು ಹೋಟೆಲ್, ಅಂಗಡಿ ಕೂಡ ಇಲ್ಲಿ ಇಲ್ಲವಾಗಿದ್ದು, ಇಲ್ಲಿ ಬರುವಂತಹ ಪ್ರವಾಸಿಗರು ಹಸಿವು ನೀಗಿಸಿಕೊಳ್ಳಲು ಏನಾದರೂ ಪಟ್ಟಣದಿಂದಲೇ ತರಬೇಕಾದ ಅನಿವಾರ್ಯತೆ ಇದೆ.